ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭

ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್

ls-sheshagiri-rao

೭೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಲ್.ಎಸ್. ಶೇಷಗಿರಿರಾವ್

ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಬುದ್ಧ ವಿಮರ್ಶಕರೆನಿಸಿರುವ ಎಲ್.ಎಸ್. ಶೇಷಗಿರಿರಾಯರು ಸ್ವಾಮಿರಾವ್-ಕಮಲಾಬಾಯಿ ದಂಪತಿಗಳ ಸುಪುತ್ರರಾಗಿ ೧೬-೨-೧೯೨೫ರಲ್ಲಿ ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು.

ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

೧೯೪೭-೫0ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇವರ ಇಂಗ್ಲಿಷ್ ಸಾಹಿತ್ಯ ಚರಿತ್ರೆ (೧೯೯೬) ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಧುನಿಕ ಸಾಹಿತ್ಯ ವಿಮರ್ಶೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನಕೃ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ ಮೊದಲಾದವು ಇವರಿಗೆ ಲಭ್ಯವಾಗಿದೆ.

ಇವರ ಕೆಲವು ಸುಪ್ರಸಿದ್ಧ ಕೃತಿಗಳು ಹೀಗಿವೆ : ಕನ್ನಡದ ಅಳಿವು ಉಳಿವು (ಪ್ರಬಂಧ) ಸಿರಿಸಂಪದ (ವ್ಯಕ್ತಿ ಚಿತ್ರ), ಆಕಾಂಕ್ಷೆ ಮತ್ತು ಆಸೆ (ನಾಟಕ), ಹೊಸಗನ್ನಡ ಸಾಹಿತ್ಯ (ವಿಮರ್ಶೆ), ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ (ವಿಮರ್ಶೆ), ವಿಲಿಯಂ ಷೇಕ್ಸ್ಪಿಯರ್, ಫ್ರಾನ್ಸ್ ಕಾಫ್ಕ, ಭಾರತೀಯ ಸಾಹಿತ್ಯ ಸಮೀಕ್ಷೆ ಇತ್ಯಾದಿ. ಇವರು ಇಂಗ್ಲಿಷಿನಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ೭೪

ಅಧ್ಯಕ್ಷರು, ಎಲ್.ಎಸ್. ಶೇಷಗಿರಿರಾವ್

ದಿನಾಂಕ ೧೨, ೧೩, ೧೪. ೧೫ ಡಿಸೆಂಬರ್ ೨00

ಸ್ಥಳ : ಉಡುಪಿ

 

ಪ್ರಮಾಣಿಕ ಅಧ್ಯಕ್ಷ

 

ಈವರೆಗೆ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕಾದಂಬರಿಕಾರರು, ಕವಿಗಳು, ಸಣ್ಣಕಥೆಗಳ ಬರಹಗಾರರು, ನಾಟಕಕಾರರು, ಪ್ರಬಂಧಕಾರರು ಅಲ್ಲದೆ ಮಹಾನ್ ವಿದ್ವಾಂಸರನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಆರಿಸಿ, ನಾಡು ಗೌರವಿಸಿದೆ. ಮೊದಲಬಾರಿಗೆ ವಿಮರ್ಶಕನೆಂದೇ ಗುರುತಿಸಲಾಗುವ ಸಾಹಿತಿಯನ್ನು ಈ ಪೀಠಕ್ಕೆ ನಾಡು ಆರಿಸಿದೆ.

ಸಾಹಿತ್ಯ ವಿಮರ್ಶೆಗಳನ್ನು ಕುರಿತು ಕೆಲವು ಅನಿಸಿಕೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದಕ್ಕೆ ಮೊದಲು ಒಂದು ಮಾತನ್ನು ನಿವೇದಿಸಬೇಕು. ನಾನು ಸಾಹಿತ್ಯವನ್ನು ಪ್ರವೇಶಿಸಿದ್ದು ಸಣ್ಣಕಥೆಗಳ ಬರಹಗಾರರನಾಗಿ, ೧೯೪೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಸಣ್ಣಕಥೆಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದೆ. ನನ್ನ ನಾಲ್ಕು ಕಥೆಗಳ ಸಂಗ್ರಹಗಳು ಪ್ರಕಟವಾಗಿವೆ.

ಕನ್ನಡ ಭಾಷೆ ಬೆಳವಣಿಗೆ

ಕನ್ನಡ ಭಾಷೆಯ ಬೆಳವಣಿಗೆಯ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ಮತ್ತು ಈ ಕಾರ್ಯದಲ್ಲಿ ನಿರತವಾದ ಸಂಸ್ಥೆಗಳ ನಡುವೆ ಹೊಂದಾಣಿಕೆಯ ಅಗತ್ಯವಿದೆ. ಕನ್ನಡ ವಿಶ್ವವಿದ್ಯಾನಿಲಯ, ಇತರ ಎಲ್ಲ ವಿಶ್ವವಿದ್ಯಾನಿಲಯಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಈ ಎಲ್ಲ ಸಂಸ್ಥೆಗಳ ಯೋಜನೆಗಳು ಮತ್ತು ಪ್ರಕಟಣೆಗಳ ವಿಷಯದಲ್ಲಿ ಹೊಂದಾಣಿಕೆಗೆ ವ್ಯವಸ್ಥೆಯ ಅಗತ್ಯವಿದೆ.

ವಿದ್ವತ್ ಪೋಷಣೆಮಾಡಿ

ನಾಡಿನಲ್ಲಿ ವಿದ್ವತ್ತಿನ ಅನ್ವೇಷಣೆಗೆ ಪೋಷಕವಾದ ವಾತಾವರಣವನ್ನು ಸೃಷ್ಟಿಸಬೇಕೆಂದು ಸರ್ಕಾರದಲ್ಲಿಯೂ ವಿಶ್ವವಿದ್ಯಾನಿಲಯಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ನನ್ನ ಮನವಿ. ಹಳಗನ್ನಡ, ವ್ಯಾಕರಣ, ಛಂದಸ್ಸು ಮೊದಲಾದವುಗಳ ಅಧ್ಯಯನವು ಮುಂದುವರಿಯಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಿಘಂಟಿನ ಕಾರ್ಯ ಮುಂದುವರೆಯಲು ಗ್ರಂಥಾಲಯವನ್ನು ಸಜ್ಜುಗೊಳಿಸಬೇಕು. ಸರ್ಕಾರವು ಹಣ ಸಹಾಯವನ್ನು ನೀಡಬೇಕು. ವಿಶ್ವವಿದ್ಯಾನಿಲಯಗಳಲ್ಲಿ  ಉನ್ನತ ಮಟ್ಟದ ಸಂಶೋಧನೆ ನಡೆಯಬೇಕು. ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳೇನೋ ಇವೆ. ಇವು ಆಡಳಿತಕ್ಕೆ ಅನ್ವಯಿಸುವುವು. ವಿದ್ವತ್ತಿನ ಕೆಲಸಕ್ಕೆ ಹೊಂದಾಣಿಕೆಯ ಅಭಾವವಿದೆ.

ಜಗತ್ತಿನ ಇನ್ನೂರು ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಒಂದೂ ವಿಶ್ವವಿದ್ಯಾನಿಲಯದ ಹೆಸರಿಲ್ಲ. ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಸುಧಾರಿಸಿ ಕರ್ನಾಟಕದ ವಿಶ್ವವಿದ್ಯಾನಿಲಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಸಂಕಲ್ಪವನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಮಾಡಬೇಕು, ಉನ್ನತಮಟ್ಟದ ವಿದ್ವತ್ ಪತ್ರಿಕೆಗಳು ಕನ್ನಡದಲ್ಲಿ ಎಷ್ಟಿವೆ? ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಮೊದಲಾದ ಸಂಸ್ಥೆಗಳಿಗೆ ಶಿಕ್ಷಣ ಕ್ಷೇತ್ರದೊಡನೆ ಸಂಬಂಧವಿರುವವರನ್ನು ಮಾತ್ರ ಆಯ್ಕೆ ಮಾಡಬೇಕು.

ಕನ್ನಡ ಸಾರ್ವಭೌಮ ಸ್ಥಾನ

ಪ್ರಾಥಮಿಕ ತರಗತಿಯಿಂದ ಪದವಿ ತರಗತಿಯವರೆಗೆ ಇಂಗ್ಲಿಷ್ ಬೋಧನೆಯ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಸಮಗ್ರವಾಗಿ ಶಿಫಾರಸು ಮಾಡಲು ಇಂಗ್ಲಿಷ್ ಬೋಧನೆಯ ತಜ್ಞರೂ ಇರುವ ಸಮಿತಿಯೊಂದನ್ನು ಸರ್ಕಾರವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ರಚಿಸುವುದು ಸೂಕ್ತ. ಮುಖ್ಯವಾಗಿ, ಕನ್ನಡ ನಾಡಿನ ಇಡೀ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ದಕ್ಕಬೇಕು.

Tag: L.S. Sheshagiri Rao, Tag: Kannada Sahitya Sammelana 74

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)