ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ

a9

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೯

ಅಧ್ಯಕ್ಷರು : ಎಂ. ಆರ್. ಶ್ರೀನಿವಾಸಮೂರ್ತಿ (೧೯೫0 – ೧೯೫೩)

ಜೀವನ

ಕನ್ನಡ ಶ್ರೀರತ್ನತ್ರಯರಲ್ಲಿ ಒಬ್ಬರಾದ (ಬಿಎಂಶ್ರೀ, ಎಂ ಆರ್‍ ಶ್ರೀ, ತೀನಂಶ್ರೀ) ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹಾಸನದಲ್ಲಿ ರಾಮಚಂದ್ರಯ್ಯ ಸಾವಿತ್ರಮ್ಮ ದಂಪತಿಗಳಿಗೆ ೨೮-೮-೧೮೯೨ರಲ್ಲಿ  ಜನಿಸಿದರು. ಮೈಸೂರು, ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು (೧೯೧೫) ಪಡೆದರು.

ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೇ ಸೇರಿ ಹಂತಹಂತವಾಗಿ ಮೇಲಧಿಕಾರ ಸ್ವೀಕರಿಸುತ್ತಾ ಡಿಪಿಐ ಕಚೇರಿಯಲ್ಲಿ, ನಾರ್ಮಲ್ ಸ್ಕೂಲಿನಲ್ಲಿ, ರೇಂಜ್ ಹಾಗೂ ಶಿಕ್ಷಣಾಧಿಕಾರಿಗಳಾಗಿ ೧೯೪೭ರಲ್ಲಿ ನಿವೃತ್ತರಾದರು.

ಪರಿಷತ್ತಿಗೆ ವಿಶೇಷ ಸೇವೆ ಸಲ್ಲಿಸಿದವರಲ್ಲಿ ಎಂ ಆರ್‍ ಶ್ರೀ ಒಬ್ಬರು. ೧೯೨0ರಿಂದ ೨0 ವರ್ಷಗಳವರೆಗೆ ಪರಿಷತ್ತಿನ ಕಾರ್ಯಸಮಿತಿ ಸದಸ್ಯರು, ೧೯೩೪ರಲ್ಲಿ ವಿಶೇಷ ಸಾಹಿತ್ಯೋತ್ಸವದ ಕಾರ್ಯದರ್ಶಿಗಳೂ ಆಗಿದ್ದು ೧೯೫0-೫೩ರವರೆಗೆ ಪರಿಷತ್ತಿನ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧ ಕರ್ನಾಟಕ, ಕನ್ನಡ ನುಡಿ, ಮೈಸೂರು ಸ್ಕೌಟ್ ಸಂಘದ ಪತ್ರಿಕೆಗಳಿಗೆ ಸಂಪಾದಕರಾಗಿ ಒಳ್ಳೆಯ ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ – ಕನ್ನಡ ನಿಘಂಟಿಗೆ ಅಮೋಘ ಸೇವೆ ಸಲ್ಲಿಸಿದರು. (೧೯೨೯-೧೯೪೩).

ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಪರಿಷತ್ತು ನೀಡಿ ಪುರಸ್ಕರಿಸಿತು.

ಬಾದಾಮಿ ಶಿವಯೋಗ ಮಂದಿರವು ೧೯೪0ರಲ್ಲಿ ವಚನವಾಙ್ಮಯ ವಿಶಾರದ ಎಂಬ ಪ್ರಶಸ್ತಿಯನ್ನು ಇವರಿಗೆ ನೀಡಿತು.

ಶ್ರೇಷ್ಠ ಶಿಕ್ಷಕರಾಗಿ, ಸಂಶೋಧಕರಾಗಿ ಸಾಹಿತಿಗಳಾಗಿ ಎಂ ಆರ್ ಶ್ರೀ ರಚಿಸಿದ ಕೆಲವು ಮುಖ್ಯ ಕೃತಿಗಳು ಹೀಗಿವೆ:

ಭಕ್ತಿಭಂಡಾರಿ ಬಸವಣ್ಣನವರು, ವಚನಧರ್ಮಸಾರ, ಪ್ರಭುಲಿಂಗಲೀಲೆಯ ಸಂಗ್ರಹ, ಕವಿಯ ಸೋಲು (ಕವನ ಸಂಗ್ರಹ), ನಾಗರಿಕ (ನಾಟಕ), ಧರ್ಮದೂತ (ನಾಟಕ), ಆಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ, ಸಾವಿತ್ರಿ, ರಂಗಣ್ಣನ ಕನಸಿನ ದಿನಗಳು.

ದಕ್ಷ ಆಡಳಿತಗಾರರೂ, ವಿದ್ವಾಂಸರೂ ಆಗಿದ್ದ ಎಂ. ಆರ್. ಶ್ರೀ. ಅವರು ಬೆಂಗಳೂರಿನಲ್ಲಿ ೧೬-೯-೧೯೫೩ರಲ್ಲಿ ನಿಧನರಾದರು.

 ಸಾಧನೆ :

ಮೊದಲ ಬಾರಿಗೆ ೩ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಆದರೂ ಆಕಸ್ಮಿಕ ಮರಣದಿಂದ ೨ ವರ್ಷ ೪ ತಿಂಗಳು ಮಾತ್ರ ಅಧ್ಯಕ್ಷರಾಗಿದ್ದವರು ಎಂ. ಆರ್. ಶ್ರೀ. ಅವರು. ಇವರ ಅವಧಿಯಲ್ಲಿ ನಿಘಂಟು ರಚನೆಗೆ ಸರ್ಕಾರದಿಂದ ೧ ಲಕ್ಷ ರೂ. ನೆರವು ಸಿಕ್ಕಿತು. ಮೈಸೂರು ಸರ್ಕಾರದ ಸಂಸ್ಕೃತಿ ಪ್ರಸಾರ ಯೋಜನೆ ವಯಸ್ಕರ ಶಿಕ್ಷಣ ಸಮಿತಿಗೆ ಸಹಕಾರವನ್ನು ಪರಿಷತ್ತು ನೀಡಿತು. ಮೂಲತಃ ಉಪಾಧ್ಯಾಯರಾದ ಇವರು ಅಧ್ಯಾಪಕರ ಜ್ಞಾನವನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಪರಿಷತ್ತಿನಲ್ಲಿ ಕಾರ್ಯಕ್ರಮಗಳನ್ನು ಶಿಸ್ತಿನಿಂದ ಸಕಾಲಕ್ಕೆ ಪ್ರಾರಂಭಿಸುತ್ತಿದ್ದರು.

ಒಮ್ಮೆ ಗೋಕುಲನಿರ್ಗಮನ ಕಾವ್ಯ ವಾಚನವಿತ್ತು. ಪರಿಷತ್ತಿನ ಹಾಲಿನಲ್ಲಿ ಜಮಖಾನ ಹಾಸಲಾಗುತ್ತಿತ್ತು. ಅದರ ಮೇಲೆ ಆ ಕಡೆ ಹೆಂಗಸರು ಈ ಕಡೆ ಗಂಡಸರು ಕೂಡುತ್ತಿದ್ದರು. ನಡುವೆ ಒಂದೂವರೆ ಅಡಿ ಎತ್ತರದ (ಸ್ಕ್ರೀನ್‍ ಮರದ್ದು) ಅಡ್ಡ ಇರುತ್ತಿತ್ತು. ೪.೩0ಗೆ ಕರಾರುವಕ್ಕಾಗಿ ಕಾವ್ಯವಾಚನ ಶುರುವಾಗುತ್ತಿತ್ತು. ಜವಾನ ಹನುಮಯ್ಯ ಪರಿಷತ್ತಿಗೆ ಬರುವುದು ತಡವಾಯ್ತು. ಎಂ. ಆರ್. ಶ್ರೀ. ಅವನಿಗೆ ಕಾಯಲಿಲ್ಲ- ರೀಡಿಂಗ್ ರೂಂನಲ್ಲಿದ್ದ ವಿದ್ಯಾರ್ಥಿಗಳನ್ನು ಕರೆದು ಅವರ ಸಹಾಯದಿಂದ ಜಮಖಾನ ಹಾಸಿದರು. ಸ್ವಲ್ಪ ಹೊತ್ತಿನಲ್ಲಿ ಜವಾನ ಬಂದು, ತಪ್ಪಾಯ್ತು ಮಹಾಸ್ವಾಮಿ ತಡವಾಯ್ತು ಎಂದ. ಆಗ ಅಧ್ಯಕ್ಷರಾದ ಎಂ. ಆರ್. ಶ್ರೀ. ಹೇಳಿದರು : ಅಪ್ಪಾ, ನಾನು ಈ ಸಂಸ್ಥೆಯಲ್ಲಿ ದೊಡ್ಡ ಜವಾನ ನೀನು ಚಿಕ್ಕ ಜವಾನ. ಕಾರ್ಯಕ್ರಮ ತಡವಾದರೆ ನಿನ್ನನ್ನಾರೂ ಕೇಳೋಲ್ಲ ನನ್ನ ಕೇಳ್ತಾರೆ” ಎಂದರು. ಎಂ. ಆರ್. ಶ್ರೀ ಅವರ ಪಾಲಿಗೆ ಪರಿಷತ್ತು ನಿಜಕ್ಕೂ ಸರಸ್ವತೀ ಮಂದಿರವೇ ಆಗಿತ್ತು. ಅವರು ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಕಟ್ಟಡದ ಒಳಕ್ಕೆ ಬರುತ್ತಿದ್ದರು. ಅವಧಿಗೆ ಮೊದಲೇ ೧೬.೯.೫೩ರಲ್ಲಿ ನಿಧನರಾದರು.

Tag: M.R.Sreenivasamurthy, M.R.Srinivasamurthy, M. R. Sreenivasamurthy

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)