ಸಾಹಿತ್ಯ ಸಮ್ಮೇಳನ-೪೧ : ಬೀದರ್
ಫೆಬ್ರವರಿ ೧೯೬0

ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್

dl-narashimahchair

೪೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್

ಕನ್ನಡದ ಪ್ರಕಾಂಡ ಪಂಡಿತ, ಸಹೃದಯರು ಸಂಶೋಧಕ ಶ್ರೇಷ್ಠ ಸಂಶೋಧಕ ಆಚಾರ್ಯ ದೊಡ್ಡ ಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಶ್ಯಾಮಯ್ಯಂಗಾರ್ – ಲಕ್ಷ್ಮಮ್ಮನವರ ಸುಪುತ್ರರಾಗಿ ೨೭-೧0-೧೯0೬ರಂದು ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ ೧೯೨೪ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದು, ನಂತರ ೧೯೨೯ರಲ್ಲಿ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು.

೧೯೩0ರಲ್ಲಿ ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ನೇಮಕವಾದರು. ೧೯೩೯ರಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ, ೧೯೫೬ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೩೧-೩-೧೯೬೨ರಲ್ಲಿ ನಿವೃತ್ತರಾದರು. ಅನಂತರ ಕೆಲವು ಕಾಲ ಯುಜಿಸಿ ಅಧ್ಯಾಪಕರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಸದಸ್ಯ, ಉಪಾಧ್ಯಾಕ್ಷ, ಅಧ್ಯಕ್ಷ, ಸಂಪಾದಕರಾಗಿ ವಿಧಿವಶರಾಗುವವರೆಗೂ (೭-೫-೧೯೭೧ವರೆಗೆ) ಶಕ್ತಿ ಮೀರಿ ದುಡಿದರು.

ಅವರು ೧೯೫೯ರಿಂದ ೧೯೬೨ ಪ್ರಬುದ್ಧ ಕರ್ನಾಟಕದ ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.

೧೯೬೭ರಲ್ಲಿ ಡಿಎಲ್‍ಎನ್ ಅಭಿಮಾನಿಗಳು ಉಪಾಯನವೆಂಬ ವಿದ್ವತ್ ಗ್ರಂಥ ಅರ್ಪಿಸಿ ಸನ್ಮಾನ ಮಾಡಿದರು. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಮೈಸೂರು ವಿಶ್ವವಿದ್ಯಾನಿಲಯ ೧೯೭0ರಲ್ಲಿ ಡಿ.ಎಲ್.ಎನ್. ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ೧೯೬0ರಲ್ಲಿ ಬೀದರ್‍ನಲ್ಲಿ ನಡೆದ ೪೧ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

ಚಲಿಸುವ ವಿಶ್ವಕೋಶವೆಂದು ಹೆಸರುಗಳಿಸಿದ್ದ, ಹಳಗನ್ನಡದ ಪ್ರಕಾಂಡ ಪಂಡಿತರಾಗಿದ್ದ, ಅಪಾರ ನೆನಪಿನ ಶಕ್ತಿಯ ದೊಡ್ಡಬೆಲೆ ನರಸಿಂಹಾಚಾರ್ (ಡಿಎಲ್‍ಎನ್) ಅವರ ಕೃತಿಗಳು ಪಾಂಡಿತ್ಯಪೂರ್ಣವಾದವು; ದೀರ್ಘ ಪರಿಶ್ರಮದಿಂದ ಸಂಪಾದಿತವಾದವು.

ವಡ್ಡಾರಾಧನೆ, ಭೀಷ್ಮಪರ್ವ, ಪಂಪಭಾರತ ದೀಪಿಕೆ, ಶಬ್ದಮಣಿ ದರ್ಪಣಂ, ಸಿದ್ಧರಾಮ ಚಾರಿತ್ರ ಸಂಗ್ರಹ, ಸುಕುಮಾರ ಚರಿತಂ, ಕನ್ನಡ ಗ್ರಂಥಸಂಪಾದನೆ, ಪಂಪರಾಮಾಯಣ ಸಂಗ್ರಹ, ಗೋವಿನ ಹಾಡು, ಇತ್ಯಾದಿ ಇವರ ಕೃತಿಗಳು.

ಪೀಠಿಕೆಗಳು ಮತ್ತು ಲೇಖನಗಳು ಅವರ ಸಂಶೋಧನ ಬರಹಗಳ ಸಂಕಲನವಾಗಿದೆ.

ಕನ್ನಡ ಸಾಹಿತ್ಯದಲ್ಲಿ ವಿದ್ವತ್ತಿನ ಮೇರು ಶಿಖರವಾಗಿದ್ದ ಡಿಎಲ್‍ಎನ್ ಅವರು ೭-೫-೧೯೭೧ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೧

ಅಧ್ಯಕ್ಷರು: ಡಿ.ಎಲ್. ನರಸಿಂಹಾಚಾರ್ಯ

ದಿನಾಂಕ ೧೧, ೧೨, ೧೩ ಫೆಬ್ರವರಿ ೧೯೬0

ಸ್ಥಳ : ಬೀದರ್

ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಸಾರ

ಈಗ ಇಲ್ಲಿ ನಡೆಯುತ್ತಿರುವ ಸಮಾರಂಭ ನಲ್ವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆಯಷ್ಟೆ? ಹಿಂದೆ ಅಧ್ಯಕ್ಷರ ಪದವಿಯನ್ನು ಬೆಳಗಿದ ಮಹಾನುಭಾವರನ್ನೂ ಅವರ ವಾಗಮೃತವನ್ನೂ ಸ್ಮರಿಸಿಕೊಂಡರೆ ಎಂತವನಿಗಾದರೂ ರೋಮಾಂಚನವಾಗುತ್ತದೆ. ಅವರ ನಡೆ ನುಡಿಗಳ ಭಕ್ತಿ, ಅವರು ಸಲ್ಲಿಸಿರುವ ತ್ಯಾಗಮುಖವಾದ ಸೇವೆ, ಅವರು ನಿರ್ಮಿಸಿರುವ ಕೃತಿಗಳು, ಅವರು ಕೈಗೊಂಡ ಯೋಜನೆಗಳು, ಅವರು ಕಂಡ ಕನಸುಗಳು ಇವೆಲ್ಲಾ ಇಂದಿಗೂ ಕನ್ನಡದ ಕೆಲಸಗಾರರಿಗೆ ಸ್ಫೂರ್ತಿಯನ್ನು ಕೊಡತಕ್ಕವು. ಕನ್ನಡ ನಾಡಿನ ಏಕೀಕರಣ, ಏಕರೂಪವಾದ ಆಡಳಿತದ ವ್ಯವಸ್ಥೆ, ಬೇರೆ ಬೇರೆ ಪ್ರದೇಶಗಳ ಕನ್ನಡಿಗರಲ್ಲಿ ಪರಸ್ಪರ ಸೌಹಾರ್ದಸಾಧನೆ, ಎಲ್ಲ ಪ್ರದೇಶಗಳಿಗೂ ಸಮಾನವಾದ ಗ್ರಾಂಥಿಕ ವ್ಯವಹಾರಿಕ ಭಾಷೆಯ ನಿರ್ಮಾಣ, ಕನ್ನಡದ ಸ್ಥಾನಮಾನ ವಿಚಾರ, ಕನ್ನಡ ನಾಡಿನ ಭಾಷಾಸಮಸ್ಯೆಗಳು, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯವನ್ನು ಒದಗಿಸುವುದು, ಹಳೆಯ ಸಾಹಿತ್ಯದ ರಕ್ಷಣೆ ಉದ್ಧಾರ ಪ್ರಚಾರಗಳು, ಹೊಸ ಸಾಹಿತ್ಯಕ್ಕೆ ಪ್ರೋತ್ಸಾಹ, ಪಾಂಡಿತ್ಯ ರಸಿಕತೆಗಳ ಬೆಳವಣಿಗೆ, ಸಾಹಿತಿಗಳಿಗೆ ಸನ್ಮಾನ ಸತ್ಕಾರಗಳು, ಕನ್ನಡಿಗರ ರಾಜಕೀಯ ಸಾಮಾಜಿಕ ಧಾರ್ಮಿಕ ಇತಿಹಾಸದ ರಚನೆ ಮತ್ತು ಅದಕ್ಕಾಗಿ ನಡೆಯಬೇಕಾದ ಸಂಶೋಧನೆ, ಸುಪುಷ್ಟವೂ ಸಶಾಸ್ತ್ರೀಯವೂ ಆಗಿರುವ ಕನ್ನಡ ಬೃಹತ್ಕೋಶದ ನಿರ್ಮಾಣ, ವಿಶ್ವಕೋಶದ ರಚನೆ, ವೈಜ್ಞಾನಿಕ ಸಾಮಾಜಿಕ ಶಾಸ್ತ್ರೀಯ ಗ್ರಂಥಗಳ ರಚನೆ-ಹೀಗೆ ಒಂದೇ ಎರಡೇ ಅವರು ತಮ್ಮೆದುರಿಗೆ ಕಟ್ಟಿಕೊಂಡಿದ್ದ ಸ್ವಪ್ನಮಂದಿರಗಳು! ಇವೆಲ್ಲ ಹಿನ್ನೆಲೆಯಾಗಿ ಭಾರತದ ಸ್ವಾತಂತ್ರ್ಯ ಸಾಧನೆಯ ಮಹಾಕಾರ್ಯದಲ್ಲಿ ಹಿಮಾಚಲದೃಶರಾದ ಮಹಾತ್ಮ ಗಾಂಧೀಜಿಯವರು ಹರಿಯಬಿಟ್ಟಿದ್ದ ಶಕ್ತಿವಾಹಿನಿಯ ಅದಮ್ಯ ನಿರ್ಘೋಷ!

Tag: Kannada Sahitya Sammelana 41, Dodbele Narasimhachar, D.L.N, D.L. Narasimhachar, Narasimhacharya

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)