ಸಾಹಿತ್ಯ ಸಮ್ಮೇಳನ-೬೫ : ಹಾಸನ
ಡಿಸೆಂಬರ್ ೧೯೯೬

ಅಧ್ಯಕ್ಷತೆ: ಚೆನ್ನವೀರ ಕಣವಿ

channaveera-kanavi

೬೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಚೆನ್ನವೀರ ಕಣವಿ

ಪ್ರಸಿದ್ಧ ಕವಿ, ವಿಮರ್ಶಕ ಚೆನ್ನವೀರ ಕಣವಿ ಅವರು ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ರಪ್ಪ-ಪಾರ್ವತವ್ವ ದಂಪತಿಗಳಿಗೆ ೨೮-೬-೧೯೨೮ರಲ್ಲಿ ಜನಿಸಿದರು. ಶಿರುಂಡ, ಗರಗಗಳಲ್ಲಿ ೧೯೪0-೪೬ರಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿಯನ್ನು, ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿಯನ್ನೂ ಗಳಿಸಿದರು.

೧೯೫೨ರಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ ೧೯೫೮ರಲ್ಲಿ ಅದರ ನಿರ್ದೇಶಕರಾದರು.

ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ಸಾಧನೆಗಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೧), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೫), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೧೯೮೯), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್(೧೯೯೬-೯೮), ಪಂಪ ಪ್ರಶಸ್ತಿ(೧೯೯೯), ಇತ್ಯಾದಿ. ೧೯೯೬ರಲ್ಲಿ  ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ಜರುಗಿದಾಗ ಕಣವಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.

ಕಣವಿ ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ.

ಕಣವಿ ಅವರ ಕಾವ್ಯಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧವಾಗಿವೆ.

ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.

ಧಾರವಾಡದ ಕಲ್ಯಾಣ ನಗರದ ಚೆಂಬೆಳಕು ನಿವಾಸದಲ್ಲಿ ಕಣವಿ ಅವರು ನಿವೃತ್ತಜೀವನ ನಡೆಸುತ್ತಿದ್ದಾರೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

ಕನ್ನಡ ಸಾಹಿತ್ಯ ಸಮ್ಮೇಳನ೬೫

ಅಧ್ಯಕ್ಷರು, ಚೆನ್ನವೀರ ಕಣವಿ

ದಿನಾಂಕ ೨೧, ೨೨, ೨೩, ೨೪ ಡಿಸೆಂಬರ್ ೧೯೯೬

ಸ್ಥಳ : ಹಾಸನ

 

ಸಮ್ಮೇಳನ ನೋಡುವುದೇ ಆನಂದ

ಕವಿ ಪು.ತಿ.ನ ಅವರು ನನಗೆ ಬರೆದ ಅಭಿನಂದನ ಪತ್ರದಲ್ಲಿರುವ ಒಂದು ಮಾತು ಹೀಗಿದೆ; ‘ಕನ್ನಡ ನಾಡಿನ ಎಲ್ಲ ಭಾಗಗಳಿಂದಲೂ ಹೊಮ್ಮಿ ಹರಿದು ಬರುವ ಕನ್ನಡಿಗರ ನೆರವಿಯನ್ನು ನೋಡುವುದೇ ಒಂದು ಸಂತೋಷ. ಅದರಲ್ಲೂ ವೇದಿಕೆ ಅಧ್ಯಕ್ಷ ಸ್ಥಾನದಿಂದ ಅವರ ದರ್ಶನ ಇನ್ನೂ ಆನಂದದಾಯವಾದ್ದು’. ಅಂಥ ‘ದರ್ಶನ’ ದ ಆನಂದವನ್ನು ತಾವೆಲ್ಲರೂ ನನಗೆ ದಯಪಾಲಿಸಿರುವ ಇಂದಿನ ಸಂದರ್ಭದಲ್ಲಿ ೫೨ವರ್ಷಗಳ ಹಿಂದೆ ನಾನು ಹೈಸ್ಕೂಲ್ ವಿದಾರ್ಥಿಯಾಗಿದ್ದಾಗ ನೋಡಿದ ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳದ ನೆನಪಾಗುತ್ತದೆ.

ರಬಕವಿ ಸಮ್ಮೇಳನ

೧೯೪೪ರಲ್ಲಿ ರಬಕವಿಯಲ್ಲಿ ನಡೆದ ಆ (೨೮ನೆಯ) ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಧಾರವಾಡದ ಪ್ರೊ. ಶಿ.ಶಿ. ಬಸವನಾಳರು, ಅಂದು ಜೋಳದರಾಶಿ ದೊಡ್ಡನಗೌಡರ ಕಂಚಿನ ಕಂಠದಿಂದ ಹೊಮ್ಮಿದ ಪ್ರಾರ್ಥನೆ ಸುತ್ತಲಿನ ಕಟ್ಟಡಗಳಿಂದ ಪ್ರತಿಧ್ವನಿಗೊಂಡಿತ್ತು. ಒಬ್ಬರು ಮೆಲ್ಲನೆ ಮೇಲೆದ್ದು ಮುಗುಳು ನಗುತ್ತಲೇ ಪ್ರೀತಿ ತುಂಬಿದ ಧ್ವನಿಯಲ್ಲಿ ‘ಅಣ್ಣಂದಿರೇ, ತಾಯಂದಿರೆ’ ಎಂದು ಸಂಬೋಧಿಸಿ ಕನ್ನಡದ ಬಗ್ಗೆ ಅತ್ಯಂತ ಕಳಕಳಿಯಿಂದ ಮಾತನಾಡಿದ್ದನ್ನು ನಾನು ಮಂತ್ರಮುಗ್ಧನಾಗಿ ಕೇಳಿದೆ. ಅವರೇ ಮಾಸ್ತಿಯವರು ಎಂದು ತಿಳಿದಾಗ ನನಗೆ ನಿಜಕ್ಕೂ ರೋಮಾಂಚನವಾಯಿತು. ಕವಿಗೋಷ್ಠಿಯ ಉದ್ಘಾಟಕರಾಗಿ ಬಿ.ಎಂ.ಶ್ರೀ ಅವರ ಕಾವ್ಯವಾಣಿ ಕಿವಿಗಳನ್ನು ತುಂಬಿತು. ಆಗ ಪ್ರಗತಿಶೀಲ ಸಾಹಿತ್ಯ  ಕುರಿತು ಪತ್ರಿಕೆಗಳಲ್ಲಿ ನಡೆಯುತ್ತಿದ್ದ ಮುಖ್ಯವಾಗಿ ‘ಉಷಾ ಮಾಸಪತ್ರಿಕೆ’ ವಾದ ವಿವಾದವನ್ನು ನಾನು ಗಮನಿಸಿದ್ದನಾದ್ದರಿಂದ ಗೋಕಾಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯಗೋಷ್ಠಿ ಸಹಜವಾಗಿಯೇ ನನ್ನ ಕುತೂಹಲವನ್ನು ಕೆರಳಿಸಿತು. ಆ ಗೋಷ್ಠಿಯಲ್ಲಿ ಅ.ನ.ಕೃ, ತ.ರಾ.ಸು, ಕುಳಕುಂದ ಶಿವರಾಯ (ನಿರಂಜನ), ನಾಡಿಗೇರ ಕೃಷ್ಣರಾಯ, ಅರ್ಚಕ ವೆಂಕಟೇಶ, ಮಾ.ನಾ. ಚೌಡಪ್ಪ ಇವರು ಭಾಗವಹಿಸಿ ಆವೇಶದಿಂದ ಮಾತನಾಡಿದ್ದು ನನಗಿನ್ನೂ ನೆನಪಿದೆ. ಉತ್ತಂಗಿ ಚೆನ್ನಪ್ಪನವರು, ಜಿ.ಪಿ. ರಾಜರತ್ನಂ, ಸಿಂಪಿ ಲಿಂಗಣ್ಣ, ಈಶ್ವರ ಸಣಕಲ್ಲ ಮೊದಲಾದವರು ಬೇರೆ ಬೇರೆ ಗೋಷ್ಠಿಗಳ ಅಧ್ಯಕ್ಷರಾಗಿ, ಉದ್ಘಾಟಕರಾಗಿ ತಮ್ಮ ತಮ್ಮ ವಿಶಿಷ್ಟ ಶೈಲಿಯಲ್ಲಿ ಭಾಷಣ ಮಾಡಿದ್ದನ್ನು ನಾನು ಇಂದಿಗೂ ಮರೆತಿಲ್ಲ. ಮಲ್ಲಿಕಾರ್ಜುನ ಮನಸೂರ ಅವರ ಸಂಗೀತವಂತೂ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು.

ನಾನು ಮೇಲೆ ಹೆಸರಿಸಿದ ಎಲ್ಲಾ ಮಹನೀಯರು, ಇಂದು ಕಣ್ಮರೆಯಾಗಿದ್ದರೂ ತಮ್ಮ ಅಮೂಲ್ಯವಾದ ಸಾಹಿತ್ಯ ಕೃತಿಗಳ ಮೂಲಕ ಜೀವಂತವಾಗಿ ನಮ್ಮಲ್ಲಿ ಉಸಿರಾಡುತ್ತಿದ್ದಾರೆ. ಸ್ಪೂರ್ತಿದಾಯಕವಾದ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿ ಬಂದ ಉದ್ದೇಶವಿಷ್ಟೆ. ಸಾಹಿತ್ಯ ಸಮ್ಮೇಳನ ಬಹಿರಂಗದಲ್ಲಿ, ಸಂಖ್ಯಾ ಬಾಹುಳ್ಯದಿಂದ ‘ಜಾತ್ರೆಯ ಸ್ವರೂಪವನ್ನು ಪಡೆದಿದ್ದರೂ ಅಂತರಂಗದಲ್ಲಿ ಸಾಹಿತ್ಯ ಯಾತ್ರೆಯಾಗಿ ಪರಿಣಮಿಸುವುದನ್ನು ಮರೆಯಬಾರದು’. ಸಾಹಿತ್ಯ ಪ್ರೇಮಿಗಳ, ವಾಚನಾಸಕ್ತರ ದೊಡ್ಡ ಜನಸಮೂಹ ಸಮ್ಮುಖದಲ್ಲಿಯೂ ಸಾರ್ವಜನಿಕ ಆವೇಶ, ಭಾವಿಕ ಪ್ರತಿಕಿಯೆಗಳನ್ನು ದೂರವಿಟ್ಟು, ಮೌಲಿಕ ಚರ್ಚೆ ನಡೆಸುವುದು ಅಸಾಧ್ಯವೇನೂ ಅಲ್ಲ. ಅಸಾಹಿತ್ಯಕವಾದ ರಾಜಕೀಯ ಒತ್ತಡಗಳಿಗೆ ಮಾತ್ರ ಪರಿಷತ್ತು ಮಣಿಯದಂತಿದ್ದರೆ ಸಾಕು. ಅದರ ಗೌರವ ಹೆಚ್ಚುವುದರಲ್ಲಿ ಸಂದೇಹವಿಲ್ಲ. ನಿಜವಾದ, ಜೀವಂತವಾದ ಸಾಹಿತ್ಯದ ಕೆಲಸಗಳಿಗೂ ಇದರಿಂದ ದಾರಿ ಸುಗಮಗೊಳ್ಳಬಹುದೆಂದು ನಾನು ಆಶಿಸಿದ್ದೇನೆ.

ಪರಿಷತ್ತು ಕನ್ನಡಿಗರ ಸಂಸ್ಥೆ

ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಬಹುದೊಡ್ಡ ಪ್ರಾತಿನಿಧಿಕ ಸಂಸ್ಥೆ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ತರುವಾಯ ಸಮಸ್ತ ಕರ್ನಾಟಕದ ವ್ಯಾಪ್ತಿಯುಳ್ಳ ಸಂಸ್ಥೆಯೆಂದರೆ ಇದೊಂದೇ. ಇದರ ಕಾರ್ಯರಂಗ ಹಾಗೂ ಹೊಣೆಗಾರಿಕೆ ಹರಡಿಕೊಂಡು ಬಂದಂತೆ, ತಮ್ಮನ್ನು ‘ತಾಯ್ನುಡಿಯ ತಮ್ಮಡಿ’ ಎಂದು ಕರೆದುಕೊಂಡು ನಾಡಿನ ಹಿರಿಯರು ಕನ್ನಡ ನಾಡು, ನುಡಿ, ದುಡಿ ಸಂಸ್ಕೃತಿಗಳ ಬೆಳವಣಿಗಾಗಿ ಹಿರಿದಾದ ಸೇವೆಯನ್ನು ಸಲ್ಲಿಸಿ, ನುಡಿಯ ಮಕ್ಕಳನ್ನು ಒಂದಾಗಿಸಿ ಸೌಹಾರ್ದದಿಂದ ಬೆಳೆಸಿ, ಕನ್ನಡಿಗರೆಲ್ಲರ ಸಾಂಸ್ಕೃತಿಕ ಆಶೋತ್ತರಗಳನ್ನು ರೂಪಿಸುವಲ್ಲಿ ತಮ್ಮ ಆತ್ಮಶಕ್ತಿಯನ್ನು ಈ ಸಂಸ್ಥೆಗೆ ಧಾರೆಯೆದು ಇದರ ಕ್ರಿಯಾಶಕ್ತಿಯನ್ನು ಹೆಚ್ಚಿಸುತ್ತ ಬಂದಿದ್ದಾರೆ. ಆ ಎಲ್ಲಾ ಹಿರಿಯ ಚೇತನಗಳನ್ನು ಸ್ಮರಿಸಿಕೊಂಡು ಹೊಸ ಕಾಲದ ಅಗತ್ಯಗಳನ್ನು ಅರಿತುಕೊಂಡು ಎಲ್ಲರೂ ಒಂದಾಗಿ ಮುಂದುವರಿಯೋಣ.

ಶತಮಾನೋತ್ಸವ ಮತ್ತು ಪರಿಷತ್ತು

ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ಸಲ್ಲಿಸಿರುವ ಮೂವರು ಮಹನೀಯರ ಶತಮಾನೋತ್ಸವವನ್ನು ಆಚರಿಸುವ ಅವಕಾಶ ಈ ವರ್ಷ ಕನ್ನಡಿಗರಿಗೆ ಒದಗಿದೆ. ಅವರೆಂದರೆ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಹಿಂದಿನ ಅವಿಭಕ್ತತ್ವವನ್ನು ಕಂಡು ಹಿಡಿದ ಹಾಗೂ ಪ್ರಜ್ಞಾಪ್ರಕಾಶ ಪಾತಳಿಯ ನೆಲೆಯಲ್ಲಿ ಕರುನಾಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ಮಾನವ ಸಂಸ್ಕೃತಿಗಳ ಬೆಳವಣಿಗೆಯನ್ನು ವಿವರಿಸಿದ ಶಂಬಾ ಅವರು ಪ್ರಖರವಾದ ಸಂಶೋಧನ ಪ್ರಯತ್ನದಿಂದ ಕನ್ನಡ ಚಿಂತನ ಲೋಕಕ್ಕೆ ಹೊಸ ಬೆಳಕು ನೀಡಿದವರು. ಎರಡನೆಯದಾಗಿ, ‘ವಿಶ್ವ ಕರ್ನಾಟಕ’ದ ಮೂಲಕ ಪ್ರಭುತ್ವದ ವಿರುದ್ಧ ತತ್ವಬದ್ಧವಾದ ಪ್ರತಿರೋಧವೊಡ್ಡಿದ, ಇತಿಹಾಸ ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಗಣನೀಯ ಕಾರ್ಯಗೈದ ತಿ.ತಾ. ಶರ್ಮರು ಕರ್ನಾಟಕ ಸಾಂಸ್ಕೃತಿಕ  ಹಾಗೂ   ಸಾರ್ವಜನಿಕ ಜೀವನದಲ್ಲಿ ಮಹತ್ವದ ಪಾತ್ರವಹಿಸಿದವರು. ಮೂರನೆಯದಾಗಿ ಬರೆದಷ್ಟು ಕಾದಂಬರಿಗಳನ್ನು ಒಂದೊಂದು ಮಾದರಿಯಾಗಿ ನಿಲ್ಲಿಸಿದ ಸಾಹಿತ್ಯದ ಸತ್ವಕ್ಕೆ ಎರವಾಗದಂತೆ ಬೌದ್ಧಿಕತೆಯನ್ನು ಬಳಸಿ ಪೌರಾಣಿಕ ಕಾದಂಬರಿಗಳ ಮೂಲಕ ತಮ್ಮ ಕಲ್ಪನಾ ಸೃಷ್ಟಿಯ ಮಹತಿಯನ್ನು ಸಾಧಿಸಿದ ದೇವುಡು ಅವರು.

ಈ ಎಲ್ಲಾ ಸಾಹಿತ್ಯ ಶ್ರೇಷ್ಠರ ಜನ್ಮ ಶತಮಾನೋತ್ಸವವನ್ನು ಸಾರ್ಥಕಗೊಳಿಸುವಂತೆ ಆಚರಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮೊದಲುಗೊಂಡ ಇತರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖ ಪಾತ್ರವಹಿಸಿ ಈ ಲೇಖಕರ ಅಪ್ರಕಟಿತ ಕೃತಿಗಳ ಹಾಗೂ ಸಮಗ್ರ ಗ್ರಂಥಗಳ ಪ್ರಕಟಣೆಯ ಮುಲಕ ಅದನ್ನು ಸಾರ್ಥಕಗೊಳಿಸಬೇಕು.

ಕನ್ನಡ ನಿಘಂಟು

ಕನ್ನಡ-ಕನ್ನಡ ನಿಘಂಟಿನ ಎಂಟನೆಯ ಸಂಪುಟದೊಂದಿಗೆ ಬಹು ದೊಡ್ಡ ಯೋಜನೆಯೊಂದನ್ನು ಪೂರ್ಣಗೊಳಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಹಾಕಿಕೊಂಡಿರುವ ಹೊಸ ಯೋಜನೆಗಳು ತುಂಬ ಆಶಾದಾಯಕವಾಗಿವೆ. ಎಂಟೂ ಸಂಪುಟಗಳ ಪರಿಷ್ಕರಣ ಯೋಜನೆಯನ್ನು ಪರಿಷತ್ತು ಈಗ ಕೈಗೆತ್ತಿಕೊಂಡಿದ್ದು, ಇಂಗ್ಲಿಷ್ ಸಂವಾದಿ ಪದಗಳನ್ನು ಕೊಡುವ ಮೂಲಕ ಕನ್ನಡ-ಇಂಗ್ಲಿಷ್ ನಿಘಂಟನ್ನಾಗಿಸಿ ಇದರ ವ್ಯಾಪ್ತಿಯನ್ನು ವಿಸ್ತಾರಗೊಳಿಸಲಿದೆ.

ಕಾರ್ಯಕರ್ತರ ಪಡೆಬೇಕು?

ಮಾಸ್ತಿಯವರು ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಕನ್ನಡದ ಕೆಲಸವನ್ನು ಕುರಿತು ಮಾತನಾಡುತ್ತ ಒಮ್ಮೆ ಹೀಗೆ ಅಂದಿದ್ದರಂತೆ, ‘ನನಗೆ ಒಂದು ನೂರು ಜನ ಒಳ್ಳೇ ಕಾರ್ಯಕರ್ತರನ್ನು ಕೊಡಿ. ಕನ್ನಡದಲ್ಲಿ ಒಂದು ಕ್ರಾಂತಿಯನ್ನೇ ಮಾಡಿ ತೋರಿಸುತ್ತೇನೆ’.  ಕನ್ನಡದ ಬಗ್ಗೆ ನಿಜವಾದ ಕಳಕಳಿಯುಳ್ಳ ಅಂಥ ಕಾರ್ಯಕರ್ತರ ಒಂದು ಪಡೆಯನ್ನೇ ನಿರ್ಮಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಂಘ ಸಂಸ್ಥೆಗಳು ಒಟ್ಟಾಗಿ ಕಾರ್ಯೋನ್ಮುಖವಾಗುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

Tag: Channaveera Kanavi, Kannada Sahitya Sammelana 65

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)