ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆ
ಜನವರಿ ೧೯೯೨

ಅಧ್ಯಕ್ಷತೆ: ಜಿ.ಎಸ್. ಶಿವರುದ್ರಪ್ಪ

gss

೬೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಜಿ.ಎಸ್. ಶಿವರುದ್ರಪ್ಪ

ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.ಎ. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ(೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ(೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ(೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ(೧೯೮೭), ಪಂಪ ಪ್ರಶಸ್ತಿ(೧೯೯೮), ೨000ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨00೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್(೨00೩) ದೊರೆಯಿತು.

ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು :ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ :

ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೬ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧0 ಸಂಪುಟಗಳು, ಕೆ.ಎಸ್.ನ ಸಂಭಾವನಾ ಗ್ರಂಥ ಚಂದನ.

ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ(೧೯೬೧), ಸೌಂದರ್ಯ ತಿಬಿಂಬ(೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ(೧೯೮೯) ಇತ್ಯಾದಿ.

ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ(೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ.

ಕವನ ಸಂಗ್ರಹಗಳು : ಸಾಮಗಾನ(೧೯೫೧), ಚೆಲುವು-ಒಲವು(೧೯೫೩), ದೇವಶಿಲ್ಪ(೧೯೫೬), ದೀಪದ ಹೆಜ್ಜೆ(೧೯೫೯), ಕಾರ್ತೀಕ(೧೯೬೧), ತೀರ್ಥವಾಣಿ(೧೯೬0), ಅನಾವರಣ(೧೯೬೩), ನನ್ನ ನಿನ್ನ ನಡುವೆ(೧೯೭೩), ವ್ಯಕ್ತ-ಮಧ್ಯ(೧೯೯೯) ಇತ್ಯಾದಿ.

ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨0೧೩ರಲ್ಲಿ ದೈವಾಧೀನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೬೧

ಅಧ್ಯಕ್ಷರು, ಜಿ.ಎಸ್. ಶಿವರುದ್ರಪ್ಪ

ದಿನಾಂಕ ೯, 0, ೧೧, ೧೨ ಜನವರಿ ೧೯೯೨

ಸ್ಥಳ : ದಾವಣಗೆರೆ

(ಟಿಪ್ಪಣಿ ೧೯೯೧ರಲ್ಲಿ ಸಮ್ಮೇಳನ ನಡೆಯಲಿಲ್ಲ)

 

ಪರಿಷತ್ತಿನ ಈಡೇರದ ಆಶೋತ್ತರಗಳು

‘ಹಿಂದಣ ಹೆಜ್ಜೆಯರಿತಲ್ಲದೆ  ನಿಂದ ಹೆಜ್ಜೆಯನರಿಯಬಾರದು’ ಎನ್ನುತ್ತಾರೆ ಮಹಾನುಭಾವಿ ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ. ಅಂದರೆ, ನಾವು ನಿಂತ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಬೇಕಾದರೆ, ಹಿಂದಣ ಹೆಜ್ಜೆಯನ್ನು, ಅಂದರೆ ಪರಂಪರೆಯನ್ನು ಚೆನ್ನಾಗಿ ಅರಿತವರಾಗಬೇಕು. ಅದಕಾರಣ ಹಿಂದಣ ಹೆಜ್ಜೆಯನ್ನು ಅಥವಾ ಪರಂಪರೆಯನ್ನು ಅರಿತಲ್ಲದೆ, ನಾವು ನಿಂದ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಲು ಬರುವುದಿಲ್ಲ. ನಾನು, ಹಿಂದಿನ ಅರವತ್ತು ಸಮ್ಮೇಳನಗಳ ಅಧ್ಯಕ್ಷರು, ಈಗಾಗಲೇ ಇಂಥ ಸಮ್ಮೇಳನಗಳ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂಬುದನ್ನು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಟಿಸಿರುವ ಸಮ್ಮೇಳನಾಧ್ಯಕ್ಷರ ಭಾಷಣಗಳ ಸಂಪುಟಗಳನ್ನು ಓದಿ ನೋಡಿದ್ದೇನೆ,  ಅವುಗಳನ್ನು ಓದಿದ ಮೆಲೆ ನಾನು ಹೊಸದಾಗಿ ಹೇಳತಕ್ಕದ್ದೇನೂ ಉಳಿದಿಲ್ಲವೆಂದೇ ನನಗನ್ನಿಸುತ್ತದೆ. ಅದರಲ್ಲಿಯೂ ಕನ್ನಡ ನಾಡು-ನುಡಿ-ಗಡಿ, ಇತ್ಯಾದಿಗಳಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನೂ, ಹಿಂದಿನ ಅರವತ್ತೂ ಸಮ್ಮೇಳನಾಧ್ಯಕ್ಷರು ಅತ್ಯಂತ ತಲಸ್ಪರ್ಶಿಯಾಗಿ ವಿವೇಚಿಸಿ, ಈ ಜನ, ಸರ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಕನ್ನಡದ ಸರ್ವಾಂಗೀಣ ಪ್ರಗತಿಗೆ ಕೈಕೊಳ್ಳಬೇಕಾದ ಕರ್ತವ್ಯಗಳೂ, ಕಾರ್ಯಗಳೂ ಏನೆಂಬುದನ್ನು ನಿರ್ದೇಶಿಸಿದ್ದಾರೆ. ಆದರೆ, ಕನ್ನಡದ ಪರವಾಗಿ ‘ನಿರಂತರ ಜಪ’ ದಂತೆ ಮಂಡಿತವಾದ ಎಷ್ಟೋ ನಿರ್ದೇಶನಗಳೂ, ಆಶೋತ್ತರಗಳೂ ಇನ್ನೂ ಸಮರ್ಪಕವಾಗಿ ಈಡೇರಿಲ್ಲ ಎನ್ನುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ.

ಸಮಸ್ಯೆಗಳಿಗೆ ಪರಿಹಾರ ಹೇಗೆ?

ಕನ್ನಡ ನಾಡು-ನುಡಿಗೆ ಒದಗಿರುವ ವಿಪತ್ತನ್ನೂ, ಅದಕ್ಕಾಗಿ  ಕನ್ನಡ ಜನ ನಡೆಯಿಸಬೇಕಾದ ಹೋರಾಟದ ಸ್ವರೂಪವನ್ನೂ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಂದಿನಿಂದಲೂ, ನಮ್ಮ ಪ್ರಮುಖ ಸಾಹಿತಿಗಳೂ, ವಿಚಾರವಂತರೂ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಗೋಕಾಕ್ ಚಳುವಳಿಯಂಥ ಮಹತ್ವದ ಆಂದೋಲನದ ನಂತರ ಜನಮನದಲ್ಲಿ ಮೊದಲಿಗಿಂತ ಹೆಚ್ಚು ವ್ಯಾಪಕವಾದ ರೀತಿಯಲ್ಲಿ ಕನ್ನಡದ ಸಮಸ್ಯೆಗಳನ್ನು ಕುರಿತ ಎಚ್ಚರವೊಂದು ಹುಟ್ಟಿಕೊಂಡಿದ್ದುದು ನಿಜವಾದರೂ ಮತ್ತು ಈ ಆಂದೋಲನದ ನಂತರ ರೂಪುಗೊಂಡ ವಿವಿಧ ಕನ್ನಡಪರ ಸಂಘಟನೆಗಳೂ ಅದರಲ್ಲಿಯೂ ಕನ್ನಡ ಪರ ಹೋರಾಟಕ್ಕೆ, ಹೊಸ ಆಯಾಮಗಳನ್ನು ತಂದುಕೊಟ್ಟ ಕನ್ನಡಶಕ್ತಿ ಕೇಂದ್ರದ ಚಟುವಟಿಕೆಗಳೂ ಜನತೆಯಲ್ಲಿ, ಸರ್ಕಾರದಲ್ಲೂ ಈ ಕುರಿತ ಕಾಳಜಿಗಳನ್ನು ಹುಟ್ಟಿಸುವರಲ್ಲಿ ಕ್ರಿಯಾಶೀಲವಾದರೂ ದೃಢವಾದ ಹಾಗೂ ಪ್ರಾಮಾಣಿಕವಾದ ರಾಜಕೀಯ ಸಂಕಲ್ಪವೇ ಕನ್ನಡದ ಸಮಸ್ಯೆಗಳ ಪರಿಹಾರಕ್ಕೆ ಇರುವ ಪ್ರಬಲವಾದ ಸಾಧನ ಎಂಬುದು ನನ್ನ ತಿಳಿವಳಿಕೆಯಾಗಿದೆ.

ಇಂಥ ಪುಸ್ತಕದಂಗಡಿಗಳು ಬೇಕು?

ಇನ್ನು ಕನ್ನಡದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆ ಕಡಿಮೆಯೇನಿಲ್ಲ. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಹಾಗೂ ಪ್ರಸಾರಂಗಗಳು, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇನ್ನಿತರ ಪ್ರತಿಷ್ಠತ ಪ್ರಕಾಶನ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳು ಓದಬಲ್ಲವರನ್ನು ತಲುಪುವ ವ್ಯವಸ್ಥೆ ಕ್ರಮಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿಲ್ಲ. ಬೆಂಗಳೂರು ಮೈಸೂರಿನಂತಹ ಒಂದೆರಡು ನಗರಗಳನ್ನು ಹೊರತುಪಡಿಸಿದರೆ, ಸರಿಯಾದ ಪುಸ್ತಕದ ಅಂಗಡಿಗಳು ಬೇರೆಯ ಕಡೆ ಇಲ್ಲ.

ರಾಷ್ಟ್ರೀಯ ಗ್ರಂಥಾಲಯಗಳು ಅನೇಕ ಊರುಗಳಲ್ಲಿ ಇದ್ದರೂ, ಅದರೊಳಗೆ ಕೆಲಸ ಮಾಡುವವರ ಅಭಿರುಚಿ ಹಾಗೂ ಆಯ್ಕೆಗೆ ಅನುಗುಣವಾದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿರಬಹುದೇ ಹೊರತು, ಬೇರೆಯ ಒಳ್ಳೆಯ ಪುಸ್ತಕಗಳು ವಿರಳ. ಹತ್ತಿರಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆಗಳು ರೂಪುಗೊಳ್ಳಬೇಕು; ರೈಲು ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಇರುವ ಪುಸ್ತಕದ ಅಂಗಡಿಗಳಲ್ಲಿ, ಜನಕ್ಕೆ ಉತ್ತಮ ಅಭಿರುಚಿ ನಿರ್ಮಾಣ ಮಾಡುವಂಥ ಪುಸ್ತಕಗಳು ಕಣ್ಣಿಗೆ ಬೀಳುವಂತಾಗಬೇಕು. ಕರ್ನಾಟಕದ ವಿವಿಧ ಭಾಗಗಳಲ್ಲಿ ಪುಸ್ತಕಮೇಳಗಳು ಏರ್ಪಾಡಾಗಬೇಕು. ಈ ದಿಕ್ಕಿನಲ್ಲಿ ಕನ್ನಡ-ಸಂಸ್ಕೃತಿ ನಿರ್ದೇಶನಾಲಯವು ಪ್ರಾರಂಭಿಸಿರುವ ‘ಜನಪ್ರಿಯ ಪುಸ್ತಕ ಮಾಲೆ’ಯ ಯೋಜನೆ ಅತ್ಯಂತ ಸ್ವಾಗತಾರ್ಹವಾದದ್ದು. ಇನ್ನು ಸರ್ಕಾರವು ಪ್ರಾರಂಭಿಸಲು ಉದ್ದೇಶಿಸಿರುವ ಪುಸ್ತಕ ಪ್ರಾಧಿಕಾರ’ವು ನಾಳಿನ ಪುಸ್ತಕೋದ್ಯಮಕ್ಕೆ ಹೊಸ ಆಯಾಮಗಳನ್ನು ಕೊಡಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಗ್ರಾಮಾಂತರ ಪರಿಸರಗಳಲ್ಲಿ ವಾಚನಾಲಯಗಳು, ಗ್ರಂಥಾಲಯಗಳು ಹೆಚ್ಚಾಗಬೇಕು. ದೇವಸ್ಥಾನಗಳನ್ನೂ ಕಲ್ಯಾಣಮಂಟಪಗಳನ್ನೂ ಕಟ್ಟಿಸುವುದರಲ್ಲಿ ನಮ್ಮ ಜನಕ್ಕೆ ಇರುವ ಉತ್ಸಾಹ ಗ್ರಂಥಾಲಯಗಳನ್ನು ನಿರ್ಮಿಸುವುದರಲ್ಲಿ ಇಲ್ಲ. ಗ್ರಂಥಾಲಯಗಳನ್ನು ಸ್ಥಾಪಿಸುವುದು ನಿಜವಾಗಿಯೂ ಪುಣ್ಯದ ಕೆಲಸ ಎಂಬುದನ್ನು ಯಾಕೆ ನಮ್ಮ ಜನ ಅರ್ಥಮಾಡಿಕೊಳ್ಳುವುದಿಲ್ಲ? ದೇವಸ್ಥಾನಗಳಿಗಿಂತ ಗ್ರಂಥಾಲಯಗಳು ಮಹತ್ವವೆಂದು ನಮ್ಮ ಜನಕ್ಕೆ ಅನ್ನಿಸುವುದು ಯಾವಾಗ?

ಆದಾನ ಪ್ರದಾನ ಕಾರ್ಯ ಹೆಚ್ಚಾಗಲಿ

ಇದಕ್ಕಿಂತಲೂ ಮುಖ್ಯವಾದದ್ದೆಂದರೆ, ಕನ್ನಡ ಸಾಹಿತ್ಯದ ಸಾಧನೆಯನ್ನೂ, ವಿಶಿಷ್ಟತೆಯನ್ನೂ, ಉತ್ಕೃಷ್ಟತೆಯನ್ನೂ ಇಂಗ್ಲಿಷ್ ಭಾಷೆಯ ಮೂಲಕ ಭಾರತೀಯ ಹಾಗೂ ಪಾಶ್ಚಿಮಾತ್ಯ ವಲಯಗಳಿಗೆ ಪರಿಚಯ ಮಾಡಿಕೊಡುವ ಕೆಲಸ. ಏಕೆಂದರೆ, ಇತರ ಭಾಷಾ ಸಾಹಿತ್ಯಗಳು ನಮಗೆ ಅನುವಾದಗಳ ಮೂಲಕ ಪರಿಚಯವಾಗಿರುವ ಅಲ್ಪ-ಸ್ವಲ್ಪ ಪ್ರಮಾಣಕ್ಕೆ ಹೋಲಿಸಿ ನೋಡಿದರೂ, ನಮ್ಮ ಸಾಹಿತ್ಯವು ಮುಖ್ಯವಾಗಿ ಇಂಗ್ಲಿಷಿನ ಮೂಲಕ ಕರ್ನಾಟಕದಾಚೆಗೆ ಪರಿಚಯವಾಗಿರುವುದು ತೀರಾ ಕಡಿಮೆಯೆಂದೇ ಹೇಳಬೇಕು. ಈವರೆಗಿನ ಆದಾನ-ಪ್ರದಾನ ಕಾರ್ಯವು, ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಹಾಗೂ ಇನ್ನಿತರ ವೈಯಕ್ತಿಕ ಪರಿಶ್ರಮ ಮತ್ತು ಶ್ರದ್ಧೆಗಳಿಂದ ತಕ್ಕಮಟ್ಟಿಗೆ ನಡೆದಿರುವುದಾದರೂ, ಇದೂ ಏನೇನೂ ಸಾಲದು. ಇದಕ್ಕಾಗಿ ವಿವಿಧ ಭಾಷೆಗಳಲ್ಲಿ ಪರಿಣಿತರಾದವರನ್ನೊಳಗೊಂಡ ಪ್ರತ್ಯೇಕವಾದ ಹಾಗೂ ಸ್ಥಾಯಿಯಾದ ಅನುವಾದ ವಿಭಾಗವೊಂದನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ ಅಥವಾ ಇದೀಗ ಪ್ರಾರಂಭವಾಗಿರುವ ಕನ್ನಡ ವಿಶ್ವವಿದ್ಯಾಲಯವಾಗಲಿ ಒಳಕೊಳ್ಳುವುದಾದರೆ ಅದೊಂದು ಮಹತ್ವದ ಹೆಜ್ಜೆಯಾಗುತ್ತದೆ.

ಬಹುಭಾಷಾ ಬಾಂಧವ್ಯ ಬೇಕು

ನಮ್ಮ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಪರಿಸರದ ಬರಹಗಾರರ ಸಮಸ್ಯೆಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಸಾಹಿತ್ಯಿಕ ಚಟುವಟಿಕೆಗಳು, ಪುಸ್ತಕ ಪ್ರಕಾಶನ, ವಿಮರ್ಶೆಯ ಹಾಗೂ ಸಂವಹನದ ಮಾಧ್ಯಮಗಳು, ಬಹುಮಟ್ಟಿಗೆ ನಗರ ಕೇಂದ್ರಿತವಾಗುತ್ತಿರುವ ಸಂದರ್ಭದಲ್ಲಿ, ಗ್ರಾಮೀಣ ಪರಿಸರದ ಬರಹಗಾರರಿಗೆ ಸರಿಯಾದ ಪರಿಗಣನೆಯಾಗಲೀ, ಪ್ರೋತ್ಸಾಹವಾಗಲೀ, ಅವರ ಕೃತಿಗಳ ಬಗ್ಗೆ ಸಮರ್ಪಕವಾದ ವಿಮರ್ಶೆಯಾಗಲೀ ನಡೆಯುತ್ತಿಲ್ಲ ಎಂಬ ಅಭಿಪ್ರಾಯವೊಂದು ಪ್ರಚಲಿತವಾಗಿದೆ. ಎಷ್ಟೋ ವೇಳೆ ನಗರ ಕೇಂದ್ರಗಳಲ್ಲಿ ವಿವಿಧ ಸಮೂಹ ಮಾಧ್ಯಮಗಳಿಗೆ ಸಮೀಪದಲ್ಲಿರುವವರಿಗೆ ದೊರಕುವ ‘ಪ್ರಕಾಶನ’ದ ಅನುಕೂಲ ಇವರಿಗೆ ಇಲ್ಲದಿರಬಹುದೆಂಬ ಸಂಗತಿಯನ್ನು ತಳ್ಳಿಹಾಕಲಾಗದಿದ್ದರೂ, ನಿಜವಾದ ಲೇಖಕ ಅವನು ಎಲ್ಲಿಯೇ ಇರಲಿ ಅವನು ಪಡೆಯಬೇಕಾದಷ್ಟು ಪರಿಗಣನೆಯಿಂದ ವಂಚಿತನಾಗಲಾರನೆಂದೇ ನನ್ನ ತಿಳಿವಳಿಕೆ. ಆದರೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ನಗರಕೇಂದ್ರಗಳಾಚೆಯ ಪ್ರತಿಭೆಗಳನ್ನು ಹೆಚ್ಚು ಹೆಚ್ಚಾಗಿ ತಮ್ಮ ಕಾರ್ಯಕ್ರಮಗಳೊಳಗೆ ತೊಡಗಿಸಿಕೊಳ್ಳುವುದರ ಮೂಲಕ, ಅವರನ್ನು ಪರಿಗಣನೆಗೆ ತೆಗೆದುಕೊಂಡು ಪ್ರೋತ್ಸಾಹಿಸುವುದು ಅಗತ್ಯವಾಗಿದೆ.

ಬಹುಭಾಷಾ ಬಾಂಧವ್ಯ ಬೇಕು

ಹಾಗೆಯೇ ನಮ್ಮ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ಸಾಧ್ಯವಾದ ಮಟ್ಟಿಗೆ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗದಂತೆ ಅವುಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ಅಚೆಗೂ ಹಮ್ಮಿಕೊಳ್ಳಬೇಕು. ಮತ್ತು ಈ ಬಗೆಯ ಕಾರ್ಯಕ್ರಮಗಳಲ್ಲಿ ಆಯಾ ಗಡಿಗಳಾಚೆಯ ಸೋದರ ಭಾಷಾಸಾಹಿತಿಗಳನ್ನು, ಕಲಾವಿದರನ್ನು ನಮ್ಮವರ ಜೊತೆಗೆ ತೊಡಗಿಸಿಕೊಳ್ಳಬೇಕು. ಬಹುಭಾಷಿಕ ಪರಿಸರದ ನಡುವೆ ಬದುಕುವ ನಾವೆಲ್ಲರೂ ಈ ಬಗೆಯ ಭಾಷಾಬಾಂಧವ್ಯಗಳ ಮೂಲಕವಾಗಿಯೇ ಬೆಳೆಯಬೇಕಾಗುತ್ತದೆ.

Tag: Kannada Sahitya Sammelana 61, G.S. Shivarudrappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)