ಶ್ರೀ ಪುಂಡಲೀಕ ಹಾಲಂಬಿ

pundalikahalambi

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೪

ಪುಂಡಲೀಕ ಹಾಲಂಬಿ (೨0೧೨0೧೫)

ಜೀವನ 

ಪ್ರಬುದ್ಧ ಸಂಘಟಕರು, ಹೋರಾಟಗಾರರು, ವಾಗ್ಮಿಗಳು ಕ್ರಿಯಾಶಾಲಿಗಳು ಆದ ಪುಂಡಲೀಕ ಹಾಲಂಬಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದಲ್ಲಿ ಚಂದ್ರಶೇಖರ ಹಾಲಂಬಿ ವಾಸಂತಿ ದಂಪತಿಗಳ ಸುಪುತ್ರರಾಗಿ ೨೧-೧-೧೯೫೧ರಲ್ಲಿ ಜನಿಸಿದರು. ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಮೇಲೆ ಕುಂದಾಪುರದಲ್ಲಿ ಓದನ್ನು ಮುಂದುವರೆಸಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದು ಎ.ಪಿ.ಎಸ್. ಸಂಸ್ಥೆಯೊಂದಿಗೆ ಸೇವೆ ಎಂಬಂತೆ, ಹೋಟೆಲ್ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಾ. ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಿದರು. ೧೯೭೩ರಲ್ಲಿ ಬಿ.ಎ. ಪದವಿಯನ್ನು ಗಳಿಸಿದ ೧೯೭೫ರಲ್ಲಿ ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಅನಂತರ ಸ್ವಲ್ಪಕಾಲ ಬೆಂಗಳೂರು ಕ್ರೈಸ್ತ ಕಾಲೇಜಿನಲ್ಲಿ ಅಧ್ಯಾಪಕರಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಸಹಾಯಕರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೇಲೆ, ೧೯೮0ರಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗಕ್ಕೆ ಪ್ರಕಟಣಾ ಸಹಾಯಕರಾಗಿ ನೇಮಕಗೊಂಡರು. ಕ್ರಮೇಣ ಸಹಾಯಕ ನಿರ್ದೇಶಕ, ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಿ ೩೬ ವರ್ಷಗಳ ಸೇವೆಯ ನಂತರ ೨0೧೧ರಲ್ಲಿ ನಿವೃತ್ತರಾದರು.

ವಿದ್ಯಾರ್ಥಿ ಜೀವನ ಕಾಲದಲ್ಲಿ ಅಖಿಲ ಕರ್ನಾಟಕ ಕನ್ನಡ ಮಾಧ್ಯಮ ಸಮ್ಮೇಳನದ ಅಧ್ಯಕ್ಷರಾಗಿ, ಜ್ಞಾನಭಾರತಿಯ ಕರ್ನಾಟಕ ಸಾಹಿತ್ಯ ಸಂಘ, ನೌಕರರ ಸಂಘ, ಇವುಗಳ ಅಧ್ಯಕ್ಷರಾಗಿ ಕ್ರಿಯಾಶಾಲಿತನದಿಂದ ವಿದ್ಯಾರ್ಥಿ ಚಟುವಟಿಕೆಗಳನ್ನು ನಡೆಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಬೋಧಕೇತರ ಕನ್ನಡ ಸಾಹಿತ್ಯ, ಹೋಟಲ್ ಉದ್ಯಮದಾರರ ಸಹಕಾರ ಬ್ಯಾಂಕ್, ಬೆಂಗಳೂರು ವಿಶ್ವವಿದ್ಯಾನಿಲಯದ ನೌಕರರ ಗೃಹ ನಿರ್ಮಾಣ ಸಂಘ ಇವುಗಳ ಅಧ್ಯಕ್ಷರಾಗಿ  ದಕ್ಷಿಣ ಕನ್ನಡದ ಕನ್ನಡಿಗರ ವೇದಿಕೆ ಮುಂತಾದ ಸಂಘಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಸನಾತನ ಧರ್ಮ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ೧೯೯೭-೯೮ ರಲ್ಲಿ ಮತ್ತು ೨00೧-೨00೪ರಲ್ಲಿ ಸೇವೆ ಸಲ್ಲಿಸಿದ್ದರು. ೨00೪ ರಿಂದ ೨0೧೨ರವರೆಗೆ ಗೌರವ ಕೋಶಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಅನಂತರ ೩-೫-೨0೧೨ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೨೪ನೇ ಅಧ್ಯಕ್ಷರಾಗಿ ಶ್ರಮಿಸಿದ  ಇವರು ಪರಿಷತ್ತಿಗೆ ಮಾಸ್ತಿ ಅವರಂತೆ ಯಾವ ಬಗೆಯ ಗೌರವ ಸಂಭಾವನೆಯನ್ನೂ ಪಡೆಯದೆ ಸೇವೆ ಸಲ್ಲಿಸಿದ್ದರು. ತಮಗೆ ಬಂದ ಗೌರವ ಸನ್ಮಾನದ ವಸ್ತುಗಳನ್ನೆಲ್ಲ ಪರಿಷತ್ತಿಗೆ ನೀಡಿದ್ದರು. ಅಷ್ಟೇ ಅಲ್ಲದೆ ಪರಿಷತ್ತಿನಿಂದ ಕಾರ್ಯಕ್ರಮಗಳ ನಿಮಿತ್ತ ಅಥವಾ ಪರಿಷತ್ತಿನ ಕಾರ್ಯ ನಿಮಿತ್ತಾ ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ, ತಮ್ಮ ಊಟ ವಸತಿ ವೆಚ್ಚಗಳನ್ನು ತಾವೇ ಭರಿಸಿದ್ದರು. ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಇವರು ಅಚ್ಚುಕಟ್ಟಿನ ಶಿಸ್ತಿನ ಜೀವನಕ್ಕೆ ಹೆಸರಾಗಿದ್ದರು.

ಪುಂಡಲೀಕ  ಹಾಲಂಬಿಯವರು  ಎಪ್ರಿಲ್ ೨೪, ೨0೧೬ರಂದು  ಈ ಲೋಕವನ್ನಗಲಿದರು.

ಸಾಧನೆ 

ಕನ್ನಡದ ಹೋರಾಟಗಾರ, ಉತ್ತಮ ಸಂಘಟಕಕಾರರಾದ ಪುಂಡಲೀಕ ಹಾಲಂಬಿ ಅವರು ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಅಧ್ಯಕ್ಷರಾಗುವ ಯೋಗವನ್ನು ಪಡೆದವರು.

ಸಮ್ಮೇಳನಗಳು : ಹಿಂದಿನಿಂದ ಬಂದ ದತ್ತಿನಿಧಿ ಕಾರ್ಯಕ್ರಮಗಳನ್ನು ತರಗತಿಗಳು ಮತ್ತು ಪರೀಕ್ಷೆಗಳನ್ನು ನಡೆಸಿಕೊಂಡು ಬರುವುದರ ಜತೆಗೆ, ಎಂದಿನಂತೆಯೇ ತಮ್ಮ ಅವಧಿಯಲ್ಲಿ ಇವರು ೩ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿಸಿದರು.

ನಿಬಂಧನೆಗಳ ತಿದ್ದುಪಡಿ : ಹತ್ತಾರು ವಿಷಯಗಳ ಮಾರ್ಪಾಟಿನ ಹಿನ್ನೆಲೆಯಲ್ಲಿ ನಿಬಂಧನೆಗಳ ತಿದ್ದುಪಡಿಗೆ ಉಪಸಮಿತಿಗಳನ್ನು ರಚಿಸಿದರು.

ಪುಸ್ತಕ ಭಂಡಾರ : ಸಂಶೋಧನ ವಿಭಾಗ ಇದ್ದ ಮಹಡಿಯ ಜಾಗದಲ್ಲಿ ಓದುಗರು ಮನೆಗೆ ಪುಸ್ತಕ ಕೊಂಡೊಯ್ಯುವ ಪುಸ್ತಕ ಭಂಡಾರದ ವಿಭಾಗವನ್ನು ತೆರೆದು ಆಕರಗ್ರಂಥಗಳ ವಿಭಾಗವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಅಮೂಲ್ಯ ಗ್ರಂಥಗಳು ಉಳಿಯುವಂತಾಗಿದೆ. ಸ್ವರ್ಣ ಮಹೋತ್ಸವ ಕಟ್ಟಡದಲ್ಲಿ ೨, ೩ನೇ ಮಹಡಿಗಳಲ್ಲಿರುವ ಪುಸ್ತಕ ಭಂಡಾರಗಳಿಗೆ ಹೋಗಿಬರಲು ಹಿರಿಯ ನಾಗರಿಕ ಅನುಕೂಲಕ್ಕಾಗಿ ಲಿಫ್ಟ್‍ವ್ಯವಸ್ಥೆ ಒದಗಿಸಲಾಗಿದೆ ಕಾಲದಲ್ಲಾಯಿತು. ಬೃಹತ್ ನಗರ ಪಾಲಿಕೆಯ ಮೇಯರ್ ಅವರು ಕೊಡುಗೆಯಾಗಿ ಇದನ್ನು ನೀಡಿದ್ದಾರೆ.

ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳು

ಶತಮಾನೋತ್ಸವದ ವರ್ಷವೆಂದು ಪರಿಷತ್ತು ಸ್ಥಾಪನೆಯಾದ ೫ನೇ ಮೇ ೧೯೧೫ರಿಂದ ಒಂದು ವರ್ಷಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದರ ಅಂಗವಾಗಿ ಹಲವಾರು ವಿಶೇಷ ಸಮಾವೇಶಗಳನ್ನು ನಡೆದಿವೆ. ಹೊರನಾಡ ಕನ್ನಡಿಗರ ಸಮಾವೇಶ, ಗಡಿಸಮಾವೇಶ, ಮಹಿಳಾ ಸಮಾವೇಶ, ಮಕ್ಕಳ ಸಮಾವೇಶ, ಮಾಧ್ಯಮ ಸಮಾವೇಶ, ವಚನ ಸಾಹಿತ್ಯ ಸಮಾವೇಶ,  ದಾಸಸಾಹಿತ್ಯ ಸಮಾವೇಶ, ಬಂಡಾಯ ಸಾಹಿತ್ಯ ಸಮಾವೇಶ ಇತ್ಯಾದಿ ಸಮಾವೇಶಗಳನ್ನು ನಾಡಿನ ನಾನಾ ಭಾಗಗಳಲ್ಲಿ ನಡೆಸಲಾಯಿತು.

ಪ್ರಕಟನೆಗಳು:  ಕೆಲವು ವಿಶೇಷ ಪ್ರಕಟನೆಗಳು ಹೊರಬಿದ್ದಿವೆ.

ಕನ್ನಡ ಸಾಹಿತ್ಯ ಪರಿಷತ್ತು – ೧00 ಎಂಬ ಗ್ರಂಥ ಪರಿಷತ್ತು ೧00 ವರ್ಷಗಳಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುವ ಪರಿಷತ್ತಿನ ಇತಿಹಾಸ ಗ್ರಂಥ ಬರೆಸಿ  ಪ್ರಕಟಿಸಲಾಗಿದೆ.

೧00 ಗ್ರಂಥಗಳ  ಪುನರ್ಮುದ್ರಣ : ಈ ಹಿಂದೆ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಕಾಲದಲ್ಲಿ ೧00 ಕನ್ನಡ ಗ್ರಂಥಗಳ ಪ್ರಕಟನೆ ಆಗಿತ್ತು. ಕನ್ನಡದಲ್ಲಿ ಹೀಗೆ ಒಮ್ಮೆಗೆ ೧00 ಗ್ರಂಥಗಳನ್ನು ಬಿಡುಗಡೆ ಮಾಡುವ ಯೋಜನೆಗೆ ಅತ್ಯಪರೂಪವಾದುದು. ಪರಿಷತ್ತು ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ೧00 ಗ್ರಂಥಗಳನ್ನು ಶತಮಾನೋತ್ಸವದ ನೆನಪಿಗೆ ಪ್ರಕಟಿಸಲು ನಿರ್ಧರಿಸಿ ಆಯ್ಕೆಗೆ ಸಮಿತಿಯೊಂದನ್ನು ರಚಿಸಿದರು. ಆ ಸಮಿತಿ ಆಯ್ದ ಕನ್ನಡದ ಶ್ರೇಷ್ಠ ೧00 ಗ್ರಂಥಗಳನ್ನು ಪ್ರಕಟಿಸಿದೆ.

ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ಪ್ರಕಟನೆ :

ಶತಮಾನೋತ್ಸವದ ಅಂಗವಾಗಿ ನಮ್ಮ ನಾಡಿನಲ್ಲಿ ಕಾಲಕಾಲಕ್ಕೆ ಸಾಹಿತ್ಯ ಬೆಳೆದಂತೆ ಹೊಸ ಸಾಹಿತ್ಯ ಚರಿತ್ರೆ ಬರಬೇಕು. ಅಂಥ ಪ್ರಯತ್ನಗಳು ಬೆಂಗಳೂರು, ಮೈಸೂರು, ಹಂಪಿ ವಿಶ್ವವಿದ್ಯಾನಿಲಯಗಳಿಂದ ಪ್ರಾರಂಭಗೊಂಡರೂ ಪೂರ್ಣಗೊಳ್ಳಲಿಲ್ಲ. ಅದರಲ್ಲಿ ಆಧುನಿಕ ಚರಿತ್ರೆಗಳಿಗೆ ಆದ್ಯತೆ ಅವುಗಳಲ್ಲಿ ಸಿಗಲಿಲ್ಲ ಹೀಗಾಗಿ ೧೯ನೇ ಶತಮಾನ ಸೇರಿದಂತೆ ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ರೂಪಿಸಲು ಕಲೆ, ವಿಜ್ಞಾನ, ಮಾನವಿಕ ಬರಹಗಳನ್ನು ಸೇರಿಸಿ ೧೭ ಪ್ರತ್ಯೇಕ ಸಂಪುಟಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದ್ದು  ಇವುಗಳಲ್ಲಿ  ಈಗಾಗಲೇ  ಹಲವು  ಸಂಪುಟಗಳು  ಪ್ರಕಟಗೊಂಡಿವೆ.

ಅಚ್ಚುಕೂಟದ ಸುಧಾರಣೆ: ವೆಬ್ ಆಫ್‍ಸೆಟ್ ಮುದ್ರಣ ಯಂತ್ರ ಫರ್‍ಫೆಕ್ಟ್ ಬೈಂಡಿಂಗ್ ಯಂತ್ರಗಳನ್ನು ಅಚ್ಚುಕೂಟಕ್ಕೆ ತರಿಸಿರುವುದು ಉತ್ತಮ ಸಾಧನೆ ಆಗಿದೆ. ೨ ಲಕ್ಷಕ್ಕೂ ಮೀರಿ ಪರಿಷತ್ತಿನ ಮುಖವಾಣಿ ಕನ್ನಡ ನುಡಿಯನ್ನು ಶೀಘ್ರವಾಗಿ ಪ್ರಕಟಿಸಲು ಇದರಿಂದ ಸಾಧ್ಯವಾಗಿದೆ.

ಶತಮಾನೋತ್ಸವ ಭವನದ ಶಂಕುಸ್ಥಾಪನೆ: ಹಾಲಂಬಿ  ಅವರ ನೇತೃತ್ವದಿಂದ  ಶತಮಾನೋತ್ಸವದ ಸಂದರ್ಭದಲ್ಲಿ ಸರ್ಕಾರದ ನೆರವಿನಿಂದ ಪರಿಷತ್ತಿನ ಅಚ್ಚುಕೂಟವು ಇದ್ದ ಎಡೆಯಲ್ಲಿ ಶತಮಾನೋತ್ಸವ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತ್ತು.  ಪ್ರಸಕ್ತದಲ್ಲಿ  ಡಾ.  ಮನು ಬಳಿಗಾರ್ ಅವರ  ಅಧ್ಯಕ್ಷತೆಯಲ್ಲಿ  ಶತಮಾನೋತ್ಸವ  ಭವನದ ನಿರ್ಮಾಣ ತ್ವರಿತಗತಿಯಲ್ಲಿ  ಸಾಗಿದೆ.

ವಿಶಿಷ್ಟಕಾರ್ಯಕ್ರಮಗಳು : ಶತಮಾನೋತ್ಸವ ವರ್ಷದಲ್ಲಿ ವಿನೂತನವಾದ  ೩ ಕಾರ್ಯಕ್ರಮಗಳು ನಡೆದವು :

೧. ಜ್ಞಾನಪೀಠಪ್ರಶಸ್ತಿ ಪಡೆದ ಸಾಹಿತಿಗಳ ಬದುಕು-ಬರಹವನ್ನು ಕುರಿತ ವಿಚಾರಸಂಕಿರಣ

೨. ರಾಷ್ಟ್ರಕವಿಗಳ ಬದುಕು ಬರಹಗಳ ವಿಚಾರಸಂಕಿರಣ

೩. ನೃಪತುಂಗ ಪ್ರಶಸ್ತಿ ಪಡೆದವರ ಬದುಕು ಬರಹಗಳ ಬಗ್ಗೆ ವಿಚಾರಸಂಕಿರಣ

ಈ ೩ ವಿಚಾರ ಸಂಕಿರಣಗಳನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಪುಂಡಲೀಕ ಹಾಲಂಬಿ ಅವರದಾಗಿದೆ.

ಹೀಗೆ ಶತಮಾನೋತ್ಸವ ಕಾರ್ಯಕ್ರಾಮಗಳನ್ನು ವೈಶಿಷ್ಟಪೂರ್ಣವಾಗಿ ನಡೆಸಿದ ಹೆಗ್ಗಳಿಕೆ  ಪುಂಡಲೀಕ ಹಾಲಂಬಿ ಅವರದಾಗಿದೆ.

Tag: Pundalika Halambi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)