ಡಾ. ನಲ್ಲೂರು ಪ್ರಸಾದ್

a23

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೩

ನಲ್ಲೂರು ಪ್ರಸಾದ್ (೨000೧೨)

ಜೀವನ 

ಕನ್ನಡ ಅಧ್ಯಾಪಕರೂ ಕವಿಗಳೂ ಜಾನಪದ ವಿದ್ವಾಂಸರೂ ಆದ ಆರ್.ಕೆ. ನಲ್ಲೂರು ಪ್ರಸಾದ್ ಅವರು ೨೬-೧೧-೧೯೪೭ರಂದು ಸಂಜೀವಯ್ಯ-ಶಾಂತಮ್ಮ ದಂಪತಿಗಳಿಗೆ ಚೆನ್ನರಾಯಪಟ್ಟಣದ ನಲ್ಲೂರಿನಲ್ಲಿ ಜನಿಸಿದರು.

ಪ್ರೌಢವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಮುಗಿಸಿ ಶ್ರವಣಬೆಳಗೊಳದ ಶ್ರೀಗೊಮ್ಮಟೇಶ್ವರ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಗಳಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದರು.

೧೯೭೭ರಲ್ಲಿ ವಿಶ್ವೇಶ್ವರಪುರಂ ಕಲೆ ಮತ್ತು ವಾಣಿಜ್ಯ ಕಾಲೇಜಿಗೆ ಅಧ್ಯಾಪಕರಾಗಿ ಸೇರಿದ ಇವರು ೨೮ ವರ್ಷಗಳ ಕಾಲ ಸೇವೆಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಾನಪದ ಪ್ರವೇಶ ಮತ್ತು ಪ್ರೌಢ ತರಗತಿಗಳಿಗೆ ಬೋಧನೆ ಮಾಡಿದ್ದರು.

೨00೮ರಿಂದ ೨0೧೨ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಇವರು ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ಚೆನ್ನರಾಯಪಟ್ಟಣ), ಜನಪದರು ಸಂಸ್ಥೆ ಪ್ರಜ್ಞಾ ಸಾಂಸ್ಕೃತಿಕ ವೇದಿಕೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟಕ್ಕೆ ೧೯೯೯ರಿಂದ ೨00೨ರವರೆಗೆ ಕಾರ್ಯದರ್ಶಿಗಳಾಗಿ, ಕನ್ನಡನಾಡು, ಜಾನಪದ ಸಮಾವೇಶ, ಅನಿಕೇತನ, ಯುವ ಸಾಧನೆ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.  ಗೋಷ್ಠಿಗಳಲ್ಲಿ ಭಾಗವಹಿಸಿದ ಇವರು ಹಾಸನಜಿಲ್ಲೆಯ ವಚನಸಾಹಿತ್ಯ ಸಮ್ಮೇಳನದ ದೆಹಲಿಯ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಅಮೆರಿಕಾದ ನಾವಿಕ ಸಮ್ಮೇಳನ, ದುಬೈನ ಧ್ವನಿ ಪ್ರತಿಷ್ಠಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಇವರ ಸೇವೆಯನ್ನು ಮೆಚ್ಚಿ ಹತ್ತಾರು ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಪ್ರಶಸ್ತಿ ಪ್ರದಾನ ಮಾಡಿವೆ. ಗೌತಮ ಪ್ರಶಸ್ತಿ, ಜಾನಪದ ತಜ್ಞ, ಕರುನಾಡ ಸಿರಿ, ಕನ್ನಡದ ಕಾಯಕಯೋಗಿ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಜ್ವಾಲನಯ್ಯ ಸಾಹಿತ್ಯ ಪ್ರಶಸ್ತಿ. ಕುವೆಂಪು ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಇವರ ಕೃತಿಗಳಲ್ಲಿ `ನೀನೆಂಬನಾನು’ `ಸೋನೆ ಮುಗಿಲು’ ‘ನವಿಲಜಾಗರ’, ರೆಕ್ಕೆ ಬಡಿಯುವ ಮುನ್ನ, ಕವಿತಾ ಸಂಕಲನಗಳಾಗಿದ್ದರೆ ನಲ್ಲೂರು ದೊರೆ ಕಾಳಿ, ಗಂಗಾಡಿಕಾರ ಒಕ್ಕಲಿಗರು ಜನಪದ ಕೃತಿಗಳಾಗಿವೆ. ಕರ್ನಾಟಕ ಜಾನಪದ, ಜಾನಪದ ಭಾರತಿ, ಹೆಜ್ಜೆಗುರುತು, ಸಂಪಾದಿತ ಕೃತಿಗಳಾಗಿವೆ. ಕರ್ನಾಟಕದ ಒಕ್ಕಲಿಗರಲ್ಲಿ ಗಂಗಾಡಿಕಾರರು-ಒಂದು ಅಧ್ಯಯನ ಇವರ ಮಹತ್ವದ ಕೃತಿಯಾಗಿದೆ.

ಸಾಧನೆ

ಶಿಕ್ಷಕ ವೃತ್ತಿಯಲ್ಲಿದ್ದ ನಲ್ಲೂರು ಪ್ರಸಾದರು ನಿವೃತ್ತರಾದ ಮೇಲೆ ಕನ್ನಡ ಸೇವೆಯ ಉತ್ಸಾಹದಲ್ಲಿ ಪರಿಷತ್ತಿನ ಚುನಾವಣೆಗೆ ನಿಂತು ಗೆದ್ದು ಬಂದರು.

ಕನ್ನಡ ನಿಧಿ : ನಲ್ಲೂರು ಪ್ರಸಾದರು ಸರ್ಕಾರದಿಂದ ನೆರವನ್ನು ತಂದರೂ ಪರಿಷತ್ತು ಆರ್ಥಿಕವಾಗಿ ತನ್ನ ಕಾಲಮೇಲೆ ತಾನು ನಿಲ್ಲಬೇಕೆಂದು ಕನ್ನಡನಿಧಿ ಎಂಬುದನ್ನು ಸ್ಥಾಪಿಸಿ, ೩ ತಿಂಗಳ ಅವಧಿಯಲ್ಲಿ ಹತ್ತುಲಕ್ಷ ಕೂಡಿಹಾಕಿದರು. ಹೋದಲ್ಲೆಲ್ಲ ಬಂದಲ್ಲೆಲ್ಲಾ, ಕನ್ನಡನಿಧಿಗೆ ದೇಣಿಗೆ ಕೇಳುತ್ತಿದ್ದರು. ಕೆಲವರು ಇವರನ್ನು ‘ಕನ್ನಡದ ಮಾರ್ವಾಡಿ’ ಎಂದು ಹಂಗಿಸಿದರೂ ಹಿಂಜರಿಯದೆ ಪರಿಷತ್ತಿನ ಹಿತವನ್ನು ಲಕ್ಷಿಸಿದರು.

ಗ್ರಾಮಿಸಿರಿ : ನಾಡಿನ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಉತ್ಕಟ ಬಯಕೆಯಿಂದ ಗ್ರಾಮಸಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದರು.

ಸರ್ಕಾರದ ನೆರವು : ವಿನೂತನ ಕಾರ್ಯಕ್ರಮಗಳನ್ನು ಯೋಜಿಸಿ ಅದಕ್ಕೆ ಸರ್ಕಾರದಿಂದ ಹಣ ತರುವಲ್ಲಿ ಸಾಕಷ್ಟು ಯಶಸ್ವಿ ಆದರು. ನಲ್ಲೂರು ಪ್ರಸಾದ್ ೨00೮-0೯ರಲ್ಲಿ ನಾಲ್ಕುವಿಭಾಗಗಳಿಗೆ ೩ ಲಕ್ಷರೂ, ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೧ ಕೋಟಿ ರೂ, ೨00೯-೧0ರಲ್ಲಿ ಸಂಶೋಧನಾ ಕೇಂದ್ರ ಯೋಜನೆಗೆ ೧ ಕೋಟಿ, ಕನ್ನಡ – ಕನ್ನಡ ನಿಘಂಟು ಪ್ರಕಟನೆ ೧ ಕೋಟಿ, ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ೧ ಕೋಟಿ ೪೮ ಲಕ್ಷ…. ಹೀಗೆ ಮೂರುವರೆ ವರುಷಗಳಲ್ಲಿ ಬಹಳಷ್ಟು ಹಣವನ್ನು ಸರ್ಕಾರದಿಂದ ಪಡೆದಿದ್ದು ಸಾಹಸವೇ ಸರಿ.

ಪರಿಷತ್ತಿನ ಜಿಲ್ಲಾಘಟಕಗಳಿಗೆ ಮತ್ತು ಗಡಿನಾಡ ಘಟಕಗಳ ಕಾರ್ಯಕ್ರಮಗಳಿಗಾಗಿ ವಿಶೇಷ ಅನುದಾನ ಸರ್ಕಾರದಿಂದ ಪರಿಷತ್ತಿಗೆ ಇವರ ಅವಧಿಯಲ್ಲಿ ದೊರಕಿದೆ.

ಸದಸ್ಯತ್ವ : ನಲ್ಲೂರರು ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದರು. ಇದರ ಫಲವಾಗಿ ೬೨000 ಆಜೀವ ಸದಸ್ಯರ ಸಂಖ್ಯೆ ೧,೩0,000ಕ್ಕೆ ಏರಿತು. ೭0000 ಜನರು ಹೊಸದಾಗಿ ಸದಸ್ಯರಾದರು.

ಪುಸ್ತಕ ಪ್ರಕಟನೆ : ನಲ್ಲೂರರ ಅವಧಿಯಲ್ಲಿ ೧0೩ ಕೃತಿಗಳು ಮರುಮುದ್ರಣಗೊಂಡು ೧೨0 ಹೊಸ ಕೃತಿಗಳು ಪ್ರಕಟವಾಗಿವೆ. ಪುಸ್ತಕ ಪ್ರಕಟನಿಧಿ ೫೬,೭೫,000/- ರೂ ಇದ್ದದ್ದು ೧,೪೯,೧೫,೨00/-ಕ್ಕೆ ಏರಿಸಿದ್ದಾರೆ. ಪರಿಷತ್ತಿನ ನಿಘಂಟುಗಳನ್ನು  ಮರುಮುದ್ರಣ ಮಾಡಿಸಿದರು. ಇವರು ದ್ರಾವಿಡ ಭಾಷಾ ಜ್ಞಾತಿಪದಕೋಶದ ತಯಾರಿಕೆಗೂ ಯತ್ನಿಸಿದರು.

ಸಮ್ಮೇಳನಗಳು : ನಾಲ್ಕು  ಅಖಿಲ  ಭಾರತ  ಕನ್ನಡ  ಸಾಹಿತ್ಯ  ಸಮ್ಮೇಳನಗಲು  ಇವರ  ಅವಧಿಯಲ್ಲಿ  ನಡೆದವು.  ಇದರ ಜತೆಗೆ ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳು ಎಂದಿನಂತೆ ನಡೆದವು.

ಸಂಶೋಧನೆ ಕಮ್ಮಟಗಳು: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಸಂಶೋಧನಾ ಕಮ್ಮಟಗಳನ್ನು ನಾಡಿನಾದ್ಯಂತ ನಡೆಸುವ ಕ್ರಿಯಾಯೋಜನೆಯನ್ನು ರೂಪಿಸಿ ಹತ್ತಾರು ಕಮ್ಮಟಗಳನ್ನು ನಡೆಸಲಾಯಿತು.

ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಡೆದ ಪ್ರಾಚ್ಯ ಸಾಹಿತ್ಯ ಸಮಾವೇಶದ ಸಾಹಿತ್ಯ ಸಮಾವೇಶ, ವಚನ ಸಾಹಿತ್ಯ ಸಮಾವೇಶ, ಮಹಿಳಾ ಸಾಹಿತ್ಯ ಸಮಾವೇಶ, ಮಕ್ಕಳ ಸಾಹಿತ್ಯ ಸಮಾವೇಶಗಳು ಏರ್ಪಟ್ಟವು.

ಕುವೆಂಪು ಸಭಾಂಗಣ: ನಲ್ಲೂರು ಅವರು ಸಣ್ಣ ಪ್ರಮಾಣದ ಪುಸ್ತಕ ಬಿಡುಗಡೆ, ಚಿಂತನ ಕಾರ್ಯಕ್ರಮಗಳಂಥ ಸೀಮಿತ ವರ್ಗದ ಜನ ಬರುವವರಿಗಾಗಿ ವಜ್ರಮಹೋತ್ಸವದ ೩ನೇ ಮಹಡಿಯಲ್ಲಿ ಪುನರೂರರು ರೂಪಿಸಿದ್ದ ‘ಪಂಪ ಸಭಾಂಗಣ’ದ ಹೆಸರನ್ನು ‘ಕುವೆಂಪು  ಸಭಾಂಗಣ’ ಎಂದು  ಬದಲಿಸಿದರು. ಇಲ್ಲಿ ಹಾಕಿರುವ ಕನ್ನಡ ಸಾಹಿತಿಗಳ ಭಾವಚಿತ್ರಗಳು ನೋಟಕರ ಮನ ಸೆಳೆಯುತ್ತಿದೆ.

ಶ್ರೀವಿಜಯ ಪ್ರಶಸ್ತಿ ಸ್ಥಾಪನೆ : ಪರಿಷತ್ತು ಇತರರು ಇಟ್ಟ ದತ್ತಿನಿಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ತಾನೇ ಇಟ್ಟ ದತ್ತಿನಿಧಿ ಯಾವುದೂ ಇಲ್ಲ ಎಂಬುದನ್ನು ಗಮನಿಸಿ ೪0 ವರ್ಷದ ಒಳಗಿನ ಯುವಕರಿಗಾಗಿ ೨0 ಲಕ್ಷ ರೂ ಮೊತ್ತದ ಶ್ರೀ ವಿಜಯ ಪ್ರಶಸ್ತಿಯನ್ನು ಸ್ಥಾಪಿಸಿದರು.  ಇದರ ಬಡ್ಡಿಯಿಂದ ಪ್ರಶಸ್ತಿ ಕೊಡಲು ಪ್ರಾರಂಭಿಸಿದ್ದು ಮೊದಲ ಬಾರಿಗೆ ಈ ಪ್ರಶಸ್ತಿ ವಿಕ್ರಮ ಎಸ್. ಜಿ. ಅವರಿಗೆ  ಸಂದಿತು.

Tag: Nalluru Prasad, Nallur Prasad

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)