ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪

ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್

an-murthy-rao

೫೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎ.ಎನ್. ಮೂರ್ತಿರಾವ್

ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್. ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್) ೧೮-೬-೧೯00ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನ್ಮ ತಳೆದರು. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ ೧೯೧೩ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ೧೯೨೨ರಲ್ಲಿ ಬಿ.ಎ. ಪದವಿ ಮುಗಿಸಿ ೧೯೨೪ರಲ್ಲಿ ಎಂ.ಎ.ಪದವಿ ಪಡೆದರು.

೧೯೨೪ರಲ್ಲಿ ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ ಆಗಿ ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ೧೯೪0ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. ೧೯೪0ರಿಂದ ೧೯೪೩ವರೆಗೆ ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ೧೯೪೩ರಲ್ಲಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದರು. ೧೯೪೮ರಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೫೫ರಲ್ಲಿ ನಿವೃತ್ತಿಗೊಂಡರು.

೧೯೫೫ರಲ್ಲಿ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದರು. ೧೯೫೪-೫೬ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್ನ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ ೪ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಗ್ರಾಂ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಎ.ಎನ್. ಮೂರ್ತಿರಾವ್ ಅವರು ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು. ಅವರು ತಮ್ಮ ಲೋಕಾನುಭವದಿಂದ ಬರೆದ ಅಪರ ವಯಸ್ಕನ ಅಮೇರಿಕ ಯಾತ್ರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಚಿತ್ರಗಳು ಮತ್ತು ಪತ್ರಗಳು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೭೭), ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಡಿ.ಲಿಟ್. ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ ಪಂಪ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ.

೧೯೮೪ರಲ್ಲಿ ಕೈವಾರಗಳಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೫೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು.

ಇವರು ರಚಿಸಿರುವ ಕೃತಿಗಳಲ್ಲಿ ಹಗಲುಕನಸುಗಳು, ಅಲೆಯುವ ಮನ, ಮಿನುಗು ಮಿಂಚು(ಪ್ರಬಂಧ ಸಂಕಲನ), ಬಿಎಂಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್‍ಪಿಯರ್, ಮಾಸ್ತಿಯವರ ಕಥೆಗಳು(ವಿಮರ್ಶಾ ಕೃತಿಗಳು), ಆಷಾಢಭೂತಿ, ಮೋಲಿಯೇರನ ೨ ನಾಟಕಗಳು, ಚಂಡಮಾರುತ(ನಾಟಕಗಳು), ಪಾಶ್ಚಾತ್ಯ ಸಣ್ಣ ಕಥೆಗಳು ಇತ್ಯಾದಿ ಕೃತಿಗಳು ಪ್ರಸಿದ್ಧವಾಗಿವೆ.

ಇಂಗ್ಲಿಷಿನಲ್ಲೂ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.

ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು `ದಿ ರಿಟರ್ನ್ ಟು ದಿ ಸಾಯಲ್’ ಎಂದು ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ ಅವರುಗಳನ್ನು ಕುರಿತು ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆದಿದ್ದಾರೆ.

ಎ.ಎನ್. ಮೂರ್ತಿರಾವ್‍ರು ತಮ್ಮ ೧0೪ನೇ ವಯಸ್ಸಿನಲ್ಲಿ ೨೩-೮-೨00೩ರಲ್ಲಿ ನಿಧನರಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ-೫೬,

ಅಧ್ಯಕ್ಷರು, ಎ.ಎನ್.ಮೂರ್ತಿರಾವ್

ದಿನಾಂಕ ೨೩, ೨೪, ೨೫, ಮಾರ್ಚ್ ೧೯೮೪                     

ಸ್ಥಳ : ಕೈವಾರ

[ಟಿಪ್ಪಣಿ : ೧೯೯೩ರಲ್ಲಿ ಸಮ್ಮೇಳನ ನಡೆಯಲಿಲ್ಲ]

೫೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕೈವಾರದಲ್ಲಿ ನಡೆಯುತ್ತದೆಂದು ಕೇಳಿದಾಗ ನಾನು ಈ ಅನುಭವವನ್ನು ಜ್ಞಾಪಿಸಿಕೊಂಡೆ. ಇತ್ತ ಕೈವಾರದ ಸ್ವಾಗತ ಸಮಿತಿಯವರು,  ಅತ್ತ ಕನ್ನಡ ಸಾಹಿತ್ಯ ಪರಿಷತ್ತಿನವರು-ಇಬ್ಬರೂ ಹೊಸದೊಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ದೊಡ್ಡ ಪಟ್ಟಣಗಳಲ್ಲಿ ಸಭೆ ಶಿಬಿರ ವಿಚಾರ ಸಂಕಿರಣಗಳು ಹಳಸಲಾಗಿ ಹೋಗಿವೆ. ಇಲ್ಲಾದರೋ-ಈಗ ಶ್ರೀ ಎಂ.ಎಸ್. ರಾಮಯ್ಯನವರ ನೇತೃತ್ವದಲ್ಲಿ ಸ್ವಾಗತ ಸಮಿತಿಯವರು ನಡೆಸಿರುವ ಸಿದ್ಧತೆಯನ್ನು ನೋಡಿದರೇ ಗೊತ್ತಾಗುತ್ತದೆ, ಸಾಹಿತ್ಯ-ಸಂಸ್ಕೃತಿಗಳ ವಿಷಯದಲ್ಲಿ ಜನರಿಗೆ ಎಂಥ ಸಂಭ್ರಮವಿದೆಯೆಂಬುದು. ನಗರಭೂತದ ಮಾರಕ ಅಪ್ಪುಗೆಯಿಂದ ಕಳಚಿಕೊಂಡು ಇಲ್ಲಿಗೆ ಬರುವುದೇ ಒಂದು ಆನಂದ.

ಕೈವಾರ ಸಮ್ಮೇಳನದ ವೈಶಿಷ್ಟ್ಯ

ಆ ಗತಕಾಲದ ವೀರರ, ಮೇಧಾವಿಗಳ, ಪುಣ್ಯಪುರುಷರ ನಾಡಿನಲ್ಲಿ ನಾವು ಹುಟ್ಟಿದೆವೆಂದು ಹೇಳಿಕೊಳ್ಳುವುದು ಸ್ವಾಭಾವಿಕ. ಆದರೆ ಅವರ ಕೀರ್ತಿಯನ್ನು ಮುಂದುವರಿಸುವಂಥ, ಸಾಹಸದ ಎಲ್ಲೆಗಳನ್ನು ತಳ್ಳಿಕೊಂಡು ಮುಂದೆ ಸಾಗುವಂಥ ಬದುಕನ್ನು ಬಾಳುವುದೇ ನಾವು ಪೂರ್ವಿಕರಿಗೆ ಸಲ್ಲಿಸಬೇಕಾದ ಕಾಣಿಕೆ; ಅವರನ್ನು ಅನುಕರಿಸುತ್ತ ಅವರ ಸತ್ವಹೀನ ಪ್ರತಿಕೃತಿಗಳಂತೆ ಬಾಳುವುದಲ್ಲ.

ಈ ಸತ್ಯ ಕನ್ನಡ ಸಾಹಿತ್ಯ ಪ್ರಪಂಚಕ್ಕೂ ಅನ್ವಯಿಸುತ್ತದೆಂಬುದನ್ನು ಮನಗಂಡು ಅದರ ಬೆಳಕಿನಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡವರು-ನನ್ನ ಪೂಜ್ಯ ಗುರುಗಳಾದ ಬಿ.ಎಂ. ಶ್ರೀಕಂಠಯ್ಯನವರು. ಅವರ ಪ್ರಭಾವದಿಂದಾಗಿ, ಅವರ ಸತತ ಪ್ರಚಾರದಿಂದಾಗಿ, ಅವರು ಸ್ವತಃ ನಡೆಸಿದ ಪ್ರಯೋಗಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸ ಯುಗವೊಂದು ಆರಂಭವಾಯಿತು. ಅದು ಹಿಂದಿನ ಯಾವ ಯುಗವೂ ಇಡದಷ್ಟು ದೊಡ್ಡ ದಾಪನ್ನು ಇಟ್ಟು ಅತ್ಯಂತ ಪರಿಣಾಮಕಾರಿಯಾದ ಪ್ರಗತಿಯನ್ನು ಸಾಧಿಸಿದೆ. ಶತಮಾನಗಳ ಕಾಲದಿಂದ ಬಂದ ಸಂಪ್ರದಾಯಗಳ ಪ್ರಯೋಜನವನ್ನು ಬಿಟ್ಟುಕೊಡದೆ, ಆದರೆ ಆ ಸಂಪ್ರದಾಯದ ಎಲ್ಲೆ ಕಟ್ಟುಗಳಲ್ಲೇ ಉಳಿದು ‘ಬಂಧನವೇ ಒಂದು ಸೌಖ್ಯ’ ಎಂದುಕೊಳ್ಳುವ ಮನೋವೃತ್ತಿಗೆ ಬಲಿಬೀಳದೆ ಹೊಸ ಯೌವನದ ಉತ್ಸಾಹದಿಂದ ಮುನ್ನುಗ್ಗಿದ ಯುಗ, ನಮ್ಮದು ಅದರ ಪ್ರವರ್ತಕರಾದ ಬಿ.ಎಂ.ಶ್ರೀಯವರು ಬದುಕಿದ್ದರೆ ಈ ವರ್ಷದ ಆದಿಯಲ್ಲಿ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಕನ್ನಡ ನಾಡು ಬಿ.ಎಂ.ಶ್ರೀಯವರ ಶತಮಾನೋತ್ಸವವನ್ನು ಆಚರಿಸುತ್ತಿರುವ ವರ್ಷದಲ್ಲೇ ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕೈವಾರದ ವೈಶಿಷ್ಟ್ಯಗಳಲ್ಲಿ ಇದೂ ಒಂದು.

ಪರಿಷತ್ತು ಹೊಣೆ ಅಲ್ಲ

ನಾನು ಅರ್ಧ ಶತಮಾನದ ಹಿಂದೆ ಕೇಳುತ್ತಿದ್ದ ಅರ್ಥಪೂರ್ಣ ತರ್ಕಬದ್ಧ ಭಾಷಣಗಳಿಗೆ ಬದಲಾಗಿ ಹಿಂದಿನ ಭಾಷಣಗಳ ತಿರುಳನ್ನೇ-ಅಂದರೆ ಕನ್ನಡ ಹಾಳಾಗುತ್ತಿದೆ, ಉಳಿಸಬೇಕು ಎಂಬ ತಿರುಳನ್ನೇ-ಉಳ್ಳ, ಆದರೆ ಭಾವಾವೇಶದಿಂದ ಜ್ವಲಿಸುವ, ಜನರಲ್ಲಿ ಅಸಹನೆಯನ್ನೂ ರೋಷವನ್ನೂ ಕೆರಳಿಸುವ ಭಾಷಣ ಘೋಷಣೆಗಳು ಈಗ ಕೇಳಿಬರುತ್ತಿವೆ. ಇದರಿಂದಾಗಿ ಜನಜೀವನ ಕದಡಿಹೋಗಿದೆ; ಇತ್ತ ಬೆದರಿಕೆಯಿಂದಾಗಿ ಭಯ ಕವಿದುಕೊಂಡಿದೆ; ಈ ಪರಿಸ್ಥಿತಿಯ ಬೆಂಕಿ ನಿರಪರಾಧಿಗಳನ್ನು ಸುಟ್ಟಿದೆ; ರಾಜ್ಯ ಎದುರಿಸಲೇಬೇಕಾದ ಮತ್ತು ಇದಕ್ಕಿಂತ ಮುಖ್ಯವಾದ ಸಮಸ್ಯೆಗಳು ಹಿನ್ನೆಲೆಗೆ ಹೋಗಿ ಬಿದ್ದಿವೆ. ಆದ್ದರಿಂದಲೇ ನನ್ನ ಮಾತಿನಲ್ಲಿ ಇದಕ್ಕೆ ಹೆಚ್ಚಿನ ಸ್ಥಾನವನ್ನು ಕೊಟ್ಟಿದ್ದೇನೆ. ಸಂಸ್ಕೃತಕ್ಕೆ ಯಾವ ಮಟ್ಟದಲ್ಲಿ ಯಾವ ಸ್ಥಾನವಿರಬೇಕು; ಯಾವ ಪರೀಕ್ಷಾ ಪತ್ರಕ್ಕೆ ಎಷ್ಟು ಅಂಕಗಳಿರಬೇಕು; ಹುದ್ದೆಯೊಂದಕ್ಕೆ ಅರ್ಜಿದಾರನಾದವನು ಅರ್ಜಿ ಹಾಕುವುದಕ್ಕಿಂತ ಮುಂಚೆಯ ಕನ್ನಡ ಪರೀಕ್ಷೆಯೊಂದನ್ನು ಪ್ಯಾಸು ಮಾಡಬಹುದೆ-ಇತ್ಯಾದಿ ವಿವರಗಳಿಗೆ ನಾನು ಇಲ್ಲಿ ಕೈಹಾಕುವುದಿಲ್ಲ. ನಾನು ತಮ್ಮೊಡನೆ ಪರಿಶೀಲಿಸಬೇಕೆಂದಿರುವುದು ಈ ಚಳವಳಿಯ ಹಿಂದಿರುವ ಮನೋವೃತ್ತಿಯನ್ನು, ಈಗ ನಾನು ಹೇಳುವುದೆಲ್ಲ ನನ್ನ ಸ್ವಂತ, ವೈಯಕ್ತಿಕ ಅಭಿಪ್ರಾಯ. ಇದರ ಹೊಣೆ ಪರಿಷತ್ತಿನ ಮೇಲಾಗಲಿ ಸಮ್ಮೇಳನದ ಮೇಲಾಗಲಿ ಏನೇನೂ ಇಲ್ಲ. ಇದು ಸ್ಪಷ್ಟವೇ ಆದರೂ ಇಲ್ಲಿ ಅದನ್ನು ಕಾಣಿಸುವುದು ಒಳ್ಳೆಯದು.

ಕರ್ನಾಟಕದ ಉದಾರ ಭಾವ

ಇನ್ನು ನಮ್ಮನ್ನು ಕಾಡುತ್ತಿರುವ ಇತರ ಸಮಸ್ಯೆಗಳ ಕಡೆಗೆ ತಿರುಗೋಣ. ಇಂದು ಚಾಲತಿಯಲ್ಲಿರುವ ರಾಜ್ಯ ವ್ಯವಸ್ಥೆಯಿಂದಾಗಿ ರಾಜ್ಯಭ್ರಷ್ಟರಾಗಿರುವ ನಮ್ಮ ಸೋದರ ಕನ್ನಡಿಗರ ಮಾತು ಬಹುಶಃ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ಬಂದಿದೆ. ಅಂಥವರೊಬ್ಬರು ನನಗೆ ಬರೆದ ಪತ್ರದಲ್ಲಿ ತಮ್ಮನ್ನು ‘ಅನಾಥರು’ ಎಂದು ಕರೆದುಕೊಂಡಿದ್ದರು. ನಾನು ಕೇಳಿರುವ ಮಟ್ಟಿಗೆ ಅವರು ಹಾಗೆಂದು ಕೊಂಡದ್ದು ಸರಿ ಎಂದು ತೋರುತ್ತದೆ. ಅನೇಕ ರಾಜ್ಯಗಳಲ್ಲಿ ಗಡಿಯ ಎರಡು ಕಡೆಗಳಲ್ಲೂ ಭಾಷಾ ಅಲ್ಪಸಂಖ್ಯಾತರಿರುತ್ತಾರೆ. ಇದು ಅನಿವಾರ್ಯ. ಆದರೆ ಅಲ್ಪಸಂಖ್ಯಾತರೆಂಬ ಕಾರಣದಿಂದಾಗಿ ಅವರು ಅನಾಥರಾಗಬೇಕಾದ್ದಿಲ್ಲ. ಅವರು  ಯಾವ ರಾಜ್ಯದ ಪ್ರಜೆಗಳಾಗಿದ್ದಾರೋ ಆ ರಾಜ್ಯ ತನ್ನ ಕರ್ತವ್ಯವನ್ನು ಪಾಲಿಸಿದರೆ ಅವರು-ತಮ್ಮ ಭಾಷಾಸೋದರರಿಂದ ದೂರವಾದೆವಲ್ಲ ಎಂಬುದೊಂದನ್ನು ಬಿಟ್ಟು ಸುಖವಾಗಿರಬಹುದು. ನನಗೆ ತಿಳಿದಮಟ್ಟಿಗೆ ಕರ್ನಾಟಕ ಈ ಸಂದರ್ಭದಲ್ಲಿ ಉದಾರವಾಗಿಯೇ ವರ್ತಿಸುತ್ತಿದೆ.

Tag: Kannada Sahitya Sammelana 56, A.N. Murthy Rao, A.N. Murthyrao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)