ಸಾಹಿತ್ಯ ಸಮ್ಮೇಳನ-೨೭

ಅಧ್ಯಕ್ಷತೆ: ದ. ರಾ. ಬೇಂದ್ರೆ

da-ra-bendre

೨೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

.ರಾ. ಬೇಂದ್ರೆ

ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಾಮಚಂದ್ರ ಬೇಂದ್ರೆ-ಅಂಬವ್ವನವರ ಪುತ್ರರಾಗಿ ೩೧-೧-೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ೧೯೧೩ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೧೮ರಲ್ಲಿ ಬಿ.ಎ. ಮಾಡಿದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ೧೯೩೫ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.

ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ಆಮೇಲೆ ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಒಪ್ಪೊತ್ತಿನ ಶಿಕ್ಷಕರಾದರು. ೧೯೪೪ರಲ್ಲಿ ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೪೪ರಲ್ಲಿ ನೇಮಕಗೊಂಡರು. ೧೯೫೬ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು.

ಮುಂಬಯಿಯಲ್ಲಿ ನಡೆದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು. ೧೯೩0ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ಜೀವನ ಮಾಸಪತ್ರಿಕೆ ಮತ್ತು ಜಯಕರ್ನಾಟಕ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದರು.

ಬೇಂದ್ರೆ ಅವರಿಗೆ ೧೯೬೮ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿತು. ೧೯೭೬ರಲ್ಲಿ ಕಾಶಿಯ ವಿದ್ಯಾಪೀಠವೂ ಗೌರವ ಡಾಕ್ಟರೇಟ್ ನೀಡಿತು. ಕೇಂದ್ರ ಸರ್ಕಾರ ೧೯೬೮ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ಇವರಿಗೆ ಸಂದಿದೆ. ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ ಬಿರುದನ್ನು ೧೯೭೨ರಲ್ಲಿ ನೀಡಿದರು. ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರಿಗೆ ನೀಡಲಾಯಿತು. ೧೯೫೬ರಲ್ಲಿ ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ದೊರೆತರೆ ೧೯೭೪ರಲ್ಲಿ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ೧೯೬೭ರಿಂದ ರಾಜ್ಯ ಸರ್ಕಾರ ಗೌರವ ಮಾಶಾಸನ ನೀಡಿತು.

ಪ್ರತಿಭಾವಂತ ದ.ರಾ. ಬೇಂದ್ರೆಯವರ ಕವನಗಳು ಕನ್ನಡ ಜನತೆಯನ್ನು ಮುಗ್ಧಗೊಳಿಸಿದೆ. ಗಾಯಕರು ಹಾಡಿ  ತಣಿದಿದ್ದಾರೆ. ಜನತೆ ಪದೇ ಪದೇ ಕೇಳಿ ಆನಂದಿಸುತ್ತಿದೆ. ಇಂಥ ಬೇಂದ್ರೆಯವರ ಕೃತಿಗಳಲ್ಲಿ ಕೆಲವು ಹೀಗಿವೆ.

ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ.

ಅಂಬಿಕಾತನಯದತ್ತ ಕಾವ್ಯನಾಮದ ದ.ರಾ. ಬೇಂದ್ರೆಯವರು ೨೬-೧0-೧೯೮೨ರಲ್ಲಿ ಮುಂಬಯಿಯಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೭

ಅಧ್ಯಕ್ಷರು, .ರಾ. ಬೇಂದ್ರೆ

ದಿನಾಂಕ ೨೬,೨೭,೨೮ ಜನವರಿ ೧೯೪೩

ಸ್ಥಳ : ಶಿವಮೊಗ್ಗ

ಸಾಹಿತ್ಯ ಸಮ್ಮೇಳನವು ಸಂಜಿವಿನಿ

ನನ್ನನ್ನು ಪರಿಷತ್ತಿನ ಸದಸ್ಯರು ಪ್ರೇಮದಿಂದ ಈ ಅಧ್ಯಕ್ಷಪೀಠದಲ್ಲಿರಿಸಿದ್ದಾರೆ. ಅವರಿಗೆ ನನ್ನ ನಮಸ್ಕಾರ. ನನ್ನನ್ನು ಅನೇಕ ಹಿರಿಯರು, ಕಿರಿಯರು, ಸಂದವರು, ಸಮಾಜದವರು, ಪತ್ರ ಪತ್ರಿಕೆಗಳವರು ಇದಕ್ಕಾಗಿ ಅಭಿನಂದಿಸಿದರು; ಅವರಿಗೆ  ಅಭಿವಂದಿಸುತ್ತೇನೆ. ಈಗ ಕೂಡಿದ ಸಭೆ ನನ್ನನ್ನು ಸ್ನೇಹದಿಂದ ತಮ್ಮವನೆಂದು ಇದಿರುಗೊಳ್ಳುತ್ತಿದೆ, ಅದಕ್ಕೆ ಅನೇಕ ಸಲ ನಮಸ್ಕರಿಸುತ್ತೇನೆ.

ಹದಿಮೂರು ವರ್ಷಗಳ ಪೂರ್ವದಲ್ಲಿ, ಮೈಸೂರಿನಲ್ಲಿ, ಮೈಸೂರು ಸಾಹಿತ್ಯ ಸಮ್ಮೇಳನವು ನನ್ನನ್ನು ಲೇಖಕರ ಗೋಷ್ಠಿಯ ಅಧ್ಯಕ್ಷನನ್ನಾಗಿ ಮಾಡಿತು. ಇಷ್ಟು ವರ್ಷಗಳ ಅನಂತರ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನವು ಮೈಸೂರು ರಾಜ್ಯವನ್ನು ಸೇರುತ್ತಿದೆ; ಶಿವಮೊಗ್ಗ ನನ್ನನ್ನು ಸಾಹಿತ್ಯ ಸಮ್ಮೇಳನಕ್ಕೇ ಅಧ್ಯಕ್ಷನೆಂದು ಬರಮಾಡಿಕೊಳ್ಳುತ್ತಿದೆ. ಆ ನಾಡಿನ ಅಧಿವತಕ್ಕೆ ನಾನು ಎಷ್ಟು ಬಾಗಿದರೂ ಸಾಲದು. ಅಣ್ಣ ಮಾಸ್ತಿಯವರೊಡನೆ ೧೯೩0ರಲ್ಲಿ ಇಲ್ಲಿಗೆ ಬಂದಾಗಲೇ ಸ್ಥಾಪಿತವಾದ ಇಲ್ಲಿಯ ಕರ್ನಾಟಕ ಸಂಘ, ಅಣ್ಣ ಮಾಸ್ತಿಯವರೇ ಪರಿಷತ್ತಿನ ಉಪಾಧ್ಯಕ್ಷರಿರುವಾಗ, ತಾನು ಕಟ್ಟಿಸಿಕೊಂಡ ಕನ್ನಡದ ಗುಡಿಯಲ್ಲಿ, ಸರಸ್ವತಿಯ ಮಹಾಪೂಜೆಯ ಕಾಲಕ್ಕೆ, ನನ್ನನ್ನು ಪೂಜಾರಿಯೆಂದು ಸಾಹಿತ್ಯದ ಮಂತ್ರಗಳನ್ನು ಉಚ್ಚರಿಸಲು ಕರೆಸಿಕೊಂಡಿದೆ. ಈ ಘಟನೆ ಇಲ್ಲಿಯ ಹಿರಿಯರ ಗೆಳೆಯರ ನಿರಂತರ ಸ್ನೇಹದ ಪರಿಪಾಕವೇ ಆಗಿದೆ. ಅದಕ್ಕೆ ನನ್ನ ಸ್ನೇಹವನ್ನೇ ಆರ್ಪಿಸದೆ- ನನ್ನ ಹತ್ತಿರ ಬೇರೆ ಏನಿದೆ? ಇಲ್ಲಿಯ ಕಾರ್ಯಕರ್ತರು ಕನ್ನಡ ನಾಡಿನ ಅನೇಕ ಕಾರ್ಯಕರ್ತರಂತೆ ಪಂಚಾಗ್ನಿಯ ಸಾಧನೆ ಮಾಡಿ, ಈ ಸಾರಸ್ವತ ಯಜ್ಞ ಹೂಡಿದ್ದೀರಿ. ಇದು ಬರಿಯ ಉತ್ಸಾಹದ ಉತ್ಸವವಲ್ಲ; ನಾವೆಲ್ಲರೂ ಬಲ್ಲೆವು. ಆದರೂ “ಯುದ್ಧ, ಬರಗಾಲ, ಪಿಡುಗು, ಒಳಜಗಳ ಮಧ್ಯೆ ಸಾಹಿತ್ಯ ಸಮ್ಮೇಳನವೇನು ನೆರೆದಿದೆ” ಎಂದು ಈಗಿನ ಕಾಲಕ್ಕೆ ಒಂದು ಪ್ರಶ್ನೆ ಮನದಲ್ಲಿ ಹುಟ್ಟಿದರೆ ಅಸಹಜವಲ್ಲ. “ಹೊರಗಿನ ಬೇಜಾರು ತಪ್ಪಿಸಿಕೊಳ್ಳಲು ನಾವಿಲ್ಲಿ ನೆರೆದಿದ್ದೇವೆ” ಎಂದು ತಿಳಿದುಕೊಳ್ಳಲಾಗದು. ಒಂದು ಕಡೆಗೆ ಹಸಿವೆಯ ಕಾಡುಗಿಚ್ಚು, ಇನ್ನೊಂದು ಕಡೆಗೆ ಯುದ್ಧದ ಮದ್ದಾನೆ, ಮತ್ತೊಂದು ಕಡೆಗೆ ಪಿಡುಗಿನ ಹೆಬ್ಬುಲಿ- ಇವುಗಳಿಂದ ತಪ್ಪಿಸಿಕೊಳ್ಳಲು ಓಡಿದರೆ, ಅನಾಯಕ ಸಮಾಜದ ಹಾಳುಬಾವಿಯಲ್ಲಿ ನಾವು ಬೀಳಲಿರಲು, ಪಕ್ಷಪಂಗಡಗಳ, ಘಟಸರ್ಪ ನಮಗೆ ಅಲ್ಲಿಯೂ ಕಾದಿದೆಯಲ್ಲಾ ಎಂದು ಕಕ್ಕಾಬಿಕ್ಕಿಯಾಗಿ ಸಮ್ಮೇಳನದ ಹರಕು ಬಳ್ಳಿಗಳಿಗೆ ಜೋತುಬಿದ್ದಿರುವಾಗ ಸಾಹಿತಿಗಳ ಜೇನು ಹುಟ್ಟಿನ ಒಂದು ತೊಟ್ಟಾದರೂ ಮೂಗಿಗೆ ತಗುಲಿದರೆ ಸಾಕು, ಮೂಗಿಗೆ ಹತ್ತಿದ ಆ ಹನಿತುಪ್ಪವನ್ನು ನಿಲುಕದ ನಾಲಗೆಯನ್ನಾದರೂ ಚಾಚಿ ರುಚಿ ನೋಡೋಣವೆಂಬ ನಗೆಗೇಡು ಪ್ರಯತ್ನ ಮಾಡಲು ತಾವು ನೆರೆದಿದ್ದೀರೆಂದು ತಿಳಿಯಬೇಡಿ. ಸಾಹಿತ್ಯವು ಸಂಜೀವನ ವಿದ್ಯೆ. ಆ ಸಂಜೀವಿನಿಗೆ ನಾವು ತಾವೆಲ್ಲರೂ ಶರಣಾಗತರಾಗಿದ್ದೇವೆ.

Tag: Kannada Sahitya Sammelana 27, Da.Ra. Bendre, Dattatreya Ramachandra Bendre, Ambikatanaya Datta

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)