ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ
ಮಾರ್ಚ್ ೧೯೪೯

ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ

uttangi-channappa

೩೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ರೆವರೆಂಡ್ ಉತ್ತಂಗಿಚೆನ್ನಪ್ಪ

ಅಭಿನವ ಸರ್ವಜ್ಞ ಕವಿ ಎಂದೇ ಬಿರುದಾಂಕಿತರಾದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದಾನಿಯೇಲಪ್ಪ – ಸುಭದ್ರವ್ವ ದಂಪತಿಗಳಿಗೆ ೨೮-೧0-೧೮೮೧ರಂದು ಹಿರಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಪೂರ್ವಜರು ಮೂಲದಲ್ಲಿ ವೀರಶೈವರಾಗಿ ಊರು ಪಾರುಪತ್ತೇಗಾರಿಕೆ ನಡೆಸುತ್ತಿದ್ದರು. ಇವರ ಶಾಲಾ ಶಿಕ್ಷಣವು ಧಾರವಾಡ, ಗದಗ, ಬೆಟಗೇರಿಗಳಲ್ಲಿ ನಡೆಯಿತು. ೧೯೩0ರಲ್ಲಿ ಮೆಟ್ರಿಕ್ ಪರೀಕ್ಷೆ ಫೇಲಾದರು. ಅನಂತರ ೧೯0೮ರಲ್ಲಿ ತಾಯಿಯ ಅಪೇಕ್ಷೆಯಂತೆ ಬಾಸೆಲ್ ಮಿಷನ್ ಸಂಸ್ಥೆಯಲ್ಲಿ ಧರ್ಮೋಪದೇಶಕರಾಗಿ ಸೇರಿದರು.

ಧರ್ಮೋಪದೇಶಕರಾಗಿ ೧೯0೮ರಿಂದ ೧೯೪೨ರವರೆಗೆ ನಿಸ್ಪ್ರುಹರಾಗಿ ಸೇವೆ ಸಲ್ಲಿಸಿದರು. ಧಾರವಾಡ, ಮುಂಡರಗಿ, ಹಾವೇರಿ, ಹುಬ್ಬಳ್ಳಿಗಳಲ್ಲಿ ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಕೈಂಕರ್ಯನಡೆಸಿದರು. ೩೩ ವರ್ಷಗಳ ಸೇವೆಯ ನಂತರ ನಿವೃತ್ತರಾದರು.

ಕನ್ನಡ ಭಾಷೆಯ ಬೈಬಲ್ ಪರಿಷ್ಕರಣ ಮಂಡಳಿಯ ಅಧ್ಯಕ್ಷರಾಗಿ ಇವರು ರಾಷ್ಟ್ರೀಯ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಖಾದಿ ಧರಿಸಿದರು. ಕ್ರೈಸ್ತ ಮತಾವಲಂಬಿ ಆಗಿದ್ದರೂ ವೀರಶೈವ ಸಿದ್ಧಾಂತ ಅಧ್ಯಯನ ಪ್ರಸಾರದಲ್ಲಿ ತೊಡಗಿದ್ದರು. ಕನ್ನಡ ಭಾಷೆಯ ಕಟ್ಟಾಭಿಮಾನಿಗಳಾದ ಇವರು ಬಾಸಲ್ ಸುವಾರ್ತಿಕ ಸಂಘದ ಹೆಸರನ್ನು ಕನ್ನಡ ಸುವಾರ್ತಿಕ ಸಂಘವೆಂದು ಪರಿವರ್ತಿಸಿದರು.

ಗ್ರೀಕ್ ಮತ್ತು ಹೀಬ್ರೂ ಭಾಷೆಯ ಮೂಲಪಾಠದೊಂದಿಗೆ ಕನ್ನಡ ಬೈಬಲ್‍ಗೆ ಹೋಲಿಸಿ ಪರಿಷ್ಕರಿಸಿದರು. ರೆವರೆಂಡ್ ಪ್ರಶಸ್ತಿಗೆ ಪಾತ್ರರಾದರು. ೧೯೪೪ರಲ್ಲಿ ರಬಕವಿಯಲ್ಲಿ ನಡೆದ ೨೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಲು ಕರೆ ನೀಡಲಾಗಿತ್ತು. ೧೯೪೯ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೫೭-೫೮ರಲ್ಲಿ ಇವರು ರಚಿಸಿದ ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ ಗ್ರಂಥಕ್ಕೆ ದೇವರಾಜ ಬಹಾದ್ದೂರ್ ಬಹುಮಾನ ಬಂದಿತು.  ೬-೩-೧೯೪೯ರಿಂದ ೧೬-೨-೧೯೫0ರವರೆಗೆ ಪರಿಷತ್ತಿನ ಗೌರವಾಧ್ಯಕ್ಷರಾಗಿದ್ದರು.

ಉತ್ತಂಗಿ ಅವರ ಬದುಕಿನ ಸಾಧನೆ ಎಂದರೆ ಅಜ್ಞಾತ ಕವಿಯಾಗಿದ್ದ ಸರ್ವಜ್ಞ ಕವಿಯನ್ನು ಬೆಳಕಿಗೆ ತಂದಿದ್ದು : `ಸರ್ವಜ್ಞ ವಚನಗಳು’ ಗ್ರಂಥ ಇವರ ದೀರ್ಘಕಾಲದ ಸಂಶೋಧನೆಯ ಫಲ. ಇದಲ್ಲದೆ ಸುಮಾರು ೧೪ ಕೃತಿಗಳನ್ನು ಬರೆದಿದ್ದಾರೆ:

ಬನಾರಸಕ್ಕೆ ಬೆತ್ಲಹೇಮನ ವಿನಂತಿ (೧೯೨೧), ಮೃತ್ಯುಂಜಯ, ಹಿಂದೂ ಸಮಾಜ ಚಿಂತಕ, ನಾರಾಯಣ ವಾಮನ ತಿಲಕರ ಜೀವನಚರಿತ್ರೆ, ಬಸವೇಶ್ವರರೂ ಅಸ್ಪೃಶ್ಯರ ಉದ್ಧಾರವೂ, ಮಕ್ಕಳ ಶಿಕ್ಷಣ ಪಟ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ಆದಯ್ಯನ ವಚನಗಳು ಇತ್ಯಾದಿ.

ಸರ್ವಜ್ಞ ವಚನ ಸಂಶೋಧನೆಯಲ್ಲಿಯೇ ದೃಷ್ಟಿ ಕಳೆದುಕೊಂಡ ಇವರು ೨೮-೮-೧೯೬೨ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೨

ಅಧ್ಯಕ್ಷರು, ಉತ್ತಂಗಿ ಚೆನ್ನಪ್ಪ

ದಿನಾಂಕ ೫, ೬, ೭ ಮಾರ್ಚ್ ೧೯೪೯

ಸ್ಥಳ : ಕಲಬುರ್ಗಿ

ಲಿಪಿ ಸಂಸ್ಕರಣ ಮತ್ತು ಪರಿಷತ್ತು

ಇಂದಿನ ಕನ್ನಡ ಲಿಪಿ ಬಲು ಚೆಲುವಾದುದು. ಇದು ಹಲವು ವಿದ್ವಾಂಸರು ತಿಳಿದಿರುವಂತೆ ಬ್ರಾಹ್ಮೀ ಲಿಪಿಯಿಂದ ಹುಟ್ಟಿದಂತಿಲ್ಲ. ಮೊಹೆಂಜೊದಾರೋದ ಚಿತ್ರಲಿಪಿ ಇದಕ್ಕೆ ಮೂಲವಿದ್ದಂತೆ ಅನಿಸುತ್ತದೆ. ನಡುವೆ ಎಂದೋ ಈ ಲಿಪಿ ಸೊನ್ನೆಗೆ ತಿರುಗಿಕೊಂಡು ಹಲವು ಶತಮಾನಗಳ ನಂತರ ಈಗಿನ ಆಕಾರವನ್ನು ತಳೆದಿರಬೇಕು. ಈಗಿನ ನಮ್ಮ ಲಿಪಿ-ಸೌಂದರ್ಯವು ಹಲವು ಶತಮಾನಗಳ ಮಾರ್ಪಾಟಿನ ಫಲವಾಗಿರುವುದರಿಂದ ಅದರ ಅಂದವು ಕೆಡದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಕರ್ತವ್ಯ. ಇನ್ನೊಂದು ಮಾತು;

ನಮ್ಮ ಲಿಪಿಗೆ ದ್ರಾವಿಡರ ಚಿತ್ರಲಿಪಿಯೆ ಮೂಲವಾಗಿದ್ದರೂ ಅದರ ಮೇಲೆ ಸಂಸ್ಕೃತ ವರ್ಣಮಾಲೆಯ ಪ್ರಭಾವವೂ ಉಂಟಾಗಿದೆ. ದೀರ್ಘ, ಮಹಾಪ್ರಾಣ, ಒತ್ತಕ್ಷರ, ಕಾಗುಣಿತ, ಇವಕ್ಕೆ ಕೆಲವು ತಿದ್ದುಪಾಟುಗಳು ಈಗ ಅಗತ್ಯವೆಂದು ಕಾಣುತ್ತದೆ. ಈ ತಿದ್ದುಪಾಟುಗಳು ಲಿಪಿ ತತ್ವಗಳಿಗನುಸಾರವಾಗಿ ಯಂತ್ರಸೌಕರ್ಯಗಳಿಗೆ ಅನುಗುಣವಾಗಿ ಸೂಚಿಸಲ್ಪಡಬೇಕು. ಇಂದಿನ ನಮ್ಮ ಲಿಪಿ ಹಲವು ನ್ಯೂನ್ಯತೆಗಳಿಂದ ಕೂಡಿದ್ದಾಗಿ ಚಿಕ್ಕಮಕ್ಕಳಿಗೆ ಹಾಗೂ ನಿರಕ್ಷರಿಗಳಾದ ವಯಸ್ಕರಿಗೆ ಕಲಿಯಲು ಬಹು ತೊಡಕಾಗಿದೆ. ಈ ದೋಷಗಳ ನಿವಾರಣೆಯಾಗಲೇಬೇಕು. ಆದರೆ ಯಂತ್ರ ಸೌಕರ್ಯಕ್ಕಾಗಿ ಈಗಿನ ಲಿಪಿಯನ್ನು ತೀರ ವಿಕೃತಗೊಳಿಸುವುದೂ ತಪ್ಪಾದೀತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯ ಲಿಪಿತಜ್ಞರೆಲ್ಲ ಒಂದೆಡೆಗೆ ಸೇರುವಂತೆ              ಲಿಪಿ-ಸಮ್ಮೇಳನವೊಂದನ್ನು ಕರೆದು ಅದರಲ್ಲಿ ನಿರ್ಣಯವಾಗುವ ತಿದ್ದುಪಾಟುಗಳನ್ನು ಸ್ವೀಕರಿಸುವುದು ಹೆಚ್ಚು ವಿಹಿತ. ಲಿಪಿ-ಸಂಸ್ಕರಣದ ಬಗೆಗೆ ಆಗಾಗ ಕೆಲವು ಪ್ರಯತ್ನಗಳೇನೋ ನಡೆದಂತೆ ತೋರಿದರೂ ಈ ವಿಚಾರದಲ್ಲಿ ಇರಬೇಕಾದ ಆಸ್ಥೆ ಕನ್ನಡ ಜನತೆಯಲ್ಲಿ ಇನ್ನೂ ಹುಟ್ಟಿಲ್ಲವೆಂದೇ ಹೇಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯವನ್ನು ಮೊದಲು ಆರಂಭ ಮಾಡಿತು. ಅದೇ ಈ ಕಾರ್ಯವನ್ನು ಪೂರ್ತಿಗೊಳಿಸಬಲ್ಲ ಸಂಸ್ಥೆ. ಕನ್ನಡ ವಿದ್ವಾಂಸರೂ ಸಂಘ-ಸಂಸ್ಥೆಗಳೂ ಈ ಕಾರ್ಯದಲ್ಲಿ ನೆರವಿತ್ತು ಸಹಕರಿಸಿ ನಾಡಿನ ಪ್ರಗತಿಗೆ ಕೈದೀವಿಗೆಯಾಗಬೇಕು.

Tag: Kannada Sahitya Sammelana 32, Reverend Uttangi Channappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)