ಶ್ರೀ ತಿರುಮಲೆ ತಾತಾಚಾರ್ಯ ಶರ್ಮ

a7

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೭

ಅಧ್ಯಕ್ಷರು : ತಿರುಮಲೆ ತಾತಾಚಾರ್ಯ ಶರ್ಮ (೧೯೪೭೧೯೪೯)

ಜೀವನ

ಮೊನೆಚಾದ ಬರಹ ಸಿಡಿಲಿನಂಥ ಮಾತಿಗೆ ಪ್ರಸಿದ್ಧರಾಗಿ ವಿಶ್ವಕರ್ನಾಟಕ ಪತ್ರಿಕೆಯ ಮೂಲಕ ಇತಿಹಾಸವನ್ನೇ ನಿರ್ಮಿಸಿದ ಕನ್ನಡ ಭೀಷ್ಮರು ಎಂದರೆ ತಿರುಮಲೆ ತಾತಾಚಾರ್ಯಶರ್ಮರು. ಇವರು ಶ್ರೀನಿವಾಸ ತಾತಾಚಾರ್ಯ-ಜಾನಕಿ ಅವರ ಪುತ್ರರಾಗಿ ೨೭-೪-೧೮೯೫ರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜಮನೆತನದಲ್ಲಿ ಜನಿಸಿದರು.

ಗುರುಕುಲಪದ್ಧತಿಯ ಶಿಕ್ಷಣ ಮನೆಯಲ್ಲಿ ಸಿಕ್ಕಿತು. ಶಾಲಾ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರ, ಬೆಂಗಳೂರು ಹಾಸನಗಳಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ ಸೇರಿದರೂ ಧನಾಭಾವದಿಂದ ವಿದ್ಯಾಭ್ಯಾಸ ಮುಂದಕ್ಕೆ ಸಾಗಲಿಲ್ಲ.

೧೯೧೯ರಲ್ಲಿ ಶಾಸನ ಇಲಾಖೆಯಲ್ಲಿ ತೆಲುಗು – ಕನ್ನಡ ಸಹಾಯಕ ಅಧಿಕಾರಿಯಾಗಿ ೫ ವರ್ಷ ಸೇವೆ ಸಲ್ಲಿಸಿದ ಮೇಲೆ  ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಕೆಲಸಕ್ಕೆ ರಾಜೀನಾಮೆಯಿತ್ತರು.  ಗಾಂಧೀಜಿಯವರನ್ನು ಭೇಟಿ ಆಗಿ ಅವರ ಆಣತಿಯಂತೆ ವಿಶ್ವಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ೨೭ ವರ್ಷಗಳ ಕಾಲ ಅವರು ಆ ಪತ್ರಿಕೆಯನ್ನು ನಡೆಸಿದರು.

೧೯೪೩ರಲ್ಲಿ ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾದರು, ೧೯೪೪-೫0ರಲ್ಲಿ ಬೆಂಗಳೂರು ಮುನಿಸಿಪಲ್ ಕೌನ್ಸಿಲ್‍ರಾದರು. ಬೆಂಗಳೂರಿನ ಅಮೆಚೂರ್ ನಾಟಕ ಮಂಡಳಿ ಮೂಲಕ ಟೊಳ್ಳುಗಟ್ಟಿ ನಾಟಕವನ್ನು ಬೆಳಕಿಗೆ ತಂದರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

೧೯೪೭ರಲ್ಲಿ ಕಾಸರಗೋಡಿನಲ್ಲಿ ನಡೆದ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶರ್ಮರನ್ನು ಅಧ್ಯಕ್ಷರನ್ನಾಗಿ ಆರಿಸಿ ಸನ್ಮಾಸಿದರು. ೧೯೭0ರಲ್ಲಿ ಮಂಡ್ಯ ಜಿಲ್ಲಾಪರಿಷತ್ತಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ೧೯೪೭ರಿಂದ ೧೯೪೯ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಗೊಂಡರು.

ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಪತ್ರಿಕಾಕರ್ತರೂ ಸರಳ ಜೀವಿಗಳು ವಾಗ್ಮಿಗಳೂ ಗಾಂಧಿ ಭಕ್ತರೂ ಹಾಸ್ಯಪ್ರಿಯರೂ ಆಗಿದ್ದ ತಿ. ತಾ. ಶರ್ಮರ ಲೇಖನಿಯಿಂದ ಹತ್ತಾರು ಗ್ರಂಥಗಳು ಬಂದಿವೆ. ಅವರ ಕೆಲವು ಗ್ರಂಥಗಳು ಹೀಗಿವೆ :

ಕನ್ನಡ ಕವಿಗಳು (ಜೀವನ ಚರಿತ್ರೆ), ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಜೀವನ ಚರಿತ್ರೆ), ಕರ್ಮಫಲ (ಕಥಾಸಂಗ್ರಹ), ವಿಕ್ರಾಂತ ಭಾರತ (ಇತಿಹಾಸ), ಜಗತ್ಕಥಾವಲ್ಲರಿ (ಅನುವಾದ), ಕರ್ಣಾಟಕ ಕೈಪಿಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಮಾಸ್ತಿಯವರ ಮನೋಧರ್ಮ ವಿಚಾರ ಕರ್ನಾಟಕ, ಕರ್ಣಾಟಕ ಕೈಪಿಡಿ – ಇತ್ಯಾದಿ.

ಇವರು ೧-೯-೧೯೭೩ರಂದು ದಿವಂಗತರಾದರು.

ಸಾಧನೆ :

ಮೊದಲಿಗೆ ಪರಿಷತ್ತಿನ ನಿಬಂಧನೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಕಾಲಕ್ಕೆ ಒಬ್ಬ ಅಧ್ಯಕ್ಷರು ಒಬ್ಬ ಉಪಾಧ್ಯಕ್ಷರನ್ನು ಸಕಲ ಸದಸ್ಯ ಸಭೆಯು ಆರಿಸುತ್ತಿತ್ತು. ಅನಂತರ (ಹೆಚ್. ವಿ. ನಂಜುಂಡಯ್ಯನವರ ನಂತರ ಅಧ್ಯಕ್ಷಸ್ಥಾನ ಗೌರವಸ್ಥಾನವಾಗಿ ರಾಜಮನೆತನದಲ್ಲಿ ಉಳಿಯಿತು. ಉಪಾಧ್ಯಕ್ಷರೇ ಎಲ್ಲ ಕಾರ್ಯವನ್ನು ನಿರ್ವಹಿಸುತ್ತಿದ್ದರು) ಆದುದರಿಂದ ನಿಯಮದಲ್ಲಿ ಬದಲಾವಣೆ ಆಗಿ “ಉಪಾಧ್ಯಕ್ಷರು ಇಬ್ಬರು ಗೌರವ ಕಾರ್ಯದರ್ಶಿಗಳು ಮತ್ತು ಗೌರವ ಕೋಶಾಧ್ಯಕ್ಷರು ಬೆಂಗಳೂರು ನಿವಾಸಿಗಳಾಗಿರತಕ್ಕದ್ದು” ಎಂದು ನಿಯಮಕ್ಕೆ ತಿದ್ದುಪಡಿ ಆಯಿತು.

೧೯೪೭ ಡಿಸೆಂಬರ್ ೨೯ರಲ್ಲಿ ಕಾಸರಗೋಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಕಲ ಸದಸ್ಯರ ಸಭೆ ನಡೆದಾಗ ಆ ಸಭೆಯಲ್ಲಿ ಆದ ನಿರ್ಣಯವಿದು. “ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ಪರಿಷತ್ತಿಗೆ ಆಡಳಿತದ ಜವಾಬ್ದಾರರೂ ಅಧಿಕಾರಿಗಳೂ ಆಗಿರತಕ್ಕದ್ದು. ಈಗಿರುವ ಉಪಾಧ್ಯಕ್ಷಸ್ಥಾನ ಅಗತ್ಯವಿಲ್ಲ. ಅಧ್ಯಕ್ಷರು ತಮಗೆ ನಿರ್ವಹಿಸಲು ಅನನುಕೂಲವೆಂದು  ತಿಳಿಸಿದ ಸಂದರ್ಭದಲ್ಲಿ ಕಾರ್ಯಸಮಿತಿ ಒಪ್ಪಿ ಒಬ್ಬ ಕಾರ್ಯಾಧ್ಯಕ್ಷನನ್ನು ನಿಯಮಿಸಿಕೊಳ್ಳತಕ್ಕದ್ದು. ಈ ವರ್ಷದಿಂದಲೇ (೧೯೪೭) ಈ ನಿರ್ಣಯ ಜಾರಿಗೆ ಬರತಕ್ಕದ್ದು.”

ಈ ನಿರ್ಣಯಾನುಸಾರ ಸಮ್ಮೇಳನದ ಅಧ್ಯಕ್ಷರು ಪ್ರತಿವರ್ಷವೂ ಆಯ್ಕೆಯಾಗಬೇಕಾಗಿತ್ತು. ಕಾಸರಗೋಡಿನ ಸಮ್ಮೇಳನದ ಅಧ್ಯಕ್ಷರಾಗಿದ್ದ ತಿ. ತಾ. ಶರ್ಮ (೧೯೪೭-೧೯೪೯) ಅಧ್ಯಕ್ಷರಾದರು ಸಮ್ಮೇಳನದ ಅವಧಿಯೂ ಪರಿಷತ್ತಿನ ಅವಧಿಯಲ್ಲಿ ಒಂದೇ ವರ್ಷವಾದ್ದರಿಂದ ೧೯೪೯ರಲ್ಲಿ ನಡೆದ ಗುಲ್ಬರ್ಗ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಉತ್ತಂಗಿ ಚೆನ್ನಪ್ಪ ಅಧ್ಯಕ್ಷರಾದರು.

ಇವರಿಬ್ಬರ ಅಧ್ಯಕ್ಷಾವಧಿ ೧ ವರ್ಷವಾದ್ದರಿಂದ ಇಬ್ಬರೂ ಪರಿಷತ್ತಿನ ಕೆಲಸಗಳಲ್ಲಿ ಏನನ್ನೂ ಸಾಧಿಸಲಾರದವರಾದರು ೧೯೫0ರಲ್ಲಿ ನಡೆದ ಸೊಲ್ಲಾಪುರದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂ. ಆರ್. ಶ್ರೀ ಅವರು ಆಯ್ಕೆಯಾದರು. ಅವರ ಕಾಲದಲ್ಲಿ ಸಕಲ ಸಭೆ ನಡೆದು ಉಪಾಧ್ಯಕ್ಷಸ್ಥಾನ ರದ್ದಾಯಿತು ಮತ್ತು ಅಧ್ಯಕ್ಷಸ್ಥಾನಾವಧಿ ೩ ವರ್ಷಗಳಾಯಿತು. ಈಗಲೂ ಪರಿಷತ್ತಿನ ಅಧ್ಯಕ್ಷರಾವಧಿ ೩ ವರ್ಷಗಳೇ ಇದೆ.

ಸಮ್ಮೇಳನಾಧ್ಯಕ್ಷರೇ ಪರಿಷತ್ ಅಧ್ಯಕ್ಷರಾಗಬೇಕೆಂದಾಗ ಅಧ್ಯಕ್ಷರ ಅವಧಿ ೧ ವರ್ಷವಾಯಿತು. ಆದರೆ ಪರಿಷತ್ತಿನ ಅಧ್ಯಕ್ಷರು ಬೆಂಗಳೂರಿನಲ್ಲಿ ವಾಸಿಸಬೇಕೆಂಬ ನಿಯಮವಿರದಿದ್ದರಿಂದಲೂ ಸಮ್ಮೇಳನಾಧ್ಯಕ್ಷರು ನಮ್ಮ ನಾಡಿನ ಯಾವ  ಮೂಲೆಯವರಾದರೂ ಆಗಬಹುದಾದ್ದರಿಂದಲೂ ಧಾರವಾಡದ ಉತ್ತಂಗಿ ಚೆನ್ನಪ್ಪನವರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಕಾರಣಾಂತರಗಳಿಂದ ಅವರು ಬೆಂಗಳೂರಿನಲ್ಲಿ ವಾಸಿಸಲಿಲ್ಲ.

ತಿ. ತಾ. ಶರ್ಮರ ಕಾಲದಲ್ಲಿ ಆದ ಕೆಲಸ

ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ಎಲ್. ಎಸ್. ಶೇಷಗಿರಿರಾಯರು, ತಿ.ತಾ. ಶರ್ಮರ ಪರವಾಗಿ ಎಲ್ಲ ಕಾರ್ಯಗಳನ್ನೂ ನಿರ್ವಹಿಸಿದರು. ತಿತಾಶರ್ಮರು ಗಡಿನಾಡು ಪ್ರವಾಸದಲ್ಲಿ ನಿರತರಾದರು. ಶರ್ಮರ ಕಾಲದಲ್ಲಿ ಆದ ಕೆಲಸವೆಂದರೆ ಪರಿಷತ್ತಿಗೆ ದೂರವಾಣಿ ವ್ಯವಸ್ಥೆ ಆಯಿತು (ಈಗಿನಂತೆ ಸುಲಭವಾಗಿ ದೂರವಾಣಿ ಸಿಗುತ್ತಿರಲಿಲ್ಲ, ಪರಿಷತ್ತಿನ  ಕಾರ್ಯಾವಧಿ ಪ್ರತಿದಿನ ಬೆಳಿಗ್ಗೆ ಎಂಟೂವರೆಯಿಂದ ಹನ್ನೊಂದೂವರೆ, ಮಧ್ಯಾಹ್ನ ನಾಲ್ಕೂವರೆಯಿಂದ ೭.೩0ವರೆಗೆ ಬದಲಾಯಿಸಿತು.)

Tag: Tirumale Tatacharya Sharma,

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)