ಸಾಹಿತ್ಯ ಸಮ್ಮೇಳನ-೪೬

ಅಧ್ಯಕ್ಷತೆ: ಆ.ನೇ ಉಪಾಧ್ಯೆ

aa-ne-upaadhye

೪೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆ.ನೇ ಉಪಾಧ್ಯೆ

ಪಾಂಡಿತ್ಯಕ್ಕೆ ಮತ್ತು ವಿನಯಕ್ಕೆ ಇನ್ನೊಂದು ಹೆಸರಾಗಿದ್ದ ಆ.ನೇ. ಉಪಾಧ್ಯೆ ಅವರು ಬೆಳಗಾಂ ಜಿಲ್ಲೆಯ ಸದಲಗಾ ಎಂಬ ಹಳ್ಳಿಯಲ್ಲಿ ನೇಮಿನಾಥ ಉಪಾಧ್ಯೆ ಮತ್ತು ಚಂದ್ರಾಬಾಯಿ ದಂಪತಿಗಳಿಗೆ ೬-೨-೧೯0೬ರಲ್ಲಿ ಮಗನಾಗಿ ಜನಿಸಿದರು. ಉಪಾಧ್ಯೆ ಅವರು ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಾಲೆಯಲ್ಲಿನ ಶಿಕ್ಷಣಕ್ಕಾಗಿ ಬೆಳಗಾವಿಗೆ ಬಂದರು. ೧೯೨೩ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಮುಗಿಸಿ ೧೯೨೮ರಲ್ಲಿ ಬಿ.ಎ. ಪದವೀಧರರಾಗಿ ೧೯೩0ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು. ಈ ಸಮಯದಲ್ಲಿ ಅರ್ಧಮಾಗಧಿ, ಅಪಭ್ರಂಶ, ಸಂಸ್ಕೃತ, ಗುಜರಾತಿ, ಹಿಂದಿ, ಮರಾಠಿ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದರು. ೧೯೩೯ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಡಿಲಿಟ್ ಪದವಿ ಪಡೆದರು.

೧೯೩0ರಲ್ಲಿಯೇ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅರ್ಧಮಾಗಧಿ ಪ್ರಾಕೃತ ಭಾಷಾ ಅಧ್ಯಾಪಕರಾಗಿ ಸೇರಿ ೩೨ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ೧೯೬೨ರಲ್ಲಿ  ನಿವೃತ್ತರಾದರು. ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗಕ್ಕೆ ಸಂಸ್ಥಾಪಕ ಪ್ರಾಧ್ಯಾಪಕರಾಗಿ ಕಾರ್ಯಪ್ರವೃತ್ತರಾದರು. ೧೯೭೫ರಲ್ಲಿ ಅಲ್ಲಿಂದ ನಿವೃತ್ತರಾಗಿ ಕೊಲ್ಲಾಪುರಕ್ಕೆ ಮರಳಿದರು.

೧೯೬೩ರಲ್ಲಿ ಬಿಹಾರದ ಪ್ರಾಚ್ಯ ವಿದ್ಯಾಸಂಸ್ಥೆಯು ತನ್ನ ವಜ್ರ ಮಹೋತ್ಸವ ಸಂದರ್ಭದಲ್ಲಿ ಉಪಾಧ್ಯೆಯವರಿಗೆ ಸಿದ್ಧಾಂತಾಚಾರ್ಯ ಪ್ರಶಸ್ತಿ ನೀಡಿತು. ೧೯೭೫ರಲ್ಲಿ ನ್ಯಾಯಾವತಾರ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವದ ಪಾರಿತೋಷಕ ಲಭಿಸಿತು. ಕೇಂದ್ರ ಸರ್ಕಾರದ ಸಂಸ್ಕೃತ ರಾಷ್ಟ್ರೀಯ ಪಂಡಿತ ಪ್ರಶಸ್ತಿ ರಾಷ್ಟ್ರಪತಿಗಳಿಂದ ೧೯೭೫ರಲ್ಲಿ ಲಭ್ಯವಾಯಿತು. ೧೯೬೬ರಲ್ಲಿ ಆಲಿಘರ್‍ನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೬೭ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ೪೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಭಾರತೀಯ ಜ್ಞಾನಪೀಠ ನಿರ್ವಹಿಸುತ್ತಿದ್ದ ಮೂರ್ತಿದೇವಿ ಗ್ರಂಥಮಾಲೆಯ ಗೌರವ ಪ್ರಧಾನ ಸಂಪಾದಕರಾಗಿದ್ದರು. ೨೯ನೇ ವಿಶ್ವಪ್ರಾಚ್ಯ ವಿದ್ವಾಂಸ ಮಹಾಸಭೆಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದಕ ಮಂಡಲಿಯ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಗ್ರಂಥ ಸಂಪಾದನಾ ಕಾರ್ಯದಲ್ಲಿ ನಿಷ್ಣಾತರಾದ ಆ.ನೇ. ಉಪಾಧ್ಯೆಯವರು ಸುಮಾರು ೨೫ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಸುಮಾರು ಇನ್ನೂರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳನ್ನು ವಿದೇಶಗಳ ಗಣ್ಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಶಂಸೆಗೆ ಒಳಗಾಗಿದೆ. ಅವರು ಸಂಪಾದಿಸಿದ ಕೆಲವು ಗಣ್ಯ ಗ್ರಂಥಗಳು ಹೀಗಿವೆ:

ಪ್ರವಚನಸಾರ, ಪರಮಾತ್ಮ ಪ್ರಕಾಶ, ಪಂಪಸುತ್ತಂ ವರಾಂಗಚರಿತ, ಬೃಹತ್ ಕಥಾಕೋಶ, ಶೃಂಗಾರಮಂಜರಿ, ಕಥಾಕೋಶ, ಗೀತವೀತರಾಗ, ತಿಲೋಯಿ ಪಣ್ಣತ್ತಿ, ಧರ್ಮರತ್ನಾಕರ, ಕಂಸವಹೋ ಇತ್ಯಾದಿ.

ಡಾ. ಉಪಾಧ್ಯೆಯವರು ಕೊಲ್ಲಾಪುರದಲ್ಲಿ ೯-೧0-೧೯೭೫ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೬

ಅಧ್ಯಕ್ಷರು: ಆ.ನೇ ಉಪಾಧ್ಯೆ

ದಿನಾಂಕ ೨೬,೨೭,೨೮ ಮೇ ೧೯೬೭                                                

ಸ್ಥಳ : ಶ್ರವಣಬೆಳಗೊಳ

ಸಮ್ಮೇಳನಾಧ್ಯಕ್ಷರ ವಿಚಾರಧಾರೆ

ಈಗ ಇಲ್ಲಿ ನಡೆಯುತ್ತಿರುವುದು ೪೬ನೇ ಸಾಹಿತ್ಯ ಸಮ್ಮೇಳನವಾಗಿದೆ. ಈ ಹಿಂದಿನ ನಲವತ್ತೈದು ಸಮ್ಮೇಳನಗಳ ಅಧ್ಯಕ್ಷಪದವಿಯನ್ನು ಬೆಳಗಿದ ಮಹಾನುಭಾವರ ಸಾಹಿತ್ಯಭ್ಯಾಸ, ಸಿದ್ಧಿಗಳನ್ನು ಸ್ಮರಿಸಿಕೊಂಡರೆ ಯಾರಿಗಾದರೂ ರೋಮಾಂಚನವಾಗದೆ ಇರದು. ಅವರ ನಾಡು, ನುಡಿಗಳ ಭಕ್ತಿ, ಅವರು ಸಲ್ಲಿಸಿದ ಸೇವೆ, ಅವರು ನಿರ್ಮಿಸಿದ ಕೃತಿಗಳು, ಅವರು ಕಂಡ ಕನಸುಗಳು, ಕೈಕೊಂಡ ಯೋಜನೆಗಳು, ಇವೆಲ್ಲ ಇಂದಿಗೂ ಕನ್ನಡ ಕಾರ್ಯಕರ್ತರಿಗೆ ಸ್ಪೂರ್ತಿಯನ್ನೀಯುವಂಥವಾಗಿವೆ. ಕನ್ನಡ ನಾಡಿನ ಏಕೀಕರಣ, ವಿಶಾಲ ಕರ್ನಾಟಕದ ನಿರ್ಮಾಣ, ಬೇರೆ ಬೇರೆ ಪ್ರದೇಶಗಳ ಕನ್ನಡಿಗರಲ್ಲಿ ಪರಸ್ಪರ ಸೌಹಾರ್ದಭಾವನೆ, ಎಲ್ಲ ಸೀಮೆಗಳಿಗೂ ಸಮಾನವಾದ ಗ್ರಾಂಥಿಕ ವ್ಯಾವಹಾರಿಕ ಭಾಷೆಯ ನಿರ್ಮಾಣ, ಕನ್ನಡದ ಸ್ಥಾನಮಾನ ವಿಚಾರ, ಹಳೆಯ ಸಾಹಿತ್ಯದ ಸಂರಕ್ಷಣ, ಪ್ರಕಟಣೆ-ಪ್ರಸಾರಗಳು ಜನತೆಗೆ ಒಳ್ಳೆಯ ಸಾಹಿತ್ಯವನ್ನು ನೀಡುವಿಕೆ, ಹೊಸ ಸಾಹಿತ್ಯಕ್ಕೆ ಪ್ರೋತ್ಸಾಹ, ಕನ್ನಡ ಭಾಷಾಭ್ಯಾಸದ ಬೆಳವಣಿಗೆ, ಭಾಷಾ ಶಾಸ್ತ್ರದ ತೌಲನಿಕ ಅಭ್ಯಾಸ, ಪ್ರಬುದ್ಧ ಪಾಂಡಿತ್ಯದ ಸಮೃದ್ಧಿ, ಕನ್ನಡ ನಾಡಿನ ರಾಜಕೀಯ-ಸಾಮಾಜಿಕ ಧಾರ್ಮಿಕ ಇತಿಹಾಸಗಳ ಬಗೆಗಿನ ಲೇಖನ, ಅದಕ್ಕಾಗಿ ನಡೆಯಬೇಕಾದ ಸಂಶೋಧನೆ, ವಿಶ್ವಕೋಶದ ರಚನೆ, ಸಮೃದ್ಧವೂ ಸಂಪುಷ್ಟವೂ ಆದ ಸಂಪನ್ನ ಶಬ್ದಕೋಶದ ನಿರ್ಮಾಣ, ವೈಜ್ಞಾನಿಕ ಗ್ರಂಥಗಳ ರಚನೆಗೆ ಪ್ರೋತ್ಸಾಹ, ಸಾಹಿತಿಗಳಿಗೆ ಸನ್ಮಾನ ಗೌರವಗಳು ಸಮಾಜದಲ್ಲಿ ರಸಿಕತೆ, ಸಾಹಿತ್ಯಪ್ರೇಮಗಳ ಬೆಳವಣಿಗೆ- ಹೀಗೆ ಹಲವಾರು ವಿಚಾರಗಳನ್ನು ಹಮ್ಮಿಕೊಂಡಿದ್ದಾರೆ. ಅವೆಲ್ಲವುಗಳ ಹಿಂದೆ ಭಾರತೀಯ ರಾಷ್ಟ್ರೀಯ ದೃಷ್ಟಿಯ ಕಾಣ್ಕೆಯಿದೆ.

ಬೆಂಗಳೂರಿನಲ್ಲಿ ಪರಿಷತ್ತಿನ ಕಾರ್ಯಕ್ರಮಗಳು

ಇದೀಗ ರೂಪುಗೊಳ್ಳುತ್ತಿರುವ ಬೆಂಗಳೂರು ವಿಶ್ವವಿದ್ಯಾನಿಲಯವೂ ತನ್ನ ರೀತಿಯಲ್ಲಿ ಪ್ರಗತಿಯ ಹೆಜ್ಜೆಗಳನ್ನು ಇಡುವುದರಲ್ಲಿ ಸಂಶಯವಿಲ್ಲ. ಇಲ್ಲಿ ರಾಜಾಜಿನಗರದ ಸಾಹಿತ್ಯಾಭ್ಯಾಸಿಗಳು ಕನ್ನಡಿಗರ ಕೂಟದವರು, ಗಾಂಧೀ ಸಾಹಿತ್ಯ ಸಂಘದವರು ಪರಿಷತ್ತಿನ ಸಹಾಕಾರದಿಂದ ವಿವಿಧ ಸಾಹಿತಿಗಳ ಸಮಗ್ರ ಕೃತಿಗಳ ಪರಿಚಯಾತ್ಮಕ ಭಾಷಣಗಳನ್ನು ಏರ್ಪಡಿಸುತ್ತಿರುವುದನ್ನೂ ನೆನೆಯಬೇಕು.

ಅಧಿಕ ಜನ ಸದಸ್ಯರಾಗಲಿ

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರ ದಕ್ಷ ನೇತೃತ್ವದಲ್ಲಿ ನಮ್ಮ ಈ ಹಿರಿಯ ಸಂಸ್ಥೆ ಧನಬಲವನ್ನೇ ಗಳಿಸುತ್ತ ಕಿರಿಯ ಚೈತನ್ಯಗಳನ್ನು ಬೆಳಸುತ್ತ ವಿಶಾಲ ಭಾವನೆಯನ್ನು ದೂರದೃಷ್ಟಿಯನ್ನೂ ಕೈಗೂಡಿಸಿಕೊಳ್ಳುತ್ತ ಮುಂದುವರಿದಿದೆ. ಇಂಥ ಸಂಸ್ಥೆಗೆ ಬಹು ಸಂಖ್ಯೆಯಲ್ಲಿ ಜನ ಬೆಂಬಲವಾಗಿ ನಿಂತರೆ ಕನ್ನಡದ ಮುನ್ನಡೆ ಬೇಗ ಸಾಧಿತವಾಗಿತ್ತದೆ. ನಮ್ಮ ಜನ ಈ ಕಡೆ ಗಮನವಿಡಲಿ.

Tag: Kannada Sahitya Sammelana 46, Aa.Ne. Upadhye

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)