ಸಾಹಿತ್ಯ ಸಮ್ಮೇಳನ-೨೮ : ರಬಕವಿ
ಡಿಸೆಂಬರ್ ೧೯೪೪

ಅಧ್ಯಕ್ಷತೆ: ಶಿ. ಶಿ. ಬಸವನಾಳ

ss-basavanal

೨೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಶಿ. ಶಿ. ಬಸವನಾಳ

ನವಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರಾಗಿ ವೀರಶೈವ ಧರ್ಮ ಸಾಹಿತ್ಯಕ್ಕೆ ಶ್ರಮಿಸಿದ ವಿದ್ವಾಂಸ ಶಿ. ಶಿ. ಬಸವನಾಳರು (ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ) ಶಿವಯೋಗಪ್ಪ ಮತ್ತು ಸಿದ್ದಮ್ಮನವರ ಪುತ್ರರಾಗಿ ೭-೧೧-೧೮೯೩ರಲ್ಲಿ ಜನಿಸಿದರು. ಮೆಟ್ರಿಕ್ ಪರೀಕ್ಷೆಯನ್ನು ೧೯೧0ರಲ್ಲಿ ಮುಗಿಸಿ ೧೯೧೫ರಲ್ಲಿ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. ಪದವಿಗಳಿಸಿದರು.

ಸರ್ಕಾರಿ ಕೆಲಸಕ್ಕೆ ಹೋಗದೆ ಸಾರ್ವಜನಿಕ ಸೇವೆಗೆ ಟೊಂಕಕಟ್ಟಿ ನಿಂತರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿಯನ್ನು ಸ್ಥಾಪಿಸಿದರು. ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ವೈಸ್ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಕೆಎಲ್ಇ ಸೊಸೈಟಿಯ ಕಾರ್ಯದರ್ಶಿಯಾಗಿ ದುಡಿದರು.

ಪ್ರಬೋಧ ಮಾಸಪತ್ರಿಕೆ, ಜಯಕರ್ನಾಟಕದ ಮಾಸಪತ್ರಿಕೆಗಳ ಸಂಪಾದಕರಾಗಿ, ಸಾಹಿತ್ಯ ಸಮಿತಿ, ಪತ್ರಿಕೆ ಸ್ಥಾಪಕರಾಗಿ ಶ್ರಮಿಸಿದ್ದಾರೆ. ಬೆಳಗಾಂವಿ ಜಿ. ಐ. ಹೈಸ್ಕೂಲ್, ಧಾರವಾಡದ ಲಿಂಗರಾಜು  ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಯ ಕಾರ್ಯಗಳಲ್ಲಿ ಇವರ ಕೊಡುಗೆ ಅಪಾರ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಕರಾಗಿ ಹಲವು ಕಾರ್ಯ ಮಾಡಿದ್ದರು.

೧೯೪೪ರಲ್ಲಿ ರಬಕವಿಯಲ್ಲಿ ನಡೆದ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೩ನೇ ಅಧಿವೇಶನದ ಅಧ್ಯಕ್ಷರಾದರು. ೧೯೨೬ರಲ್ಲಿ ಸಿದ್ಧಗಂಗಾದಲ್ಲಿ ನಡೆದ ವೀರಶೈವ ತರುಣ ಸಂಘಗಳ ಸಮ್ಮೇಳನ ಸಭಾಧ್ಯಕ್ಷರಾದರು.

ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಅನುಪಮ ಕೊಡುಗೆಗಳನ್ನಿತ್ತ ಶಿ ಶಿ. ಬಸವನಾಳರ ಪ್ರಸಿದ್ಧ ಕೃತಿಗಳು ಹಲವು ಹೀಗಿವೆ:

ಚೆನ್ನಬಸವಪುರಾಣ, ಪ್ರಭುಲಿಂಗಲೀಲೆ, ಶಬರಶಂಕರ ವಿಳಾಸ, ಗಿರಿಜಾ ಕಲ್ಯಾಣ ಮೊದಲಾದ ವೀರಶೈವ ಕಾವ್ಯಗಳ ಸಂಪಾದನೆ. ಕಾವ್ಯಾವಲೋಕನ, ಬಸವಣ್ಣನವರ ಷಟ್ಸ್ಥಲ ವಚನಗಳು, ಸಂಶೋಧನೆ ಸಂಪಾದನೆ, ವೀರಶೈವ ತತ್ವಪ್ರಕಾಶ (ಪಂಡಿತ ಬರಹಗಳ ಸಂಕಲನ), ಮ್ಯೂಸಿಂಗ್ಸ್ ಆಫ್ ಬಸವ (ಬಸವಣ್ಣನವರ ವಚನಗಳ ಆಂಗ್ಲಾನುವಾದ).

ಸಮರ್ಥ ಆಡಳಿತಗಾರ ಪರಿಣತ ಗ್ರಂಥ ಸಂಪಾದನಕಾರರಾಗಿದ್ದ ಶಿ. ಶಿ. ಬಸವನಾಳರು ೨೨-೨-೧೯೫೧ರಲ್ಲಿ ಕೈಲಾಸವಾಸಿಗಳಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೮

ಅಧ್ಯಕ್ಷರು, ಶಿ.ಶಿ. ಬಸವನಾಳ

ದಿನಾಂಕ ೨೮,೨೯,0 ಡಿಸೆಂಬರ್ ೧೯೪೪                                             

ಸ್ಥಳ : ರಬಕವಿ

ಸಮ್ಮೇಳನದ ಇದುವರೆಗಿನ ಕಾರ್ಯ

ಈಗ ಮೂವತ್ತು ವರ್ಷಗಳಿಂದ  ತಿರುಳ್ಗನ್ನಡದ ಗಂಡುಮೆಟ್ಟಿನ ಸ್ಥಾನಗಳಲ್ಲಿಯೂ ಗಡಿನಾಡಿನ ಇಕ್ಕಟ್ಟಿನ ಆದರೂ ಆಯಕಟ್ಟಿನ ಸ್ಥಳಗಳಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಚೋದನೆಯಿಂದ, ಅದರ ಕಾರ್ಯಕ್ರಮದ ಒಂದು ಅಂಗವಾಗಿ ನಡೆಯುತ್ತಿರುವುದಷ್ಟೆ. ಇದರಿಂದಾಗಿ ಕನ್ನಡ ಜನತೆಯಲ್ಲಿ ಸಾರ್ವತ್ರಿಕವಾದ ಜಾಗೃತಿಯುಂಟಾಗಿ ತಮ್ಮ ನಾಡು ನುಡಿಗಳ ವಿಷಯವಾಗಿ ಅಭಿಮಾನವು ಬೆಳೆದಿದೆ ಎನ್ನಬಹುದು. ಕನ್ನಡ ಸಾಹಿತ್ಯದ ಬಗೆಗೆ ಕೆಲಮಟ್ಟಿನ ತಿಳವಳಿಕೆಯೂ ಬಹುಮಟ್ಟಿನ ಆದರವೂ ಕನ್ನಡಿಗರಲೆಲ್ಲಾ ತಲೆದೋರಲು ಅನುವಾಗಿದೆ ಎಂಬಲ್ಲಿ ಸಂದೇಹವಿಲ್ಲ. ಸಮ್ಮೇಳನದ ಅಂಗವಾಗಿ ಅಲ್ಲಲ್ಲಿ ಆಗಾಗ ಜರುಗುತ್ತಿರುವ ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ, ಮಹಿಳಾಗೋಷ್ಠಿ ಇವುಗಳ ಮೂಲಕ ಸುಪ್ರಸಿದ್ಧರಾದ ಸಾಹಿತಿಗಳ ಪ್ರತ್ಯಕ್ಷ ಪರಿಚಯವಾಗಲು ಇಂಬಾಗಿರುವುದಲ್ಲದೆ ನೂತನ ತರುಣ ಬರೆಹಗಾರರನ್ನು ಬೆಳಕಿಗೆ ತರಲೂ ಮಾರ್ಗವಾಗಿದೆಯೆನ್ನಬಹುದು. ಕನ್ನಡದ  ಮುಖ್ಯ ಸಮಸ್ಯೆಗಳ ಚರ್ಚೆಗಳು ಮೇಲಿಂದ ಮೇಲೆ ನಡೆವುದರ ಮೂಲಕ ಅವುಗಳ ವಿಸ್ತಾರ ಮತ್ತು ಆಳದ ಯಥಾರ್ಥ ಕಲ್ಪನೆಯುಂಟಾಗಲು ಅನುಕೂಲವಾಗಿರುವುದಲ್ಲದೆ, ಅವುಗಳನ್ನು ಬಿಡಿಸುವುದರಲ್ಲಿ ಬರಬಹುದಾದ ತೊಡಕುಗಳ, ಮಾಡಬೇಕಾದ ಪ್ರಯತ್ನಗಳ ಅರಿವು ಕೆಲಮಟ್ಟಿಗಾದರೂ ಉಂಟಾಗಿದೆ ಎನ್ನಬಹುದು. ಪರಿಷತ್ತಿನ ಅಧಿಕಾರಿಗಳ, ಅದರಲ್ಲಿಯೂ ಮುಖ್ಯವಾಗಿ ಆ ಆ ಕಾಲದ ಉಪಾಧ್ಯಕ್ಷರ, ಪ್ರಚಾರ ಸಂಚಾರಗಳ ಪರಿಣಾಮವಾಗಿ, ಸತತ ಪ್ರಯತ್ನದ ಫಲವಾಗಿ ಅಲ್ಲಲ್ಲಿ ಕರ್ನಾಟಕ ಸಂಘಗಳು ಏರ್ಪಟ್ಟು, ಸದಸ್ಯರ ಸಂಖ್ಯೆ ಬೆಳೆದು, ಪರಿಷತ್ತಿನ ಉದ್ದೇಶ ಕಾರ್ಯಕ್ರಮಗಳ ಸಾಕಷ್ಟು ತಿಳಿವಳಿಕೆ ಕನ್ನಡಿಗರಲ್ಲಿ ಹರಡಿರುವುದಲ್ಲದೆ, ಆ ಸಂಸ್ಥೆಗೆ ಜನಬಲ ಧನಬಲಗಳೂ ಧಾರಾಳವಾಗಿ ದೊರೆಯುತ್ತಿವೆ ಎಂಬುದು ಸಂತೋಷದ ಮಾತಾಗಿದೆ. ಒಟ್ಟಿನಲ್ಲಿ ಈ ಬಗೆಯ ಪ್ರಚಾರಕಾರ್ಯ ಸಮಾಧಾನಕರವಾಗಿ ಸಾಗಿದೆ, ಸಾಗುತ್ತಲಿದೆ, ಇನ್ನು ಮುಂದೆಯೂ ಸಾಗುವುದೆಂಬ ಭರವಸೆ ಇದೆ.

ಸಮ್ಮೇಳನದ ಇನ್ನು ಮುಂದಿನ ಕಾರ್ಯ

ಸಾಮಾನ್ಯವಾದ ಈ ಬಗೆಯ ಕನ್ನಡದ ಪ್ರಚಾರ ಹಿಂದಿನಂತೆ ಮುಂದೆಯೂ ಸಾಗುವುದು ಹಿತಕರವಾಗಿರುವುದಾದರೂ ಇನ್ನು ಮುಂದಿನ ಪ್ರಚಾರ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಅತಿ ಮಹತ್ತ್ವದುದೆನಿಸಿದ ಹಲವು ಸಮಸ್ಯೆಗಳ ಸೇರ್ಪಡೆಯಾಗಬೇಕಾಗಿದೆ.  ಈ ಪ್ರಚಾರಕಾರ್ಯ ಕೆಲವು ದಿಸೆಗಳಲ್ಲಿ ಸತತವಾಗಿ ನಡೆಯುವುದು ಅತ್ಯಗತ್ಯವಿದೆ. ಅಲ್ಲದೆ ಪ್ರಚಾರದ ಕ್ಷೇತ್ರವು ಬರಿಯ ಕರ್ನಾಟಕಕ್ಕಷ್ಟೆ ನಿರ್ಬಂಧಿತವಾಗಿರದೆ ಇನ್ನೂ ವಿಸ್ತಾರಗೊಳ್ಳಬೇಕಾಗಿದೆ. ಮೂಡ ಪಡುವಣ ಗಡಿನಾಡುಗಳಲ್ಲಿ ನೆರೆಯ ಪ್ರಬಲ ಭಾಷೆಗಳ ದವಡೆಯೊಳಗಿಂದ ಕನ್ನಡವನ್ನು ಉಳಿಸಿ ಕಾಪಾಡುವ ಹೊಣೆ ಕನ್ನಡಿಗರಾದ ನಮ್ಮೆಲ್ಲರ ಮೇಲೆಯೂ ಇದೆ. ಆಯಾ ವಿಭಾಗಗಳಲ್ಲಿಯ ಕನ್ನಡ ಜನ ಸಾಮಾನ್ಯರಲ್ಲೆಲ್ಲ ಜಾಗೃತಿಯನ್ನುಂಟುಮಾಡಿ ಅದು ಸದಾ ಪ್ರಜ್ವಲಿಸುವಂತೆ ನೋಡಿಕೊಳ್ಳುವ ಭಾರವೂ ನಮ್ಮದಾಗಿದೆ. ಅದಕ್ಕಾಗಿ ಸತತ ಪ್ರಚಾರಕ್ಕೆಂದು ವೇತನದ ಪ್ರಚಾರಕರನ್ನು ನಿಯಮಿಸುವುದು ಅಗತ್ಯವೆನಿಸುತ್ತದೆ. ಸ್ಥಳೀಯ ಪ್ರಮುಖರು ಮಾಡಬಹುದಾದ ಪ್ರಯತ್ನಗಳಿಗೆ ಅಖಿಲ ಕರ್ಣಾಟಕದ ಪರವಾಗಿ ಬೆಂಬಲವನ್ನೂ ಸರಕಾರವನ್ನು ನೀಡಬೇಕಾಗುತ್ತದೆ. ಗಡಿನಾಡ ಸಮಸ್ಯೆ ಬೇರೆ ಬೇರೆ ಕಡೆಗೆ ಪರಿಸ್ಥಿತಿಗನುಸಾರವಾಗಿ ಬೇರೆಬೇರೆಯಾಗಿ ತೋರಬಹುದಾದುದರಿಂದ ಅವನ್ನೆಲ್ಲ ಚೆನ್ನಾಗಿ ಅಭ್ಯಾಸ ಮಾಡಿ ಸರಿಯಾದ ಉಪಾಯಗಳನ್ನು ಕೈಕೊಳ್ಳುವುದೂ ಅವಶ್ಯವೆನಿಸುವುದು. ಇದಕ್ಕೆಲ್ಲ ಸ್ವತಂತ್ರವಾದ ಕಾರ್ಯಾಲಯವೂ ಧನನಿಧಿಯೂ ಬೇಕೆಂಬುದರಲ್ಲಿ ಸಂದೇಹವಿಲ್ಲ. ಈ ಕೊರತೆಯನ್ನು ಪೂರೈಸುವ ಹೊಣೆಯನ್ನು ಅಖಿಲ ಕರ್ಣಾಟಕ ಸಂಸ್ಥೆಯೆನಿಸಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಹೊರಬೇಕಾಗುವುದು. ಇದಕ್ಕಾಗಿ ಪರಿಷತ್ತು ಬೇರೊಂದು ಕಾರ್ಯಶಾಖೆ (Department) ಯನ್ನು ಏರ್ಪಡಿಸಿಕೊಳ್ಳುವುದು ಒಳ್ಳೆಯದು. ಸಾಧ್ಯವಾದರೆ ಅಖಿಲ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಟ್ಟುಕೊಂಡಂತಹ (ಕ.ವಿ.ವ. ಸಂಘದಂತಹ) ಇತರ ಸಂಸ್ಥೆಗಳ ನೆರವನ್ನು ದೊರಕಿಸಿಕೊಳ್ಳತಕ್ಕದ್ದು.

ಈಗ ಕೆಲವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ಬಗೆಗೆ ಗೊತ್ತುವಳಿಗಳನ್ನು ಅಂಗೀಕರಿಸುತ್ತಿದ್ದರೂ ಅದರಿಂದ ಯಾವ ಪರಿಣಾಮವೂ ಆಗಲಿಲ್ಲವಾದುದರಿಂದ ಇದಕ್ಕೂ ತೀವ್ರತರವಾದ ಉಪಾಯಗಳನ್ನು ಕೈಕೊಳ್ಳುವುದು ಅತ್ಯಾವಶ್ಯಕವೆಂದು ನನ್ನ ಮತಿಗೆ ತೋರುತ್ತಿದೆ.

ಪರಿಷತ್ತಿನ ಕರ್ತವ್ಯ

ನೆರೆಯ ಪ್ರಾಂತಗಳ ಆಕ್ರಮಣ  ಪ್ರವೃತ್ತಿಯನ್ನು ಪ್ರತಿಭಟಿಸುವುದೂ ಕರ್ನಾಟಕದ ಏಕೀಕರಣವನ್ನು ಹೆಚ್ಚು ಬಲವತ್ತರವಾಗಿ ಪ್ರಯತ್ನಪಟ್ಟು ಸಾಧಿಸುವುದೂ ಕರ್ನಾಟಕ ವಿಶ್ವವಿದ್ಯಾನಿಲಯದ ಯೋಜನೆಯನ್ನು ಮುಂದುವರಿಸುವುದೂ-ಈ ಮೂರು ವಿಧದ ಪ್ರಯತ್ನಗಳು-ಒಂದೊಂದು ಪ್ರತ್ಯೇಕ ಸಂಸ್ಥೆಯ ಮುಖಾಂತರವಾಗಲಿ, ಇಲ್ಲವೆ ಈ ಮೂರು ಪ್ರಯತ್ನಗಳು ಮುಪ್ಪುರಿಗೊಂಡು ಒಂದೇ ಸಂಸ್ಥೆಯ ಮುಖಾಂತರವಾಗಲಿ- ಸತತವಾಗಿ ನಡೆಯುತ್ತಿರಬೇಕು; ಅಲ್ಲದೆ, ಉಳಿದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳೂ ವ್ಯಕ್ತಿಗಳೂ, ಈ ಪ್ರಯತ್ನಗಳಿಗೆ ಸದಾ ಬೆಂಬಲ ಸಹಕಾರ ನೀಡಲು ಸಿದ್ಧರಿರಬೇಕು. ಇದಕ್ಕೆಲ್ಲ ಅವಶ್ಯಕವಾಗಿ ಬೇಕಾಗುವ ಅನುಕೂಲ ಪರಿಸ್ಥಿತಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಪರಿಷತ್ತು ಉಂಟುಮಾಡಿ ಕೊಡತಕ್ಕದ್ದೆಂದು ನನ್ನ ತಿಳಿವಳಿಕೆ.

ಪರಿಷತ್ತುಸಮ್ಮೇಳನಗಳ ಧ್ಯೇಯಧೋರಣೆ

ಸಮ್ಮೇಳನವಾಗಲಿ ಪರಿಷತ್ತಾಗಲಿ ಆಸ್ತಿತ್ವದಲ್ಲಿ ಬಂದುದೂ ಬದುಕಿರುವುದೂ ಕನ್ನಡ ಸಾಹಿತ್ಯದ ಏಳ್ಗೆ-ಹೆಚ್ಚಳ ಇವುಗಳಿಗಾಗಿ ಎನ್ನುವುದನ್ನು ಮತ್ತೆ ಬೇರೆಯಾಗಿ ಹೇಳಬೇಕಾಗಿಲ್ಲ; ಅವುಗಳ ಹೆಸರುಗಳೇ ಸಾಕ್ಷಿ. ಆದುದರಿಂದ ಕನ್ನಡ ಸಾಹಿತ್ಯಕ್ಕೆ ಅವುಗಳ ಮುಖಾಂತರ ಯಾವ ಬಗೆಯ ಸೇವೆಯನ್ನು ಬಯಸಬೇಕೆಂಬುದನ್ನು ನಾವು ವಿವೇಚಿಸಿದರೆ ಅಪ್ರಸ್ತುತವಾಗಲಾರದು. ಈ ದೃಷ್ಟಿಯಿಂದ ನೋಡಿದರೆ ಆ ಸಂಸ್ಥೆಗಳ- ಅದರಲ್ಲಿಯೂ ಮುಖ್ಯವಾಗಿ ಪರಿಷತ್ತಿನ-ಕಾರ್ಯಕ್ಷೇತ್ರವನ್ನು ಎರಡು ತೆರನಾಗಿ ವಿಭಾಗಿಸಬಹುದು; (೧) ಹಳೆಯ ಸಾಹಿತ್ಯವನ್ನು ಸಂರಕ್ಷಿಸುವುದು ಹಾಗೂ ಅದರ ಅಭ್ಯಾಸಕ್ಕೆ ತಕ್ಕ ಸೌಕರ್ಯಗಳನ್ನು ಒದಗಿಸಿಕೊಡುವುದು. (೨) ಹೊಸ ಸಾಹಿತ್ಯದ ನಿರ್ಮಾಣಕ್ಕೆ ಅವಶ್ಯವಾದ ಚಲನೆ ಪ್ರೋತ್ಸಾಹಗಳನ್ನು ಕೊಡುವುದು. ಆದರೆ ಇದು ಬಹು ವಿಶಾಲವಾದ ಕ್ಷೇತ್ರ. ಬಹು ಉನ್ನತವಾದ ಧ್ಯೇಯ. ಆದುದರಿಂದ ಇಲ್ಲಿ ನಾವು ನಿರ್ಧಾರವಾದ ದೀರ್ಘಾವಧಿಯ ಕಾರ್ಯಕ್ರಮವನ್ನು ಇಟ್ಟುಕೊಳ್ಳದೆ ಸುಮ್ಮನೆ ಕಾರ್ಯಪ್ರವೃತ್ತರಾದರೆ, ವೆಚ್ಚಮಾಡಿದ ವೇಳೆ ಹಾಗೂ ಧನಕ್ಕೆ ಸರಿಯಾದ, ಪಟ್ಟ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯದೆ ಹೋಗುವ ಸಂಭವವಿದೆ. ಅಲ್ಲದೆ ಕಾಗದದಲ್ಲಿಯೇ ಉಳಿಯಬಹುದಾದ ಗೊತ್ತುವಳಿಗಳಿಂದಾಗಲಿ, ಪ್ರಕಟನೆಯ ಕ್ಷೇತ್ರವನ್ನು ದಾಟದಿರುವ ಧ್ಯೇಯಗಳಿಂದಾಗಲಿ ಪರಿಷತ್ತಿನ (ಅಥವಾ ಸಮ್ಮೇಳನದ) ಬೆಲೆಯನ್ನು ಯಾರೂ ಅಳೆಯುವುದಿಲ್ಲ. ಆದರೆ ಕಣ್ಣಿಗೆ ಕಾಣುವಂ, ಅಳತೆಗೆ ತೂಕಕ್ಕೆ ಎಣಿಕೆಗೆ ಅಳಡುವಂತೆ, ಗೈದ ಕಾರ್ಯದಿಂದಲೆ ಅಳೆಯುವರೆಂಬುದನ್ನು ನೆನಪಿನಲ್ಲಿಡತಕ್ಕದು.

ವಿಮರ್ಶೆಗೆ ಪರಿಷತ್ತಿನ ನೆರವು

ಹಿಂದಣವರು ಕೊಟ್ಟ ಕೋಡಿನ ಫಲವಾದ ಭಾಷೆಯ ಅಗ್ಗಳತೆಗಾಗಿಯೂ ಸಾಹಿತ್ಯದ ವಿಫುಲತೆಗಾಗಿಯೂ ನಾವು ಅಭಿಮಾನ ತಳೆಯುವುದು ಅರಿದಲ್ಲ. ಈ ಅಭಿಮಾನದೊಡನೆ ಭಾಷೆ ಮತ್ತು ಸಾಹಿತ್ಯಗಳ ಆಳವಾದ ಪರಿಚಯ, ಕೂಲಂಕಷವಾದ ತಿಳಿವಳಿಕೆ, ಸಹೃದಯಾತ್ಮಕ ವಿಮರ್ಶೆ- ಇವುಗಳೂ ನಮಗೆ ಹೆಚ್ಚಾಗಿ ಬೇಕಾಗಿವೆ. ಇಂತಹ ಫಲಕಾರಿಯಾದ ಅಭ್ಯಾಸಕ್ಕೆ  ಅನುಕೂಲವಾದ ಸಲಕರಣೆಗಳೆಲ್ಲವನ್ನೂ ಒದಗಿಸಿಕೊಡುವುದು ಪರಿಷತ್ತಿನ ಕರ್ತವ್ಯವಾಗಿದೆ. ಅದಕ್ಕೆ ತಕ್ಕ ವಾತಾವರಣವನ್ನು ಕಲ್ಪಿಸಿಕೊಡುವುದು ಸಮ್ಮೇಳನದ ಉದ್ದೇಶವಾಗಿರಬೇಕು.

ಪರಿಷತ್ತಿನ ನಿಘಂಟು

ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಆಳವಾದ ಅಭ್ಯಾಸದ ಸಾಧನಗಳಲ್ಲಿ ನಮಗೆ ಈಗ ಅತ್ಯಗತ್ಯದ ಕೊರತೆಯೆಂದರೆ ಉತ್ತಮವಾದ ಕನ್ನಡ ನಿಘಂಟು ಎಂಬಲ್ಲಿ ಯಾವ ಸಂದೇಹವೂ ಇಲ್ಲ. ಕಿಟ್ಟೆಲ್ ಅವರ ಬಹು ಅಮೂಲ್ಯವಾದ ಡಿಕ್ಷನರಿಯು ಈಗ ಹಳತಾಗಿರುವುದಲ್ಲದೆ ಬರಿಯ ಕನ್ನಡ ಬಲ್ಲವರಿಗೆ ಅಷ್ಟು ಪ್ರಯೋಜನಕಾರಿಯಾಗಿಲ್ಲ. ಮೇಲಾಗಿ ಅದರ ಪ್ರತಿಗಳೂ ಈಗ ದುರ್ಮಿಳವಾಗಿವೆ. ಈಗಿನ ಪರಿಸ್ಥಿತಿಗೆ ತಕ್ಕ ನಿಘಂಟುವೊಂದನ್ನು ಸಿದ್ಧಪಡಿಸುವ ವಿಷಯದಲ್ಲಿ ನಮ್ಮ ಸಾಹಿತ್ಯ ಪರಿಷತ್ತು ಕೆಲಮಟ್ಟಿಗೆ ಪ್ರಯತ್ನಪಟ್ಟಿದ್ದರೂ ಅದು ಫಲಕಾರಿಯಾಗಿಲ್ಲ. ಷಟ್ಪದಿ ಕಾವ್ಯಗಳ ಅಭ್ಯಾಸಕ್ಕಾಗಿಯೆ ಒಂದು ನಿಘಂಟನ್ನು ಪ್ರಕಟಿಸಬೇಕೆಂಬ ಪರಿಷತ್ತಿನ (೧೯೧೯)ರ  ಗೊತ್ತುವಳಿ ಕಾರ್ಯರೂಪಕ್ಕೆ ಇಳಿಯಲಿಲ್ಲ. “ಪದವೈಚಿತ್ರ್ಯ, ಪ್ರಯೋಗ ವೈಚಿತ್ರ್ಯ, ಅನ್ಯಭಾಷಾ ಶಬ್ದಗಳ” ಕೋಶವೊಂದನ್ನು ಸಿದ್ಧಪಡಿಸಬೇಕೆಂಬ (೧೯೨೧) ನಿರ್ಧಾರ ಮುಂದುವರಿಯಲಿಲ್ಲ. ಇತ್ತೀಚೆಗೆ ಕನ್ನಡ ನಿಘಂಟುವನ್ನು ಸಿದ್ಧಪಡಿಸುವ ಮೂರನೆಯ ಪ್ರಯತ್ನ ಆರಂಭವಾಗಿದೆ. ಆದರೆ ಅದಕ್ಕೆ ಹಣದ  ಯೋಜನೆ ಅಷ್ಟು ತೃಪ್ತಿಕರವಾಗಿಲ್ಲವೆಂಬ ಸೊಲ್ಲು ಈಗಾಗಲೆ ಅಲ್ಲಲ್ಲಿ ಕೇಳಿಸುತ್ತದೆ. ಅದು ಏನೇ ಇರಲಿ, ಆಂಗ್ಲ ಭಾಷೆಗಾಗಿಯೇ ಪ್ರಕಟವಾಗಿರುವ “ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ” (Oxford English Dictionary) ಯ ರೀತಿಯಲ್ಲಿ-ನಿಘಂಟುಗಳಲ್ಲಿ ಅವಶ್ಯವಾಗಿ ಇರಬೇಕಾದ ಶಬ್ದೋತ್ಪತ್ತಿ, ಮೂಲರೂಪಿ, ವಿವಿಧರೂಪ ನಾನಾರ್ಥ ಈ ಸಂಗತಿಗಳಲ್ಲದೆ ಪ್ರತಿಯೊಂದು ಶಬ್ದದ ಬಳಕೆಯ, ಹಾಗೂ ಅರ್ಥ ವ್ಯತ್ಯಾಸದ,  ಸಾಹಿತ್ಯದಲ್ಲಿ ಅದು ಮೊದಲು ಬಳಕೆಗೆ ಬಂದ ಕಾಲ ಹಾಗೂ ಗ್ರಂಥ, ಅದರ ಅರ್ಥದಲ್ಲಿ ಯಾವ ಯಾವ ಕಾಲದಲ್ಲಿ ಯಾವ ಗ್ರಂಥಕರ್ತನ ಬಳಕೆಯು ಪರಿಣಾಮವಾಗಿ ಮಾರ್ಪಾಟು ಆಗಿದೆ.- ಈ ಮುಂತಾದವುಗಳ ಇತಿಹಾಸವನ್ನು ಸೂಚಿಸುವ ನಿಘಂಟುವೆ ನಮಗೆ ಈಗ ಅತ್ಯಾವಶ್ಯಕ. ಈ ಮಹತ್ಕಾರ್ಯಕ್ಕೆ ಬಹುಜನ ವಿದ್ವಾಂಸರ, ಬಹುಭಾಷಾ ಪಂಡಿತರ ಸಹಕಾರವು ಅತ್ಯಂತಾವಶ್ಯಕ.

ಸಂಶೋಧನೆ ಪತ್ರಿಕೆ ಪರಿಷತ್ತಿನ ಗುರಿ ಆಗಲಿ

ಅಧಿಕೃತ ಸಂಶೋಧನೆ ಅಖಿಲ ಕರ್ನಾಟಕ ಸಂಸ್ಥೆಯಾದ ಪರಿಷತ್ತಿನ ಪರವಾಗಿ ನಡೆಯುವುದು ಬಹು ಇಷ್ಟವಾದುದು. ಆದಕಾರಣ ಪರಿಷತ್ತು ಈ ವಿಷಯದಲ್ಲಿ ಸಂಶೋಧನದ ಬೇರೆಬೇರೆ ಶಾಖೆಗಳಲ್ಲಿ ನಿಷ್ಣಾತರಾದ ವಿದ್ವಾಂಸರನ್ನೊಳಗೊಂಡು, ಒಳ್ಳೆಯ ಪ್ರಾತಿನಿಧಿಕವಾದ ಸಂಪಾದಕ ಮಂಡಲವನ್ನು ನಿಯಮಿಸಿ, ಅವರಿಂದ ಒಪ್ಪಿಗೆಯನ್ನು ಪಡೆದಂತಹ ಸಂಶೋಧ ಲೇಖನಗಳಿಗೆ ಮಾತ್ರ ಪರಿಷತ್ತಿನ ಪರವಾಗಿ ಪ್ರಕಟನೆ ದೊರೆಯಬೇಕು. ಇದಕ್ಕಾಗಿ ಪರಿಷತ್ತು ಒಂದು ಪತ್ರಿಕೆಯನ್ನು ಪ್ರತ್ಯೇಕವಾಗಿಯೆ ನಡೆಸಬಹುದು. ಪ್ರತಿಯೊಂದು ಲೇಖನಕ್ಕೂ ತಳಹದಿಯಾದ ಆಧಾರಗಳ ಸಮಗ್ರಪಟ್ಟಿಯನ್ನು ಆಯಾ ಲೇಖನದೊಡನೆ ಸಂಪಾದಕ ಮಂಡಳವು ತರಿಸಿಕೊಳ್ಳಬೇಕು. ಪ್ರಯೋಜನಕಾರಿಯಾದ ಸಂಶೋಧನ ಹೆಚ್ಚಾಗಿ ನಡೆಯುವಂತೆ ಪ್ರೋತ್ಸಾಹವನ್ನು ಕೊಡಬೇಕು.

ಇದೇ ರೀತಿ ಪರಿಷತ್ತು ಹಳಗನ್ನಡದ ಕಾವ್ಯ ಮೊದಲಾದ ಗ್ರಂಥಗಳನ್ನು ಪ್ರಚುರಪಡಿಸಲಿಕ್ಕೂ ಹಳಗನ್ನಡದ ಅಭ್ಯಾಸವನ್ನು ಮುಂದುವರಿಸಲಿಕ್ಕೂ ಬೇರೊಂದು ಪತ್ರಿಕೆಯನ್ನು, ಬೇರೆ ಬೇರೆ ಶಾಖೆಗಳಲ್ಲಿ ತಜ್ಞರಾದ ವಿದ್ವಜ್ಜನರ ಮಂಡಳದ ಅಧೀನತೆಯಲ್ಲಿ ಹೊರಡಿಸುವುದು ಆವಶ್ಯಕ. ಮೇಲ್ಕಂಡ ಎರಡೂ ಉದ್ದೇಶಗಳನ್ನು ಎಂದರೆ ಸಂಶೋಧನ ಹಾಗೂ ಹಳಗನ್ನಡ ಸಾಹಿತ್ಯ ಪ್ರಕಟನೆ ಒಂದೇ ದ್ವಾರ ಸಾಧಿಸಬಹುದು. ಆದರೆ ಆಗ ಪತ್ರಿಕೆಯ ಗಾತ್ರ ಸಾಕಷ್ಟು ದೊಡ್ಡದಾಗಿರುವುದು ಆವಶ್ಯಕ.

ಪರಿಷತ್ತಿನ ಗ್ರಂಥಾಲಯ ಹೇಗಿರಬೇಕು?

ಸಂಶೋಧನಕ್ಕೂ ಅಭ್ಯಾಸಕ್ಕೂ ಅನುಕೂಲವಾಗುವಂತಹ ಉತ್ತಮ ಪುಸ್ತಕಾಲಯವನ್ನು ಸ್ಥಾಪಿಸುವುದು ಅತ್ಯಂತಾವಶ್ಯಕ. ಇಂತಹ ಪುಸ್ತಕಾಲಯದಲ್ಲಿ ಕನ್ನಡದಲ್ಲಿ ಮುದ್ರಿತವಾದ ಎಲ್ಲ ಪುಸ್ತಕಗಳೂ, ವೃತ್ತಪತ್ರಗಳ, ನಿಯತಕಾಲಿಕ ಪತ್ರಿಕೆಗಳ ಪ್ರತಿವರ್ಷದ ಕಟ್ಟುಗಳೂ ಸಂಶೋಧಕರಿಗೂ ಅಭ್ಯಾಸಿಗಳಿಗೂ ದೊರೆಯಬೇಕಲ್ಲದೆ ಬೇರೆಬೇರೆ ಭಾಷೆಗಳ ನಿಘಂಟು, ಕೋಶ ಇನ್ನಿತರ (Reference)  ಉಪಯುಕ್ತ ಗ್ರಂಥಗಳೂ ಶಿಲಾಶಾಸನ ಮೊದಲಾದವುಗಳ ಪ್ರತಿಕೃತಿಗಳೂ ಬೇಕಾದಾಗ ಕೈಗೆ ಸಿಕ್ಕುವಂತಿರಬೇಕು. ಅಲ್ಲದೆ ಹಳೆಯತಾಳೆವೋಲೆಯ ಕೈಬರಹದ ಪ್ರತಿಗಳನ್ನು ಸಂಗ್ರಹಿಸಿ ಸುವ್ಯವಸ್ಥಿತವಾಗಿ ಇಡುವ ಏರ್ಪಾಟು ಇಂತಹ ಪುಸ್ತಕಾಲಯದಲ್ಲಿರಬೇಕು. ಈ ಬಗೆಯ ಪುಸ್ತಕಾಲಯವೊಂದು ಪರಿಷತ್ತಿನ ಮುಖ್ಯ ಕಾರ್ಯಾಲಯದಲ್ಲಿರಬೇಕಲ್ಲದೆ ಕಾಲಾನುಕ್ರಮದಲ್ಲಿ ಕರ್ನಾಟಕದ ಬೇರೆ ಬೇರೆ ಕೇಂದ್ರಗಳಲ್ಲಿಯೂ ಸ್ಥಾಪಿತವಾಗುವ ಗುರಿಯನ್ನು ಇಟ್ಟುಕೊಂಡಿರುವುದು ಒಳ್ಳೆಯದು. ಪರಿಷತ್ತು ಈ ದಿಸೆಯಲ್ಲಿ ಕಾರ್ಯಾರಂಭವನ್ನು ತೀವ್ರವೇ ಮಾಡುವುದು ಯಥಾಯೋಗ್ಯವೆಂಬುದನ್ನು ಇಲ್ಲಿ ನಾನು ಸೂಚಿಸುತ್ತೇನೆ.

ವಿಶ್ವವಿದ್ಯಾಲಯಗಳೊಡನೆ ಸಂಬಂಧ

ಕರ್ನಾಟಕದ ಮತ್ತು ಅದರ ಸುತ್ತಮುತ್ತಲು ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯಗಳೊಡನೆ ಪರಿಷತ್ತು ಆದಷ್ಟು ನಿಕಟವಾದ ಸಂಬಂಧವನ್ನು ಇಟ್ಟುಕೊಳ್ಳುವುದು ಹಿತಕರ. ಇದರಿಂದ ಆಯಾ ಸಂಸ್ಥೆಗಳಲ್ಲಿ ಕನ್ನಡ ಹಾಗೂ ದ್ರಾವಿಡ ಭಾಷೆಗಳನ್ನು ಕುರಿತು ನಡೆಯುತ್ತಿರುವ ಅಭ್ಯಾಸ, ಸಂಶೋಧನ ಇವುಗಳ ಲಾಭವನ್ನು ಪಡೆದುಕೊಳ್ಳಬಹುದಲ್ಲದೆ ಅಲ್ಲಲ್ಲಿ ಗೋಚರವಾಗಬಹುದಾದ ಕೊರತೆಗಳನ್ನು ಪೂರೈಸಲು ಸಾಧ್ಯವಾಗಬಹುದು. ಇದೇ ರೀತಿ ಇನ್ನಿತರ ಪ್ರಾಂತೀಯ ಪರಿಷತ್ತುಗಳೊಡನೆ ಪರಸ್ಪರ ಸಂಬಂಧವನ್ನು ಬೆಳೆಸಿಕೊಳ್ಳುವುದು ಪರಿಷತ್ತಿಗೆ ಲಾಭಕರವಾಗುವುದರಲ್ಲಿ ಸಂದೇಹವಿಲ್ಲ.

ಸಮ್ಮೇಳನದ ಕಾರ್ಯಕ್ರಮಗಳು ಹೇಗಿರಬೇಕು

ಇದುವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳೆಲ್ಲ ಒಂದು ಸಂಪ್ರದಾಯಾನುಸಾರವಾಗಿ ಜರುಗಿದೆ. ಮೂರು ದಿನಗಳ ಒಂದು ಅವಧಿಯಲ್ಲಿ ಮುಖ್ಯ ಸಮ್ಮೇಳನಕ್ಕಾಗಿ ಕೆಲಕಾಲ, ಸಮ್ಮೇಳನದ ಅಂಶಗಳೆಂದು ಸಾಹಿತ್ಯ ಮಹಿಳಾ ಮುಂತಾದ ಗೋಷ್ಠಿಗಳಿಗಾಗಿ ಕೆಲಕಾಲ, ಆ ಬಳಿಕ ಮನರಂಜನೆ ಜನರಂಜನೆಗಳ ಕಾರ್ಯಕ್ರಮಕ್ಕಾಗಿ ಉಳಿದಕಾಲ-ಹೀಗೆ ವಿನಿಯೋಗವಾಗುತ್ತಿರುವುದು ಸಾಮಾನ್ಯವಾಗಿದೆ. ಸಮ್ಮೇಳನದ ಅಂಗವೆಂದು ಜರುಗುವ ಗೋಷ್ಠಿ ಯಾವುವು ಹಾಗೂ ಎಷ್ಟು ಎಂಬುದು ಸಮ್ಮೇಳನವನ್ನು ಜರುಗಿಸುವ ಸ್ವಾಗತ ಸಮಿತಿಯವರ ಅನುಕೂಲತೆಯನ್ನೇ ಅವಲಂಬಿಸುತ್ತಿದೆ. ಅಲ್ಲದೆ, ಒಮ್ಮೆ ಕವಿಗೋಷ್ಠಿ ಜರುಗಿದರೆ ಇನ್ನೊಮ್ಮೆ ಅದಕ್ಕೂ ವಿಸ್ತಾರವಾದ ಸಾಹಿತ್ಯಗೋಷ್ಠಿ ಜರುಗುವುದುಂಟು. ಒಮ್ಮೆ ನಾಟಕ ಗೋಷ್ಠಿ ಪ್ರತ್ಯೇಕವಾಗಿ ಜರುಗಿದ್ದರೆ ಮುಂದೆ ಕೆಲವರ್ಷ ಆ ಗೋಷ್ಠಿಯ ಸ್ಮರಣೆ ಸಹ ಇಲ್ಲದಂತಾಗುವುದೂ ಉಂಟು. ಹೀಗೆ ವರ್ಷದಿಂದ ವರ್ಷಕ್ಕೆ ಗೋಷ್ಠಿಗಳ ಸ್ವರೂಪ, ಕ್ಷೇತ್ರ, ಸಂಖ್ಯೆಗಳಲ್ಲಿ ಹೆಚ್ಚು ಕಡಮೆ ಇರುವುದರಿಂದ ಒಟ್ಟಿನಲ್ಲಿ ಅನಿಶ್ಚಿತತೆಯುಂಟಾಗುವುದಲ್ಲದೆ, ಒಂದು ಸಲ ಗೋಷ್ಠಿಯಿಂದ ಮುಂದಿನ ಸಲದ ಅದೇ ಗೋಷ್ಠಿಗೆ ಇರಬೇಕಾದ ಏಕಸೂತ್ರತೆಯಾಗಲಿ ಕಾರ್ಯಕಲಾಪದಲ್ಲಿ ತೋರಬೇಕಾದ ಪ್ರಗತಿಯಾಗಲಿ ಇಲ್ಲದಂತಾಗುವುದು ಸಹಜವಿದೆ. ಇದೂ ಅಲ್ಲದೆ, ಇಡಿಯ ಸಮ್ಮೇಳನ ಕಾರ್ಯಕ್ರಮವನ್ನು ವಿವೇಚಿಸಿದರೆ ಅದೊಂದು ಮೂರು ದಿನದ ಜಾತ್ರೆಯಂತೆ ತೋರುವುದೇ ಹೆಚ್ಚು ಸಂಭವವಲ್ಲದೆ ಶಾಶ್ವತವಾದ ಕಾರ್ಯಕ್ರಮವಾಗುವುದು ಅಪರೂಪವೆಂದೇ ಹೇಳಬೇಕಾಗುವುದು. ಪ್ರಚಾರ ದೃಷ್ಟಿಯಿಂದ ಈಗಿನ ಒಟ್ಟಿನಲ್ಲಿಯ ಕಾರ್ಯಕ್ರಮ ಯಥಾರ್ಥವಾದುದೇ ಆದರೆ ಸಮ್ಮೇಳನವು ಜನ್ಮತಾಳಿ ಮೂವತ್ತು ವರ್ಷವಾದುದರಿಂದ, ಇನ್ನು ಮುಂದೆ ಕಾರ್ಯಭಾಗವನ್ನು ಕೊಂಚ ಹೆಚ್ಚು ಮಾಡುವುದು ವಿಹಿತವೆನಿಸಬಹುದು. ಈಗಿನಂತೆ ಮುಂದೆಯೂ ಮನರಂಜನೆಯ ಕಾರ್ಯಕ್ರಮಗಳನ್ನು ಸಾಯಂಕಾಲದ ಮೇಲೆ ಪ್ರತಿದಿನವೂ ಇಟ್ಟುಕೊಳ್ಳಲು ಸಾಧ್ಯವಿದೆ. ಆದರೆ ಸಾಹಿತ್ಯ ಮೊದಲಾದ ಗೋಷ್ಠಿಗಳನ್ನು ಸಮ್ಮೇಳನದ ಅಂಗಗಳೆಂದು ಪ್ರತ್ಯೇಕವಾಗಿ ಇಟ್ಟುಕೊಳ್ಳದೆ ಸಮ್ಮೇಳನವನ್ನೇ ಆಯಾ ಶಾಖೆಗಳಿಗಾಗಿ-ಪ್ರಾಚ್ಯ ಸಮ್ಮೇಳನದಂತೆ- ಒಡೆಯುವುದು ಹೆಚ್ಚು ಫಲಕಾರಿಯಾಗಬಹುದಾಗಿದೆ. ಲೇಖಕರ ಗೋಷ್ಠಿ, ವೃತ್ತಪತ್ರಿಕಾ  ಗೋಷ್ಠಿ, ನಾಟ್ಯ ಗೋಷ್ಠಿ, ಮಹಿಳಾ ಗೋಷ್ಠಿ, ಸಂಶೋಧನ ವಿಭಾಗ, ಭಾಷಾಶಾಸ್ತ್ರ ವಿಭಾಗ, ಪಾರಿಭಾಷಿಕ ಶಬ್ದರಚನೆಗಾಗಿ ಒಂದು ವಿಭಾಗ-ಈ ರೀತಿಯಾಗಿ ಸಾಹಿತ್ಯದ ಯಾವ ಮಹತ್ತ್ವದ ಶಾಖೆಗೆ ಬೇರೆ ಸಂಸ್ಥೆಗಳಿಲ್ಲವೋ ಅವುಗಳಿಗೆಲ್ಲ ಇಲ್ಲಿ ಎಡೆ ಇಡಬೇಕು. ಈ ಎಲ್ಲ ವಿಭಾಗಗಳು ಮೊದಲೆ ನಿಯೋಜಿತರಾದ ಶಾಖಾಧ್ಯಕ್ಷರ ಅಧೀನದಲ್ಲಿ ನಡೆಯಬೇಕು. ಈ ದೃಷ್ಟಿಯಿಂದ ಸಮ್ಮೇಳನವನ್ನು ಯಾವ ಯಾವ ಶಾಖೆಯಾಗಿ ವಿಭಾಗಿಸಬೇಕೆಂಬುದನ್ನು ತಜ್ಞ, ಉಪಮಂಡಲದ ಸಲಹೆಯ ಮೇಲೆ ನಿರ್ಣಯಿಸಬೇಕು. ವರ್ಷ ವರ್ಷವೂ ಅದೇ ಶಾಖೆಗಳು ಜರುಗುತ್ತಿರಬೇಕು; ಕಾರಣವಿಲ್ಲದೆ ಬದಲಿಸಬಾರದು. ಈ ಎಲ್ಲ ವಿಭಾಗಗಳ ವಿಚಾರದ ಫಲವಾಗಿ, ಅಲ್ಲದೆ ಪ್ರತ್ಯೇಕವಾಗಿಯೂ, ಅವಶ್ಯವೆನಿಸುವ ನಿರ್ಣಯಗಳು ಸಮ್ಮೇಳನದ ಸಮಗ್ರ ಅಧಿವೇಶನದಲ್ಲಿ ಕೊನೆಗೆ ಅಂಗೀಕೃತವಾಗತಕ್ಕದ್ದು. ಪ್ರತಿ ವರ್ಷ ಈ ಶಾಖೆಗಳಲ್ಲಿ ಜರುಗುವ ಕಾರ್ಯಕಲಾಪದ ಸಂಪೂರ್ಣ ವರದಿಯೊಂದಿಗೆ ಅವುಗಳಲ್ಲಿ ಸ್ವೀಕೃತವಾಗುವ ಪಂಡಿತರ, ಸಂಶೋಧಕರ, ತಜ್ಞರ ವಿದ್ವತ್ಪೂರ್ಣವಾದ ಲೇಖನಗಳೊಂದಿಗೆ ಇಡಿಯ ಸಮ್ಮೇಳನದ ಸಂಪೂರ್ಣ ವರದಿ ಮುದ್ರಿತವಾಗತಕ್ಕದ್ದು. ಈ ಬಗೆಯ ನೂತನ ಸಂಪ್ರದಾಯ ಬಹು ಫಲಕಾರಿಯಾಗಬಹುದೆಂದು ತೋರುತ್ತದೆ. ಹೀಗೆ ನಿಶ್ಚಿತವಾದ ಕಾರ್ಯಕ್ರಮವಲ್ಲದೆ ಅವಶ್ಯಕಂಡಾಗ ಬೇರೆ ತಾತ್ಪೂರ್ತಿಕ ಗೋಷ್ಠಿಗಳನ್ನು ಸಮ್ಮೇಳನದ ಅಂಗವಾಗಿ ಜರುಗಿಸಬಹುದು. ಈ ಸಂದರ್ಭದಲ್ಲಿ ”ಹಿಂದೀ” ಸಾಹಿತ್ಯ ಸಮ್ಮೇಳನದವರು ವಿಜ್ಞಾನ ಗೋಷ್ಠಿ, ಸಮಾಜಶಾಸ್ತ್ರ್ರ ಗೋಷ್ಠಿಗಳನ್ನು ನೆಡೆಸುತ್ತಿರುವುದು ಅನುಕರಣೀಯವಾಗಿದೆಯೆಂದು ಹೇಳಬಹುದು. ಈ ಸಲ ಅವರು ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವುದಕ್ಕೆಂದು ಒಂದು ಸ್ವತಂತ್ರ ಗೋಷ್ಠಿಯನ್ನೇ  ಶ್ರೀ ಕೆ.ಎಂ. ಮುನಿಷಿಯವರ ಅಧ್ಯಕ್ಷತೆಯಲ್ಲಿ ನೆರವೇರಿಸಿದುದು ತಮ್ಮೆಲ್ಲರಿಗೆ ಗೊತ್ತಿರಬಹುದು.

ಸಂಗೀತ ಗೋಷ್ಠಿ ಮತ್ತು ಪರಿಷತ್ತು

ನಮ್ಮ ದೇಶದಲ್ಲಿ ಸಂಗೀತ ಗೋಷ್ಠಿಗಳು ಪ್ರತ್ಯೇಕವಾಗಿ ನಡೆಯುತ್ತಿಲ್ಲವಾದುದರಿಂದ ಇನ್ನು ಮುಂದೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಗೀತಗೋಷ್ಠಿ ಜರುಗುವುದು ವಿಹಿತವೆನಿಸುತ್ತಿದೆ. ಇಂತಹ ಗೋಷ್ಠಿಗಳಲ್ಲಿ ಸಂಗೀತಕ್ಕೂ ಸಾಹಿತ್ಯಕ್ಕೂ ಇರಬೇಕಾದ ಸಂಬಂಧವನ್ನು ತಾತ್ತ್ವಿಕವಾಗಿ ಶಾಸ್ತ್ರೀಯವಾಗಿ ಚರ್ಚಿಸಲು ಅನುಕೂಲವಾಗುವುದಲ್ಲದೆ, ಉತ್ತರ ಹಾಗೂ ದಕ್ಷಿಣದ ಸಂಗೀತ ರೀತಿಗಳ ಸಂಬಂಧ, ಸಮನ್ವಯ ಮುಂತಾದವುಗಳನ್ನು ಅಭ್ಯಾಸಿಸಲೂ ಅನುಕೂಲವಾಗಬಹುದು. ಕೀರ್ತನ ಕಲೆಗೂ ಯೋಗ್ಯ ಪ್ರೋತ್ಸಾಹ ದೊರೆಯುವುದಕ್ಕೆ ಇದು ಸಹಾಯಕವಾಗಬಹುದು. ಮೇಲಾಗಿ ಪ್ರತ್ಯಕ್ಷ ಸಂಗೀತ ಸುಧೆಯನ್ನೀಂಟುವ ಸುಸಂಧಿಯು ಇದರಿಂದ ಉಂಟಾಗುವುದೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

Tag: Kannada Sahitya Sammelana 28, S.S. Basavanala

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)