ಶ್ರೀ ಹೆಚ್. ಬಿ. ಜ್ವಾಲನಯ್ಯ

a16

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೬

ಅಧ್ಯಕ್ಷರು : ಹೆಚ್. ಬಿ. ಜ್ವಾಲನಯ್ಯ

ಜೀವನ :

ನಾಟಕಕಾರರು ಸಾಹಿತಿಗಳು, ಸಂಘಟಕರು ಆದ ಹೆಚ್.ಬಿ. ಜ್ವಾಲನಯ್ಯ ಅವರು ಹಾಸನದವರು. ಹಾಸನದಲ್ಲೇ ವಿದ್ಯಾಭ್ಯಾಸ ಪೂರೈಸಿದ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ನಾಟಕ ಸಾಹಿತ್ಯದಲ್ಲಿ ಆಸಕ್ತಿ ತಳೆದರು. ಆಕಾಶವಾಣಿ ಮೂಲಕ ಇವರ ಅನೇಕ ನಾಟಕಗಳು ಪ್ರಸಾರವಾಗಿವೆ. ಮಹಾಶಿಲ್ಪಿ ಅರಿಷ್ಟನೇಮಿ ಎಂಬ ಚಲನಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಚಿಸಿದ ಇವರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ.

ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರಲ್ಲಿ ಒಬ್ಬರಾದ ಇವರು ೧೬ ವರ್ಷಗಳ ಕಾಲ ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಹಾಸನ ನಗರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ಹಾಸನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ೧೯೪೨ರಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿಧಾನಸಭಾ ಸದಸ್ಯರಾಗಿ ಇದ್ದರು. ೧೯೮೬-೧೯೮೭ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸರ್ಕಾರ ಆಡಳಿತಾಧಿಕಾರಿಗಳನ್ನು ಪರಿಷತ್ತಿಗೆ ನೇಮಿಸಿದ ಪ್ರಯುಕ್ತ ಪರಿಷತ್ತಿನ ನಿಬಂಧನೆ ಪ್ರಕಾರ ೩ ವರ್ಷಗಳ ಅಧ್ಯಕ್ಷಾಧಿಕಾರವನ್ನು ಪೂರೈಸಲಾಗಲಿಲ್ಲ.

ಶ್ರೇಷ್ಠ ನಾಟಕ ಸಾಹಿತಿಗಳಾದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಹೀಗಿವೆ: ಸೆಳವಿನಸುಳಿ, ದಿವ್ಯಧ್ವನಿ, ಮಹಾಶಿಲ್ಪಿ, ರಾಣಿ ರತ್ನಾಜಿ, ಆರ್ಯಚಾಣಕ್ಯ, ವೀರ ತೀರ್ಥಂಕರ ಹೇಮಾವತಿ ಇತ್ಯಾದಿ.

ಹೆಚ್.ಬಿ. ಜ್ವಾಲನಯ್ಯ ಅವರು ೩0-೩-೧೯೯೪ರಲ್ಲಿ ನಿಧನರಾದರು.

ಸಾಧನೆ :

ಪ್ರವೇಶ ಪರೀಕ್ಷೆ : ಬಿ.ಎಂ.ಶ್ರೀ ಅವರ ಕಾಲದಲ್ಲಿ ಅಕ್ಷರಸ್ಥರಾಗಲು ಕನ್ನಡ ಬಾಲಬೋಧೆಯನ್ನು ಕಲಿಸುವ ರೀತಿಯ ಅಣುಗ, ಪರೀಕ್ಷೆ ಪ್ರಾರಂಭಿಸಲಾಗಿತ್ತು. ಆಮೇಲೆ ಅದು ಮುಂದುವರೆಯಲಿಲ್ಲ. ಜ್ವಾಲನಯ್ಯನವರು ಅದೇ ರೀತಿಯ ಪ್ರವೇಶ ಎಂಬ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿ ಸಮಿತಿರಚಿಸಿ ಪಠ್ಯಪುಸ್ತಕವನ್ನು ಸಿದ್ಧಗೊಳಿಸಿದರು.

ಮಾರಾಟವ್ಯವಸ್ಥೆ: ಸ್ವತಃ ಲೇಖಕರಾಗಿ ಮಾರಾಟದ ಕಷ್ಟವನ್ನು ತಿಳಿದಿದ್ದ ಜ್ವಾಲನಯ್ಯ ಪರಿಷತ್ತಿನಲ್ಲಿ ನಾಡಿನ ಎಲ್ಲ ಪ್ರಕಾಶಕರ ಪುಸ್ತಕಗಳು ಒಂದೆಡೆ ಸಿಗಬೇಕೆಂಬ ಅಭಿಲಾಷೆಯಿಂದ ಇತರ ಲೇಖಕರ ಹಾಗೂ ಖಾಸಗಿ ಸಂಸ್ಥೆಗಳ ಪ್ರಕಾಶಕರ ಪುಸ್ತಕಗಳನ್ನು ಪರಿಷತ್ತಿನ ಮಾರಾಟ ವಿಭಾಗದಲ್ಲಿರಿಸಿ ಏಕಛತ್ರದಡಿ ಮಾರಾಟ ವ್ಯವಸ್ಥೆ (ಏಕಗವಾಕ್ಷಿ ವಹಿವಾಟಿನ ಹಾಗೆ) ಮಾಡಿದರು. ನಮ್ಮ ನಾಡಿನಲ್ಲಿ ಎಲ್ಲಾ ಬಗೆಯ ಪುಸ್ತಕಗಳು ಎಲ್ಲಾ ಲೇಖಕರ ಪುಸ್ತಕಗಳು ಒಂದೆಡೆ ಇಂದೂ ಸಿಗುವುದಿಲ್ಲ. ಆದ್ದರಿಂದ ಜ್ವಾಲನಯ್ಯ ಅಂಥ ಪ್ರಯತ್ನ ಮಾಡಿದರು. ಆದರೆ ಅನಂತರದಲ್ಲಿ ಆ ವ್ಯವಸ್ಥೆ ಮುಂದುವರೆಯಲಿಲ್ಲ.

ಗಮಕ ಪ್ರಚಾರ : ಜ್ವಾಲನಯ್ಯನವರಿಗೆ ಗಮಕದಲ್ಲಿ ಆಸಕ್ತಿ ಇತ್ತು. ಪರಿಷತ್ತು ಗಮಕಕ್ಕೆ ಕೊಟ್ಟ ಪ್ರೋತ್ಸಾಹ ಪರಿಚಯವಿತ್ತು. ಪರಿಷತ್ತಿನಲ್ಲೇ ಗಮಕ ಕಾರ್ಯಕ್ರಮಗಳಿಗೆ ಎಲ್ಲರೂ ಬರಲು ಶಕ್ಯವಿಲ್ಲ. ಮತ್ತು ಮನೆಮನೆಗೆ ಗಮಕ ಪರಿಚಯ ಪ್ರಚಾರ ಆಗಬೇಕು ಎಂದು ಬೆಂಗಳೂರಿನ ಬಡಾವಣೆಗಳಲ್ಲಿ ಗಮಕ ಚಿತ್ರ ಕಾರ್ಯಕ್ರಮಗಳನ್ನು ನಡೆಸಿದರು. ಇದು ಜನಪ್ರಿಯ ಕಾರ್ಯಕ್ರಮವಾಯಿತು. ಗಮಕಿಗಳಿಗೆ ಪ್ರೋತ್ಸಾಹ ಸಿಕ್ಕಿತು.

ಶುಭಾಶಯ ಕಾರ್ಡುಗಳು : ವ್ಯಕ್ತಿಗಳಿಗೆ ಸಭೆ – ಸಮಾರಂಭಗಳಿಗೆ ಶುಭಾಶಯ ಕಳಿಸುವ ಪದ್ಧತಿ ಇರುವುದು ಎಲ್ಲರಿಗೂ ತಿಳಿದಿದೆ. ಈ ರೀತಿ ಶುಭಾಶಯಕಾರ್ಡುಗಳು ಅಂದಚೆಂದಗಳಿಂದ ಅರ್ಥಪೂರ್ಣವಾಗಿರಬೇಕು. ಕನ್ನಡಾಭಿಮಾನ ಮೂಡಿಸುವಂತಿರಬೇಕು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತರ ಹಾಗೂ ಕನ್ನಡನಾಡಿನ ಸಾಂಸ್ಕೃತಿಕ ಸ್ಮಾರಕಗಳ ಆಕರ್ಷಕ ಚಿತ್ರಗಳ ಶುಭಾಶಯಕಾರ್ಡುಗಳನ್ನು ಮುದ್ರಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಹಕಾರದೊಂದಿಗೆ ಮಾರಾಟಕ್ಕೆ ವ್ಯವಸ್ಥೆ ಮಾಡಿದರು.

ಆಡಳಿತಾಧಿಕಾರಿಗಳ ಕಾಲ

ಹಂಪನಾ ಅವರ ಕಾಲದಲ್ಲಿ ನಡೆಯಬೇಕಾಗಿದ್ದ ೫೮ನೇ ಸಮ್ಮೇಳನವನ್ನು ೧೯೮೭ ಅಕ್ಟೋಬರ್‍ನಲ್ಲಿ ಸಿದ್ದಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ ಕಲಬುರ್ಗಿಯಲ್ಲಿ ಜ್ವಾಲನಯ್ಯ ನಡೆಸಿ ಹಿಂತಿರುಗುತ್ತಿದ್ದ ಹಾಗೆ ಪರಿಷತ್ತಿನ ಆಡಳಿತಾಧಿಕಾರಿಗಳು ವಹಿಸಿಕೊಳ್ಳುವ ಆದೇಶ ಪ್ರಕಟವಾಯಿತು. ಜ್ವಾಲನಯ್ಯನವರ ಅಧಿಕಾರಾವಧಿ ಅರ್ಧದಲ್ಲಿ ಕೊನೆಗೊಂಡಿತು.

ಜ್ವಾಲನಯ್ಯ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಹಂಪನಾ ಅವರ ಬಗ್ಗೆ ಬಂದ ಆರೋಪಗಳ ವಿಚಾರಣೆ ಪ್ರಯುಕ್ತ ಸರ್ಕಾರ ಹೊರಡಿಸಿದ ಆದೇಶಾನುಸಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಅ. ರಾ. ಚಂದ್ರಹಾಸಗುಪ್ತ ಅವರು ೨-೧೧-೧೯೮೭ರಲ್ಲಿ ಅಧಿಕಾರ ವಹಿಸಿಕೊಂಡರು. ಅವರ ನಂತರ ಐ.ಎಂ. ವಿಠ್ಠಲಮೂರ್ತಿ ಅವರು ೩0-೩-೧೯೮೮ರಲ್ಲಿ ಪರಿಷತ್ತಿನ ಅಧಿಕಾರವಹಿಸಿಕೊಂಡರು. ಇವರಾದ ಮೇಲೆ ವೆಂಕಟೇಶ ಮಾಚನೂರ ೩0-೪-೨00೮ರಿಂದ ೨೧.೭,೨00೮ರವರೆಗೆ ಮನುಬಳಿಗಾರ್ ೨೧.೭.೨00೮ರಿಂದ ೨೭.೮.೨00೮ರವರೆಗೆ ಮತ್ತೆ ೨೭.೨.೨0೧೨ರಿಂದ ೩-೫-೨0೧೨ವರೆಗೆ ಪರಿಷತ್ತಿನ ಅಧಿಕಾರವಹಿಸಿಕೊಂಡರು.

ಈ ಎಲ್ಲ ಅಧಿಕಾರಿಗಳು ಒಟ್ಟು ಅವಧಿಯಲ್ಲಿ ಆಡಳಿತದ ಹಿನ್ನೆಲೆಯಲ್ಲಿ ಪರಿಷತ್ತಿನ ಕಚೇರಿಯಲ್ಲಿ ಕೆಲವು ಸುಧಾರಣೆಗಳನ್ನು ತರಲಾಯಿತು. ಸರ್ಕಾರಿ ಆದೇಶಾನುಸಾರ ಶಾಮಸುಂದರ ಆಯೋಗದ ವರದಿಯನ್ನು ಪ್ರಕಟಿಸುವ ನಿಬಂಧನಾ ತಿದ್ದುಪಡಿ ಸಮಿತಿಯ ಪರಿಷ್ಕೃತ ನಿಬಂಧನೆ ಜಾರಿಗೆ ಬಂದಿತು.

Tag: H.B.Jwalannaiah, H. B. Jwalannaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)