ಸಾಹಿತ್ಯ ಸಮ್ಮೇಳನ-೫೨

ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ

basavaraja-kattimani

೫೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಬಸವರಾಜ ಕಟ್ಟೀಮನಿ

ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದ ಬಸವರಾಜ ಕಟ್ಟೀಮನಿಯವರು ಶಿರೂರಿನ ಅಯ್ಯಣ್ಣ-ಮಲಾಮರಡಿಯ ಬಾಳವ್ವ ದಂಪತಿಗಳ ಪುತ್ರರಾಗಿ ೫-೧0-೧೯೧೯ ರಲ್ಲಿ ಜನಿಸಿದರು.

ಗೋಕಾಕ, ಸುಲದಾಳ, ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ, ಪುಣೆ ಮುಂತಾದ ಕಡೆಗಳಲ್ಲಿ ಕಟ್ಟೀಮನಿ ಅವರ ಶಾಲಾ ಶಿಕ್ಷಣ ನಡೆಯಿತು. ಅನಂತರ ವಿದ್ಯಾಭ್ಯಾಸ ಮುಂದುವರಿಸಲಾಗದೆ ಪತ್ರಿಕಾರಂಗ ಪ್ರವೇಶಿಸಿದರು.

೧೯೩೬ರಲ್ಲಿ ಬೆಳಗಾವಿಯಿಂದ ಹೊರಡುತ್ತಿದ್ದ ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿದರು. ಮುಂದೆ ‘ತರುಣ ಕರ್ನಾಟಕ’ (೧೯೩೭) ‘ಸಮಾಜ ಸೇವೆ’ ‘ಹುಬ್ಬಳ್ಳಿಯ ಲೋಕಮತ’, ‘ಗದುಗಿನ ಕರ್ಣಾಟ ಬಂಧು’, ‘ಬೆಂಗಳೂರಿನ ಸ್ವತಂತ್ರ ಕರ್ನಾಟಕ’, ‘ಉಷಾ’ ಪತ್ರಿಕೆಗಳ ಉಪಸಂಪಾದಕರಾಗಿ ಸಂಪಾದಕರಾಗಿ ದುಡಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ೧೯೬೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದರು. ೧೯೬೮ ರಿಂದ ೧೯೭೪ ವರೆಗೆ ವಿಧಾನ ಪರಿಷತ್ತಿನ ಸದಸ್ಯರಾದರು. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ೧೯೮0ರಲ್ಲಿ ಬೆಳಗಾವಿಯಲ್ಲಿ ಜರುಗಿದ ೫೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಇವರ ಜ್ವಾಲಾಮುಖಿಯ ಮೇಲೆ ಕಾದಂಬರಿಗೆ ೧೯೬೮ರಲ್ಲಿ ಸೋವಿಯೆಟ್ ಲ್ಯಾಂಡ್ ಪ್ರಶಸ್ತಿ ಸಿಕ್ಕಿದೆ.

ಇವರು ಕಾರವಾನ್, ಸುಂಟರಗಾಳಿ, ಹುಲಿಯಣ್ಣನ ಮಗಳು (ಕಥಾಸಂಕಲನಗಳು), ಸ್ವಾತಂತ್ರದೆಡೆಗೆ, ಮಾಡಿಮಡಿದವರು, ಜ್ವಾಲಾಮುಖಿಯ ಮೇಲೆ, ಮೋಹದ ಬಲೆಯಲ್ಲಿ, ಬಂಗಾರದ ಜಿಂಕೆ ಹಿಂದೆ (ಕಾದಂಬರಿಗಳು), ಕಾದಂಬರಿಕಾರನ ಕಥೆ (ಆತ್ಮಕಥೆ), ಇನ್ನೂ ಅನೇಕ ಕೃತಿಗಳನ್ನು ಬರೆದಿದ್ದಾರೆ.

ಬಸವರಾಜ ಕಟ್ಟೀಮನಿ ಅವರು ೨೩-೧0-೧೯೮೯ರಲ್ಲಿ ನಿಧನರಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ-೫೨,

ಅಧ್ಯಕ್ಷರು, ಬಸವರಾಜ ಕಟ್ಟೀಮನಿ

ದಿನಾಂಕ ೭, ೮, ೯, ೧0 ಫೆಬ್ರವರಿ ೧೯೮0,

ಸ್ಥಳ : ಬೆಳಗಾವಿ

 

ಇದು ಸಾಂಸ್ಕೃತಿಕ ಪರಿಷತ್ತು

೧೯೧೫ರಲ್ಲಿ ಜನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಈ ೬೫ ವರ್ಷಗಳಲ್ಲಿ ಪ್ರಚಂಡ ಆಲದಮರದಂತೆ ಬೆಳೆದು ಕರ್ನಾಟಕದುದ್ದಕ್ಕೂ ಹರಡಿಕೊಂಡಿದೆ. ಶ್ರೀ ಜಿ. ನಾರಾಯಣರು ಅಧ್ಯಕ್ಷರಾಗಿದ್ದಾಗ ಜಿಲ್ಲಾಸಮಿತಿಗಳ ಸ್ಥಾಪನೆಯಾಯಿತು. ಅವುಗಳ ಮೂಲಕ ಪರಿಷತ್ತಿನ ಕಾರ್ಯಕ್ರಮಗಳು ನಿಯಮಿತವಾಗಿ ವ್ಯವಸ್ಥಿತವಾಗಿ ನಡೆಯುತ್ತಿವೆ. ಸರಕಾರದಿಂದ ಪರಿಷತ್ತಿಗೆ ೫ ಲಕ್ಷ ರೂ.ಗಳ ವಾರ್ಷಿಕ ಅನುದಾನ ಸಲ್ಲುತ್ತಿದೆ. ಅಲ್ಲದೆ ವಜ್ರಮಹೋತ್ಸವ ಕಾಲಕ್ಕೆ ೧೫ ಲಕ್ಷ ೩೧ ಸಾವಿರ ಸಂದಿದೆ. ಪರಿಷತ್ತಿನ ಹಳೆಯ ಕಟ್ಟಡಕ್ಕೆ ಹೊಂದಿಕೊಂಡೇ ಭವ್ಯವಾದ ನೂತನ ಭವನ ಎದ್ದು ನಿಂತಿದೆ. ವಜ್ರಮಹೋತ್ಸವದ ನೆನಪಿಗಾಗಿ ಇನ್ನೊಂದು ಕಟ್ಟಡ ಏಳಲಿದೆ.

ಇದೆಲ್ಲ ಸಂತೋಷದ ವಿಚಾರ. ಆದರೆ, ಇನ್ನು ಮುಂದೆ ಜಿಲ್ಲಾಸಮಿತಿಗಳನ್ನು ಬಲಪಡಿಸುವುದರತ್ತ ಪರಿಷತ್ತು ಗಮನವೀಯಬೇಕು. ಸ್ಥಳಾಭಾವದಿಂದಾಗಿ ಎಷ್ಟೋ ಜಿಲ್ಲೆಗಳಲ್ಲಿ ಜಿಲ್ಲಾಸಮಿತಿಗಳ ಚಟುವಟಿಕೆಗಳು ನಡೆಯದಂತಾಗಿದೆ. ಪ್ರತಿಯೊಂದು ಜಿಲ್ಲಾ ಸ್ಥಳದಲ್ಲೂ ಪರಿಷತ್ತಿನದೇ ಆದ ಒಂದು ಸಣ್ಣ ಕಟ್ಟಡ ನಿರ್ಮಿತವಾಗಬೇಕು. ಅದಕ್ಕೆ ೧ ಲಕ್ಷ ರೂ. ಸಾಕು. ಈ ಯೋಜನೆಗಾಗಿ ೨0 ಲಕ್ಷ ರೂ. ಕೇಳಿದರೆ ಸರಕಾರ ಕೊಟ್ಟೇ ಕೊಡುತ್ತದೆ. ಶ್ರೀ ಹಂಪ. ನಾಗರಾಜಯ್ಯನವರಂಥ ಹುರುಪಿನ ಅಧ್ಯಕ್ಷರ ಅಧಿಕಾರಾವಧಿಯಲ್ಲಿಯೇ ಈ ಮಹತ್ವದ ಕಾರ್ಯ ನಡೆಯಬೇಕಾಗಿದೆ.

ಪರಿಷತ್ತಿನ ಚಟುವಟಿಕೆಗಳು

ಪರಿಷತ್ತು ಈಗ ಕೇವಲ ಸಾಹಿತ್ಯಕ ಸಂಸ್ಥೆಯಾಗಿ ಉಳಿದಿಲ್ಲ; ಅಖಿಲ ಕರ್ನಾಟಕ ಸ್ವರೂಪದ ಸಾಂಸ್ಕೃತಿಕ ಸಂಸ್ಥೆಯಾಗಿಯೂ ರೂಪುಗೊಳ್ಳುತ್ತಿದೆ. ಸಾಹಿತ್ಯ ಮತ್ತು ಕಲೆಗಳ ಅಭಿವೃದ್ಧಿಗಾಗಿ, ಸಂರಕ್ಷಣೆಗಾಗಿ ಅದು ದುಡಿಯುತ್ತಿದೆ. ಕಳೆದ ೯ ವರ್ಷಗಳಿಂದ ಕನ್ನಡ ಬೆರಳಚ್ಚು ಮತ್ತು ಶೀಘ್ರಲಿಪಿ ತರಗತಿಗಳನ್ನೂ ನಡೆಸುತ್ತಿದೆ. ಪರಿಷತ್ತಿನ ಆಶ್ರಯದಲ್ಲಿ ಸಾಕ್ಷರತಾ ತರಗತಿಗಳೂ ನಡೆಯುತ್ತಿವೆಯೆಂದರೆ ಕೆಲವರಿಗೆ ಅಚ್ಚರಿಯೆನಿಸಬಹುದು. ಸಾಹಿತ್ಯಕ ಸಂಸ್ಥೆಗೆ ಈ ಉಪದ್ವ್ಯಾಪವೇಕೆ? ಎಂದು ಪ್ರಶ್ನಿಸುವ ದಡ್ಡರೂ ಇದ್ದಾರೆ. ಓದುವವರೇ ಇರದಿದ್ದರೆ ಇವರ ಸಾಹಿತ್ಯವನ್ನಾರು ಕೇಳುತ್ತಾರೆ? ಎಂದು ಇವರಿಗೆ ಉತ್ತರ ಕೊಡಬೇಕಾಗುತ್ತದೆ. ದತ್ತಿ ಉಪನ್ಯಾಸಗಳು, ಗಮಕ ತರಗತಿಗಳು, ಕನ್ನಡ ಪರೀಕ್ಷೆಗಳು, ಕೀರ್ತನ ಮಹೋತ್ಸವಗಳು, ಸಾಹಿತ್ಯ  ಪ್ರದರ್ಶನಗಳು, ಅಂತರರಾಷ್ಟ್ರೀಯ ಪುಸ್ತಕವರ್ಷ, ಮಹಿಳಾ ವರ್ಷಗಳ ಆಚರಣೆ, ಕಳೆದ ಡಿಸೆಂಬರ್‍ನಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ಮೇಳ, ಅದಕ್ಕೂ ಮೊದಲು ನಡೆದ ‘ದಲಿತ ಮಕ್ಕಳು’ ಎಂಬ ವಿಚಾರ ಸಂಕಿರಣ-ಹೀಗೆ ಸದಾಕಾಲವೂ ಚಟುವಟಿಕೆಗಳಲ್ಲಿ ನಿರತವಾಗಿರುವ ಪರಿಷತ್ತು ಸರಕಾರದ ಸಾಂಸ್ಕೃತಿಕ ವಿಭಾಗದಂತೆಯೇ ಕೆಲಸ ಮಾಡುತ್ತಿದೆಯೆಂದರೆ ಅತಿಶಯೋಕ್ತಿಯಾಗದು. ಸಾಹಿತ್ಯ ಪರಿಷತ್ತು ಇದನ್ನೆಲ್ಲ ಮಾಡಬಾರದೆಂದು ವಾದಿಸುವವರೂ ಇದ್ದಾರೆ. ಅದು ಅವರ ಅಭಿಪ್ರಾಯ. ಕರ್ನಾಟಕದ ಮಟ್ಟದಲ್ಲಿ ವ್ಯಾಪಕವಾದ ರೀತಿಯಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಪರಿಷತ್ತಿನ ಕಾರ್ಯಕರ್ತರನ್ನು ನಾವು ಮೆಚ್ಚಿಕೊಳ್ಳಲೇಬೇಕಾಗುತ್ತದೆ.

ಫ್ರೆಂಚ್ ಮಾದರಿ

ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷಪೀಠದಿಂದ ಮಾತನಾಡುತ್ತ ಶ್ರೀ ಗೋಪಾಲಕೃಷ್ಣ ಅಡಿಗರು- “ನಾನಾ ಗ್ರಂಥಗಳು ಪ್ರಕಟವಾಗುತ್ತಿರುವ ಈ ಕಾಲದಲ್ಲಿ ಯಾವುದು ಸಾಹಿತ್ಯ, ಯಾವುದು ಸಾಹಿತ್ಯವಲ್ಲ, ಕೇವಲ ವರದಿ, ಕೇವಲ ಕೃತಕ ಎಂಬುದಾಗಿ ವಿಂಗಡಿಸಲು ಮಾಡುವ ಪ್ರಯತ್ನವೇ ನಾವು ನಮ್ಮ ಭಾಷೆಗೂ ಜನಕ್ಕೂ ಸಲ್ಲಿಸಬೇಕಾದ ಸೇವೆ, ಉಳಿದದ್ದೆಲ್ಲ ದ್ರೋಹ. ಈ ಕೆಲಸ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ನಡೆಯುತ್ತಲೇ ಇರಬೇಕು. ಈ ರೀತಿಯಲ್ಲಿ ಈ ಸಂಸ್ಥೆ ಮಾರ್ಪಾಟಾಗಲು ತಕ್ಕ ಏರ್ಪಾಟು ಆಗಬೇಕೆಂದು ನನ್ನ ಕಳಕಳಿಯ ಪ್ರಾರ್ಥನೆ”-ಎಂದು ಹೇಳಿದ್ದರು.

ಹನ್ನೊಂದು ತಿಂಗಳುಗಳ ಅಲ್ಪಾವಧಿಯಲ್ಲಿ ಇಂಥ ಮಾರ್ಪಾಟಾಗುವುದು ಶಕ್ಯವೇ ಇಲ್ಲವೆನ್ನುವುದು ಸ್ಪಷ್ಟವಿದೆ. ನೂತನವಾಗಿ ಸೃಷ್ಟಿಯಾಗುವ ಸಾಹಿತ್ಯದ ಮೌಲ್ಯಮಾಪನ ಕಾರ್ಯವನ್ನು ಪರಿಷತ್ತು ಮಾಡಬೇಕೆಂಬುದೇ ಶ್ರೀ ಅಡಿಗರ ಸೂಚನೆಯ ತಿರುಳು. ಪರಿಷತ್ತು ಪಂಡಿತರ, ವಿದ್ವಾಂಸರ, ವಿಮರ್ಶಕರ, ಶ್ರೇಷ್ಠ ಸಾಹಿತಿಗಳ ಅತ್ಯುಚ್ಚ್ಚ ನ್ಯಾಯಪೀಠವಾಗಲೆಂಬುದು ಅವರ ಆಶಯ.

“ಸಾಹಿತ್ಯ ಕೃತಿಗಳಿಗೆ ಸಂಬಂಧಪಟ್ಟ ವಿಮರ್ಶೆ, ಮೌಲ್ಯನಿರ್ಣಯ ಮುಂತಾದುವುಗಳಿಗಾಗಿಯೇ ಫ್ರೆಂಚ್ ಅಕಾಡೆಮಿಯ ರೀತಿಯ ಅತ್ಯುಚ್ಚ ಧೀಮಂತರ ಒಂದು ವಿಶಿಷ್ಟ ಸಂಸ್ಥೆಯನ್ನು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದನ್ನು ಸ್ವತಂತ್ರವಾದ ಒಂದು ಸಣ್ಣ ಘಟಕವನ್ನಾಗಿ ನಡೆಸಿಕೊಂಡು ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ೧0-೧೫ ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಆ ಕೆಲಸ ಒಪ್ಪಿಸಬಹುದು ಎಂದು ಸೂಚಿಸಿದ್ದರು.

ಗ್ರಂಥಾಲಯ ಇಲಾಖೆ 

ಈ ಕನ್ನಡ ಅಧ್ಯಯನ ಪೀಠಗಳ ಕನ್ನಡ ಸಾಹಿತ್ಯ ಪರಿಷತ್ತೂ ಸಾಹಿತ್ಯ ಅಕಾಡೆಮಿಯೂ ಪ್ರಕಟಿಸುವ ಪುಸ್ತಕಗಳ ಮಾರಾಟವೂ ಒಂದು ಸಮಸ್ಯೆಯೇ. ನಮ್ಮಲ್ಲಿ ಕೊಂಡು ಓದುವವರು ಕಡಿಮೆ. ೫0-೬0 ರೂ. ಬೆಲೆಯ ಪುಸ್ತಕಗಳನ್ನಂತೂ ಕೇವಲ ಗ್ರಂಥಾಲಯಗಳೇ ಕೊಳ್ಳಬೇಕು. ನಮ್ಮ ಸರಕಾರದ ಗ್ರಂಥಾಲಯ ಇಲಾಖೆ ಕಳೆದ ಹಲವು ವರ್ಷಗಳಿಂದ ಅತ್ಯಂತ ಸಮರ್ಥವಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ.

ಸಮುದಾಯ

“ಸಮುದಾಯ”ದ ಕಲಾವಿದರು ತಮ್ಮ ಕ್ರಾಂತಿಕಾರಕ ನಾಟಕಗಳನ್ನಾಡುತ್ತ ಕರ್ನಾಟಕದಲ್ಲೆಲ್ಲ ಯಾತ್ರೆ ಮಾಡಿದುದು ಇತ್ತೀಚೆಗಿನ ಇತಿಹಾಸದಲ್ಲಿ ಮಹತ್ವದ ಘಟ್ಟ. ಓದುಬರಹ ಅರಿಯದ ನಮ್ಮ ಹಳ್ಳಿಗರನ್ನೂ ಬಡಜನರನ್ನೂ ಜಾಗೃತಗೊಳಿಸಲು “ಸಮುದಾಯ”ದಂಥ ಪ್ರಾಮಾಣಿಕ ಪ್ರಯತ್ನಗಳು ಎಲ್ಲ ಕಡೆಗಳಲ್ಲೂ ನಡೆಯಬೇಕು.

ಮಾನವನ ಭವಿತವ್ಯದ ಬಗೆಗೆ ಪೂರ್ಣ ನಂಬುಗೆಯಿರಿಸಿಕೊಂಡು ನಾವು ಮುಂದುವರಿಯಬೇಕು. ನಮ್ಮಿಂದ ಮಾತ್ರವೇ ಲೋಕದ ಉದ್ಧಾರ-ಎಂಬ ಸಂಕುಚಿತ ಭಾವನೆಯು ಯಾರಿಗೂ ಸಲ್ಲದು. ತಮತಮಗೆ ಸರಿಯೆನಿಸಿದ ರೀತಿಯಲ್ಲಿ ಅನೇಕರು, ಅನೇಕ ಸಂಸ್ಥೆಗಳು ಮಾನವನ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. “ನೂರು ಹೂಗಳು ಅರಳಲಿ” ಎಂಬುದೇ ಸರಿಯಾದ ನಿಲುಮೆ.

ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಇನ್ನಿತರ ಸಂಸ್ಥೆಗಳೂ ತಮ್ಮಿಂದಾಗುವುದನ್ನು ಮಾಡಲಿ. ಆದರೆ, ಪರಿಷತ್ತನ್ನು ವಿರೋಧಿಸುವ ಅಸಹಕಾರದ ನಿಲುಮೆಯನ್ನು ಮಾತ್ರ ಯಾರೂ ತಳೆಯಬಾರದು. 

ಆಲೂರವರ ಜನ್ಮಶತಮಾನೋತ್ಸವ

ಮರಾಠೀಮಯವಾಗಿದ್ದ ಉತ್ತರ ಕರ್ನಾಟಕದ ಕನ್ನಡಿಗರನ್ನು ತಮ್ಮ ಲೇಖನಗಳಿಂದಲೂ ಭಾಷಣಗಳಿಂದಲೂ ‘ಜಯ ಕರ್ನಾಟಕ’ ಪತ್ರಿಕೆಯಿಂದಲೂ ಜಾಗೃತಗೊಳಿಸಿ, ಈ ಶತಮಾನದ ಆದಿಭಾಗದಲ್ಲಿ ಕನ್ನಡ ಚಳವಳಿಯ ಮಹಾ ಮುಖಂಡರಾಗಿ ದುಡಿದು ಅಮರರಾದ ಆಲೂರು ವೆಂಕಟರಾಯರ ಜನ್ಮಶತಮಾನೋತ್ಸವವು ಈ ವರ್ಷದ ಜುಲೈ ತಿಂಗಳಿನಿಂದ ಮುಂದಿನ ವರ್ಷ ಜೂನ್ ತಿಂಗಳಿನವರೆಗೆ ಕರ್ನಾಟಕದಲ್ಲೆಲ್ಲ ವಿಜೃಂಭಣೆಯಿಂದ ಜರುಗಲಿದೆ. ಅದಕ್ಕಾಗಿ ಹಲವಾರು ಸಮಿತಿಗಳು ರಚಿತವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಸಹ ಒಂದು ಕೇಂದ್ರ ಸಮಿತಿ ರಚಿಸಿ ಈ ಬಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹಳಕಟ್ಟಿಯವರ ಜನ್ಮಶತಮಾನೋತ್ಸವ

ದಿ|| ಫ.ಗು. ಹಳಕಟ್ಟಿಯವರೂ, ದಿ|| ಆಲೂರವರೂ ಓರಗೆಯವರು; ಒಂದೇ ಸಂವತ್ಸರದಲ್ಲಿ ಜನಿಸಿದವರು. ವಚನ ಸಾಹಿತ್ಯವನ್ನು ಬೆಳಕಿಗೆ ತರುವುದರ ಮೂಲಕ ಹಳಕಟ್ಟಿಯವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಚಿರಸ್ಮರಣೀಯ. ಮರಾಠೀಮಯವಾಗಿದ್ದ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಲೂ ಅವರು ಪ್ರಯತ್ನಪಟ್ಟಿದ್ದರು. ಅವರು ಬದುಕಿ-ಬಾಳಿ ಕೊನೆಯುಸಿರೆಳೆದ ವಿಜಾಪುರದಲ್ಲಿ ಅವರಿಗಾಗಿ ಸ್ಮಾರಕ ರಚಿಸಲು ಸಿದ್ಧತೆ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತೂ ಸಹ ಒಂದು ಕೇಂದ್ರ ಸಮಿತಿ ರಚಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದಿ|| ಆಲೂರರವರ ಜನ್ಮಶತಮಾನೋತ್ಸವದಂತೆಯೇ ದಿ|| ಹಳಕಟ್ಟಿಯವರ ಜನ್ಮಶತಮಾನೋತ್ಸವವನ್ನೂ ಸಾಹಿತ್ಯ ಪರಿಷತ್ತು, ಇನ್ನಿತರ ಸಂಸ್ಥೆಗಳು ವಿಶಿಷ್ಟವಾದ ರೀತಿಯಲ್ಲಿ ಜರುಗಿಸಬೇಕು.

Tag: Kannada Sahitya Sammelana 52, Basvaraja Kattimani

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)