ರೆವರೆಂಡ್ ಉತ್ತಂಗಿ ಚೆನ್ನಪ್ಪ

a8

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೮

ಅಧ್ಯಕ್ಷರು : ಉತ್ತಂಗಿ ಚೆನ್ನಪ್ಪ (೧೯೪೯೧೯೫0)

ಜೀವನ

ಅಭಿನವ ಸರ್ವಜ್ಞ ಕವಿ ಎಂದೇ ಬಿರುದಾಂಕಿತರಾದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದಾನಿಯೇಲಪ್ಪ – ಸುಭದ್ರವ್ವ ದಂಪತಿಗಳಿಗೆ ೨೮-೧0-೧೮೮೧ರಂದು ಹಿರಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಪೂರ್ವಜರು ಮೂಲದಲ್ಲಿ ವೀರಶೈವರಾಗಿ ಊರು ಪಾರುಪತ್ತೇಗಾರಿಕೆ ನಡೆಸುತ್ತಿದ್ದರು. ಇವರ ಶಾಲಾ ಶಿಕ್ಷಣವು ಧಾರವಾಡ, ಗದಗ, ಬೆಟಗೇರಿಗಳಲ್ಲಿ ನಡೆಯಿತು. ೧೯೩0ರಲ್ಲಿ ಮೆಟ್ರಿಕ್ ಪರೀಕ್ಷೆ ಫೇಲಾದರು. ಅನಂತರ ೧೯0೮ರಲ್ಲಿ ತಾಯಿಯ ಅಪೇಕ್ಷೆಯಂತೆ ಬಾಸೆಲ್ ಮಿಷನ್ ಸಂಸ್ಥೆಯಲ್ಲಿ ಧರ್ಮೋಪದೇಶಕರಾಗಿ ಸೇರಿದರು.

ಧರ್ಮೋಪದೇಶಕರಾಗಿ ೧೯0೮ರಿಂದ ೧೯೪೨ರವರೆಗೆ ನಿಸ್ಪ್ರುಹರಾಗಿ ಸೇವೆ ಸಲ್ಲಿಸಿದರು. ಧಾರವಾಡ, ಮುಂಡರಗಿ, ಹಾವೇರಿ, ಹುಬ್ಬಳ್ಳಿಗಳಲ್ಲಿ ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಕೈಂಕರ್ಯನಡೆಸಿದರು. ೩೩ ವರ್ಷಗಳ ಸೇವೆಯ ನಂತರ ನಿವೃತ್ತರಾದರು.

ಕನ್ನಡ ಭಾಷೆಯ ಬೈಬಲ್ ಪರಿಷ್ಕರಣ ಮಂಡಳಿಯ ಅಧ್ಯಕ್ಷರಾಗಿ ಇವರು ರಾಷ್ಟ್ರೀಯ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಖಾದಿ ಧರಿಸಿದರು. ಕ್ರೈಸ್ತ ಮತಾವಲಂಬಿ ಆಗಿದ್ದರೂ ವೀರಶೈವ ಸಿದ್ಧಾಂತ ಅಧ್ಯಯನ ಪ್ರಸಾರದಲ್ಲಿ ತೊಡಗಿದ್ದರು. ಕನ್ನಡ ಭಾಷೆಯ ಕಟ್ಟಾಭಿಮಾನಿಗಳಾದ ಇವರು ಬಾಸಲ್ ಸುವಾರ್ತಿಕ ಸಂಘದ ಹೆಸರನ್ನು ಕನ್ನಡ ಸುವಾರ್ತಿಕ ಸಂಘವೆಂದು ಪರಿವರ್ತಿಸಿದರು.

ಗ್ರೀಕ್ ಮತ್ತು ಹೀಬ್ರೂ ಭಾಷೆಯ ಮೂಲಪಾಠದೊಂದಿಗೆ ಕನ್ನಡ ಬೈಬಲ್‍ಗೆ ಹೋಲಿಸಿ ಪರಿಷ್ಕರಿಸಿದರು. ರೆವರೆಂಡ್ ಪ್ರಶಸ್ತಿಗೆ ಪಾತ್ರರಾದರು. ೧೯೪೪ರಲ್ಲಿ ರಬಕವಿಯಲ್ಲಿ ನಡೆದ ೨೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಲು ಕರೆ ನೀಡಲಾಗಿತ್ತು. ೧೯೪೯ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೫೭-೫೮ರಲ್ಲಿ ಇವರು ರಚಿಸಿದ ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ ಗ್ರಂಥಕ್ಕೆ ದೇವರಾಜ ಬಹಾದ್ದೂರ್ ಬಹುಮಾನ ಬಂದಿತು.  ೬-೩-೧೯೪೯ರಿಂದ ೧೬-೨-೧೯೫0ರವರೆಗೆ ಪರಿಷತ್ತಿನ ಗೌರವಾಧ್ಯಕ್ಷರಾಗಿದ್ದರು.

ಉತ್ತಂಗಿ ಅವರ ಬದುಕಿನ ಸಾಧನೆ ಎಂದರೆ ಅಜ್ಞಾತ ಕವಿಯಾಗಿದ್ದ ಸರ್ವಜ್ಞ ಕವಿಯನ್ನು ಬೆಳಕಿಗೆ ತಂದಿದ್ದು : `ಸರ್ವಜ್ಞ ವಚನಗಳು’ ಗ್ರಂಥ ಇವರ ದೀರ್ಘಕಾಲದ ಸಂಶೋಧನೆಯ ಫಲ. ಇದಲ್ಲದೆ ಸುಮಾರು ೧೪ ಕೃತಿಗಳನ್ನು ಬರೆದಿದ್ದಾರೆ:

ಬನಾರಸಕ್ಕೆ ಬೆತ್ಲಹೇಮನ ವಿನಂತಿ (೧೯೨೧), ಮೃತ್ಯುಂಜಯ, ಹಿಂದೂ ಸಮಾಜ ಚಿಂತಕ, ನಾರಾಯಣ ವಾಮನ ತಿಲಕರ ಜೀವನಚರಿತ್ರೆ, ಬಸವೇಶ್ವರರೂ ಅಸ್ಪೃಶ್ಯರ ಉದ್ಧಾರವೂ, ಮಕ್ಕಳ ಶಿಕ್ಷಣ ಪಟ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ಆದಯ್ಯನ ವಚನಗಳು ಇತ್ಯಾದಿ.

ಸರ್ವಜ್ಞ ವಚನ ಸಂಶೋಧನೆಯಲ್ಲಿಯೇ ದೃಷ್ಟಿ ಕಳೆದುಕೊಂಡ ಇವರು ೨೮-೮-೧೯೬೨ರಲ್ಲಿ ನಿಧನರಾದರು.

 ಸಾಧನೆ :

ಉತ್ತಂಗಿ ಚೆನ್ನಪ್ಪನವರ ಕಾಲದಲ್ಲಿ ಆದ ಕೆಲಸ

ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ಕಾರ್ಯದರ್ಶಿಗಳಾಗಿ ಪರಿಷತ್ತಿನ ಕೆಲಸವನ್ನು ಅಧ್ಯಕ್ಷರಾದ ಉತ್ತಂಗಿ ಚೆನ್ನಪ್ಪನವರ ಪರವಾಗಿ ಚಾಚೂ ತಪ್ಪದೆ ನಿರ್ವಹಿಸಿದರು. ಚೆನ್ನಪ್ಪನವರು ಧಾರವಾಡದಲ್ಲಿ ನೆಲೆಸಿದ್ದರು ಸರ್ವಜ್ಞನ ವಚನಗಳ ಶೋಧದಲ್ಲಿ ನಿರತರಾಗಿದ್ದರು. ಹಾಗಾಗಿ ಅವರು ಅಧ್ಯಕ್ಷರಾದರೂ ಬೆಂಗಳೂರಿನಲ್ಲಿ ನೆಲೆಯೂರಲಿಲ್ಲ. ಪರಿಷತ್ತಿನ ಪ್ರಕಟನೆಗಳು ಯಥಾರೀತಿ ಪ್ರಕಟವಾದವು. ೧೯೫0ರಿಂದ ‘ನುಡಿ’ ಮಾಸಿಕ ಪತ್ರಿಕೆ ಆಯಿತು. ‘ಕರ್ನಾಟಕದ ಕಲೆಗಳು’ ಎಂಬ ಲೇಖನ ಮಾಲೆ ಎಚ್. ಎಂ. ಕೃಷ್ಣ ಅವರಿಂದ ಬರೆಯಲ್ಪಟ್ಟು ಕನ್ನಡ ನುಡಿಯಲ್ಲಿ ಪ್ರಕಟವಾಯಿತು. ಆ ಮೇಲೆ ಗ್ರಂಥವಾಗಿ ಪರಿಷತ್ತಿನಿಂದ ಪ್ರಕಟ ಆಯಿತು.

ಉತ್ತಂಗಿ ಅವರ ಕಾಲದಲ್ಲಿ ಪರಿಷತ್ತಿನ ಆರ್ಥಿಕ ಸ್ಥಿತಿ ಹೇಗಿತ್ತೆಂದರೆ “ಪರಿಷತ್ತಿನ ನಿತ್ಯಗಟ್ಟಲೆಯ ತಿಂಗಳ ವೆಚ್ಚ ೫00ರೂ. ಬರುವ ವರಮಾನ ೩೩0ರೂ ತಿಂಗಳಿಗೆ ೧೭0 ರೂ ನಷ್ಟ… ಇದಲ್ಲದೆ ಪ್ರವಾಸ ಕಾರ್ಯಸಮಿತಿ ವೆಚ್ಚ ಪ್ರಕಟನೆಗಳಿಗೆ ಬೇಕಾದ ಬಂಡವಾಳ ಜಾಣ, ಕಾವ ಪರೀಕ್ಷೆಗಳಿಗೆ ತಗಲುವ ವೆಚ್ಚ. ಕನ್ನಡ ಕೋಶಕ್ಕೆ ಸರಕಾರ ಕೊಡುವ ಹಣಕ್ಕಿಂತ ಜಾಸ್ತಿ ಮಾಡುವ ಖರ್ಚು… ಇವೆಲ್ಲಾ ತಿಂಗಳಿಗೆ ೧೫0ರೂ ಗೆ ಕಡಿಮೆ ಇಲ್ಲದೆ ವೆಚ್ಚವಾಗುತ್ತದೆ…. ಇದರಿಂದ ಶಾಶ್ವತ ನಿಧಿಗಳ ಅಸಲನ್ನೇ ನಾವು ಬಳಸಿ ಕಾಲ ನೂಕುವಂತಾಗಿದೆ”.

ಅಂತೂ ಉತ್ತಂಗಿ ಅವರ ಅವಧಿ ಮುಗಿದು ಸಮ್ಮೇಳನಾಧ್ಯಕ್ಷರಾಗಿ ಎಂ. ಆರ್. ಶ್ರೀ ಅವರು ಆಯ್ಕೆಯಾಗಿ ಪರಿಷತ್ತಿನ ಅಧ್ಯಕ್ಷರಾದರು.

Tag: Uttangi Channappa, Uttangi Chennappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)