ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿ
ಮೇ ೧೯೨೬

ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ

fagu-halakatti

೧೨ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

.ಗು. ಹಳಕಟ್ಟಿ

‘ವಚನ ಪಿತಾಮಹ’ರೆಂದು ಪ್ರಸಿದ್ಧರಾದ ಫ.ಗು. ಹಳಕಟ್ಟಿ ಅವರು ದಿನಾಂಕ ೨-೭-೧೮೮0ರಲ್ಲಿ ಗುರುಬಸಪ್ಪ ಹಳಕಟ್ಟಿ – ದಾನಾದೇವಿ ದಂಪತಿಗಳಿಗೆ ಜನಿಸಿದರು. ಇವರು ೧೮೯೬ರಲ್ಲಿ ಧಾರವಾಡದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮುಂಬೈಯಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ೧೯0೪ರಲ್ಲಿ ಎಲ್.ಎಲ್.ಬಿ. ಮುಗಿಸಿ ೧೯0೭ ವಕೀಲಿ ವೃತ್ತಿ ಪ್ರಾರಂಭಿಸಿದರು.

ಬಿಜಾಪುರದಲ್ಲಿ ೧೯೨೩ರಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಮುಂಬಯಿ ವಿಧಾನಸಭಾ ಸದಸ್ಯರೂ ಕಾರ್ಯನಿರ್ವಹಿಸಿದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು.

ಬಿಜಾಪುರದಲ್ಲಿ ಕನ್ನಡ ಶಾಲೆಗಳ ಪ್ರಗತಿಗಾಗಿ ಶ್ರಮಿಸಿದರು. ಶಿವಾನುಭವ ಪತ್ರಿಕೆಯನ್ನು, ೧೯೨೬ರಲ್ಲಿ ಪ್ರಾರಂಭಿಸಿದರು. ೧೯೨೮ರಲ್ಲಿ ಕರ್ನಾಟಕ ವಾರಪತ್ರಿಕೆ ಪ್ರಾರಂಭಿಸಿದರು. ವೀರಶೈವ ಶಿಕ್ಷಣ ಫಂಡ್ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಬ್ಯಾಂಕ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು.

ಪರಿಷತ್ತಿನ ಸ್ಥಾಪಕವರ್ಗದಲ್ಲಿ ಒಬ್ಬರಾದ ಇವರು ಪರಿಷತ್ತಿನ ಆಜೀವಸದಸ್ಯರಾಗಿ ಜೀವನ ಪರ್ಯಂತ ಶ್ರಮಿಸಿದರು. ಬ್ರಿಟಿಷ್ ಸರ್ಕಾರ ಇವರಿಗೆ ರಾವ್ ಬಹದ್ದೂರ್, ರಾವ್ ಸಾಹೇಬ್ ಪ್ರಶಸ್ತಿಗಳನ್ನು ನೀಡಿದರು. ೧೯೨೮ರಲ್ಲಿ ಪರಿಷತ್ತಿನ ಪರವಾಗಿ ಮರಾಠಿ ಪ್ರಭಾವದ ಜಾಗಗಳಲ್ಲಿ ಕನ್ನಡ ಪ್ರಾಥಮಿಕ ಶಾಲಾ ಸ್ಥಾಪನೆಗೆ ಶ್ರಮಿಸಿದರು. ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿತು. ಕರ್ನಾಟಕ ವಿಶ್ವವಿದ್ಯಾಲಯ ೧೯೫೬ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಬಳ್ಳಾರಿಯಲ್ಲಿ ೧೯೨೬ರಲ್ಲಿ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೩೩ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದರು.

ಇವರು ಸಂಪಾದಿಸಿದ ಮತ್ತು ರಚಿಸಿದ ಕೃತಿಗಳು :

ವಚನಶಾಸ್ತ್ರಸಾರ (೩ ಭಾಗಗಳು), ೭೭0 ಅಮರ ಗಣಾಧೀಶ್ವರ ಚರಿತ್ರೆಗಳು, ಶಿವಶರಣ ಕೃತಿಗಳು, ಬಸವೇಶ್ವರ ವಚನಗಳು ಮೊದಲಾದ ಶಿವಶರಣರ ವಚನಸಂಗ್ರಹಗಳು; ಶಿವಾನುಭವ ಶಬ್ದಕೋಶ, ಶೂನ್ಯ ಸಂಪಾದನೆ, ದೇವರ ದಾಸಿಮಯ್ಯ ವಚನ ಮೊದಲಾದ ೬0 ಗ್ರಂಥಗಳು, ಕೆಳದಿ ಸಂಸ್ಥಾನದ ರಾಯರ ವಂಶಾವಳಿ, ಕೊಡಗು ಸಂಸ್ಥಾನದ ರಾಜೆಂದ್ರನಾಮೆ.

೨೭-0೬-೧೯೬೪ರಲ್ಲಿ ಇವರು ನಿಧನರಾದುದರಿಂದ ವಚನ ಸಾಹಿತ್ಯದ ಮೇರು ವ್ಯಕ್ತಿ ಮರೆಯಾದಂತಾಯಿತು.

ಕನ್ನಡ ಸಾಹಿತ್ಯ ಸಮ್ಮೇಳನ೧೨,

ಅಧ್ಯಕ್ಷರು: .ಗು. ಹಳಕಟ್ಟಿ

ದಿನಾಂಕ ೨೨, ೨೩, ೨೪ ಮೇ ೧೯೨೬

ಸ್ಥಳ : ಬಳ್ಳಾರಿ

() ಯೋಗ್ಯ ಶಿಕ್ಷಣ ಕ್ರಮ

ನಮ್ಮ ಕರ್ನಾಟಕಸ್ಥರಲ್ಲಿ ಕರ್ನಾಟಕತ್ವದ ಅಂಕುರವನ್ನು ಬೇರೂರಿಸಬೇಕಾದರೆ, ನಮ್ಮ ವಿದ್ಯಾಸಂಸ್ಥೆಗಳ ಶಿಕ್ಷಣಕ್ರಮದಲ್ಲಿ ಯೋಗ್ಯ ಬದಲಾವಣೆಗಳು ಆಗುವುದು ಅವಶ್ಯವಿರುತ್ತದೆ. ಯೋಗ್ಯ ಶಿಕ್ಷಣಕ್ರಮವಿಲ್ಲದೆ ಹೋದರೆ, ಯಾವ ದೇಶವೂ ಮುಂದುವರಿಯಲಾರದು. ಸಾಮಾನ್ಯವಾಗಿ ಹಿಂದುಸ್ಥಾನವು, ಅದರಲ್ಲಿ ವಿಶೇಷವಾಗಿ ಕರ್ನಾಟಕ ದೇಶವು ಚೈತನ್ಯಶೂನ್ಯವಾದುದಕ್ಕೆ ಅದರಲ್ಲಿ ಯೋಗ್ಯ ಶಿಕ್ಷಣಕ್ರಮವಿಲ್ಲದ್ದೇ ಮುಖ್ಯ ಕಾರಣವೆಂದು ನನಗೆ ತೋರುತ್ತದೆ. ಅಕ್ಷರಜ್ಞರ ಸಂಖ್ಯೆಯು ಈಗಿನ ಕಾಲಕ್ಕೆ ಮೊದಲಿಗಿಂತಲೂ ಹೆಚ್ಚಾಗಿರಬಹುದು. ಆದರೆ ಅವರಲ್ಲಿ ತಮ್ಮ ದೇಶದ ಬಗ್ಗೆ ಜಾಜ್ವಲ್ಯ ಪ್ರೀತಿಯೂ ತಮ್ಮ ಸಂಸ್ಕೃತಿಯ ಜ್ಞಾನವೂ ಇರದೆ ಹೋದರೆ, ಆ ವಿದ್ಯೆಯ ಪ್ರಯೋಜನವೇನು? ಆದ್ದರಿಂದ ಸಾಹಿತ್ಯ ಪರಿಷತ್ತಿವರು ಕೈಕೊಳ್ಳಬಹುದಾದ ಅನೇಕ ಕಾರ್ಯಗಳಲ್ಲಿ ಯೋಗ್ಯ ಪಠ್ಯ ಪುಸ್ತಕಗಳನ್ನು ನಿರ್ಮಿಸುವ ಕಾರ್ಯಕ್ಕೆ ನಾನು ಅಗ್ರಸ್ಥಾನವನ್ನು ಕೊಡುತ್ತೇನೆ. ನಮ್ಮ ಶಿಕ್ಷಣಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ, ಹೈಸ್ಕೂಲು ಶಿಕ್ಷಣ, ಕಾಲೇಜು ಶಿಕ್ಷಣ ಅಥವಾ ಉಚ್ಛಶಿಕ್ಷಣ ಎಂಬ ಮೂರು ಭಾಗಗಳು ಇವೆ. ಈ ಮೂರು ಶಿಕ್ಷಣಕ್ರಮದಲ್ಲಿಯೂ ಮೇಲ್ಕಂಡ ದೋಷಗಳು ಇರುತ್ತವೆ. ಇವುಗಳನ್ನು ನಾವು ತೀವ್ರವಾಗಿ ತೆಗೆದು  ಹಾಕಲಿಕ್ಕೆ ಯತ್ನಿಸಬೇಕು.

ಪಠ್ಯನಿರ್ಮಾಣ ಪರಷತ್ತಿನದಾಗಬೇಕು

ಪ್ರಾಥಮಿಕ ಶಾಲೆಗಳಲ್ಲಿ ತಕ್ಕ ಪಠ್ಯಪುಸ್ತಕಗಳನ್ನು ನಿರ್ಮಿಸುವ ಕಾರ್ಯವನ್ನು ಮುಂಬಯಿ ಕರ್ನಾಟಕದಲ್ಲಿಯ ಲೋಕಲ್ ಬೋರ್ಡ, ಮುನಿಸಿಪಾಲಿಟಿಯವರು ಈಗ ತೀವ್ರವಾಗಿ ಅಂಗೀಕರಿಸಬೇಕೆಂದು ನನ್ನ ಒತ್ತಾಯದ ಸೂಚನೆ ಇದೆ. ಮುಂಬಯಿ ಇಲಾಖೆಯಲ್ಲಿ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯು ಲೋಕಲ್ ಬೋರ್ಡ್ ಮುನಿಸಿಪಾಲಿಟಿಗಳಿಗೆ ಒಪ್ಪಿಸಲ್ಪಟ್ಟಿದ್ದು ಒತ್ತಾಯದ ಶಿಕ್ಷಣವು ಇಲ್ಲಿ ಕೂಡಲೆ ಪ್ರಚಾರದಲ್ಲಿ ಬರತಕ್ಕದ್ದಾಗಿರುತ್ತವೆ. ಈ ಕಾಯಿದೆಯ ಪ್ರಕಾರ ಕ್ರಮಿಕ ಪುಸ್ತಕಗಳನ್ನು ಸಿದ್ಧಗೊಳಿಸುವ ಅಧಿಕಾರವೂ ಈ ಸಂಸ್ಥೆಗಳಿಗೆ ಕೊಡಲ್ಪಟ್ಟಿರುತ್ತದೆ. ಈ ಅಧಿಕಾರದ ಉಪಯೋಗವನ್ನು ಕರ್ನಾಟಕದಲ್ಲಿಯ ಲೋಕಲ್ ಬೋರ್ಡ್ ಮುನಿಸಿಪಾಲಿಟಿಯವರು ತೀವ್ರವಾಗಿ ಮಾಡಬೇಕೆಂದು ನನ್ನ ಸೂಚನೆ ಇದೆ. ಈ ಬೋರ್ಡಿನವರು ಸಾಹಿತ್ಯ ಪರಿಷತ್ತಿನ ಮತ್ತು ಮಂಗಳೂರು, ಬಳ್ಳಾರಿ ಪ್ರಾಂತಗಳ ಮಹನೀಯರ ಸಲಹೆ ಮತ್ತು ಸಹಾನುಭೂತಿಯನ್ನು ತೆಗೆದುಕೊಂಡು ಈ ಪಠ್ಯಪುಸ್ತಕಗಳನ್ನು ನಿರ್ಮಿಸತಕ್ಕದ್ದು. ಹೀಗೆ ನಿರ್ಮಿಸಿದ ಪುಸ್ತಕಗಳು ಎಲ್ಲ ಪ್ರಾಂತಗಳ ಕನ್ನಡ ಶಾಲೆಗಳಲ್ಲಿ ಉಪಯೋಗಿಸಲ್ಪಡಲು ಪ್ರಯತ್ನಿಸತಕ್ಕದ್ದು. ಹೀಗೆ ನಾವು ಈ ಪ್ರಯತ್ನದಲ್ಲಿ ಯಶಸ್ಸನ್ನು ಸಂಪಾದಿಸಿದರೆ, ಒಂದೇ ಮಾದರಿಯ ಪಠ್ಯಪುಸ್ತಕಗಳು ಎಲ್ಲ ಕಡೆಗೆ ಪ್ರಚಾರಕ್ಕೆ ಬಂದು, ಇದರಿಂದ ಕರ್ನಾಟಕದ ಅರಿವು ನಮ್ಮ ಜನರಿಗೆ ಆಗುವುದಲ್ಲದೆ, ಕರ್ನಾಟಕದ ಭಾಷೆಯಲ್ಲಿ ಈಗ ತೋರುವ ಭಿನ್ನತೆಗಳೂ ಕಡಿಮೆಯಾಗುತ್ತ ಹೋಗುವವು. ಈ ಪ್ರಯತ್ನದಲ್ಲಿ ನಾವು ಜಯಶೀಲರಾದರೆ ಒಂದು ಮಹತ್ವದ ಕಾರ್ಯವನ್ನು ಮಾಡಿದಂತೆ ಆಗುವದು.

ಶಾಖಾಸಂಘಗಳು ಬೇಕು

ದೇಶದಲೆಲ್ಲ ಜಾಗೃತಿಯನ್ನುಂಟುಮಾಡಲಿಕ್ಕೆ ಒಂದೇ ಒಂದು ಮಧ್ಯವರ್ತಿ ಸಾಹಿತ್ಯಪರಿಷತ್ತಿಗೆ ಸಾಧ್ಯವಾಗಲಾರದು? ಅವರ ಸಹಾಯಕ್ಕೋಸ್ಕರ ಎಲ್ಲ ಕಡೆಗೆ ಶಾಖಾಸಂಘಸಂಸ್ಥೆಗಳು ಆಗುವುದು ಅವಶ್ಯವಿದೆ. ಈ ತೆರದ ಜಾಗೃತಿಯನ್ನು ಹುಟ್ಟಿಸಲಿಕ್ಕೆ ಸಾಹಿತ್ಯ ಪರಿಷತ್ತಿನವರು ವಿಶೇಷ ಕ್ರಮವನ್ನು ವಹಿಸಲಿಕ್ಕೆ ಬೇಕು. ಸಾಹಿತ್ಯ ಸಮ್ಮೇಳನವನ್ನು ಒಂದು ವರ್ಷ ಎಲ್ಲಾದರೂ ಕೂಡಿಸಿದರೆ ನಾವು ಇಚ್ಛಿಸಿದ ಕಾರ್ಯಗಳು ನೆರವೇರಲಾರವು. ಪ್ರತಿಯೊಂದು ಜಿಲ್ಲೆಯ ಕನ್ನಡ ಭಾಷಾಪ್ರೇಮಿಗಳು ತಮ್ಮ ಜಿಲ್ಲೆಯಲ್ಲಿಯೂ ಅದರಂತೆಯೇ ತಮ್ಮ ಹಿಂದೆ ಬಿದ್ದ ನೆರೆಜಿಲ್ಲೆಗಳಲ್ಲಿಯೂ ಕರ್ಣಾಟಕತ್ವದ ಭಾವನೆಯನ್ನು ಜಾಗ್ರತೆಪಡಿಸಲಿಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅವರು ಕರ್ನಾಟಕ ವಾಙ್ಮಯ ಮತ್ತು ಇತಿಹಾಸವನ್ನು ವಿಶೇಷ ಅಭ್ಯಾಸಮಾಡಿದವರನ್ನು ತಮ್ಮಲ್ಲಿಗೆ ಆಗಿಂದಾಗ್ಗೆ ಬರಮಾಡಿಕೊಂಡು ಅವರ ಜ್ಞಾನದ ಲಾಭವನ್ನು ಜನರಿಗೆ ಮಾಡಿಕೊಡುತ್ತಿರಬೇಕು.

ಉಪಸಂಹಾರ

ಸಭ್ಯಗೃಹಸ್ಥರೇ, ಈ ಮೇರೆಗೆ ನಾವು ಮಾಡತಕ್ಕ ಪ್ರಯತ್ನಗಳನ್ನು ಸ್ಥೂಲಮಾನದಿಂ ಇಲ್ಲಿ ನಿರ್ದೇಶಿಸಿದ್ದೇನೆ. ಈ ಸಂಗತಿಗಳ ಬಗ್ಗೆ ನನಗೆ ಪರಿಷತ್ತುಗಳಲ್ಲಿ ಅನೇಕ ನಿರ್ಣಯಗಳು ಆಗಿರುತ್ತವೆ. ಆದರೆ, ಈ ಬಗ್ಗೆ ಪ್ರಯತ್ನಗಳು ಮಾತ್ರ ಬಲವಾಗಿಯೂ ವ್ಯವಸ್ಥೆಯಿಂದಲೂ ನಮ್ಮಲ್ಲಿ ನಡೆದಿರುವದಿಲ್ಲೆಂಬುದು ಬಹು ವಿಷಾದಕರವಾದದ್ದು. ವಾಙ್ಮಯಾಭಿವೃದ್ಧಿಯು ಒದಗಬೇಕಾದರೆ ವಿದ್ವಜ್ಜನರು ಒಂದೇ ಸಮನೇ ಪ್ರಯತ್ನಿಸುವದು ಅವಶ್ಯವಿದೆ. ಈ ಅಭಿವೃದ್ಧಿಯು ಪರಿಷತ್ತಿನಲ್ಲಿ ಮಾಡುವ ನಿರ್ಣಯಗಳನ್ನೇ ಅವಲಂಬಿಸಿಲ್ಲ. ಈ ಕಾರ್ಯಭಾರವನ್ನು ನಮ್ಮಲ್ಲಿಯ ಸುಶಿಕ್ಷಿತರು ವಿಶೇಷವಾಗಿ ಕೈಕೊಳ್ಳತಕ್ಕದ್ದು.

Tag: Kannada Sahitya Sammelana 12, Fa.Gu. Halakatti

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)