ಸಾಹಿತ್ಯ ಸಮ್ಮೇಳನ-೨೬

ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ

ar-krishna-shastri

೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

.ಆರ್. ಕೃಷ್ಣಶಾಸ್ತ್ರಿ

ಕನ್ನಡದ ಸೇನಾನಿ ಎನಿಸಿ ಹೊಸಗನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿ, ಪ್ರಬುದ್ಧ ಕರ್ನಾಟಕದ ಸ್ಥಾಪಕರಾಗಿ, ಪತ್ರಿಕಾ ಇತಿಹಾಸದಲ್ಲಿ ವಿಕ್ರಮ ಸಾಧಿಸಿದ ಎ.ಆರ್. ಕೃಷ್ಣಶಾಸ್ತ್ರಿಗಳು ೧೨-0೨-೧೮೯0 ಮೈಸೂರಿನಲ್ಲಿ ಅಂಬಳೆ ರಾಮಕೃಷ್ಣಶಾಸ್ತ್ರಿ-ವೆಂಕಮ್ಮ ದಂಪತಿಗಳಿಗೆ ಜನಿಸಿದರು. ತಂದೆಯಿಂದಲೇ ಬಾಲ್ಯದಲ್ಲಿ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ೧೯೧೩ರಲ್ಲಿ ಬಿ.ಎ. ಪದವಿ ಗಳಿಸಿ ೧೯೧೫ರಲ್ಲಿ ಮದರಾಸಿನಲ್ಲಿ ಕನ್ನಡ ಎಂ.ಎ. ಮಾಡಿದರು.

ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಮೆಲೆ ೧೯೧೬ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ೧೯೩೯ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೪೬ರಲ್ಲಿ ನಿವೃತ್ತರಾದರು. ಅನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪರಿಷತ್ಪತ್ರಿಕೆ ಮತ್ತು ನಿಘಂಟು ಸಂಪಾದಕರೂ, ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಪರಿಷತ್ತಿನಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ದತ್ತಿನಿಧಿ ಇಟ್ಟಿದ್ದಾರೆ. ೧೯೧೮ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಂಘ ಸ್ಥಾಪಿಸಿದರು. ಪ್ರಬುದ್ಧ ಕರ್ನಾಟಕ ಸಂಪಾದಕರಾದರು. ೧೯೪೨-೧೯೪೫ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಪ್ರಕಾಶನ ಸಮಿತಿ ಅಧ್ಯಕ್ಷರಾಗಿ ದುಡಿದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಮಿತಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದರು.

ಎ.ಆರ್. ಕೃಷ್ಣಶಾಸ್ತ್ರಿಗಳು ನಿಷ್ಕಾಮ ಕನ್ನಡ ಸೇವೆ ಮಾಡಿದ ಮಹನೀಯರು. ಯಾವ ಪ್ರಶಸ್ತಿ ಅಧಿಕಾರ ಸ್ಥಾನವನ್ನು ಎಂದೂ ನಿರೀಕ್ಷಿಸಲಿಲ್ಲ. ಆದರೂ ಕೆಲವು ಪ್ರಶಸ್ತಿ, ಗೌರವಗಳು ಇವರಿಗೆ ಸಂದಿವೆ. ೧೯೬0ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ಇವರ ಬಂಕಿಂಚಂದ್ರ ಕೃತಿಗೆ ೧೯೬೧ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೯೪೧ರಲ್ಲಿ ಹೈದರಾಬಾದಿನಲ್ಲಿ ನಡೆದ ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಜನತೆ ಆರಿಸಿತು. ೧೯೫೬ರಲ್ಲಿ ಅವರ ಸೇವೆಗೆ ಕೃತಜ್ಞತೆಯ ಕುರುಹಾಗಿ ಅಭಿವಂದನಾ ಗ್ರಂಥ ಸಮರ್ಪಣೆ ಮಾಡಿದರು.

ವಚನ ಭಾರತದಂಥ ಸರ್ವಜನಪ್ರಿಯ ಗ್ರಂಥ ಬರೆದ ಎ.ಆರ್. ಕೃ. ಬರೆದ ಗ್ರಂಥಗಳು ಕೆಲವೇ ಆದರೂ ಅವೆಲ್ಲಾ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ಆ ಪೈಕಿ ಕೆಲವು ಗ್ರಂಥಗಳು:

ಹರಿಶ್ಚಂದ್ರಕಾವ್ಯ ಸಂಗ್ರಹ, ವಚನ ಭಾರತ, ನಾಗಮಹಾಶಯ (ಅನುವಾದ), ನಿಬಂಧಮಾಲಾ (ಅನುವಾದ), ಭಾಷಣಗಳು ಮತ್ತು ಲೇಖನಗಳು (ಬಿಡಿವಿಚಾರಗಳು), ಬಂಕಿಮಚಂದ್ರ, ಶ್ರೀ ರಾಮಕೃಷ್ಣ ಪರಮಹಂಸರ ಜೀವನಚರಿತ್ರೆ, ಕನ್ನಡ ಕೈಪಿಡಿ (ಭಾಗ-೧), ನಯಸೇನನ ಧರ್ಮಾಮೃತ ಇತ್ಯಾದಿ

ಶಾಸ್ತ್ರಿಗಳು ದಿನಾಂಕ ೧-೨-೧೯೬೮ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೬

ಅಧ್ಯಕ್ಷರು, .ಆರ್. ಕೃಷ್ಣಶಾಸ್ತ್ರಿ

ದಿನಾಂಕ ೨೭, ೨೮, ೨೯ ಡಿಸೆಂಬರ್ ೧೯೪೧                                           

ಸ್ಥಳ ಹೈದರಾಬಾದ್

 

ಹೈದರಬಾದ್ ಹಿರಿಮೆ

ಹೈದರಾಬಾದು ಪ್ರಾಂತ ಕನ್ನಡಿಗರಿಗೆ ಹೆಮ್ಮೆಯ ಪ್ರಾಂತ; ಕನ್ನಡ ಸಾಹಿತ್ಯ ಗಂಗೆಯ ಗಂಗೋತ್ರಿ; ತಿರುಳ್ಗನ್ನಡದ ಕನ್ನಡಿ; ಕಲಾರತ್ನಗಳ ಖನಿ; ಭಕ್ತ ಶಿರೋಮಣಿಗಳ ತವರುಮನೆ. ಈ ಪ್ರಾಂತದ ರಾಜಧಾನಿಯಾದ ಭಾಗ್ಯನಗರದಲ್ಲಿ ಸಮ್ಮೇಳನ ಸೇರಿರುವುದು ಕನ್ನಡಿಗರ ಅಪೂರ್ವಭಾಗ್ಯವೆಂದು ನಾನು ಎಣಿಸುತ್ತೇನೆ. ಈ ಭಾಗ್ಯವು ಸಾಧ್ಯವಾಗಿ ಹೈದರಾಬಾದಿನ ಕರ್ಣಾಟಕದವರೂ ಮೈಸೂರಿನ ಕರ್ಣಾಟಕದವರೂ ಅಣ್ಣತಮ್ಮಂದಿರು ಅಕ್ಕತಂಗಿಯರು ಎಂಬ ಭಾವನೆ ಬರುವುದಕ್ಕೆ ಕಾರಣ ಕನ್ನಡ ಸಾಹಿತ್ಯ ಪರಿಷತ್ತು.

ಕನ್ನಡ ಪ್ರಾಂತಾಭಿಮಾನ

ಕನ್ನಡಿಗರಲ್ಲಿ ಎಷ್ಟು ಒಗ್ಗಟ್ಟೂ, ಒಂದೆಂಬ ಭಾವನೆ, ಇರಬೇಕೋ ಅಷ್ಟೂ ಇಂದು ಇಲ್ಲದಿದ್ದರೂ ಅದು ಇರುವಷ್ಟು ಮಟ್ಟಿಗಾದರೂ ಹುಟ್ಟು ಬೆಳೆದಿರುವುದು ಸಾಹಿತ್ಯ ಪರಿಷತ್ತಿನಿಂದ; ಅದನ್ನು ಕರೆದು ಹೀಗೆ ಸಮ್ಮೇಳನಗಳನ್ನು ಕೂಡಿಸಲು ಸಾಧ್ಯವಾಗಿರುವುದು ಕನ್ನಡದ ಅಭಿಮಾನಿಗಳಿಂದ. ಮೈಸೂರಿನವರು, ಧಾರವಾಡದವರು, ಮಂಗಳೂರಿನವರು, ಹೈದರಾಬಾದಿನವರು, ಕೊಡಗಿನರು ಎನ್ನುವುದಕ್ಕಿಂತ `ಕನ್ನಡಿಗರು’ ಎನ್ನುವುದು ಶ್ರೇಯಸ್ಸು. ಕನ್ನಡಿಗರು, ಮರಾಠಿಗರು, ತೆಲುಗರು, ತಮಿಳರು ಎನ್ನುವುದಕ್ಕಿಂತ ಭಾರತೀಯರು ಎನ್ನುವುದು ಮತ್ತೂ ಶ್ರೇಯಸ್ಸು, ಭಾರತೀಯರು, ಇಂಗ್ಲಿಷರು, ಅಮೇರಿಕನರು, ಆಫ್ರಿಕನರು ಎನ್ನುವುದಕ್ಕಿಂತ ನಾವೆಲ್ಲ ಈ ಭೂಮಿ ತಾಯಿಯ ಮಕ್ಕಳು ಎನ್ನುವುದು-ವಿಶ್ವಭಾವನೆಯು-ಸರ್ವೋತ್ತಮ. ಹೀಗೆಂದು ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಪ್ರಜೆಯಾಗಿ ಕೆಲಸ ಮಾಡುವುದಕ್ಕಾಗುತ್ತದೆಯೇ? ಪ್ರಪಂಚವನ್ನೇ ಉದ್ಧಾರಮಾಡುತ್ತೇನೆಂದು ಹೊರಡುವುದಕ್ಕಿಂತ ಹೆಚ್ಚಿನ ಅವಿವೇಕ ಇನ್ನೊಂದಿಲ್ಲ. ‘’ತಾನುಂಟೋ ಮೂರು ಲೋಕವುಂಟೋ!”ಎನ್ನುವುದು ಒಂದು ವಿಧದಲ್ಲಿ ನಿಜ. ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಬೇಕು; ಆ ಮೇಲೆ ತನ್ನವರು, ತನ್ನ ನಾಡು, ತನ್ನ ಲೋಕ. ಉದ್ಧಾರ ಕಾರ್ಯವು ದಾನದಂತೆ ತನ್ನಿಂದಲೇ ಆರಂಭವಾಗಬೇಕು; ಆದರೆ ತನ್ನಲ್ಲಿಯೇ ನಿಲ್ಲಬಾರದು, ಮುಗಿಯಬಾರದು. ತಾನು ವಿದ್ಯಾವಂತನಾದರೆ, ಐಶ್ವರ್ಯವಂತನಾದರೆ, ಮತ್ತೊಬ್ಬನಿಗೆ ಹೇಳಿಕೊಡಬಹುದು. ಹಣಕೊಡಬಹುದು. ಅಂಥ ವ್ಯಕ್ತಿಗಳು ಒಂದು ಸಾವಿರ ಜನವಾದರೆ ದೇಶ ತಾನೇ ಮೇಲಕ್ಕೆ ಏಳುತ್ತದೆ, ಮುಂದಕ್ಕೆ ಬರುತ್ತದೆ ಹಾಗಲ್ಲದೆ ದೇಶವನ್ನು ಉದ್ಧಾರಮಾಡುತ್ತೇನೆಂದು ಯಾರಾದರೂ ತನ್ನನ್ನೂ ತನ್ನ ತಾಯಿ ತಂದೆ ಹೆಂಡತಿ ಮಕ್ಕಳನ್ನೂ ಅಲಕ್ಷ್ಯಮಾಡಿದರೆ ಅದು ದೇಶೋದ್ಧಾರವಲ್ಲ; ಕ್ಷೇಮವೇ. ಹೀಗೆ ಕನ್ನಡಿಗರಾಗಲಿ, ಆಂಧ್ರರಾಗಲಿ, ತಮಿಳರಾಗಲಿ, ತನ್ನ ನಾಡಿನ ಅಭಿಮಾನದಿಂದ ಅದನ್ನು ಪುಷ್ಟಿಗೊಳಿಸಿಕೊಳ್ಳಬೇಕೆಂದು ಪ್ರಯತ್ನಪಟ್ಟರೆ ಅದು ಸ್ವಾಭಾವಿಕವೂ ನ್ಯಾಯವೂ ಆಗಿರುವುದಲ್ಲದೆ, ಒಟ್ಟು ದೇಶಕ್ಕೂ ಕ್ಷೇಮವೇ.

ಭಾಷಾವಾರು ಪ್ರಾಂತ ವಿಭಾಗವಾಗಲಿ

ಮುಂದೆ ಭರತಖಂಡವನ್ನು ಪ್ರಗತಿದೃಷ್ಟಿಯಿಂದ ಸಂಘಟನೆಗೊಳಿಸುವಾಗ ವಿಭಾಗಗಳು ಹೇಗಿರಬೇಕೆಂದು ರಾಜತಂತ್ರಜ್ಞರು ಯೋಚಿಸುತ್ತಿದ್ದಾರೆ. ಅದನ್ನು ಚರ್ಚಿಸುವುದು ಸಾಹಿತ್ಯ ಸಮ್ಮೇಳನದ ಅಥವಾ ಅದರ ಅಧ್ಯಕ್ಷನ ಕೆಲಸವಲ್ಲ. ಆದರೆ ನಮಗೆಲ್ಲ ಪ್ರಕೃತವಾದ ಅಂಶವೇನೆಂದರೆ, ಈ ವಿಭಾಗ ಕ್ರಮದಲ್ಲಿ ಬಹುತರವಾದ ಒಪ್ಪಿಗೆಯನ್ನು ಪಡೆದಿರುವುದು ಭಾಷಾನುಸಾರಿಯಾದ ಪ್ರಾಂತವಿಭಾಗ. ಇದನ್ನು ಸಾಧಿಸಲು ದಕ್ಷಿಣ ದೇಶದಲ್ಲಿ ನಮ್ಮ ಸೋದರರಾದ ಆಂಧ್ರರು ಮುನ್ನುಗ್ಗಿದರು. ಅವರ ಕೂಗು ಕಡಲನ್ನೂ ದಾಟಿ ಹೋಗಿ ಇನ್ನೇನು ಕೈಗೂಡಿತೆನ್ನುವಂತಾಯಿತು. ಅವರ ನೆರೆಯಲ್ಲಿ ನಾವು ಅವರಂತೆ  ಒಂದು ಕನ್ನಡ ನಾಡನ್ನು ಕಟ್ಟಿಕೊಳ್ಳಬಹುದೆಂದು ಯೋಚಿಸಿದೆವು. ಕನ್ನಡ ಸಾಹಿತ್ಯ ಪರಿಷತ್ತು ಈ ಕನಸನ್ನು ತನ್ನ ಧ್ವಜ ಚಿನ್ನೆಯಾಗಿ ಮಾಡಿ ಎತ್ತಿ ಹಿಡಿಯಿತು. ಆದರೆ ಅಷ್ಟರಲ್ಲಿ ವಿಶ್ವಗ್ರಾಸಿಯಾದ ಎರಡನೆಯ ಮಹಾಸಂಗ್ರಾಮವು ಆರಂಭವಾಗಿ ಎಲ್ಲಿಯದು ಅಲ್ಲಿಯೇ ಉಳಿಯಿತು. ಈ ಯುದ್ಧವು ಬೇಗ ಮುಗಿದು, ಬ್ರಿಟಿಷರಿಗೆ ಜಯವಾಗಿ, ನಮ್ಮ ನಾಡು ನನ್ನ ಆಶೆಯನ್ನು ನೆರವೇರಿಸಿಕೊಳ್ಳುವ ಕಾಲ ಬರಲಿ!

ತಾಯಿನುಡಿಯ ಅಭಿಮಾನ

ಸಾಹಿತ್ಯ ಪರಿಷತ್ತು ಈ ಭಾವನೆಯನ್ನು ನಮ್ಮಲ್ಲಿ ಉಂಟುಮಾಡಲು ಬಹುವಾಗಿ ಕೆಲಸಮಾಡಿದೆ ಎಂದು ಆಗಲೆ ಹೇಳಿದೆ. ಅದರ ಸ್ಥಾಪಕರ ಉದ್ದೇಶವೇ ಇದಾಗಿತ್ತು. ಆದರೆ ಕನ್ನಡಿಗರಲ್ಲಿ ಕಾವು ಏರದು; ಅವರು ಕದಳೀಗರ್ಭ-ಶ್ಯಾಮರೂ ಹೌದು, ಶೀತರೂ ಹೌದು. ಈ ಸಂದರ್ಭದಲ್ಲಿ ನನಗೆ ಪದೇ ಪದೇ ಒಂದು ಸಂಗತಿ ನೆನಪಿಗೆ ಬರುತ್ತದೆ. ಅದೇನೆಂದರೆ: ಪರಿಷತ್ತು ಸ್ಥಾಪಿತವಾದ ವರ್ಷ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀಮಾನ್ ಎಚ್.ವಿ. ನಂಜುಂಡಯ್ಯನವರು ಸಮ್ಮೇಳನ ಮುಗಿದಮೇಲೆ ಅಲ್ಲಿ ಸೇರಿದ್ದ ಸದಸ್ಯರನ್ನು ಕುರಿತು “ನಿಮಗೆ ಕನ್ನಡ ಬೇಕೆ ಸಂಸ್ಕೃತ ಬೇಕೆ?” ಎಂದು ಕೇಳಿದರು. ಆಗ ಪ್ರತಿಯೊಬ್ಬರೂ ಸಂಸ್ಕೃತಬೇಕೆಂದರು ಇಲ್ಲವೆ, ಎರಡೂ ಬೇಕೆಂದರು; ಕನ್ನಡ ಬೇಕು ಎಂದು ಯಾರೂ ನಿಷ್ಕೃಷ್ಟವಾಗಿ ಮತನಾಡಲಿಲ್ಲ. ಇದನ್ನೆಲ್ಲಾ ಶಾಂತವಾಗಿ ಕೇಳುತ್ತಿದ್ದು ಅಧ್ಯಕ್ಷರು ಕೊನೆಗೆ ಎದ್ದುನಿಂತು “ಇದು ಕರ್ಣಾಟಕ ಸಾಹಿತ್ಯ ಪರಿಷತ್ತು; ನೀವೆಲ್ಲಾ ಅದರ ಸದಸ್ಯರು ಆದರೆ ಯಾರೊಬ್ಬರೂ ಕನ್ನಡ ಬೇಕೆಂದು ಧಾರಾಳವಾಗಿ ಹೇಳಲಿಲ್ಲ. ಇದು ಆಶ್ಚರ್ಯ!” ಎಂದರು. ಆ ಮಾತನ್ನು ಕೇಳಿ ಅನೇಕರು ತಲೆತಗ್ಗಿಸಿಕೊಂಡರು. ಆದರೂ ಅವರಲ್ಲಿ ಸಂಸ್ಕೃತದ ಅಭಿಮಾನ ಎಷ್ಟುಮಟ್ಟಿಗಿತ್ತೆಂದರೆ, ತಗ್ಗಿದ ತಲೆ “ಮುಟ್ಟಿದರೆ ಮುನಿಯ” ಗಿಡದಂತೆ ಬಹು ಬೇಗ ಎದ್ದಿತು; ಶೂಲದಂತೆ ಇರಿಯ ಬೇಕಾದ ಮಾತು ಮರೆತುಹೋಯಿತು. ಇಂದು ಅದನ್ನು ಯಾರಾದರೂ ಜ್ಞಾಪಕದಲ್ಲಿಟ್ಟಿದ್ದಾರೆಯೋ ಏನೋ ತಿಳಿಯದು. ಆದರೆ ಪರಿಸ್ಥಿತಿಯು ಆಗಿಗಿಂತ ಈಗ ಅಷ್ಟೇನೂ ಹೆಚ್ಚು ಬದಲಾಯಿಸಿಲ್ಲ; ಆಗ ಒಂದು ಭಾಷೆಯ ಮೇಲೆ ಹಿಂದಿನಿಂದ ಬಂದ ಅಭಿಮಾನವಿದ್ದರೆ; ಈಗ ಮತ್ತೊಂದು ಭಾಷೆಯ ಮೇಲೆ ಇಂದು ತಾನೇ ಬಂದ ಅಭಿಮಾನವುಂಟಾಯಿತು. ಮೊದಲು ಹುಟ್ಟಿದ ಕಿವಿಗಿಂತ ಆ ಮೇಲೆ ಹುಟ್ಟುದ ಕೋಡೇ ಮುಂದಾಯಿತು; ಅದು ತಿವಿಯುವುದಕ್ಕೂ ಮೊದಲಾಯಿತು. ಕನ್ನಡದ ಅಭಿಮಾನವೆಂಬ ಮಗು ತಪ್ಪು ಹೆಜ್ಜೆ ಹಾಕಿಕೊಂಡು ಮುಂದೆ ಮುಂದೆ ಬರುತ್ತಿದ್ದುದು ಹಿಂದಕ್ಕೆ ಸರಿಯಿತು.

ಎಂಥ ಸಮ್ಮೇಳನ?

ನಾವು ಐಶ್ವರ್ಯವಂತರಾಗುವುದು ಹೇಗೆ ಎಂಬುದನ್ನು ನಾನು ಹೇಳಲರಿಯೆ; ಅದನ್ನು ನನಗಿಂತ ದೊಡ್ಡವರು ಯೋಚಿಸುತ್ತಿದ್ದಾರೆ, ಹೇಳುತ್ತಿದ್ದಾರೆ, ಮಾಡಿ ತೋರಿಸುತ್ತಿದ್ದಾರೆ; ಅದರ ಪ್ರಸ್ತಾಪ ಇಲ್ಲಿ ಬೇಕಿಲ್ಲ; ಇದು ಸಾಹಿತ್ಯ ಸಮ್ಮೇಳನ, ಆರ್ಥಿಕಕ ಸಮ್ಮೇಳನವಲ್ಲ, ರಾಜಕೀಯ ಸಮ್ಮೇಳನವಲ್ಲ.

ಸಂಶೋಧನ ಕಾರ್ಯ ಮತ್ತು ಕನ್ನಡ

ಸಂಶೋಧನೆಯು ಭೂಮಿ ಅಗೆದು ಚಿನ್ನ ತೆಗೆಯುವ ಹಾಗೆ; ಅದಕ್ಕೆ ಬುದ್ಧಿ ಬೇಕು, ಆಯುಧ ಬೇಕು, ಯಂತ್ರ ಸಾಮಗ್ರಿ ಬೇಕು; ಹಲವು ಕೆಲಸಗಾರರ, ಶಾಸ್ತ್ರಜ್ಞರ ಸಹಕಾರ ಬೇಕು. ಅಗೆಯುತ್ತ ಅಗೆಯುತ್ತ ಶ್ರಮವು ಹೆಚ್ಚಾಗುತ್ತದೆ, ಹೊನ್ನು ಕಡಿಮೆಯಾಗುತ್ತದೆ. ನಮ್ಮಲ್ಲಿ ಇವೆಲ್ಲಕ್ಕೂ ಅಭಾವ. ಪಾಶ್ಚಾತ್ಯರು, ನಮ್ಮ ಚಿನ್ನದ ಗಣಿಗಳಲ್ಲಿ ಕೆಲಸಮಾಡಿರುವಂತೆ ಈ ಕ್ಷೇತ್ರದಲ್ಲಿಯೂ ಕೆಲಸಮಾಡಿದ್ದಾರೆ. ಅವರೊಡನೆ ಈಗ ಪೈಪೋಟಿ ನಡೆಸಿ ಸೈಯೆನ್ನಿಸಿಕೊಳ್ಳುವುದು ಕಷ್ಟ. ವೈಜ್ಞಾನಿಕ ಸಂಶೋಧನ ಕಾರ್ಯದಲ್ಲಿ ಪ್ರಪಂಚವೇ ಒಂದು. ವಿಶ್ವಕಿರಣಗಳು ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಅಲ್ಲ. ಅವರಿಗೆ ದೊರೆಯುವ ಅಕರಾದಿ ಅನುಕ್ರಮಣಿಕೆಗಳು ಕೂಡ ನಮಗೆ ದೊರೆಯುವುದಿಲ್ಲ. ಕ್ಷೇತ್ರವೋ ವಿಸ್ತಾರವಾದದ್ದು; ನಾನಾ ದ್ರಾವಿಡ ಸಂಸ್ಕೃತ ಪ್ರಾಕೃತ ಭಾಷೆಗಳು, ಪಾಶ್ಚಾತ್ಯ ಭಾಷೆಗಳು, ಪ್ರಾಕ್ತನ ಶಾಸ್ತ್ರಗಳು, ಸಾಹಿತ್ಯ ಚರಿತ್ರೆ ಇವುಗಳನ್ನು ಎಷ್ಟು ಓದಿದರೂ ಇದೆ; ಅವುಗಳ ಮೇಲೆ ಪತ್ರಿಕಾ ಲೇಖನಗಳೂ ಗ್ರಂಥಗಳಿಗೂ ಕೊನೆ ಮೊದಲಿಲ್ಲ. ಇವುಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧವಿರುತ್ತದೆ; ಯಾವುದೋ ಒಂದು ಸಣ್ಣ ಅಂಶವನ್ನು ಹಿಡಿದುಕೊಂಡು ಹೋದರೂ ಅದು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ; ಸಂದೇಹವು ಸಿದ್ಧಾಂತವಾಗುವುದೇ ಕಷ್ಟವಾಗುತ್ತದೆ. ಅದಕ್ಕೇ ಅಭಿರುಚಿ ಇರುವವರು ಕೆಲವರು; ಅವರಿಗೆ ನಡೆದೀತು.  ಈ ಕ್ಷೇತ್ರದಲ್ಲಿ ನಮಗೆ ಸಂಬಂಧಪಡುವಂತೆ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿಯಾದರೂ ಪರಿಚಯ ಮಾಡಿಕೊಡಬೇಕೆಂದು ‘ಪ್ರಾಚ್ಯ  ಲೇಖನಾವಳಿ’ ಎಂಬ ಭಾಗವನ್ನು `ಪರಿಷತ್ ಪತ್ರಿಕೆ’ಯಲ್ಲಿಯೂ `ಪ್ರಬುದ್ಧ ಕರ್ಣಾಟಕ’ ದಲ್ಲಿಯೂ ಇಟ್ಟುಕೊಂಡಿರುವುದಾಗಿದೆ. ಆದರೆ ನಮಗೆ ಇರುವ ಉಪಪತ್ತಿ ಸಹಕಾರ, ಸೌಕರ್ಯ ಇವಕ್ಕೆ ಏನೇನೂ ಸಾಲದು. ಇವೊತ್ತು  ಪಂಪನ ಅಥವಾ ಬಸವಣ್ಣನವರ ಮೇಲೇ ಏನೇನು ಲೇಖನಗಳು ಬಂದಿವೆ ಎಂದು ಒಂದು ಕಡೆ ನೋಡಬೇಕೆಂದರೆ ಎಲ್ಲಿಯೂ ಆ ವಿಷಯ ಸಮಗ್ರವಾಗಿ ಸಿಕ್ಕುವುದಿಲ್ಲ. ಹೊಸ ಸಾಮಗ್ರಿಯಂತೂ ದೊರಕುವುದೇ ಇಲ್ಲ. ಪರಿಷತ್ಪತ್ರಿಕೆಯಲ್ಲಿ ಈಗ ಇಪ್ಪತ್ತೈದು ವರ್ಷಗಳಿಂದ ಬಂದ ಲೇಖನಗಳಿಗೆ ಅಕಾರಾದಿ ಮಾಡಿಕೊಡಬೇಕೆಂದು ಪರಿಷತ್ತು ಯೋಚಿಸಿತು. ಅದೂ ನಡೆದಿಲ್ಲ; ಇಂಗ್ಲಿಷಿನಲ್ಲಿ ‘ರಾಯಲ್ ಏಷಿಯಾಟಿಕ್ ಸೊಸೈಟಿ’ಯ ಪತ್ರಿಕೆ ‘ಇಂಡಿಯನ್ ಆಂಟಿಕ್ವೆರಿ’ ಯಂ ಪತ್ರಿಕೆಗಳಿಗೆ ಈ ಸೌಕರ್ಯವಿದೆ.

ಸಾಹಿತ್ಯ ಪರಿಷತ್ತು ಮತ್ತು ಕನ್ನಡ

ಪರಿಷತ್ತು ಅದು ಮಾಡಲಿಲ್ಲ, ಇದು ಮಾಡಲಿಲ್ಲ; ಅದು ಮಾಡಬೇಕಾಗಿತ್ತು. ಇದು ಮಾಡಬೇಕಾಗಿತ್ತು ಎಂದು ಸೂಚಿಸುವವರು ಅದು ಹುಟ್ಟಿದಂದಿನಿಂದ ಇದ್ದಾರೆ. ಅದರಲ್ಲಿ ಕೆಲಸಮಾಡುವವರೆಲ್ಲರೂ ಅಕ್ಷರಶಃ ತನು ಮನ ಧನಗಳನ್ನು ಅದಕ್ಕೆ ಸೇರಿಸಿ ಕೆಲಸಮಾಡಿಯೂ ಇದ್ದಾರೆ. ಅದರಲ್ಲೇನೂ ಕಡಿಮೆಯಿಲ್ಲ. ಆದರೆ ಪರಿಷತ್ತೆಂದರೆ ಯಾರು? ಅದರ ನಾಲ್ಕಾರು ಜನ ಅಧಿಕಾರಿವರ್ಗದವರೇ? ಪರಿಷತ್ತು ಒಂದೂವರೆ ಕೋಟಿ ಪ್ರಜೆಯ ಪ್ರತಿನಿಧಿ ಎಂದರೆ, ನಾಲ್ಕಾರು ಜನ ಸಾಕೇ? ಅವರು ಗೌರವಾರ್ಥವಾಗಿ ಕೆಲಸ ಮಾಡುವವರು; ಎಷ್ಟು ಕಾಲವನ್ನು, ಎಷ್ಟು ಶಕ್ತಿಯನ್ನು, ಎಷ್ಟು ಭಕ್ತಿಯನ್ನು, ಎಷ್ಟು ಭುಕ್ತಿಯನ್ನು ಕೊಡಬಲ್ಲರು? ಅದಕ್ಕಿರುವ ಅಡ್ಡಿ ಅನುಪಪತ್ತಿಗಳನ್ನು ನೋಡಿದರೆ ಈಗ ನಡೆದಿರುವ ಕೆಲಸ ತೋರಿಸುವುದಕ್ಕಾಗುವುದಿಲ್ಲ. ಕನ್ನಡಿಗರು ತಮ್ಮ ಅಭಿಮಾನದ ಕಣ್ಣಿನಿಂದ ನೋಡಿದರೆ ಆಗ ಇದು ಕಾಣುತ್ತೆ. ಇನ್ನೂ ಉಳಿದಿರುವ ಕಾರ್ಯಕ್ಕೆ ಹೋಲಿಸಿದರೆ ಅದು ಅತ್ಯಲ್ಪ, ನಿಜ. ಆದರೆ ಯಾವ ಕೆಲಸಕ್ಕೂ ಬೇಕಾದದ್ದು ಧನ, ಜನ, ಅಭಿಮಾನ; ಧನವಿದ್ದರೆ ಮಿಕ್ಕೆರಡೂ ಒದಗುತ್ತವೆ. ಪರಿಷತ್ತಿಗೆ ವರ್ಷಕ್ಕೆ ಹತ್ತು ಹದಿನೈದು ಲಕ್ಷ ರೂಪಾಯಿನ ವರಮಾನವಿದ್ದರೆ ಒಂದು ವಿಶ್ವವಿದ್ಯಾನಿಲಯದ ಕೆಲಸವನ್ನೇ ಕೈಕೊಂಡು ಮಾಡಬಹುದು. ಆದರೆ ಅದರ ದಾರಿದ್ರ್ಯ ಲೋಕವಿದಿತವಾಗಿದೆ; ಅದರ ಅಧಿಕಾರಿಗಳು ದಿನಕ್ಕೆ ನಾಲ್ಕು ಸಲ ಕಚೇರಿಗೆ ಬಂದು ಹೋಗಿ ದುಡಿದರೆ, ಅವರಿಗೆ ಗಾಡಿಬಾಡಿಗೆಯೆಂದು ನಾಲ್ಕು ಆಣೆ ಕೊಡುವುದಕ್ಕೆ ಅದಕ್ಕೆ ಚೈತನ್ಯವಿಲ್ಲ. ಅವರು ಪುಣ್ಯವಂತರಾದರೆ, ತಾವೇ ಸಾವಿರಾರು ರೂಪಾಯಿ ದಾನಮಾಡುತ್ತಾರೆ. ಇಲ್ಲದಿದ್ದರೆ ಸಾಲ ಮಾಡಿಕೊಳ್ಳಬೇಕೇ? ಮಾಡಿದರೆ ತೀರಿಸುವವರು ಯಾರು? ಮಿಕ್ಕ ಭಾಷೆಗಳಿಗಾಗಿ ದುಡಿಯುತ್ತಿರುವವರಿಗೆ ಇರುವ ಸಂಪಾದನೆಯಲ್ಲಿ ಒಂದು ಭಾಗವನ್ನಾದರೂ ಕೊಡಬಲ್ಲೆವಾದರೆ, ಅವರು ಸಂತೋಷದಿಂದ ಕನ್ನಡಕ್ಕೆ ದುಡಿದಾರು. ಆದರೆ ಕೊಡಲು ಪರಿಷತ್ತಿಗೆ ಹಣವೆಲ್ಲಿದೆ? ಅದರ ಸದಸ್ಯ ಸಂಪತ್ತು ಸುಮಾರು ಏಳುನೂರಾಗಿದೆ. ಇವರಲ್ಲಿ ಅನೇಕರು ಆಜೀವ ಸದಸ್ಯರು; ಅವರ ಹಣವನ್ನು ನಿಧಿಯಾಗಿ ಬ್ಯಾಂಕಿನಲ್ಲಿಟ್ಟಿದೆ; ಅದಕ್ಕೆ ಬರುವುದು ವರ್ಷಕ್ಕೆ ಒಂದು ಎರಡು ರೂಪಾಯಿ ಬಡ್ಡಿ; ಹಲವರು ಹೆಸರು ಮಾತ್ರದವರು; ಅವರಿಂದ ಹಣವೇ ಬರುವುದಿಲ್ಲ. ಚಂದಾ ನಾಲ್ಕಾಣೆ ಮಾಡಿದರೆ ಬಹು ಜನ ಸೇರುವರೆಂದು ಒಂದು ಸಲಹೆ ಬಂತು; ಒಂದು ಲಕ್ಷ ಜನವಾದರೂ ಸದಸ್ಯರಾದರೆ ಈ ಸಲಹೆಯಿಂದ ಪ್ರಯೋಜನ; ಅಂಥ ಕನಸನ್ನು ಕಾಣುವುದು ಸಾಧ್ಯವೇ? ಸರಕಾರದವರು, ಮಠಗಳು, ಮಾನ್ಯ ಮಹನೀಯರು ಈಚೆಗೆ ಉದಾರಹಸ್ತದಿಂದ ಸಾವಿರಾರು ರೂಪಾಯಿಗಳನ್ನು ಕೊಟ್ಟಿರುವುದರಿಂದ, ಮುಖ್ಯವಾಗಿ ಮೈಸೂರು ಸರ್ಕಾರವು ಪರಿಷತ್ತಿನ ಕೆಲಸ ಹೆಚ್ಚಾಗುತ್ತ ಬಂದಂತೆಲ್ಲ ಧನಸಹಾಯವನ್ನು ಹೆಚ್ಚು ಮಾಡಿಕೊಟ್ಟು ಅದರ ಅಭ್ಯುದಯದಲ್ಲಿ ಆಸಕ್ತವಾಗಿರುವುದರಿಂದ, ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರು, ಕಂಠೀರವ ನರಸಿಂಹರಾಜ ಒಡೆಯರವರು, ಶ್ರೀ ಜಯಚಾಮರಾಜ ಒಡೆಯರವರು ಅದನ್ನು ಮಮತೆಯಿಂದ ತಮ್ಮ ಕೃಪಾಛತ್ರದ ನೆರಳಿನಲ್ಲಿ ಪೋಷಿಸಿಕೊಂಡು ಬಂದದ್ದರಿಂದ, ಇದೊಂದು ಸಂಸ್ಥೆಯು ನಿಂತಿದೆ. ಅದು ಬೆಳೆಯಬೇಕಾದರೆ ಮಿಕ್ಕಾದ ಸಂಸ್ಥಾನಾಧಿಪತಿಗಳೂ, ಸಾಹುಕಾರರೂ ಅದಕ್ಕೆ ಸಾಂಪತ್ತಿಕ ಮತ್ತು ನೈತಿಕ ಬೆಂಬಲಗಳನ್ನು ಕೊಡಬೇಕು; ಜನರು ಅದರಲ್ಲಿ ಅಭಿಮಾನವಿಟ್ಟು ಸಹಕರಿಸಬೇಕು. ಕನ್ನಡ ವಾತಾವರಣವನ್ನು ಹಬ್ಬಿಸಿ ಕನ್ನಡವನ್ನು ಬಲಪಡಿಸಿಕೊಳ್ಳಬೇಕು. ಪರಿಷತ್ತು ಶಾರದೆಯ ದೇವಸ್ಥಾನ; ಅದಕ್ಕೆ ಗುಡಿ ಗೋಪುರಗಳನ್ನು ಕಟ್ಟಿಸುವುದೂ ಸೇವಾಕಾರ್ಯಕ್ಕೆಂದು ದತ್ತಿ ಬಿಡುವುದೂ ಅದರ ಭಕ್ತಾದಿಗಳ ಕೆಲಸ. ಏನೇ ಆದರೂ, ಇದು ಸರ್ಕಾರದ ಇಲಾಖೆಯಂತೆ ಅಧಿಕಾರ ಬಲದಿಂದ ಕೆಲಸ ನಡೆಸಲಾರದು. ಇಂಗ್ಲೆಂಡಿನ ರಾಯಲ್ ಏಷಿಯಾಟಿಕ್ ಸೊಸೈಟಿಯಂಥವುಗಳಿಗೂ ಇದು ಸಾಧ್ಯವಾಗಿಲ್ಲ. ಇಲ್ಲಿ ಕೆಲಸ ಮಾಡುವುದು ಸತ್ವಕ್ಕಿಂತಲೂ ಹೆಚ್ಚಾಗಿ ಸ್ನೇಹ.

Tag: Kannada Sahitya Sammelana 26, A.R. Krishnashastri

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)