ಸಾಹಿತ್ಯ ಸಮ್ಮೇಳನ-೧೫

ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್

masthi-venkatesh-iyyenger

೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು         

ಮಾಸ್ತಿ ವೆಂಕಟೇಶ ಅಯ್ಯಂಗಾರ್

‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದ ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು ೧೯೧೪ರಲ್ಲಿ ಪಡೆದರು.

ಇವರು ೧೯೧೪ರಲ್ಲಿ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩0) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪0) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮) ಅಧ್ಯಕ್ಷರಾಗಿ (೧೯೫0-೬೪) ಸೇವೆ ಸಲ್ಲಿಸಿರುವ  ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ೧೯೪೨ರಲ್ಲಿ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ಅನೇಕ ಅಖಿಲ ಭಾರತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದನ್ನು ೧೯೪೨ರಲ್ಲಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ(೧೯೬೮), ವರ್ಧಮಾನ ಪ್ರಶಸ್ತಿ (೧೯೮೩), ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್(೧೯೭೭) ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩) ಕರ್ನಾಟಕ ಸರ್ಕಾರದ ಸನ್ಮಾನ (೧೯೮೪) ನಾಡಿನ ನಾನಾ ಸಂಸಂಸ್ಥೆಗಳಿಂದ ನೂರಾರು ಸನ್ಮಾನ ಪ್ರಶಸ್ತಿ ಗೌರವಗಳು ಮಾಸ್ತಿ ಅವರಿಗೆ ಸಂದಿವೆ.

ಕನ್ನಡ ಸಣ್ಣಕತೆಗಳ ಜನಕರೆಂದೇ ಖ್ಯಾತಿ ಹೊಂದಿದ ಮಾಸ್ತಿ ಅವರು ನೂರಕ್ಕೂ ಮೀರಿ ಕೃತಿಗಳನ್ನು ವಿವಿಧ ವಿಷಯಗಳ ಮೇಲೆ ರಚಿಸಿ ಕನ್ನಡವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಇಲ್ಲಿ ಅವರ ಕೆಲವು ಕೃತಿಗಳನ್ನು ಉದಾಹರಿಸಿದೆ.

ಸಣ್ಣಕಥೆಗಳು(೧0 ಭಾಗಗಳು), ನವರಾತ್ರಿ(ಕಥನ ಕವನಗಳು), ಚಿಕವೀರರಾಜೇಂದ್ರ(ಕಾದಂಬರಿ), ಕೃಷ್ಣಕರ್ಣಾಮೃತ (ಸಂಸ್ಕೃತ ಕಾವ್ಯಾನಂದ), ನಮ್ಮ ನುಡಿ(ಭಾಷಾಶಾಸ್ತ್ರ), ಷೇಕ್ಸ್ಪಿಯರನ ನಾಟಕಗಳು(ಗದ್ಯಾನುವಾದ), ಜನಪದ ಸಾಹಿತ್ಯ(ಪ್ರಬಂಧ), ಪುರಂದರದಾಸ, ಕನಕಣ್ಣ(ನಾಟಕಗಳು), ಪ್ರಸಂಗ(೪ ಭಾಗಗಳು), ಸಂಪಾದಕೀಯ(೫ ಭಾಗಗಳು), ಶ್ರೀರಾಮಪಟ್ಟಾಭಿಷೇಕ (ಕಥನಕಾವ್ಯ), ಸರ್ ಎಂ. ವಿಶ್ವೇಶ್ವರಯ್ಯ(ಸಂಪಾದನೆ) ಇತ್ಯಾದಿ.

ಹಲವು ಕೃತಿಗಳನ್ನು ಇಂಗ್ಲಿಷಿಗೆ ಮಾಸ್ತಿ ಮತ್ತು ಇತರರು ಅನುವಾದಿಸಿದ್ದಾರೆ.

ಕನ್ನಡದ ಅತಿ ಮುಖ್ಯ ಸಾಹಿತಿಗಳಲ್ಲಿ ಒಬ್ಬರಾದ ಮಾಸ್ತಿ ಅವರು ೭-೬-೧೯೮೬ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೧೫,

ಅಧ್ಯಕ್ಷರು, ಮಾಸ್ತಿ ವೆಂಕಟೇಶ ಅಯ್ಯಂಗಾರ್

ದಿನಾಂಕ ೧೨,೧೩,೧೪ ಮೇ ೧೯೨೯

ಸ್ಥಳ : ಬೆಳಗಾವಿ

ನಮ್ಮ ಪರಿಷತ್ತು

ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತು ಏರ್ಪಾಡಾಗಿ ಈಗ್ಗೆ ಹದಿನಾಲ್ಕು ವರ್ಷಗಳು ಕಳೆದಿವೆ. ಕನ್ನಡದ ಸ್ಥಿತಿಯು ಈ ಹದಿನಾಲ್ಕು ವರುಷಗಳಲ್ಲಿ ಬಹಳ ವ್ಯತ್ಯಾಸ ಹೊಂದಿದೆ. ‘ಪರಿಷತ್ತು ಮಾಡಿರುವ ಕಾರ್ಯವನ್ನು ನಾನು ಈ ಸಂದರ್ಭದಲ್ಲಿ ಪರಿಶೀಲಿಸುವುದಕ್ಕೆ ತೊಡಗುವುದಿಲ್ಲ. ಈಗ ನಾಲ್ಕು ವರ್ಷಗಳ ಹಿಂದೆ ಶ್ರೀಮಾನ್ ಬೆನಗಲ್ ರಾಮರಾಯರು ತಮ್ಮ ಭಾಷಣದಲ್ಲಿ ಪರಿಷತ್ತು, ಅದುವರೆಗೆ ಮಾಡಿದ ಕೆಲಸವನ್ನೆಲ್ಲ ವಿವರಿಸಿ ಅದು ತೃಪ್ತಿಕರವಾಗಿ ನಡೆದಿದೆಯೆಂದು ತಿಳಿಸಿದರು. ಅವರು ಅಷ್ಟು ವಿಚಕ್ಷಣತೆಯಿಂದ ಮಾಡಿದ ಕೆಲಸವನ್ನು ನಾನು ಮತ್ತೆ ಮಾಡುವ ಆವಶ್ಯಕತೆಯಿಲ್ಲ. ಅಲ್ಲದೆ, ಪರಿಷತ್ತು ಈ ಕೆಲಸವನ್ನು ಮಾಡಿತು. ಆ ಕೆಲಸವನ್ನು ಮಾಡಲಿಲ್ಲ ಎಂದು ನಾವು ಯಾರೂ ಯಾರನ್ನೂ ಹೇಳುವಂತಿಲ್ಲ. ನಾವು ಮಾಡಿದುದನ್ನು ಪರಿಷತ್ತು ಮಾಡುತ್ತದೆ, ನಾವು ಮಾಡದೆ ಇದ್ದುದನ್ನು ಪರಿಷತ್ತು ಮಾಡಲಾರದು. ಪರಿಷತ್ತೇ ನಾವು ಮಾಡಿದುದು. ಒಟ್ಟಿನಲ್ಲಿ, ಪರಿಷತ್ತು ಕನ್ನಡಕ್ಕೆ ಈಗ ಮಾಡಿರುವುದಕ್ಕಿಂತ ಹೆಚ್ಚಾದ ಕೆಲಸವನ್ನು ಮಾಡದೆ ಇರುವುದಕ್ಕೆ ವಿದ್ಯಾವಂತರಾದ ಕನ್ನಡಿಗರ ಔದಾಸೀನ್ಯವೇ ಮುಖ್ಯಕಾರಣ. ಈ ವಿಷಯವನ್ನು ಹೇಳಲು ನನಗೆ ವ್ಯಸನವಾಗುತ್ತದೆ. ಮಹನೀಯರೇ, ಕನ್ನಡನಾಡಿನ ಇಷ್ಟು ಸಾವಿರಮಂದಿ ಸುಶಿಕ್ಷಿತರಾದವರಲ್ಲಿ ಹತ್ತರಲ್ಲಿ ಒಂದರ ಸಂಖ್ಯೆಯಷ್ಟು ಜನ ಪರಿಷತ್ತಿಗೆ ಸದಸ್ಯರಾಗಿಲ್ಲವೇಕೆ? ‘ಪರಿಷತ್ತು ಚೆನ್ನಾಗಿ ಕೆಲಸಮಾಡಲಿ, ಆಮೇಲೆ ನಾನು ಬಂದು ಅದಕ್ಕೆ ಸದಸ್ಯನಾಗುತ್ತೇನೆ’ ಎಂದು ಅನೇಕರು ಹೇಳುವರು. ಮೈಚೆನ್ನಾಗಿ ಕೆಲಸ ಮಾಡಲಿ, ಅಮೇಲೆ ನಾನು ಅದಕ್ಕೆ ನೆರವಾಗುತ್ತೇನೆ ಎಂದು ಹೇಳಿ ಕೈಯ್ಯೋ ಕಣ್ಣೋ ಕೆಲಸಮಾಡದೆ ನಿಂತರೆ ಅದನ್ನು ಏನೆಂದು ವರ್ಣಿಸಬಹುದು? ಪರಿಷತ್ತು ಮಾಡಬಹುದಾದ ಕೆಲಸ ನೂರು ಇದೆ. ಜನರು ಬಂದು ಸದಸ್ಯರಾಗಿ ಹಣವನ್ನು ಕೊಟ್ಟು ಇತರ ಸಹಾಯಮಾಡಿ ಅದಕ್ಕಾಗಿ ದುಡಿದರೆ ಆ ಕೆಲಸ ನಡೆಯಬಹುದು; ಇಲ್ಲದಿದ್ದರೆ ಅದು ನಡೆಯುವ ಸಂಭವವೇ ಇಲ್ಲ.

ಪರಿಷತ್ಪತ್ರಿಕೆ

ಇದಕ್ಕೆ ಉದಾಹರಣೆಯಾಗಿ ನಮ್ಮ ಪರಿಷತ್ಪತ್ರಿಕೆಯ ಕೆಲಸವನ್ನು ಕುರಿತು ಅಲೋಚಿಸಿರಿ. ವರ್ಷಕ್ಕೆ ನಾಲ್ಕು ಸಲ ಹೊರಡಬೇಕಾದ ಈ ಪತ್ರಿಕೆಗೆ ಸಲಸಲಕ್ಕೂ ಲೇಖನಗಳನ್ನು ಹವಣಿಸುವ ಕೆಲಸ ಬಹಳ ದುಸ್ತರವಾಗಿ ಕುಳಿತಿದೆ. ಈಗ ಹಲವು ಸಂಚಿಕೆಗಳು ಹಿಂದೆ ಬಿದ್ದಿವೆ. ವರ್ಷದಲ್ಲಿ ನಾನೂರು ಪುಟಗಳಷ್ಟು ಬರೆವಣಿಗೆ ನಮ್ಮ ಸೀಮೆಯಲ್ಲಿ ಸಿಕ್ಕದೆ ಹೋದರೆ ಪರಿಷತ್ಪತ್ರಿಕೆಯ ಗತಿ ಏನು? ಈ ಪತ್ರಿಕೆಯನ್ನು ನಡೆಯಿಸಲಾರದ ನಮ್ಮ ಶಕ್ತಿ ಇನ್ನೆಷ್ಟರದು? ನಮ್ಮ ಸಾಹಿತ್ಯ ಇತರ ಸಾಹಿತ್ಯಗಳು, ನಮ್ಮ ಸೀಮೆಯ ಇತಿಹಾಸ, ಸಂಸ್ಕೃತಿ, ಇವುಗಳಲ್ಲಿ ಆಸಕ್ತಿಯುಳ್ಳವರು ನಮ್ಮಲ್ಲಿ ಅನೇಕರಿದ್ದೇವೆ. ಇಪ್ಪತ್ತು ಜನ ವರ್ಷಕ್ಕೆ ಒಂದು ಲೇಖನದಂತೆ ಕೊಟ್ಟರೆ ಪತ್ರಿಕೆ  ಸಕಾಲದಲ್ಲಿ ಹೊರಡಬಹುದು.  ನಾವು ಇಷ್ಟನ್ನು ಮಾಡಲಾರವೆ? ಪತ್ರಿಕೆ ಹೊರಡುವದಿಲ್ಲ ಎಂದು ಎಲ್ಲರೂ ಅಸಮಾಧಾನವನ್ನು ಮಾತ್ರ ಸೂಚಿಸಿದರೆ ಏನು ಮಾಡಿದ ಹಾಗಾಯಿತು? ಈಚೆಗೆ ಪತ್ರಿಕೆಯ ಕೆಲಸಕ್ಕೆ ಸ್ವಲ್ಪ ಹೆಚ್ಚಿನ ಏರ್ಪಾಡುಗಳನ್ನು ಮಾಡಿಕೊಂಡಿರುವುದರಿಂದ ಇನ್ನು ಮೇಲೆ ಅದು ಸಕಾಲದಲ್ಲಿ ಬರಬಹುದೆಂದು ಭರವಸೆ ಇದೆ. ಮುಖ್ಯ, ನಾನು ಅರಿಕೆಮಾಡುವುದು ಇಷ್ಟೇ;  ನಮ್ಮಲ್ಲಿ ವಿದ್ಯಾವಂತರೆಲ್ಲ ಪರಿಷತ್ತನ್ನು ತಾವು ನಮ್ಮ ಜನರ ಸೇವೆಗಾಗಿ ಮಾಡಿಕೊಂಡಿರುವ ಸಂಸ್ಥೆಯೆಂದು ಭಾವಿಸಿ ಸಾಧ್ಯವಾದಷ್ಟು ಜನರನ್ನು ಅದಕ್ಕೆ ಸದಸ್ಯರನ್ನಾಗಿ ಮಾಡಿ ಅದು ಈಗ ಮಾಡುತ್ತಿರುವ ಕೆಲಸವೂ ಇನ್ನೂ ಮಾಡಬಹುದಾದ ಕೆಲಸವೂ ಚೆನ್ನಾಗಿ ನಡೆಯುವಂತೆ ನೆರವಾಗಬೇಕು. ಇದನ್ನು ಮಾಡುವ ಹೊಣೆ ನಮ್ಮದು. ಇದನ್ನು ಮಾಡದೆ ಇದ್ದರೆ ತಪ್ಪೂ ನಮ್ಮದು; ಪರಿಷತ್ತಿನದಲ್ಲ.

Tag: Kannada Sahitya Sammelana 15, Masthi Venkatesha Iyengar

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)