ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ
ಮೇ ೧೯೪೭

ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ

ck-venkataramaiah

0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಸಿ. ಕೆ. ವೆಂಕಟರಾಮಯ್ಯ

ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ ೧0-೧೨-೧೮೯೬ರಲ್ಲಿ ಜನಿಸಿದರು. ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು.  ಮುಂಬೈಗೆ ಹೋಗಿ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು.

ಶ್ರೀರಂಗಪಟ್ಟಣದಲ್ಲಿ ವಕೀಲಿ ನಡೆಸಿದರು. ೧೯೨೪ರಲ್ಲಿ ಮೈಸೂರು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಸೇರಿ ೩0 ವರ್ಷಗಳ ಕಾಲ ನಿಸ್ಪೃಹಸೇವೆ ಸಲ್ಲಿಸಿ ನಿವೃತ್ತರಾದರು.

ಇವರು ಮಾತಿನಲ್ಲಿ ಮೋಡಿ ಮಾಡಬಲ್ಲ ವಾಗ್ಮಿಗಳಾಗಿದ್ದರು. ಬರಹದಲ್ಲಿ ಸರಳವಾಗಿ ಜನಮೆಚ್ಚುಗೆ ಪಡೆಯುವ ಗ್ರಂಥಗಳನ್ನು  ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಿಕೆವೆಂ ೧೯೩೬-೧೯೩೭ ಮತ್ತು ೧೯೩೮-೧೯೪0ರ ಅವಧಿಗಳಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು. ೫ ವರ್ಷಗಳ ಕಾಲ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು.

ಇವರ ನಿಸ್ಪೃಹ ಸೇವೆಯನ್ನು ಗೌರವಿಸಿ ಮೈಸೂರು ಮಹಾರಾಜರು ರಾಜ ಸೇವಾ ಪ್ರಸಕ್ತ ಬಿರುದನ್ನು ಇತ್ತಿದ್ದರು. ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ರಾಜ್ಯ ಸಾಹಿತ್ಯ ಅಕಾಡೆಮಿ ೧೯೭0ರಲ್ಲಿ ಇವರಿಗೆ ಗೌರವ ಪ್ರಶಸ್ತಿ ಸಲ್ಲಿಸಿತು. ೧೯೪೭ರಲ್ಲಿ ಹರಪನಹಳ್ಳಿಯಲ್ಲಿ ೩0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೭೧ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು.

ಭಾಷಣಗಳಿಂದ ಪ್ರಖ್ಯಾತರಾದ ಸಿ. ಕೆ. ವೆಂಕಟರಾಮಯ್ಯನವರು ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ನಾಟಕ, ಸಣ್ಣಕತೆ, ಜೀವನಚರಿತ್ರೆಗಳಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕೃತಿಗಳು ಹೀಗಿವೆ:

ಹಳ್ಳಿಯ ಕಥೆಗಳು, ಮಂಡೋದರಿ (ನಾಟಕ)

ತುರಾಯಿ (ಕಥೆಗಳು), ನಚಿಕೇತ (ನಾಟಕ)

ಬುದ್ಧ (ಜೀವನಚರಿತ್ರೆ), ಆಳಿದ ಮಹಾಸ್ವಾಮಿಯವರು (ಜೀವನ ಚರಿತ್ರೆ)

ಪೈಗಂಬರ್ (ಜೀವನ ಚರಿತ್ರೆ), ಹರ್ಷವರ್ಧನ (ಜೀವನಚರಿತ್ರೆ) ಇತ್ಯಾದಿ

ಜನಪ್ರಿಯ ಸಾಹಿತಿಗಳೂ ವಿದ್ವಾಂಸರೂ ಆಗಿದ್ದ  ಸಿ. ಕೆ. ವೆಂಕಟರಾಮಯ್ಯನವರು ೩-೪-೧೯೭೩ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ0

ಅಧ್ಯಕ್ಷರು, ಸಿ.ಕೆ. ವೆಂಕಟರಾಮಯ್ಯ

ದಿನಾಂಕ ೭, , ಮೇ ೧೯೪೭

ಸ್ಥಳ : ಹರಪನಹಳ್ಳಿ, ಬಳ್ಳಾರಿ

 

ಪರಿಷತ್ತಿನಿಂದ ನಡೆಯಬೇಕಾದ ಕಾರ್ಯಗಳು

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದುದೇ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಿ, ಕನ್ನಡಿಗರಲ್ಲಿ ಭಾಷಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಅದು ಸ್ಥಾಪಿತವಾದಾಗಿನಿಂದ ಇದುವರೆಗೂ ಆ ಉದ್ದೇಶಸಾಧನೆಗಾಗಿ ಅದರಿಂದ ಯಥಾಶಕ್ತಿಯಾಗಿ ಸೇವೆ ಸಲ್ಲುತ್ತಾ ಬಂದಿದೆ. ಪರಿಷತ್ತಿನ ಸಂಬಂಧವಾಗಿ ಅನೇಕ ಮಂದಿ ಸಾಹಿತ್ಯ ಪ್ರೇಮಿಗಳು ಶ್ರದ್ಧಾಸಕ್ತಿಗಳಿಂದ ಕೆಲಸ ಮಾಡಿಯೂ ಕೆಲಸ ಮಾಡುತ್ತಲೂ ಬಂದಿದ್ದಾರೆ. ಕನ್ನಡಿಗರ ಹೃದಯದಲ್ಲಿ ಇಂದು ಕನ್ನಡದ ಮೆಲೆ ಮಮತೆಯೇನಾದರೂ ಹುಟ್ಟಿದ್ದರೆ, ಅದಕ್ಕೆ ಮೂಲ ಕಾರಣಗಳಿಂದ ಪ್ರೇರಣೆಗಳಲ್ಲಿ ಪರಿಷತ್ತಿನ ಸೇವೆಯೂ ಮುಖ್ಯವಾದವುಗಳಲ್ಲೊಂದೆಂದು ಧಾರಾಳವಾಗಿ ಹೇಳಬಹುದಾಗಿದೆ.

ನಾಡಿನ ಜನರೆಲ್ಲಾ ಸದಸ್ಯರಾಗಬೇಕು

ಪರಿಷತ್ತಿಗೆ ಮಹಾಜನರಿಂದ ಎಷ್ಟರಮಟ್ಟಿಗೆ ಪ್ರೋತ್ಸಾಹವೂ ಸಹಾಯವೂ ದೊರೆಯುವುದು ಆವಶ್ಯಕವೋ ಅಷ್ಟರಮಟ್ಟಿಗೆ ಅವು ದೊರೆತಿಲ್ಲ. ಅದರ ಸದಸ್ಯ ಸಂಪತ್ತು ಇನ್ನೂ ೨,೫00ಕ್ಕಿಂತ ಹೆಚ್ಚಾಗಿಲ್ಲದಿರುವುದು ನಿಜವಾಗಿಯೂ ಶೋಚನೀಯವಾಗಿದೆ. ಈ ಅಲ್ಪಸಂಖ್ಯೆಯ ಸದಸ್ಯರಲ್ಲಿ ತಾವು ಕೊಡಬೇಕಾದ ಹಣವನ್ನು ಪೂರ್ತಿಯಾಗಿ ಸಲ್ಲಿಸಿರತಕ್ಕವರ ಸಂಖ್ಯೆಯು ತೀರ ಕಡಿಮೆ. ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರ ಸರ್ಕಾರದವರ ಉದಾರಾಶ್ರಯವೂ ಸಹಾಯವೂ ಇಲ್ಲದೆ ಹೋಗಿದ್ದರೆ ಪರಿಷತ್ತಿನಿಂದ ಈಗ ನಡೆಯುತ್ತಿರುವಷ್ಟು ಭಾಷಾಸೇವೆಯು ನಡೆಯುವುದಕ್ಕೂ ಅವಕಾಶವಿರುತ್ತಿರಲಿಲ್ಲ. ಒಟ್ಟು ಒಂದೂವರೆ ಕೋಟಿಗಿಂತಲೂ ಹೆಚ್ಚು ಮಂದಿ ಕನ್ನಡಿಗರಿರುವ ನಾಡಿನಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ೨,೨೫೫ ಕ್ಕಿಂತ ಹೆಚ್ಚಾಗಿಲ್ಲದಿರುವುದು ವಿಷಾದಕರವಾಗಿದೆ. ಒಂದು ಲಕ್ಷಮಂದಿಗಳಾದರೂ ಪರಿಷತ್ತಿನ ಸದಸ್ಯರಾಗಕೂಡದೆ?

ಹಳ್ಳಿಗಳತ್ತ ಪರಿಷತ್ತು ಸಾಗಬೇಕು

ಭರತಖಂಡದಲ್ಲಿ ಸ್ವಾತಂತ್ರ್ಯದ ಸುವರ್ಣಯುಗವು ಮುಂದಿನ ವರ್ಷದಿಂದ ಪ್ರಾರಂಭವಾಗುತ್ತದೆ. ಪ್ರಪಂಚದ ನಾನಾ ಜನಾಂಗಗಳ ಜೊತೆಯಲ್ಲಿ ಭಾರತೀಯರೂ ಸಮಾನಸ್ಕಂಧರಾಗಿ ತಲೆಯೆತ್ತಿ ನಿಂತು ಒಟ್ಟು ಮಾನವ ವರ್ಗದ ಶ್ರೇಯಸ್ಸಿಗೇ ಸಾಧಕವಾಗುವಂತೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಬೇಕಾಗಿದೆ. ಅದಕ್ಕೆ ಸಹಾಯವಾಗುವಂತೆ ಕನ್ನಡಿಗರೂ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸಬೇಕು. ಅದು ಕೇವಲ ಚಪ್ಪಾಳೆಗಳಿಂದಾಗಲಿ ಜಯಕಾರಗಳಿಂದಾಗಲಿ ಸಾಗುವಂತಿಲ್ಲ; ಕಲಹಗಳಿಂದಲಂತೂ ಅದು ಸುತರಾಂ ಸಾಗಲಾರದು ಅದು ಸಮರ್ಪಕವಾಗಿ ಸಾಗಬೇಕಾದರೆ ಅಪಾರವಾದ ಶಕ್ತಿ ಸಾಮರ್ಥ್ಯಗಳು ವೃದ್ಧಿಯಾಗಿ ಅವುಗಳೆಲ್ಲ ಒಮ್ಮುಖವಾಗಿ ರಚನಾತ್ಮಕವಾದ ಕ್ರಿಯಾ ಮಾಧುರ್ಯದ ಕಡೆಗೆ ತಿರುಗಬೇಕು. ಹಾಗಾಗುವುದಕ್ಕೆ ಜ್ಞಾನಾಭಿವೃದ್ಧಿಯೇ ಮೂಲಾಧಾರ. ಅಜ್ಞಾನದ ಅಂಧಕಾರದಲ್ಲಿ ತತ್ತರಿಸುತ್ತಿರುವ ಹಳ್ಳಿಹಳ್ಳಿಗೂ ಊರೂರಿಗೂ, ಸುಜ್ಞಾನದ ರತ್ನದೀಪಗಳನ್ನೊದಗಿಸುವ ದೊಡ್ಡ ಸಂಸ್ಥೆಯೊಂದು ಸಿದ್ಧವಾಗಬೇಕು. ನಮ್ಮ ಪರಿಷತ್ತು ಆ ದೊಡ್ಡ ಸಂಸ್ಥೆಯಾಗಿ ಪರಿಣಮಿಸಬೇಕೆಂಬುದು ನನ್ನ ಹಿರಿಯ ಬಯಕೆ. ನಮ್ಮ ಪರಿಷತ್ತು ಜನತೆಯ ವಿಶ್ವವಿದ್ಯಾನಿಲಯವಾಗಬೇಕೆಂಬುದು ನನ್ನ ತೀವ್ರಾಭಿಲಾಷೆ.

ಪುಸ್ತಕ ಪ್ರಕಟನೆ ಕೆಲಸ

ಮೊದಲನೆಯದಾಗಿ ಪುಸ್ತಕ ಪ್ರಕಟನೆಯ ಕೆಲಸ: ಪರಿಷತ್ತಿನಿಂದ ಪ್ರೌಢವಾದ ಗ್ರಂಥಗಳೂ ಪ್ರಕಟವಾಗಬೇಕು; ಅಲ್ಲದೆ ನಾನಾ ವಿಚಾರಗಳಲ್ಲಿ ತಿಳಿವಳಿಕೆಯನ್ನು ಹೆಚ್ಚಿಸುವಂತೆ ತಿಳಿಗನ್ನಡದಲ್ಲಿ ಬರೆದ ಸುಲಭಬೆಲೆಯ ಚಿಕ್ಕ ಚಿಕ್ಕ ಪುಸ್ತಕಗಳೂ ಪ್ರಕಟವಾಗಬೇಕು. ಸಾಧ್ಯವಾದಲ್ಲಿ ಓಲೆಯಗರಿ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸವೂ ಮತ್ತು ಸಂಶೋಧನೆಯ ಕೆಲಸವೂ ನಡೆಯಬೇಕು. ವಿಶ್ವವಿದ್ಯಾನಿಲಯವೇ ಮುಂತಾದ ಸಂಸ್ಥೆಗಳಿಂದಲೂ, ಅನೇಕ ಗ್ರಂಥಮಾಲೆಗಳು ಮತ್ತು ಪ್ರಕಟನಮಂದಿರಗಳಿಂದಲೂ ಈ ಕೆಲಸವು ಈಗ ನಡೆಯುತ್ತಿರುವುದು ನಿಜ; ಅದು ಅಭಿನಂದನಯೋಗ್ಯವೂ ಹೌದು.  ಆದಾಗ್ಯೂ, ಈಗ ನಡೆದಿರುವ ಕೆಲಸವು ಸಾಸಿವೆಯಷ್ಟು ಮಾತ್ರ; ನಡೆಯಬೇಕಾಗಿರುವ ಕೆಲಸವು ಬೆಟ್ಟದಷ್ಟಿದೆ. ಪ್ರೌಢವಾದ ಗ್ರಂಥರಚನೆ ಮಾಡಲು ಬಹುಮಾನಗಳನ್ನು ಸಲ್ಲಿಸಬೇಕು. ಬಹುಮಾನದ ಮೊತ್ತವು  ಸಾವಿರ ರೂಪಾಯಿಗಳಿಗೆ ಕಡಮೆಯಾಗಿರಬಾರದು; ದ್ರವ್ಯಾನುಕೂಲತೆಗೆ ತಕ್ಕಂತೆ ಬಹುಮಾನದ ಮೊಬಲಗೂ, ಬಹುಮಾನಗಳ ಸಂಖ್ಯೆಯೂ ಇರಬಹುದು. ಬಹುಮಾನದ ಮೊಬಲಗು ಎಷ್ಟು ಹೆಚ್ಚಾಗಿದ್ದರೆ ಅಷ್ಟು ಉತ್ತಮ. ಸ್ಪರ್ಧೆಗೆ ಬಂದ ಗ್ರಂಥಗಳಲ್ಲಿ ಉತ್ತಮವಾದವುಗಳಿಗೆ ಬಹುಮಾನಗಳನ್ನು ಕೊಡುತ್ತಾ ಬಂದಷ್ಟೂ ಶ್ರೇಷ್ಠವಾದ ಗ್ರಂಥಗಳು ಹೊರಬೀಳಲು ಅನುಕೂಲಿಸುತ್ತವೆ. ಪ್ರಕಟವಾದ ಗ್ರಂಥಗಳಲ್ಲಿ ಉತ್ತಮವಾದವುಗಳಿಗೆ ಈಗ ಬಹುಮಾನಗಳನ್ನು ಕೊಡುತ್ತಿರುವುದು ಸರಿಯಷ್ಟೆ. ಅದರ ಜೊತೆಗೆ ಈ ಸ್ಪರ್ಧೆಯು ಪ್ರೌಢಗ್ರಂಥಗಳ ಸಲುವಾಗಿ ಮಾತ್ರವೇ ನಡೆಯುತ್ತ ಬರಬೇಕೆಂಬುದು ನನ್ನ ಸಲಹೆ. ಉಪಯುಕ್ತವಾದ ವಿಚಾರಗಳನ್ನು ಕುರಿತು ಬರೆದ ಸಣ್ಣಸಣ್ಣಪುಸ್ತಕಗಳನ್ನು ಪ್ರಕಟಿಸುವ ಕೆಲಸವೂ ಅತ್ಯಾವಶ್ಯವಾಗಿದೆ; ಮುಖ್ಯವಾಗಿ ವಿಜ್ಞಾನ ವಿಚಾರಗಳಿಗೂ ಜನಜೀವನಕ್ಕೆ ಸಂಬಂಧಪಟ್ಟ ಇತರ ವಿಚಾರಗಳಿಗೂ ಗಮನಕೊಟ್ಟು ಆ ಬಗೆಯ ಪುಸ್ತಕಗಳನ್ನೂ ಪ್ರಕಟಿಸಬೇಕು. ಹಾಗೆ ಪ್ರಕಟಿಸುವ ಪುಸ್ತಕಗಳಿಂದ ಜನತೆಗೆ ಬಹಳ ಪ್ರಯೋಜನವಾಗುತ್ತದೆ. ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಶ್ರೇಷ್ಠವಾದ ಅನೇಕ ಸಾಹಿತ್ಯ ಕೃತಿಗಳು ಹೊರಬಿದ್ದಿವೆಯೆಂಬುದನ್ನೂ ಸೊಗಸಾದ ಕವಿತೆಗಳೂ, ಕಥೆಗಳೂ, ನಾಟಕಗಳೂ, ಹಾಸ್ಯ ಪ್ರಬಂಧಗಳೂ, ಹರಟೆಗಳೂ, ಕಾದಂಬರಿಗಳೂ ಪ್ರಕಟವಾಗಿರುವುದನ್ನೂ ನಾನು ಸಂತೋಷದಿಂದ ಒಪ್ಪುತ್ತೇನೆ. ಆದರೂ, ಸೊಬಗಿನ ಸಾಹಿತ್ಯವು ವೃದ್ಧಿಯಾಗಿರುವ ಮಟ್ಟಿಗೆ ಸಂಗತಿಗಳನ್ನು ತಿಳಿಸುವ ಸಾಹಿತ್ಯವು ವೃದ್ಧಿಯಾಗಿಲ್ಲ. ಅಡಿಗೆಯ ಸಾಮಾನುಗಳಾದ ಅಕ್ಕಿ ಬೇಳೆ ಮುಂತಾದ ಸಾಮಗ್ರಿಗಳನ್ನು ತೀರ ಅಲ್ಪಸ್ವಲ್ಪವಾಗಿ ಸಂಗ್ರಹಿಸಿ, ಲೆಕ್ಕವಿಲ್ಲದಷ್ಟು ಬೆಳ್ಳಿಯ ತಟ್ಟೆಗಳಲ್ಲಿ ಚಿಗುರು ವೀಳೆಯಗಳನ್ನು ಸಿದ್ಧಪಡಿಸಿದ ಮದುವೆ ಮನೆಯಂತಿದೆ, ನಮ್ಮ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿ. ಇದು ತಪ್ಪುವಂತೆ ಸ್ವತಂತ್ರವಾದ ಗ್ರಂಥಗಳೂ, ಇತರ ಭಾಷೆಗಳಿಂದ ಅನುವಾದ ಮಾಡಿದ ಗ್ರಂಥಗಳೂ ಪ್ರಕಟವಾಗುವ ಕೆಲಸ ನಡೆಯಬೇಕು.

ಕಲಾ ಸಾಹಿತ್ಯ  ಪ್ರಚಾರ ಕಾರ್ಯ

ಎರಡನೆಯದಾಗಿ, ಪ್ರಚಾರ ಕಾರ್ಯ ವಿಚಾರ. ಪರಿಷತ್ತಿನ ಆಶ್ರಯದಲ್ಲಿ ಕನ್ನಡ ನಾಡಿನ ಎಲ್ಲ ಪ್ರದೇಶಗಳಿಗೂ ಉಪನ್ಯಾಸಕರೂ, ಗಮಕಿಗಳೂ ಸಾಧ್ಯವಾದಲ್ಲಿ ಸಂಗೀತಗಾರರೂ ಮತ್ತು ಕೀರ್ತನಕಾರರೂ ಹೋಗಿ ಸೇವೆ ಸಲ್ಲಿಸುವಂತಾಗಬೇಕು. ಪರಿಷತ್ತಿನಲ್ಲಿ ವರ್ಷದಲ್ಲಿ ನಡೆಯಬೇಕಾದ ಉಪನ್ಯಾಸಗಳೇ ಮುಂತಾದ ಕಾರ್ಯಕಲಾಪಗಳ ಮತ್ತು ವ್ಯಾಸಂಗಗೋಷ್ಠಿ ಮುಂತಾದ ವಿಶೇಷ ಕಾರ್ಯಗಳ ಪಂಚಾಂಗವನ್ನು ಮೊದಲೇ ಸಿದ್ಧಗೊಳಿಸಬೇಕು. ಕಾವ್ಯವಾಚನಗಳು, ನಾಟಕ ಪ್ರದರ್ಶನಗಳು, ಸಂಗೀತಗಳು ಮುಂತಾದವುಗಳು ಈಗ ನಡೆಯುತ್ತಿರುವುದಕ್ಕಿಂತ ಹೆಚ್ಚಾಗಿ ನಡೆಯುಬೇಕು. ಪಂಪ ಜಯಂತಿ, ರನ್ನ ಜಯಂತಿ, ತ್ಯಾಗರಾಜ ಜಯಂತಿ, ಶಂಕರ ಜಯಂತಿ, ರಾಮಾನುಜ ಜಯಂತಿ, ಬಸವ ಜಯಂತಿ, ಮಧ್ವ ಜಯಂತಿ, ವಿದ್ಯಾರಣ್ಯ ಜಯಂತಿ, ಮುಂತಾದವುಗಳು ನಡೆಯಬೇಕು.  ವಸಂತ ಸಾಹಿತ್ಯೋತ್ಸವ, ನಾಡಹಬ್ಬ ಮುಂತಾದವುಗಳೂ ನಡೆಯಬೇಕು. ಕನ್ನಡ ನಾಡಿನ ನಾನಾ ಸಂಸ್ಥೆಗಳೂ ಪರಿಷತ್ತಿನ ಅಂಗಸಂಸ್ಥೆಗಳಾಗಿ ಸೇರಿ ಸಹಕರಿಸಿ ತಮ್ಮ ತಮ್ಮ ಊರುಗಳಲ್ಲಿಯೂ ಇವುಗಳೆಲ್ಲ ನಡೆದು ಜ್ಞಾನಪ್ರಚಾರವಾಗುವಂತೆ ಮಾಡಬೇಕು. ಈ ಬಗೆಯ ಉತ್ಸವ ಕಾಲಗಳಲ್ಲಿ ನಡೆದ ಭಾಷಣಗಳೆಲ್ಲ ಗಾಳಿಗೆ ಹೋಗದಂತೆ ಅವುಗಳನ್ನು ಆ ಆ ಸಂಸ್ಥೆಗಳು ಪ್ರಕಟಿಸುವ ಕೆಲಸವೂ ನಡೆಯಬೇಕು. ಸರ್ಕಾರದವರ ಸಹಾಯದಿಂದಲೂ, ಸ್ಥಳೀಯ ಸಂಸ್ಥೆಗಳ (ಎಂದರೆ ಪೌರಸಭೆಗಳು, ಗ್ರಾಮಪಂಚಾಯಿತಿಗಳು ಮುಂತಾದವುಗಳ) ಸಹಾಯದಿಂದಲೂ, ಸ್ಥಳಪರಸ್ಥಳಗಳ ಮಹಾಜನರ ಸಹಾಯದಿಂದಲೂ ಗ್ರಾಮ ಗ್ರಾಮದಲ್ಲಿಯೂ ಒಂದೊಂದು ಪುಟ್ಟ ಪುಸ್ತಕ ಭಂಡಾರವನ್ನೇರ್ಪಡಿಸುವಂತೆ ಮಾಡಲು ಪರಿಷತ್ತಿನಿಂದ ಪ್ರೇರಣೆಯೂ ಪ್ರಯತ್ನವೂ ನಡೆಯಬೇಕು. ಅಲ್ಲದೆ ಪರಿಷತ್ತಿನ ಪುಸ್ತಕ ಭಂಡಾರವು ಇನ್ನೂ ದೊಡ್ಡದಾಗಬೇಕು.

ಇಂದು ಜನಜೀವನ ಬರಡು

ಮೂರನೆಯದಾಗಿ ಅಭಿರುಚಿಯನ್ನು ರೂಪಿಸುವ ಕೆಲಸದ ಮಾತು. ಇದನ್ನು ನೊಂದ ಮನಸ್ಸಿನಿಂದ ನುಡಿಯುತ್ತಿದ್ದೇನೆ. ಓದುಬರಹಗಳ ಗಂಧವಿಲ್ಲದ ಹಳ್ಳಿಗಳಲ್ಲಿ ಬಡತನದ ಬಾಧೆಯಿಂದಲೂ ಕಾರ್ಪಣ್ಯದಿಂದಲೂ ಕಂದಿಹೋಗಿರುವ ನಮ್ಮ ದೇಶಬಾಂಧವರ ಅಭಿರುಚಿಯಂತೂ ವೃದ್ಧಿಯಾಗಿಲ್ಲ. ಆದರೆ, ವಿದ್ಯಾವಂತರೆನಿಸಿ ಧನಿಕರಾಗಿರುವ ಪಟ್ಟಣಿಗರಿಗೆ ಕೂಡ ಸಂಗೀತ, ಸಾಹಿತ್ಯ ಮಂತಾದವುಗಳಲ್ಲಿ ಅಭಿರುಚಿಯಿಲ್ಲದಿರುವುದು ನಾವು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತದೆ. ಅದರಲ್ಲಿ ಕೆಲವರಿಗಂತೂ, ತಮಗೆ ಅವುಗಳಲ್ಲಿ ಅಭಿರುಚಿಯಿಲ್ಲದಿರುವುದೇ ಒಂದು ಹೆಮ್ಮೆ; ನಮ್ಮ ಅರಸಿಕತೆಯೇ ತಮಗೊಂದು ಭೂಷಣವೆಂಬ ಭಾವನೆ. ಇದರ ಪರಿಣಾಮವಾಗಿ ನಮ್ಮ ನಾಡಿನ ಲಲಿತ ಕಲೆಗಳು ಸೊರಗುತ್ತಿವೆ. ಸಂಗೀತಗಾರರೂ, ಗ್ರಂಥಕರ್ತರೂ, ಪತ್ರಿಕೋದ್ಯೋಗಿಗಳೂ ಬಹುಮಂದಿ ಕಾರ್ಪಣ್ಯದ ಸುಳಿಗೆ ಸಿಕ್ಕಿ ತಾವು ಎಷ್ಟು ವಿದ್ವತ್ತನ್ನು ಗಳಿಸಿ ಫಲವೇನೆಂದು ಕೊರಗುತ್ತಿದ್ದಾರೆ. ಸಂಗೀತದ ಮೇಲಿನ ಅಭಿರುಚಿಯಂತೂ ಪಾತಾಳಕ್ಕಿಳಿದು ಹೋಗಿ ಸಿನಿಮಾ ಹಾಡುಗಳ ಹುಚ್ಚು ಹಿಡಿದುಹೋಗಿದೆ. ನಮ್ಮ ನಾಡಿನ ನಿಜವಾದ ಚರಿತ್ರೆಯೇ ನಮಗೆ ತಿಳಿಯದು. ನಮ್ಮ ನಾಡಿನ ವಿಭೂತಿ ಪುರುಷರನ್ನು ಹೊರಗಿನವರೆಲ್ಲ ಹೊಗಳುತ್ತಿದ್ದರೂ ಅವರಲ್ಲಿ ನಮಗೆ ತಾತ್ಸಾರ.  ವಿದ್ಯಾವಂತರೆನಿಸಿಕೊಂಡಿರುವವರಲ್ಲೇ ಬಹು ಮಂದಿಗಳಿಗೆ ಸಹೃದಯತೆ ರಸಿಕತೆಗಳ ಗಂಧವೇ ಗೊತ್ತಿಲ್ಲ; ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಕೊಳ್ಳುವ ಅಭ್ಯಾಸವೇ ಇಲ್ಲ; ಉಚಿತವಾಗಿ ಅವುಗಳನ್ನು ಕೊಟ್ಟರೂ ಓದಲು ಮನಸ್ಸಿಲ್ಲ; ಸಂಗೀತ ಗೋಷ್ಠಿಗಳಿಗೂ ನಾಟಕ ಮುಂತಾದವುಗಳಿಗೂ ಆಗಾಗ್ಗೆ ಒಂದೊಂದು ಸಲವಾದರೂ ಹೋಗಿ ಪ್ರೋತ್ಸಾಹಿಸುವುದಂತೂ ಜಾಯಮಾನಕ್ಕೆ ಅಂಟಿಬಂದಿಲ್ಲ. ಕೆಲವರಿಗಂತೂ ತಮಗಿಂತ ಅಲ್ಪಸ್ವಲ್ಪ ಆದಾಯ ಕಡಮೆಯಾಗಿರುವರೊಡನೆ ಸ್ನೇಹವಾಗಿ ಮಾತನಾಡುವಷ್ಟು ಸೌಜನ್ಯವೂ ಇಲ್ಲ, ಒಗ್ಗಟ್ಟಂತೂ ಕನಸಿನ ಮಾತು. ಈ ಬಗೆಯ ಬರಡು ಜೀವನವು ನಮ್ಮದು.

ಬರಡು ಜೀವನ ಬದಲಾಗಲು  ದಾರಿ

ಈ ನ್ಯೂನ್ಯತೆಯು ಪರಿಹಾರವಾಗಬೇಕಾದರೆ ಧನಿಕರಿಗೆ ಗೌರವ ಕೊಡುವುದಕ್ಕಿಂತಲೂ ವಿದ್ಯಾವಂತರಿಗೆ ಗೌರವ ಕೊಡುವುದು ಹೆಚ್ಚಬೇಕು. ಹಳ್ಳಿಹಳ್ಳಿಗೂ ನಮ್ಮ ಯುವಕರು ಹೋಗಬೇಕು; ಕಾವ್ಯವಾಚನ, ಸಂಗೀತ, ಭಾಷಣಗಳು ಮುಂತಾದವುಗಳಿಂದ ಜನಗಳ ಅಭಿರುಚಿಯನ್ನು ತಿದ್ದಿ ರೂಪಿಸಬೇಕು. ಈ ಕೆಲಸವೂ ಪರಿಷತ್ತಿನ ಆಶ್ರಯದಲ್ಲಿ ನಡೆಯಬೇಕು; ಸ್ಥಳೀಯ ಸಂಸ್ಥೆಗಳೇ ಮುಂತಾದವುಗಳ ಸಹಾಯದಿಂದ ಈ ಕೆಲಸವು ನಡೆಯಬೇಕು. ಬೇಸಗೆ ರಜಾ, ನವರಾತ್ರಿ ರಜಾ, ಮುಂತಾದ ಬಿಡುವಿನ ಕಾಲಗಳಲ್ಲಿ ವಿದ್ಯಾರ್ಥಿಗಳಾದ ತರುಣರು ನಾನಾ ಕೇಂದ್ರಗಳನ್ನು ಗೊತ್ತುಮಾಡಿಕೊಂಡು ಈ ಕೆಲಸಕ್ಕೆ ಗಮನ ಕೊಡಬಹುದು. ನಾನು ವಿದ್ಯಾರ್ಥಿಯಾಗಿದ್ದಾಗ್ಗೆ ಕುಮಾರವ್ಯಾಸ ಭಾರತ, ರಾಮಾಯಣ ಮುಂತಾದವುಗಳನ್ನು ಓದಿ ಹೇಳಿದ್ದೇನೆ; ಆಗ ಹಳ್ಳಿಯವರಿಗೆ ಉಂಟಾದ ಆನಂದವನ್ನು ಕಂಡು ಹರ್ಷಿಸಿದ್ದೇನೆ. ಕಾಲೇಜು ವಿದ್ಯಾರ್ಥಿಗಳೆ ಮುಂತಾದವರು ಪ್ರಾಥಮಿಕ ಮತ್ತು ಮಾಧ್ಯಮಿಕ ಪಾಠಶಾಲೆಗಳ ಉಪಾಧ್ಯಾಯರುಗಳಿಗಾಗಿ ರಜಾದ ದಿನಗಳಲ್ಲಿ ಅಲ್ಲಲ್ಲಿ ಸಾಹಿತ್ಯ ವಿಜ್ಞಾನ, ಕಲೆಗಳು ಮುಂತಾದ ಸಂಸ್ಕೃತಿವರ್ಧಕವಾದ ವಿಚಾರಗಳಲ್ಲಿ ಉಪನ್ಯಾಸ ಗೋಷ್ಠಿಗಳನ್ನು ಏರ್ಪಡಿಸಬಹುದು; ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇದೇ ಉದ್ದೇಶದಿಂದ ವಸಂತಸಾಹಿತ್ಯೋತ್ಸವ ಕಾಲದಲ್ಲಿ ಹಿಂದೆ ನಡೆಯುತ್ತಿದ್ದಂತೆ ಉಪನ್ಯಾಸ ಮಾಲೆಗಳನ್ನು ಏರ್ಪಡಿಸಬಹುದು; ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಡಿಸ್ಟ್ರಿಕ್ಟು ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬೇಸಿಗೆ ರಜಾದ ಅವಧಿಯಲ್ಲಿ ತರುಣರಿಂದಲೂ ಇತರರಿಂದಲೂ ಉಪನ್ಯಾಸಮಾಲೆಗಳನ್ನು ಏರ್ಪಡಿಸಬಹುದಾಗಿದೆ.  (ಆಹಾರ ಪರಿಸ್ಥಿತಿಯು ಬಿಕ್ಕಟ್ಟಾಗಿರುವ ಅವಧಿಯಲ್ಲಿ ಇದು ನಡೆಯುವುದು ಬಹುಶಃ ಹೆಚ್ಚಾಗಿ ಸಾಗಲಾರದು). ಹೀಗೆ ಉಪಾಧ್ಯಾಯರ ಅಭಿರುಚಿಯನ್ನು ವೃದ್ಧಿಮಾಡಿ ಅವರ ತಿಳಿವಳಿಕೆಯನ್ನು ಹೆಚ್ಚಿಸಿದರೆ ಅವರಲ್ಲಿ ವ್ಯಾಸಂಗ ಮಾಡುವವರಿಗೆಲ್ಲ ಬಹಳ ಪ್ರಯೋಜನವಾಗುವುದು.

ಯುವಕರ ಪಾತ್ರ

ಇವಕ್ಕೆಲ್ಲ ಅಗತ್ಯವಾದ ಜನಬಲವೂ ಧನಬಲವೂ ಒದಗುವ ಬಗೆ ಹೇಗೆಂಬ ಪ್ರಶ್ನೆಯು ಹುಟ್ಟುವುದು ಸಹಜವಾಗಿಯೆ ಇದೆ. ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಟ್ಟಿನ ಮೇಲೆ ಪರಿಷತ್ತಿನ ಉದ್ದೇಶಗಳಿಗೆ ವಿರೋಧ ಬಾರದಂತೆ ಯುವಜನ ಶಾಖೆ ವಿದ್ಯಾರ್ಥಿಗಳೇ ಮೊದಲಾದ ಯುವಕರ ಸಹಾಯ ಸಹಾನುಭೂತಿಯನ್ನು ಪಡೆಯುವುದರಿಂದಲೂ, ಕರ್ಣಾಟಕ ಸಂಘಗಳು, ಸ್ಥಳೀಯ ಸಂಸ್ಥೆಗಳು ಮುಂತಾದವುಗಳ ಮತ್ತು ಪರಿಷತ್ತಿನ ಸದಸ್ಯರುಗಳ ಸಹಕಾರವನ್ನು ಪಡೆಯುವುದರಿಂದಲೂ, ತಕ್ಕಷ್ಟು ಜನಬಲವು ಒದಗಬಹುದು. ಪರಿಷತ್ತಿನ ಅಂಗಶಾಖೆಯಾಗಿ “ಯುವಜನ ಶಾಖೆ”ಯೊಂದು ಇರಬೇಕೆಂಬ ಒಂದು ನಿರ್ಣಯವೂ ಈ ಸಾರಿ ಚರ್ಚೆಗೆ ಬರುವುದಾಗಿದೆ. ನಾಡಿನ ಯುವಜನರೇ ಅದರ ಕ್ರಿಯಾಶಕ್ತಿಯ ಪ್ರತೀಕ. ಸುಶಿಕ್ಷಿತವಾದ ಯುವಕರ ಉತ್ಸಾಹವೂ ಸಹೃದಯರಾದ ವೃದ್ಧರ ಅನುಭವೂ ಒಟ್ಟುಗೂಡಿದರೆ ದೇಶೋನ್ನತಿ ಸಾಧನೆಯು ಕಟ್ಟಿಟ್ಟ ಬುತ್ತಿ.

ಶಾಖೆಗೆ ಸೇರಿದ ನಮ್ಮ ಪರಿಷತ್ತಿನ ಮಹಿಳಾ ಸೋದರಿಯರೂ, ಇತರರೂ, ಗಂಡಸರನ್ನು ಹಾಗೆ ಸ್ಫೂರ್ತಿಗೊಳಿಸಿ ಹುರಿದುಂಬಿಸಬೇಕು. ಇತರ ದೇಶಗಳ ಯುವಕರನ್ನು ಮೀರಿಸಿ-ಅಥವಾ ಕನಿಷ್ಠ ಪಕ್ಷ ಅವರಷ್ಟು ಮಟ್ಟಿಗಾದರೂ-ನಮ್ಮ ದೇಶದ ಯುವ ಜನರೂ ಕೆಲಸ ಮಾಡಿ ನಾನಾ ರೀತಿಗಳಲ್ಲಿ ದೇಶೋನ್ನತಿ ಸಾಧನೆ ಮಾಡಲಾರರೆ? ಅವರ ಕ್ರಿಯಾಸಾಮರ್ಥ್ಯದಲ್ಲಿ ನನಗೆ ಪೂರ್ಣ ಭರವಸೆಯಿದೆ. ಯಾವ ನಾಡಿನವರಾದರೂ ಹೆಮ್ಮೆಪಡಬಹುದಾದಷ್ಟು ಮೇಧಾವಿಗಳೂ, ಉದ್ಯೋಗಶೀಲರೂ, ವಿದ್ಯಾ ವಿನಯಸಂಪನ್ನರೂ, ಉಜ್ವಲ ದೇಶಾಭಿಮಾನಿಗಳೂ ಆದ ಯುವಜನರು ನಮ್ಮ ನಾಡಿನಲ್ಲಿದ್ದಾರೆ. ಅವರೊಡನೆ ಮಾತನಾಡುವುದೇ ಒಂದು ಸಂತೋಷ; ಅದನ್ನು ನಾನು ಯಥೇಷ್ಟವಾಗಿ ಅನುಭವಿಸಿದ್ದೇನೆ. ಪರಿಷತ್ತಿನ ಅಂಗಸಂಸ್ಥೆಯಾಗಿ ಒಂದು ಯುವಜನ ಶಾಖೆಯು ಸ್ಥಾಪಿತವಾಗಿ ಒಟ್ಟು ಕನ್ನಡನಾಡಿನ ಹಿತಸಾಧನೆಯ ದೃಷ್ಟಿಯಿಂದ ಕೆಲಸ ನಡೆದರೆ ಪರಿಷತ್ತಿನಿಂದ ನಡೆಯಬೇಕೆಂದು ನಾನು ಸೂಚಿಸಿರುವ ಕೆಲಸಗಳಿಗೆಲ್ಲ ಜನಬಲವು ಲಭಿಸಲು ಅನುಕೂಲವಾಗುತ್ತದೆ.

ಧನಸಂಗ್ರಹಕ್ಕೆ ದಾರಿ

ಪರಿಷತ್ತಿನ ಕಾರ್ಯ ನಿರ್ವಾಹಕ ಮಂಡಲಿಯ ಸದಸ್ಯರೂ, ಪ್ರಾದೇಶಿಕ ಸಮಿತಿಯ ಸದಸ್ಯರೂ ತಮ್ಮ ತಮ್ಮ ಸ್ಥಳಗಳಲ್ಲಿ ಮಹಾಜನರಿಂದ ಪರಿಷತ್ತಿಗಾಗಿ ಹಣವನ್ನೆತ್ತುವ ಕೆಲಸವನ್ನು ಮಾಡಬೇಕು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಸ್ಥೆಯಿಂದ ಸಹಾಯ ಮಾಡುವುದಕ್ಕೂ ಯುವಜನ ಶಾಖೆಯ ಸದಸ್ಯರೂ ವಿದ್ಯಾರ್ಥಿಗಳೂ ಮುಂದೆ ಬರಬೇಕು. ಹಿಂದೆ “ಪೈಸಾ ಫಂಡ್” ಎಂಬ ನಿಧಿಯನ್ನು  ಕೂಡಿಸಿದ ಮಾದರಿಯಲ್ಲಿ ಮನೆಮನೆಯಿಂದಲೂ ಯುಗಾದಿ ದೀಪಾವಳಿಗಳಲ್ಲಿ ಹಣವನ್ನೆತ್ತಿದರೆ, ಹನಿಗೂಡಿ ಹಳ್ಳವಾಗುತ್ತದೆ. ಕನ್ನಡ ನಾಡಿನ ನಾನಾ ಸರ್ಕಾರಗಳಿಂದಲೂ ಸ್ಥಳೀಯ ಸಂಸ್ಥೆಗಳಿಂದಲೂ, ಧನಿಕರಿಂದಲೂ ಹೆಚ್ಚು ಹೆಚ್ಚಾಗಿ ಸಹಾಯದ್ರವ್ಯಗಳನ್ನು ಪರಿಷತ್ತಿಗೆ ದೊರೆಯಿಸುವ ಕೆಲಸವೂ ಸತತವಾಗಿ ನಡೆಯಬೇಕು.  ಪರಿಷತ್ತಿನ ಸದಸ್ಯಸಂಪತ್ತನ್ನು ಹೆಚ್ಚಿಸುವ ಪ್ರಯತ್ನವೂ ಅವಿಚ್ಛಿನ್ನವಾಗಿ ನಡೆಯಬೇಕು. ಈ ವಿಷಯದಲ್ಲಿ ಏಕೆಂದರೆ ಮಹಿಳೆಯರು ಮುನಿದರೆ ಹೊತ್ತಿಗೆ ಸರಿಯಾಗಿ ಊಟವೆಲ್ಲಿ ದೊರೆಯದೆ ಹೋಗುವುದೋ-ಎಂಬ ಕಳವಳದಿಂದಲಾದರೂ ಗಂಡಸರು ಪರಿಷತ್ತಿನ ಸದಸ್ಯರಾಗುವುದಕ್ಕೂ, ಪರಿಷತ್ತಿಗೆ ದತ್ತಿಗಳನ್ನು ಕೊಡುವುದಕ್ಕೂ, ಕನ್ನಡ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಕೊಳ್ಳುವುದಕ್ಕೂ ಸಿದ್ಧವಾಗುತ್ತಾರೆ. ಕನ್ನಡದಲ್ಲಿ ನಡೆಯುವ ಪ್ರತಿಯೊಂದು ವಿವಾಹ ಕಾಲದಲ್ಲಿಯೂ ಪರಿಷತ್ತಿನ ಕಾಣಿಕೆಯನ್ನು ಸಲ್ಲಿಸುವ, ಸಂಪಾದನೆಯು ಪ್ರಾರಂಭವಾದಾಗ ಅಥವಾ ಸಂಪಾದನೆಯು ಹೆಚ್ಚಾದಾಗ, ಮೊದಲನೆಯ ಸಾರಿ ಕೈಸೇರಿದ ಹಣದಲ್ಲಿ ಒಂದು ಭಾಗವನ್ನು ಕನ್ನಡ ತಾಯಿಗೆ ಕಾಣಿಕೆಯಾಗಿ ಸಲ್ಲಿಸುವ ಸತ್ಸಂಪ್ರದಾಯಗಳೂ ಪ್ರಾರಂಭವಾಗಬೇಕು. ಪುಸ್ತಕಗಳ ಮಾರಾಟದಿಂದಲೂ ಪರಿಷತ್ತಿಗೆ ಧನಸಂಗ್ರಹವಾಗಬೇಕು. ಉಪನಯನ ಕಾಲದಲ್ಲಿ ವಟುವಿಗೂ ವಿವಾಹ ಕಾಲದಲ್ಲಿ ವಧೂವರರಿಗೂ ಬೆಳ್ಳಿಯ ಪಾತ್ರೆಗಳಿಗೆ ಪ್ರತಿಯಾಗಿ ಅಥವಾ ಅವುಗಳ ಜೊತೆಗೆ ಕನ್ನಡ ಪುಸ್ತಕಗಳನ್ನೂ, ಕನ್ನಡ ಪತ್ರಿಕೆಗಳ ವಿಶೇಷ ಸಂಚಿಕೆಗಳನ್ನೂ ಮೆಚ್ಚಾಗಿ ಕೊಡುವ ಒಳ್ಳೆಯ ಸಂಪ್ರದಾಯವೂ ಪ್ರಾರಂಭವಾಗಬೇಕು. ಜನಬಲವೂ ಧನಬಲವೂ ಯಥೇಷ್ಟವಾಗಿ ಒದಗಿದಲ್ಲಿ ಮಾತ್ರವೇ, ಮೇಲೆ ಸೂಚಿತವಾಗಿವ ಕೆಲಸಗಳೆಲ್ಲ ಪರಿಷತ್ತಿನಿಂದ ನಡೆಯುವುದಕ್ಕೆ ಅನುಕೂಲವಾದೀತು.

ದಿವಂಗತ ಸಾಹಿತಿಗಳ ಕುಟುಂಬಕ್ಕೆ ನೆರವುನಿಧಿ

ಸಾಹಿತ್ಯ ಸೇವೆ ಮಾಡಿ ಸಂಪಾದನೆಗೆ ಹೆಚ್ಚು ಅವಕಾಶವಿಲ್ಲದೆ ಮೃತಪಡುವ ದುರದೃಷ್ಟಶಾಲಿಗಳಾದ ಗ್ರಂಥಕರ್ತರೇ ಮುಂತಾದ ಕಲೋಪಾಸಕರ ಕುಟುಂಬಗಳವರ ಸಹಾಯಕ್ಕಾಗಿ ಪರಿಷತ್ತಿನಲ್ಲಿ ಒಂದು ನಿಧಿಯನ್ನು ಏರ್ಪಡಿಸಬಹುದಾಗಿದೆ. ಗ್ರಂಥಕರ್ತರೇ ಮುಂತಾದವರು ಆ ನಿಧಿಗಾಗಿ ವರ್ಷಕ್ಕೆ ತಲೆಯೊಂದಕ್ಕೆ ಒಂದು ರೂಪಾಯಿ ಅಥವಾ ಎರಡು ರೂಪಾಯಿಗಳಿಗೆ ಕಡಿಮೆಯಿಲ್ಲದೆ ಹಣವನ್ನು ಸಲ್ಲಿಸಬೆಕು. ಹಾಗೆ ಹಣವನ್ನು ಸಲ್ಲಿಸುತ್ತಿರುವವರಲ್ಲಿ ಯಾರಾದರೂ ಮೃತಪಟ್ಟು, ಅವರ ಕುಟುಂಬದವರು ಸಹಾಯವನ್ನಪೇಕ್ಷಿಸುವ ಸ್ಥಿತಿಯಲ್ಲಿದ್ದರೆ ನಿಧಿಯಿಂದ ಸಹಾಯಮಾಡಬೇಕು. ಸಹಾಯದ ಮೊಬಲಗಿನ ಪರಮಾವಧಿಯನ್ನೂ ಗೊತ್ತು ಮಾಡಬಹುದು. ಗ್ರಂಥಕರ್ತರೆಲ್ಲರೂ ಸೇರಿ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆಲಸವನ್ನು ನಡೆಯಿಸಬೇಕು. ಮೃತರ ಕುಟುಂಬಕ್ಕೆ ಅದರಿಂದ ಸಹಾಯಕ; ಜೀವಂತರಾಗಿ ಉಳಿದಿರುವ ಗ್ರಂಥಕರ್ತರಿಗೆ ಅದರಿಂದ ಪುಣ್ಯ.

ಪರಿಷತ್ತು ಶಕ್ತಿಕೇಂದ್ರವಾಗಬೇಕು

ಮೇಲೆ ಹೇಳಿದ ಕೆಲಸಗಳೆಲ್ಲ ಸಾಂಗವಾಗಿ ನಡೆಯಬೇಕಾದರೆ-ಮುಂದಿನ ಬೃಹತ್ತರವಾದ ಮತ್ತು ಭವ್ಯತರವಾದ ಕನ್ನಡ ನಾಡು ನಿರ್ಮಿತವಾಗಲು ಸಾಹಿತ್ಯ ಸಂಸ್ಕೃತಿಗಳ ಪುರೋಭಿವೃದ್ಧಿ ಸಾಧನೆಯ ಮೂಲಕವಾಗಿ ಸಹಾಯವಾಗಬೇಕಾದರೆ -ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಶಕ್ತಿ ಕೇಂದ್ರವಾದ ಶಿವನಸಮುದ್ರವಾಗಬೇಕು. ನಮ್ಮ ಕನ್ನಡ ನಾಡಿನ ಕರ್ಣಾಟಕ ಸಂಘಗಳೇ ಮುಂತಾದ ಸಂಸ್ಥೆಗಳು  ಆ ಶಿವನಸಮುದ್ರದಲ್ಲಿ ಉತ್ಪತ್ತಿಯಾಗಿ ತಮ್ಮಲ್ಲಿಗೆ ಬಂದ ವಿದ್ಯುಚ್ಛಕ್ತಿಯನ್ನು ಒಟ್ಟು ಕನ್ನಡ ನಾಡಿನ ಮೂಲೆ ಮೂಲೆಗೂ ಹಂಚಿ, ಅದರಿಂದ ಬೆಳಗುವ ಜ್ಞಾನದೀಪಗಳ ತಂಡಗಳನ್ನು ನೋಡಿ ನೋಡಿ ನಲಿಯಬೇಕು. ಆ ಜ್ಞಾನದೀಪಗಳ ತಂಡಗಳಿಂದ ಕನ್ನಡ ನಾಡಿನ ಅಜ್ಞಾನಾಂಧಕಾರವು ತೊಲಗಿ, ಕನ್ನಡ ತಾಯಿಯ ಪವಿತ್ರ ದೇವಾಲಯದಲ್ಲಿ ನಿತ್ಯದೀಪಾವಳಿಯ ಉತ್ಸವವು ನಡೆಯಬೇಕು. ಅದು ನಡೆದಂದು ಶುಭತಾರೆ; ಅದು ನಡೆದಂದು ದೇಶಮಾತೆಯ ವರ್ಧಂತ್ಯುತ್ಸವ; ಅದು ನಡೆಯುವವರೆಗೂ ನಾವೆಲ್ಲರೂ ಮನುಷ್ಯರ ಛಾಯೆಗಳೇ ಹೊರತು ಮನುಷ್ಯರೆಂಬ ಹೆಸರಿಗೆ ಆರ್ಹರಲ್ಲ.

 Tag: Kannada Sahitya Sammelana 30, C.K. Venkataramaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)