ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬

ಅಧ್ಯಕ್ಷತೆ: ಎಸ್.ವಿ. ರಂಗಣ್ಣ

sv-ranganna

೪೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಸ್.ವಿ. ರಂಗಣ್ಣ 

ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ವೆಂಕಟಸುಬ್ಬಯ್ಯ-ವೆಂಕಟಲಕ್ಷ್ಮಮ್ಮನವರ ಮಗನಾಗಿ ೨೪-೧೨-೧೮೯೮ರಲ್ಲಿ ಜನಿಸಿದರು.

ಇವರ ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನೂ, ೧೯೨೧ರಲ್ಲಿ  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು.

೧೯೨೩ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ೧೯೨೮-೩೩ರವರೆಗೆ ತುಮಕೂರಿನಲ್ಲಿ, ೧೯೩೩ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ೧೯೫೪ರಲ್ಲಿ ನಿವೃತ್ತರಾದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ಉಪಾಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿಯೂ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಸಮಿತಿಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನ ಸಹಕಾರ ಸಂಘ, ಪದವೀಧರರ ಸಹಕಾರ ಸಂಘ, ಅನಾಥಾಲಯ ಇವುಗಳ ಅಧ್ಯಕ್ಷರಾಗಿಯೂ, ಶಾರದಾವಿಲಾಸ ವಿದ್ಯಾ ಸಂಸ್ಥೆಗಳ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

೧೯೬೫ರಲ್ಲಿ ಇವರ ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ೧೯೭0ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಿ.ಲಿಟ್. ಪದವಿಯನ್ನೂ ನೀಡಿತು.

೧೯೩೩ರಿಂದ ೧೯೩೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು. ೧೯೭೬ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಸ್ಕೌಟ್ ಚಳುವಳಿಯಲ್ಲಿ ಸದಾ ನಿರತರಾಗಿದ್ದು ರಜತಗಜ ಪ್ರಶಸ್ತಿಗೆ ಪಾತ್ರರಾಗಿದ್ದರು.

ಇವರು ರಚಿಸಿದ ಕನ್ನಡ ಕೃತಿಗಳೆಂದರೆ:  ಕುಮಾರವ್ಯಾಸನ ವಾಣಿ, ಕಾಳಿದಾಸನ ನಾಟಕಗಳ ವಿಮರ್ಶೆ, ರಂಗಬಿನ್ನಪ, ಮರುಬಿನ್ನಪ, ಕವಿಕಥಾಮೃತ, ನಾಟುನುಡಿ, ಹರಿಶ್ಚಂದ್ರಕಾವ್ಯ(ನಾಟಕ), ಉತ್ತರಕುಮಾರ(ನಾಟಕ), ಪಾಶ್ಚಾತ್ಯ ಗಂಭೀರ ನಾಟಕಗಳು(ಬೃಹದ್ಗ್ರಂಥ), ಶೈಲಿ ಇತ್ಯಾದಿ.

ಇಂಗ್ಲಿಷಿನಲ್ಲಿ ಪರಿಣತಿ ಹೊಂದಿದ್ದ ಇವರು ಹಲವಾರು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ದಿ ಲೇಡಿ ಅಂಡ್ ರಿಂಗ್, ಓಲ್ಡ್ ಟೇಲ್ಸ್ ರಿ ಟೋಲ್ಡ್, ಆನ್ ದಿ ಸೆಲ್ಫ್, ಬಿಎಂಶ್ರೀ(ಬಯೋಗ್ರಾಫಿ) ಇತ್ಯಾದಿ.

ರಂಗಣ್ಣನವರು ೧೭-೨-೧೯೮೭ರಂದು ಇಹಲೋಕವನ್ನು ತ್ಯಜಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೯,

ಅಧ್ಯಕ್ಷರು, ಎಸ್.ವಿ. ರಂಗಣ್ಣ

ದಿನಾಂಕ ೧೧, ೧೨, ೧೩ ಡಿಸೆಂಬರ್ ೧೯೭೬            

ಸ್ಥಳ : ಶಿವಮೊಗ್ಗ

[ಟಿಪ್ಪಣಿ : ೧೯೭೫ರಲ್ಲಿ ಸಮ್ಮೇಳನ ನಡೆಯಲಿಲ್ಲ]

ಹಿಂದಿನ ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಮೂರು ಸಂಪುಟಗಳನ್ನು ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಯಂತೆ ವ್ಯಾಸಂಗ ಮಾಡಿದೆ, ಆಸಕ್ತಿಯಿಂದ ಆಹ್ಲಾದಪಡುತ್ತ ವ್ಯಾಸಂಗ ಮಾಡಿದೆ. ಉಜ್ವಲ ದಾರಿದೀಪ ದೊರಕಿದುವು ನನಗೆ. ಅಲ್ಲದೆ ಹಲವು ಕುತೂಹಲ ಕೆರಳಿಸುವ ಸಂಗತಿಗಳೂ ಅನೇಕ ಉಪಯುಕ್ತ ಮಾಹಿತಿಗಳೂ ಕೈವಶವಾಗಿ ತೃಪ್ತಿಯನ್ನು ತಂದುಕೊಟ್ಟುವು. ಒಂದೆರಡನ್ನು ನಿರೂಪಿಸಲು ನಿಮ್ಮ ಅನುಮತಿ ಬೇಡುತ್ತೇನೆ. ೪೬ ಅಧ್ಯಕ್ಷರುಗಳಲ್ಲಿ ೩೪ ಮಂದಿಗೆ ೫0ರ ಮೇಲೆ, ೯ ಮಂದಿಗೆ ೬0ರ ಮೇಲೆ, ಮೂವರಲ್ಲಿ ಇಬ್ಬರಿಗೆ ೭0, ಇನ್ನೊಬ್ಬರಿಗೆ ೭೮. ೭೮ ವರ್ಷದವರಾರೆಂದರೆ ಎಂ. ವೆಂಕಟಕೃಷ್ಣಯ್ಯನವರು, ಉರುಫ್ ತಾತಯ್ಯ, ಅವರ  ನಾಮಧೇಯವನ್ನು ಏಕೆ ಉಚ್ಚರಿಸುತ್ತಿದ್ದೇನೆ ಎಂದರೆ ಕಾಕತಾಳೀಯ ನ್ಯಾಯದಿಂದ ನನಗೂ ೭೮! ನನ್ನನ್ನು ‘ಜ್ಞಾನವೃದ್ಧ’, ‘`ವಯೋವೃದ್ಧ’ ಎಂದು ಸಂಬೋಧಿಸುವುದು ಪರಿಚಯ ಭಾಷಣಕಾರರ ವಾಡಿಕೆಯಾಗಿದೆ. ಮೊದಲನೆಯದನ್ನು ನಾನು ಸುತರಾಂ ಒಪ್ಪುವುದಿಲ್ಲ; ಎರಡನೆಯದರಲ್ಲಿ ‘ವೃದ್ಧ’ ಎಂಬುದನ್ನು ಕಿತ್ತುಹಾಕಿದರೆ ‘ವಯೋ’ ಎಂಬುದಕ್ಕೆ ನನ್ನ ಸಮ್ಮತಿ, ಹಾಗೂ “ಮನುಷ್ಯನ ಮನಸ್ಸಿನಂತೆ ಅವನ ವಯಸ್ಸು” ಎಂಬ ನಿಜಾಂಶದ ಕಡೆಗೆ ನಿಮ್ಮ ಲಕ್ಷ್ಯವನ್ನು ಎಳೆಯುವುದು ನನ್ನ ನಿರ್ಧಾರ, ಕಿರಿಯ ವಯಸ್ಸಿನ ಅಧ್ಯಕ್ಷರೂ ಉಂಟು ಪಟ್ಟಿಯಲ್ಲಿ; ೧೯೨೯ರಂದು ಬೆಳಗಾವಿಯಲ್ಲಿ ಕೂಡಿದ್ದ ಸಮ್ಮೇಳನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಧ್ಯಕ್ಷರಾದಾಗ ಅವರಿಗೆ ಮೂವತ್ತೆಂಟೇ ವರ್ಷ! ಹಿಂದೊಮ್ಮೆ ಬ್ರಿಟಿಷ್ ಪಾರ್ಲಿಮೆಂಟಿಗೆ ೪೫ ವರ್ಷದವನೊಬ್ಬ ಚುನಾಯಿತನಾಗಿ ಬಂದಾಗ ಹಳೆಯ ಸದಸ್ಯರಲ್ಲಿ ಹಲವರು “ಇದೇನು ನಮ್ಮ ಸಂಸತ್ತು ತರುಣರ ಪಾಲಾಗುತ್ತಿದೆ!” ಎಂದು ಗೊಣಗುಟ್ಟಿದರಂತೆ, ನಮ್ಮ ಕರ್ನಾಟಕದ ಜನತೆ ಮೇಲು ಎಂದು ನಾವು ಹೆಮ್ಮೆಗೊಳ್ಳಬಹುದು.

ವಯಸ್ಸಾದ ಮೇಲೆ ವಿಸ್ತೀರ್ಣ, ಎಂದರೆ ಅಧ್ಯಕ್ಷರುಗಳ ದೇಹಾಕೃತಿಯ ಉದ್ದ ಅಗಲವಲ್ಲ ನನ್ನ ಅರ್ಥ; ಅವರ ವಚೋವಿಲಾಸದ ವಿಸ್ತೀರ್ಣ. ಅದರಲ್ಲಿ ಇನ್ನೂ ಹೆಚ್ಚಿನ ವೈವಿಧ್ಯ ಗೋಚರವಾಗುತ್ತದೆ. ಎಂ. ವೆಂಕಟಕೃಷ್ಣಯ್ಯನವರ ಭಾಷಣ ಅಚ್ಚಿನಲ್ಲಿ ಕೇವಲ ೬ ಪುಟಗಳು, ಟಿ.ಪಿ. ಕೈಲಾಸಂ ಅವರದ್ದು ೭ ಪುಟ; ರೊದ್ದ ಶ್ರೀನಿವಾಸರಾಯರದ್ದು ೭ ೧/೨ ಪುಟ. ಇನ್ನೊಂದು ಕೊನೆಯಲ್ಲಿ ಸಿ.ಕೆ. ವೆಂಕಟರಾಮಯ್ಯನವರ ಭಾಷಣ ೬೪ ೧/೬ ಪುಟ, ಟಿ.ಟಿ. ಶರ್ಮರದ್ದು ೬೪ ೧/೨ ಪುಟ. ಮಹಾಶಯರಿಬ್ಬರು ತಮ್ಮ ಆಯುರ್ದಾದಷ್ಟೇ ಸಂಖ್ಯೆಯ ಪುಟಗಳ ಭಾಷಣ ಕೊಟ್ಟಿದ್ದಾರೆ; ವಿ. ಸೀತಾರಾಮಯ್ಯನವರು, ೫೩; ಅ.ನ. ಕೃಷ್ಣರಾಯರು ೫೩! ಅದು ದಿಟವಾಗಿ ಅನುದ್ದಿಷ್ಟ ಹೊಂದಾವಣೆ; ಬಹುಶಃ ವೈಚಿತ್ರ್ಯವನ್ನು ಅರಸುವ ನನ್ನ ವೈಯಕ್ತಿಕ “ರೊಮ್ಯಾಂಟಿಕ್” ಲೋಚನ ಮಾತ್ರ ಕಂಡುಹಿಡಿದ ಆಕಸ್ಮಿಕ ಹೊಂದಾವಣೆ.

ಸಮ್ಮೇಳನ ಅಧ್ಯಕ್ಷರ ಭಾಷಣ ವೈಖರಿ

ವೈಚಿತ್ರ್ಯ ಎಂದೆನಷ್ಟೆ. ಇನ್ನೂ ಬೇಕಾದಷ್ಟನ್ನು ವಿವರಿಸಬಲ್ಲೆ ಒಂದನ್ನು ಕುರಿತು ಕೊಂಚ ಹೇಳಿ ಈ ಪ್ರಸ್ತಾಪವನ್ನು ಮುಕ್ತಾಯಗೊಳಿಸುತ್ತೇನೆ. ಅದು ಅಧ್ಯಕ್ಷ ಭಾಷಣಗಳಲ್ಲಿ ಪಲ್ಲವಿಯೋಪಾದಿ ಪುನಃ ಪುನಃ ಕೇಳಿಬರುವ “ಅಲ್ಪಮತಿ ನಾನು, ಹೊರಿಸಿರುವ ಜವಾಬ್ದಾರಿ ಗುರುಭಾರ, ಅನರ್ಹನನ್ನು ಒಲುಮೆಯಿಂದ ಮನ್ನಿಸಿ!” ಎಂಬ ಶಬ್ದಗುಚ್ಚಕ್ಕೆ ಸಂಬಂಧಿಸಿದುದು. ೧೯೨೨ರ ದಾವಣಗೆರೆ ಸಮ್ಮೇಳನದಲ್ಲಿ  ಎಂ. ವೆಂಕಟಕೃಷ್ಣಯ್ಯನವರು “ಇಂತಹ ಸನ್ಮಾನಕ್ಕೆ ನಾನು ಅರ್ಹನಲ್ಲ” ಎಂದು ಖಂಡಿತವಾಗಿ ನುಡಿದು, ಅಧ್ಯಕ್ಷ ಪೀಠದಲ್ಲಿ ಮಹಾರಾಜರ ಚಿತ್ರವನ್ನು ಇಟ್ಟು, ಮಗ್ಗುಲಲ್ಲಿ ನಿಂತುಕೊಂಡು ತಮ್ಮ ಪುಟ್ಟ ಭಾಷಣವನ್ನು ಮಾಡಿದವರಂತೆ, ೧೯೨೭ರ ಮಂಗಳೂರಿನ ಕೂಟದಲ್ಲಿ ರಾಜಕವಿ ತಾತಾಚಾರ್ಯರು “ನನ್ನ ಭಾಷಣ”     ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಹಿಂದಿನ ಭಾಷಣಗಳಂತೆ ಇಲ್ಲವೇ ಇಲ್ಲ; ಇನ್ನು ಮುಂದೆ ಬರಲಿಕ್ಕಿರುವ ಭಾಷಣಗಳಂತೆಯೂ ಇರಲಾರದು” ಎಂದು ಘೋಷಿಸಿ, ತಕ್ಷಣವೇ ನಾಟುನುಡಿಯಂಥ ವ್ಯಾಖ್ಯಾನವನ್ನು ತಾವೇ ಮಾಡಿದರು : “ಗುಣವೂ ಇಲ್ಲ, ಹಿತಸೂಚನೆಯೂ ಇಲ್ಲ, ವಾಗ್ಧಾಟಿಯೂ ಇಲ್ಲ ನನ್ನಲ್ಲಿ.” ೧೯೩೫ ರಂದು ಬೆಳಗಾವಿ ಸಮ್ಮೇಳನದಲ್ಲಿ ಮುದವೀಡು ಕೃಷ್ಣರಾಯರು ತಮ್ಮದೇ ಆದ ಗಂಡುದನಿಯಲ್ಲಿ ಹೀಗೆಂದರು : “ನೀವೆಲ್ಲ ಹಿಡಿದು ತಂದು ಈ ಪೀಠಕ್ಕೆ ಬಿಗಿದು ಕಟ್ಟಿದಿರಿ. ತಮ್ಮ ಈ ಕೃತಿಯು ಅನುಚಿತವೆಂದು ಹೇಳುವೆನೆ? ತಮ್ಮೆಲ್ಲರ ಸಾರಾಸಾರ ವಿವೇಚಕ ವಿಮರ್ಶಾಬುದ್ಧಿಗೆ ಕುಂದನ್ನಿಟ್ಟು ಮಾತನಾಡುವ ಎದೆಗಾರಿಕೆಯನ್ನು ಮಾಡಿದಂತಾಗುವುದು. ಅಂತಹ ಮಹಾಪರಾಧವನ್ನು ನಾನೆಂದಿಗೂ ಮಾಡಲಾರೆನು.” ಅವರ ಹೆಜ್ಜೆಯನ್ನು ಹಿಂಬಾಲಿಸಬೇಕೆಂಬುದು ನನ್ನ ಆಂತರ್ಯದ ಚಪಲ; ಆದರೆ ಅವರು “ಬಿರುಗಾಳಿ”, ನಾನು ಕಿರುಗಾಳಿಯೂ ಅಲ್ಲ. ನನ್ನ ವಚನಗಳಲ್ಲಿ ಆಗಾಗ “ಸ್ವರ್ಗವೆಲ್ಲಿಹುದಯ್ಯ ಸ್ವರ್ಗವೆಲ್ಲಿಲ್ಲವಯ್ಯ”, “ಶಿಲಾಬಾಲಿಕೆಯ ನೋಡದವ ಕಲ್ಲು ನೋಡಿದವ ನೂಲ್ಲು” ಇತ್ಯಾದಿ ವಿರುದ್ಧ ದ್ವಂದ್ವ ತಾನಾಗಿ ಬರುತ್ತದೆ. ನನ್ನ ಪೂರ್ವಾರ್ಜಿತ ಪುಣ್ಯ, ಪ್ರಾಮಾಣಿಕ ಸಾಹಿತ್ಯಕ ಪ್ರಯತ್ನ, ನಿಮ್ಮೆಲ್ಲರ ಪ್ರೀತಿ-ಔದಾರ್ಯ ಮೂರೂ ಒಟ್ಟಾಗಿ ನನಗೆ ಈ ಹೆಗ್ಗೌರವವನ್ನು ತಂದುಕೊಟ್ಟಿವೆ. ನಿಮಗೆ ನನ್ನ ಅಳತೆಮೀರಿದ ಅಪಾರ ಧನ್ಯವಾದ.

ಸಾಹಿತ್ಯ ಪರಿಷತ್ತು

೧೯೧೫ರ ಏಪ್ರಿಲಿನಲ್ಲಿ ರೂಪುಗೊಂಡ “ಕರ್ನಾಟಕ ಸಾಹಿತ್ಯ ಪರಿಷತ್ತು” ಮೇ ತಿಂಗಳಿನಲ್ಲಿಯೇ ಪ್ರಥಮ ಸಮ್ಮೇಳನ ನಡೆಸಿ, ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳು ಒದಗಿಸಿಕೊಟ್ಟ “ಸದುದ್ದೇಶ ಪಂಚಕ”ವನ್ನು ತನ್ನ ಪ್ರಣಾಳಿಕೆಯನ್ನಾಗಿ ಒಪ್ಪಿಕೊಂಡಿತು. ೧) ಪಾರಿಭಾಷಿಕ ಶಬ್ದಗಳ ರಚನೆ ೨) ಪ್ರಾದೇಶಿಕ ಭಾಷಾಭೇದಗಳ ನಿವಾರಣೆ ೩) ಹೊಸಗನ್ನಡ ವ್ಯಾಕರಣ ನಿರ್ಮಾಣ ೪) ನಾಡಿಗೆಲ್ಲ ಸಮಾನವಾದ ಪಠ್ಯಪುಸ್ತಕ ತಯಾರಿಕೆ ೫) ಕನ್ನಡತನದ ಪ್ರಚಾರ. ಭಾಷಾಶುದ್ಧತೆಯ ವಿಚಾರವಾಗಿ ಇಷ್ಟೊಂದು ಶ್ರದ್ಧೆ ಪರಿಷತ್ತಿಗೆ ಇದ್ದುದನ್ನು ನೋಡಿದರೆ ಅದು “ಫ್ರೆಂಚ್ ಅಕಾಡೆಮಿ”ಯಿಂದ ಪ್ರಭಾವಿತವಾಗಿತ್ತೆಂದು ಊಹಿಸಬಹುದು. ಅದು ಕೇವಲ ಅಗ್ರ ವಿದ್ವನ್ಮಂಡಲಿ; ಅದರ ಸದಸ್ಯರು ನಲವತ್ತೇ ಮಂದಿ; ಒಬ್ಬನ ಜಾಗ ತೆರವಾಗುವವರೆಗೂ ಚುನಾವಣೆಯಿಲ್ಲ. ಕಟ್ಟುಗ್ರ ಮಡಿವಂತಿಕೆ ಅದರ ಮುಖ್ಯ ಲಕ್ಷಣ. ೧೬೩೪ ರಂದು ಹುಟ್ಟಿಬಂದ ಆ ಉತ್ತಮ ಸಂಸ್ಥೆಯ ಬಿಗಿದರ್ಪ ಎಷ್ಟೆಂದರೆ ೧೯೩೩ರಲ್ಲೂ ತನ್ನ ಪರಿಷ್ಕೃತ ನಿಘಂಟುವಿನಲ್ಲಿ ಯೂರೋಪಿನ ಸಮಸ್ತ ರಾಷ್ಟ್ರಗಳೂ ಒಪ್ಪಿಕೊಂಡು ಬಳಸುತ್ತಿರುವ “ಕ್ಲಾಸಿಸಿಸ್ಮ್” (.., ಶಿಷ್ಟತೆ) ಎಂಬ ಪದವನ್ನು “ನವೀನತೆ” (..)ಯೆಂದು ನಿರ್ಣಯಿಸಿ ಹೊರದೂಡಿದೆ! ಅಂಥ ಕಠೋರ ನೇಮ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಇದ್ದಂತೆ ತೋರುವುದಿಲ್ಲ. ಇದ್ದಿದ್ದರೂ ಅದರ ಆಶಯ ಬರಿ ಪುಸ್ತಕದ ಬದನೆಯಕಾಯಿಯೇ ಆಗಿ ಮೂಲೆಹಿಡಿಯಬೇಕಾಗುತ್ತಿತ್ತು; ಏತಕ್ಕೆಂದರೆ ಕನ್ನಡ ಸಾಹಿತ್ಯದ ಹೊಸ ಹುಟ್ಟು (..) ಸುಮಾರು ೧೯೨0ರಿಂದಲೇ ತಲೆಯೆತ್ತಿತಲ್ಲವೆ? ಪರಿಷತ್ತಿನ ಮೂಲ ಧ್ಯೇಯಗಳಲ್ಲಿ ಒಂದಾದ “ಕನ್ನಡತನದ ಪ್ರಚಾರ”ದತ್ತ ನಿಮ್ಮ ಗಮನ ಸೆಳೆಯುವುದು ನನ್ನ ಕರ್ತವ್ಯ. ಮೊದಮೊದಲು ಪರಿಷತ್ತಿನ ಕಾರ್ಯಕ್ಷೇತ್ರ ಸಂಕುಚಿತವಾಗಿದ್ದರೂ ಅದರ ಒಂದು ಸಾಧನೆ ಮಹತ್ತರವಾದದ್ದೆ: ಅದೇನೆಂದರೆ “ಸಾಕ್ಷರರನ್ನು ರಾಕ್ಷಸರನ್ನಾಗಿಸಿದುದು”! ವಾಕ್ಯದ ವ್ಯಂಗ್ಯಾರ್ಥವನ್ನು ಪಂಡಿತವರ್ಯರಿಂದ ನಾನು ಕಲಿತೆ: ಸಾಕ್ಷರರು=ಪರಭಾಷೆಗಳಲ್ಲಿ ಪರಿಶ್ರಮ ಹೊಂದಿದವರು; ರಾಕ್ಷಸರು=ಅನ್ಯಭಾಷೆಗಳ ವ್ಯಾಮೋಹಾತಿರೇಕವನ್ನು ಕಿತ್ತೊಗೆದ ಪ್ರಚಂಡರು ಅಥವಾ ದೈತ್ಯರು!

ಪರಿಷತ್ತಿಗೆ ಬಿ.ಎಂ.ಶ್ರೀ. ಅವರ ಸೇವೆ

ಸುಮಾರು ೧೯೩೪ ರಿಂದ ಕನ್ನಡದ ಬಗೆಗೆ ಆವೇಶವೊ ಎಂಬಂಥ ಉಲ್ಲಾಸೋತ್ಸಾಹ ಹೆಚ್ಚು ಹೆಚ್ಚು ಜನರಲ್ಲೂ ಹೆಚ್ಚು ಹೆಚ್ಚು ಊರುಗಳಲ್ಲೂ ಮೂಡಲಾರಂಭಿಸಿತು. ಆ ಉತ್ಸಾಹ ಸುಭದ್ರವಾದ ನಾಲೆಗಳ ಮೂಲಕ ಪ್ರಯೋಜನಕರವಾಗಿ ಹರಿಯುವುದಕ್ಕೆ ಮಾರ್ಗದರ್ಶನವಾಗಲೆಂದು ಪರಿಷತ್ತು ತನ್ನ ಸ್ವಂತ ಮಂದಿರದಲ್ಲಿ ಗ್ರಂಥ ಪ್ರದರ್ಶನ, ಸಾಹಿತ್ಯೋತ್ಸವ, ಉಪನ್ಯಾಸಮಾಲೆ, ಕಾವ್ಯವಾಚನ, ಮಹಿಳೆಯರ ಗೋಷ್ಠಿಗಳನ್ನು ಅಚ್ಚುಕಟ್ಟಾಗಿ ನಡೆಯಿಸಿತು. ಆಗ ದಿವಂಗತ ಡಿ.ವಿ. ಗುಂಡಪ್ಪನವರು ಉಪಾಧ್ಯಕ್ಷರಾಗಿದ್ದರು. ಅವರ ತರುವಾಯ ಆಡಳಿತ ಸೂತ್ರಗಳನ್ನು ಕೈಗೆ ತೆಗೆದುಕೊಂಡ ದಿವಂಗತ ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನ ನಿಯತ ಕಾರ್ಯಕ್ರಮಕ್ಕೆ ಹೊಸ ಅಂಶಗಳನ್ನು ಸೇರಿಸಿದರು: ವ್ಯಾಸಂಗ ಗೋಷ್ಠಿ, ಸಾಹಿತ್ಯ ಪರೀಕ್ಷೆ, ಸಂಶೋಧನೆ, ನಾಟಕಾಭಿನಯ, ಬಾಲಕ ಬಾಲಕಿಯರ ಸ್ಪರ್ಧೆ, ಸಂತೋಷ ಭೋಜನ-ಇತ್ಯಾದಿ. “ಶ್ರೀ”ಯವರು ತಮ್ಮ ಪ್ರಾಧ್ಯಾಪಕ ಅವಧಿ ಇನ್ನೂ ಒಂದು ವರ್ಷ ಅಧಿಕವಾದ್ದರಿಂದ ಸಂಬಳದ ಅರ್ಧಭಾಗವನ್ನು, ಎಂದರೆ ೬000 ರೂಪಾಯನ್ನು ಪರಿಷತ್ತಿಗೆ ದಾನಮಾಡಿ ಅಚ್ಚುಕೂಟವನ್ನು ಒದಗಿಸಿಕೊಟ್ಟರು. ಅವರ ಇನ್ನೊಂದು ವಿಶಿಷ್ಟ ಕೊಡುಗೆ : “ಕನ್ನಡ ಬಾವುಟ”. ಅದು ಪ್ರಕಟವಾಗುವುದಕ್ಕೆ ಮುನ್ನ ಜರುಗಿದ ನಾಟಕೀಯ ಪ್ರಸಂಗ ಪ್ರಾಯಶಃ ಅನೇಕರಿಗೆ ಗೊತ್ತಿಲ್ಲ. ನವರಾತ್ರಿಯ ಸಮಯ; ಕಾರ್ಯಕಾರಿ ಸಮಿತಿ ಕೂಡಿದ್ದಾಗ ಇದ್ದಕ್ಕಿದ್ದಂತೆ “ಶ್ರೀ”ಯವರು “ನಮ್ಮ ಕನ್ನಡ ಬಾವುಟವನ್ನು ಹಾರಿಸೋಣ!” ಎಂದರು. ಸಮಿತಿಯ ಸದಸ್ಯರಿಗೆ ಭೀತಿ ಉಂಟಾಯ್ತು; ಏತಕ್ಕೆಂದರೆ ಆಗ ಕೆಂಪಾಂಬುಧಿ ಕೆರೆಯ ಅಂಗಳದಲ್ಲಿ “ಕಾಂಗ್ರೆಸ್ ಧ್ವಜ”ವನ್ನು ಹಾರಿಸಲು ಸ್ವಾತಂತ್ರ್ಯ ಹೋರಾಟದವರು ಪ್ರಯತ್ನಿಸಿದಾಗ ಗಲಭೆ, ಲಾಟಿ ಪ್ರಯೋಗ, ೧೪೪ನೇ ವಿಧಿಯ ಜಾರಿ ಆಗಿ ವಾತಾವರಣ ಕದಡಿಹೋಗಿತ್ತು. ಆದರೆ ಸಮಿತಿಯ ಸದಸ್ಯರಾರೂ ಮಾತನಾಡಲಿಲ್ಲ. ನಾನು ಎದೆಗಾರಿಕೆಯಿಂದ-ಎಂದರೆ ಕಾರ್ಯದರ್ಶಿ ಆಗಿದ್ದುದರಿಂದ “ಈಗ ಆ ಪ್ರಯತ್ನ ಬೇಡಿ, ಸ್ವಾಮಿ; ಮುಂದೊಂದು ದಿವಸ ಪರಿಸ್ಥಿತಿ ಶಾಂತವಾದಾಗ ಏರಿಸೋಣ” ಎಂದು ಪ್ರತಿಭಟಿಸಿದೆ. ಆಮೇಲಾದ ಚರ್ಚೆಯಲ್ಲಿ ಸದಸ್ಯರೆಲ್ಲ ನನ್ನನ್ನು ಅನುಮೋದಿಸಿದರು; ನನ್ನ ಗುರುಗಳು ತಮ್ಮ ಪ್ರಬಲೇಚ್ಛೇಯನ್ನು ಒಳಕ್ಕೇ ಅದುಮಬೇಕಾಯ್ತು. ಕವಿಶ್ರೇಷ್ಠರಾದ್ದರಿಂದ ಬೇರೊಂದು ಸ್ಫೂರ್ತಿ ಅವರ ಚಿತ್ತದಲ್ಲಿ ಮಿಂಚಿತು. ೧೫00 ಸಂವತ್ಸರಗಳ ಕನ್ನಡ ಕಾವ್ಯ ‘ಬೆಳೆ’ಯಲ್ಲಿ ಉತ್ಕೃಷ್ಟ ‘ತೆನೆ’ಗಳನ್ನು ಆರಿಸಿಕೊಂಡು ಸಂಪಾದಿಸಿ ಏತಕ್ಕೆ ಪ್ರಕಟಿಸಬಾರದು? ಅಗತ್ಯವಾಗಿ ಆ ಕೆಲಸ ಮಾಡೋಣ ಎಂಬ ಸಮ್ಮತಿ ನೀಡಿದವರಲ್ಲಿ ಬಹುಶಃ ನಾನೇ ಮೊದಲಿಗ! ಸಮಿತಿಯ ಕಾರ್ಯಕಲಾಪ ಮುಗಿದು ನಾವಿಬ್ಬರೇ ಇದ್ದಾಗ “ಶ್ರೀ”ಯವರು ಮಾಡಿದ ಚಿಕ್ಕ ಗುಣಕಥನ ಇನ್ನೂ ನೆನಪಿನಿಂದ ಅಳಿಸಿಹೋಗಿಲ್ಲ; ಏನಪ್ಪಾ, ನೀವು ಬಹಳ ಹಠ ಹಿಡಿಯುತ್ತೀರಿ”. ಇನ್ನೊಂದು ನೋವು-ನಲಿವಿನ ಪ್ರಕರಣ. ನಿಯಾನ್ ವಿದ್ಯುದ್ದೀಪ ಆಗತಾನೆ ಪ್ರಸಾರಗೊಳ್ಳುತ್ತಿತ್ತು. ಅದರಿಂದ ಕಟ್ಟಡವನ್ನು ಅಲಂಕರಿಸುವ ಅಭಿಲಾಷೆ “ಶ್ರೀ”ಯವರಲ್ಲಿ ಎದ್ದುಬಂತು. “ಕರ್ನಾಟಕ ಸಾಹಿತ್ಯ ಪರಿಷತ್ತು” ಎಂದು ಕೂಗುವ ತಿಳಿಹಸಿರು ದೀಪನಾಮ ಭವನದ ಫಾಲದಿಂದ ಜಾಜ್ವಲಿಸತೊಡಗಿತು; ಅನೇಕರಿಗೆ ಸಂತಸ ಉಂಟಾಯ್ತು. ೧೯೧೮ ರಿಂದ ೧೯೩0ರ ವರೆಗೆ ಕಾರ್ಯದರ್ಶಿ ಅಥವಾ ಕೋಶಾಧಿಕಾರಿಯಾಗಿ ಪರಿಷತ್ತಿನ ಭಾರವನ್ನು ಹೊತ್ತು ನಿವೃತ್ತರಾಗಿ, ಇಂಗ್ಲಿಷು ನಿಘಂಟುವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಸಮಿತಿಗೆ ಮುಖ್ಯಸ್ಥರಾಗಿ ಪರಿಷನ್ಮಂದಿರ ಒಂದು ಕೋಣೆಯಲ್ಲೇ `ಕಛೇರಿ’ ಕೆಲಸವನ್ನು ಕೈಗೊಂಡಿದ್ದ ಅತಿ ಶಿಸ್ತಿನ ಬೆಳ್ಳಾವೆ ವೆಂಕಟನಾರಣಪ್ಪನವರಿಗಾದರೂ ಆಗ್ರಹ ಉಲ್ಬಣವಾಯ್ತು: “ಕರ್ಣಾಟಕ” ಎಂಬುದಾಗಿ ರೂಪಾಂತರಗೊಳಿಸಿದ್ದೇತಕ್ಕೆ? ಮಾರ್ಪಾಟನ್ನು ಸಕಲ ಸದಸ್ಯರ ಅಧಿವೇಶನದಲ್ಲಿ ಚರ್ಚೆಗೆ ತಂದು ಒಪ್ಪಿಗೆ ಪಡೆಯಲಾಯ್ತೆ? ಎನ್ನುತ್ತ ಬಲವಾದ ವಿರೋಧ ಹೂಡಿದರು. ಅದು ಸರಿ ಇದು ಸರಿ ಎನ್ನುವ ಪಕ್ಷಗಳು ಜನಿಸಿದುವು, ತೀವ್ರ ವಿವಾದವೂ ಹಗರಣವೂ ಸೌಹಾರ್ದವನ್ನು ಕಲಕಿಬಿಟ್ಟುವು. ಅಧ್ಯಕ್ಷರಾಗಿದ್ದ ಯುವರಾಜರ ವರೆಗೂ ದೂರು ತಟ್ಟಿತು. ಕೊನೆಗೆ ಎರಡನ್ನೂ ಬಿಟ್ಟುಕೊಟ್ಟು “ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಮುದ್ದಾದ ಹೆಸರನ್ನು ಇರಿಸಿಕೊಳ್ಳಲು ಸರ್ವಾನುಮತದಿಂದ ತೀರ್ಮಾನವಾಯ್ತು. ಹದಿರು ಮಾತಿನ ಪ್ರೇಮಿಗಳು ‘ನೊಣ’ದ ವ್ಯಾಜ್ಯ ಫೈಸಲಾಯ್ತು!” ಎನ್ನುತ್ತ ಗಹಗಹಿಸಿದರು! ಅಂತ ಅನಿರೀಕ್ಷಿತ ಘಟನೆಗಳಿಂದ ತಮಗೆ ಎಷ್ಟು ಯಾತನೆ ಉಂಟಾದರೂ ಅದನ್ನು ಈಶದಪಿ ತೋರಗೊಡದೆ “ಶ್ರೀ”ಯವರು ಕನ್ನಡ ಮಮತೆಯನ್ನು ಬೇರೂರಿಸುವ ಕೈಂಕರ್ಯದಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದರು. ಕನ್ನಡ ನಾಡಿನ ಭೂಪಟವನ್ನು ಬಿಳಿಯ ಕರವಸ್ತ್ರದ ಮೇಲೆ ಕಸೂತಿ ಹಾಕಿಸಿಕೊಂಡು ಎಲ್ಲ ಕಡೆಯಲ್ಲೂ ಶ್ರೋತೃಗಳಿಗೆ ಪ್ರದರ್ಶಿಸುವುದು ಅವರ ವಾಡಿಕೆ. ನಾವು ಕೆಲವರು ಅವರನ್ನು ಅನುಸರಿಸಿದೆವು. ನನ್ನ ಧರ್ಮಪತ್ನಿ ರೇಸಿಮೆ ಕರವಸ್ತ್ರದ ಮೇಲೆ ಕಸೂತಿ ಹಾಕಿರುವ ಭೂಪಟ ನನ್ನ ಬಳಿ ಈಗಲೂ ಇದೆ. “ಕನ್ನಡ ನುಡಿ” ವಾರಪತ್ರಿಕೆಯಾಗಿ ಆರಂಭವಾದದ್ದು “ಶ್ರೀ”ಯವರ ಸಂಕಲ್ಪದಿಂದಲೇ, ಆ ಚಾರಿತ್ರಿಕ ಬಾವುಟ ಪ್ರಸಂಗದ  ಸಮಿತಿ ಸಭೆಯಲ್ಲಿಯೇ!

ಪರಿಷತ್ತಿನ ಸದಸ್ಯರು

೧೯೩೭ರಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ೪೩೨: ‘ಆಜೀವ’ ೧೩೧, ‘ಸಾಮಾನ್ಯ’ ೩0೨; ಆದಾಯ ರೂ.೪೫೪೭, ವೆಚ್ಚ ೪೯00! ಪರಿಷತ್ತು ಜನ್ಮ ತಾಳಿದಂದು ಸದಸ್ಯರ ಸಂಖ್ಯೆ ೧೩೭, ವರಮಾನವಾಗಿ ಸರಕಾರದ ಮಾಸಾಶನ ೧೩0. ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ಯಮವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ವ್ರತವನ್ನಾಗಿ ತಮ್ಮ ಉಪಾಧ್ಯಕ್ಷತೆಯಲ್ಲಿ ಆಚರಿಸಿದರು. ಆದರೂ ಲಭಿಸಿದ್ದು ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಯಾರನ್ನು ಸಂಧಿಸಿದರೂ ಅವರು “ಹೇಗಿದ್ದೀರಿ?” ಎಂಬ ಕುಶಲ ಪ್ರಶ್ನೆಗೆ ಬದಲಾಗಿ, “ನೀವು ಪರಿಷತ್ತಿಗೆ ಸದಸ್ಯರಾಗಿದ್ದೀರಾ?” “ಆಗಿದ್ದರೆ ಈಗಲೇ ಆಜೀವ ಸದಸ್ಯರಾಗಿ” ಎಂದು ಕೇಳುತ್ತಿದ್ದರು. ಆದರೇನು? ೧೯೫೭ರಲ್ಲಿ ಸದಸ್ಯರ ಸಂಖ್ಯೆ ೯೧0, ೧೯೬೭ರಲ್ಲಿ ೮೭೩: ಅದೇತಕ್ಕೆ ಈ ಇಳಿತಾಯ, ಇಂಥ ಅನ್ಯಾಯ? ಪರಿಷತ್ತಿನ ಸದಸ್ಯತ್ವ ಕನ್ನಡತನದ ಒಂದು ಗುರುತಲ್ಲವೆ? ೧೯೭೫ರ ಹೊತ್ತಿಗೆ ೨೩೬೪ಕ್ಕೆ ಏರಿದ್ದು ಸಮಾಧಾನಕರ.

ಪರಿಷತ್ತಿನ ವರಮಾನದ ಹೆಚ್ಚಳ ವಿಧಾನ

ವರಮಾನ ೧೯೬೭ರಲ್ಲಿ ೭೫,೫೪೧ ರೂಪಾಯಿ ಇದ್ದದ್ದು ೧೯೭೫ರಲ್ಲಿ ೧೧,0೭,೮೫೧ಕ್ಕೆ ಉಬ್ಬಿರುವುದು ನಿಜವಾಗಿ ಸಂತೋಷಕರ; ಆದರೆ ಕೃತಜ್ಞತೆ ಸಲ್ಲಬೇಕಾದದ್ದು ಮುಖ್ಯವಾಗಿ ನಮ್ಮ ಘನ ಸರ್ಕಾರಕ್ಕೆ! ಪರಿಷತ್ತು ವಹಿಸಿಕೊಂಡಿರುವ ಪಂಚವಾರ್ಷಿಕ ಯೋಜನೆಗೆ ಸುಮಾರು ೫0 ಲಕ್ಷ ರೂಪಾಯಿನ ಅಂದಾಜಿದೆ. ಮುಕ್ತಹಸ್ತದ ದಾನಿಗಳಿಗೆ ಉತ್ಕೃಷ್ಟ ಅವಕಾಶ. ವರಮಾನದ ವಿಚಾರವನ್ನು ಆಲೋಚಿಸುವಾಗ ಕೆಲವು ಸಂಗತಿ ಜ್ಞಾಪಕಕ್ಕೆ ಬರುತ್ತವೆ. ಪ್ರಾರಂಭದ ದಿವಸಗಳಲ್ಲಿ ಒಮ್ಮೆ ಐದು ರೂಪಾಯಿನ ‘ಷೇರುಗಳ ಜಾಯಿಂಟ್‍ಸ್ಟಾಕ್ ಕಂಪೆನಿ’ಯನ್ನು ತೆರೆಯುವ  ಯೋಜನೆ ಎದ್ದುಬಂದು ಬಲುಬೇಗ ಸದ್ದಿಲ್ಲದಂತಾಯ್ತು. ೧೯೨೩ ರಂದು ಬಿಜಾಪುರದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರಾದ ಶಿವಶಂಕರ ಶಾಸ್ತ್ರಿಗಳು “ನಮ್ಮ ಈ ಕನ್ನಡ ನಾಡಿಗರೆಲ್ಲರೂ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕನ್ನಡಕ್ಕೆ ಎಂದು ಪ್ರತಿ ಕುಟುಂಬವೂ ದ್ರವ್ಯಸಹಾಯ” ನೀಡಿ ಪರಿಷತ್ತಿನ ಮೂಲಧನವನ್ನು ಬೆಳೆಸಬೇಕೆಂದು ಹೇಳಿ, ಕಂದಪದ್ಯದ ಮೂಲಕ ತಮ್ಮ ಅಭಿಪ್ರಾಯಕ್ಕೆ ಮೆರುಗುಕೊಟ್ಟರು:

“ಬಡಗನ್ನಡ ನುಡಿವೆಣ್ಣಂ

ಬಡತನದಿಂ ಬಿಡಿಸಿ ನಾಡೆ ಸಿರಿವೆಣ್ಣಂ ಮಾ |

ಳ್ಪೊಡೆ ಮನೆಮನೆಗಂ ನಾಡಿಗ

ರಿಡಲಕ್ಕುಂ ಮಾಸಮಾಸಕೆನಸುಂ ಪಣಮಂ ||

ಹನಿಗೂಡಿದರೆ ಬರಿ ಹಳ್ಳವಲ್ಲ ವಿಶಾಲ ಸರೋವರ ಆಗುವುದು ನಿಸ್ಸಂದೇಹ. ಪ್ರಪಂಚದ ಸ್ಕೌಟುಗಳೆಲ್ಲ ತಲೆಗೆ ಒಂದಾಣೆಯಂತೆ ನಿಧಿ ಕೂಡಿಸಿ ೧೯೨೯ರಂದು ಸ್ಕೌಟು ಪದ್ಧತಿಯ ಜನಕನಾದ ಲಾರ್ಡ್ ಬೇಡನ್‍ಪೊವೆಲನಿಗೆ ರೋಲ್ಸ್‍ರಾಯ್ಸ್ ಕಾರು ಮತ್ತು ಕ್ಯಾರವಾನ್, ಪ್ರಖ್ಯಾತ ಚಿತ್ರಕಲಾವಿದ ಜೀಗರ್ ನಿರ್ಮಿಸಿದ ತೈಲ ಭಾವಚಿತ್ರಗಳನ್ನು ಮುಖ್ಯ ಕಾಣಿಕೆಯಾಗಿ ಅರ್ಪಿಸಿದರು! ಈಚಿನ ಆರೇಳು ವರ್ಷಗಳಲ್ಲಿ ನಮ್ಮ ಪರಿಷತ್ತು ಪುಷ್ಟಿಗೊಳ್ಳುತ್ತ ಆಕರ್ಷಕ ಲವಲವಿಕೆಯನ್ನು ಮೆರೆಯಿಸುತ್ತಿದೆ; ಅಧ್ಯಕ್ಷ ಜಿ. ನಾರಾಯಣ ಅವರನ್ನು ಕುರಿತು ೧೯೭0ರಲ್ಲಿ ಪ್ರೊ. ದೇ. ಜವರೇಗೌಡರು ಆಡಿದ ಮಾತುಗಳನ್ನು ತಮ್ಮ ಅವಗಾಹನೆಗೆ ತರುತ್ತೇನೆ: “ಶ್ರೀ ನಾರಾಯಣ ಅವರು ಬರಿಯ ಭಾವುಕರಲ್ಲ, ಕನಸುಗಾರರಲ್ಲ, ವಾಸ್ತವವಾದಿಗಳು ಕ್ರಿಯಾಶೀಲರು ಎಂಬುದನ್ನು ನಾ ಬಲ್ಲೆ. ಬಹು ಶೀಘ್ರವಾಗಿ ಅವರ ಯೋಜನೆಗಳೆಲ್ಲ ಕಾರ್ಯರೂಪಕ್ಕಿಳಿಯಲಿ, ಅವರ ಕಾಲದಲ್ಲಿ ಪರಿಷತ್ತಿನ ಕೀರ್ತಿ ದಿಗ್ಧಿಗಂತ ವ್ಯಾಪಿಯಾಗಲಿ ಎಂದು ಹಾರೈಸುತ್ತೇನೆ”. ನಮ್ರನಾದ ನನ್ನದೂ ಅದೇ ಹಾರೈಕೆ.

ಪರಿಷತ್ತಿನ ಕರ್ತವ್ಯ

ಪರಿಷತ್ತು ಇಂದು ಜಿಲ್ಲಾ ಅಂಗ ಸಂಸ್ಥೆಗಳ ಮೂಲಕವೂ ತಾನೇ ಖುದ್ದಾಗಿಯೂ ಮಹೋತ್ಸವಗಳನ್ನು ಏರ್ಪಡಿಸಿ ವಿದ್ಯಾವಂತರಿಗೂ ಇತರರಿಗೂ ಮಧ್ಯೆ ಇರುವ ಮತ್ತು ಇರಬಹುದಾದ ತೆರೆಗಳನ್ನೂ ಭಯಗಳನ್ನೂ ತೆಗೆದು ಹಾಕುತ್ತಿದೆ, ಅಥವಾ ತೆಗೆದುಹಾಕಲು ಹವಣಿಸುತ್ತಿದೆ. ಅದು ಅತ್ಯಗತ್ಯವಾದ ಸಂಘಟನಾಕಾರ್ಯವೆಂದೇ ನನ್ನ ಅಭಿಮತ. ಸುಮಾರು ಇಪ್ಪತ್ತು ಸಂವತ್ಸರದ ಹಿಂದೆ ಮಹನೀಯರೊಬ್ಬರು “ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ-ಇದನ್ನೆಲ್ಲ ಪರಿಷತ್ತು ಬಿಟ್ಟುಕೊಡಬೇಕು … ಪರಿಷತ್ತಿನ ಕೆಲಸ ನೂರು ಕಾಲ ಬಾಳುವಂಥದ್ದಾಗಿರಬೇಕು” ಎಂದರಂತೆ. ನಾನಾದರೊ ಪರಿಷತ್ತು ಈಗ ಹಿಡಿದು ನೆರವೇರಿಸುತ್ತಿರುವ ಕಾರ್ಯಕ್ರಮಗಳಲ್ಲಿ ಒಂದನ್ನೂ ಬಿಟ್ಟುಕೊಡದೆ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಹೊಸವನ್ನೂ ಸೇರಿಸಿಕೊಳ್ಳುತ್ತ ಮುಂದೆ ಸಾಗಲಿ, ಪ್ರತಿಷ್ಠಾವಂತ ಆತ್ಮತೇಜಸ್ಸಿನ ಪೂರ್ಣ ಕನ್ನಡಿಗತ್ವ ಕನ್ನಡಿಗರೆಲ್ಲರಿಗೂ ಮೈಗೂಡುವತನಕ ಎಂದು ಸಾರುತ್ತೇನೆ. ಪ್ರಚಾರ, ರಾಗೋತ್ಕರ್ಷ, ನಿಶಾನಿಯ ಮೆರವಣಿಗೆ, ಜೈಕಾರ-ಯಾವುದೂ ಬೇಡ ಎನ್ನಲಾಗದು; ಕನ್ನಡ ಗೆಲ್ಲುತ್ತಿದೆ, ಇನ್ನೂ ಪೂರ್ತಿ ಗೆದ್ದಿಲ್ಲ!

ತ್ರೈವಾರ್ಷಿಕ ಯೋಜನೆ

ಹೊಸಹುಟ್ಟಿನ ಬಲಿಷ್ಠ ಪ್ರಚೋದನೆಯಿಂದ ಪರಿಷತ್ತು ೧೯೭0ರಂದು ತ್ರೈವಾರ್ಷಿಕ ಯೋಜನೆಯನ್ನು ತಯಾರಿಸಿಕೊಂಡು ಅದರ ಬಹು ಅಂಶಗಳನ್ನು ೧೯೭೩ರ ಅಂತ್ಯದೊಳಗೆ ಕಾರ್ಯರೂಪಕ್ಕೆ ತಂದಿತು. ೧೯೭೪ರ ಜನವರಿಯಿಂದ ೨೭ ಅಂಶಗಳ “ಪಂಚವಾರ್ಷಿಕ” ಯೋಜನೆ ಜಾರಿಗೆ ಬಂದಿದೆ. ಅದರ ವಿವರಗಳನ್ನು ಪರಿಶೀಲಿಸಿದಾಗ, ಕನ್ನಡ ನಾಡು ನುಡಿ ಸಂಸ್ಕೃತಿಗಳ ಸುಧಾರಣೆಗೂ ಪುರೋಭಿವೃದ್ಧಿಗೂ ಆಸರೆಯಾಗಬಲ್ಲ ಮತ್ತಾವ ಕಾರ್ಯಕ್ರಮವುಂಟು ಎಂಬ ಪ್ರಶ್ನೆಗೆ ಯಾವುದೂ ಇಲ್ಲ ಎಂದೇ ನನ್ನ ಬುದ್ಧಿಗೆ ತೋರುತ್ತದೆ. ಮೇಧಾವಿಗಳ ಮತಿಗೆ ಇದೆ ಎಂದು ಕಂಡುಬಂದಲ್ಲಿ ಅದನ್ನು ಗಮನಕ್ಕೆ ತಂದುಕೊಳ್ಳುವುದರಲ್ಲಿ ಪರಿಷತ್ತು ಆಸಕ್ತಿ ವಹಿಸಿಯೇ ವಹಿಸುತ್ತದೆ ಎಂಬುದು ಖಂಡಿತ. ಯೋಜನೆ ೧೯೭೮ ಮುಗಿಯುವ ಮುನ್ನ ಸಂಪೂರ್ಣವಾಗಿ ಕಾರ್ಯಗತವಾಗಲಿ ಎಂದು ನಿರೀಕ್ಷಿಸೋಣ, ದುಡಿಯೋಣ.

ಅಧ್ಯಕ್ಷರು ಮುದುಕರಲ್ಲ

ದಿವಂಗತ ಡಿ.ವಿ. ಗುಂಡಪ್ಪನವರು ೧೯೩೨ರಂದೇ “ಈ ಅಧ್ಯಕ್ಷ ಪದವಿಯ ಕರ್ತವ್ಯಭಾರಗಳಲ್ಲಿ ಹೆಚ್ಚಿನದು ಉಪನ್ಯಾಸ ರಚನೆಯದು” ಎಂದು ಗಂಭೀರವಾಕ್ಯ ಘೋಷಿಸಿದರು. ಅದು ಎಷ್ಟೊಂದು ಭಾರ ಎಂಬುದನ್ನು ನಿಷ್ಕರ್ಷಿಸುವುದಕ್ಕೆ ನನ್ನ ಬಳಿ ತೂಕದ ಬಟ್ಟುಗಳೇ ಇಲ್ಲ. ನಾನು ಪ್ರಸ್ತಾಪಿಸಬೇಕೆಂದು ನಾನೂ ಮಹಾಜನರೂ ನಿರೀಕ್ಷಿಸಿದ್ದರಲ್ಲಿ ಕಿಂಚಿತ್ತು ಪಾಲಾದರೂ ವಿವರಣೆಗೊಂಡಿದ್ದರೆ ನಾನು ಧನ್ಯ. ದಿವಂಗತ ಪಂಜೆ ಮಂಗೇಶರಾಯರು ೧೯೩೪ರಲ್ಲಿ “ವಯಸ್ಸಾದವರಿಗೆ ಪಟ್ಟ ಕಟ್ಟಬಾರದು” ಎಂಬ ಸ್ವಾರಸ್ಯೋಕ್ತಿಯ ಮಂತ್ರವನ್ನು ಉಚ್ಚರಿಸಿದರು. ನನ್ನ ಬಗೆಗೆ ಒಂದು ಅಂಶವನ್ನು ಬಿನ್ನಯಿಸಲು ನಿಮ್ಮ ಅಪ್ಪಣೆ ಬೇಡುತ್ತೇನೆ. “ವಯಸ್ಸಾದವರು” ಎಂದರೆ “ಮುದುಕರು” ಎಂದು ಅರ್ಥ ಮಾಡಿದರೆ, ನನಗೆ ವಯಸ್ಸಾಗಿದ್ದರೂ “ಮುದುಕ”ನಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ.

Tag: Kannada Sahitya Sammelana 49, S.V. Ranganna

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)