ಆಮಂತ್ರಣ ಪತ್ರಿಕೆ ಸೋರಿಕೆ ಪ್ರಕರಣ: ಕಸಾಪ ಸ್ಪಷ್ಟಣೆ

ಆಮಂತ್ರಣ ಪತ್ರಿಕೆ ಸೋರಿಕೆ ಪ್ರಕರಣ: ಕಸಾಪ ಸ್ಪಷ್ಟಣೆ

ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣದ ಕರಡು ಪತ್ರಿಕೆಯ ಪ್ರತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದು ಅಧಿಕೃತ ಆಮಂತ್ರಣ ಪತ್ರಿಕೆಯಲ್ಲ, ಬದಲಾಗಿ ಡಿಟಿಪಿ ಹಂತದಲ್ಲಿ ಇದ್ದ ಪ್ರತಿಯನ್ನು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಹ್ವಾನ ಪತ್ರಿಕೆ ಅಧಿಕೃತವಾಗಿದ್ದಲ್ಲ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಬಿಡುಗಡೆ ಮಾಡಿರುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಗಮನಕ್ಕೆ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇನ್ನೂ ಅಧಿಕೃತವಾಗಿ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿರುವುದಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಸಮ್ಮೇಳನದ ಆಹ್ವಾನ ಪತ್ರಿಕೆಯ ಸಿದ್ಧತೆಯ ಹಂತದಲ್ಲಿ ಚರ್ಚೆ ಯಾಗಬೇಕಾದಾಗ, ಯಾರದ್ದೋ ಕೈಗೆ ದೊರೆತು, ಗೊಂದಲವನ್ನು ಉಂಟುಮಾಡುವ ದುರುದ್ದೇಶದಿಂದ ಆಹ್ವಾನ ಪತ್ರಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಿದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಂತೆ ಮಾಧ್ಯಮ ಗೋಷ್ಠಿ ಕರೆದು, ಗಣ್ಯರ ಸಮ್ಮುಖದಲ್ಲಿ ಆಹ್ವಾನ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ ನಂತರ ಪತ್ರಿಕೆಯಲ್ಲಿ ಇರುವ ಎಲ್ಲಾ ವಿವರಗಳನ್ನು ಮಾದ್ಯಮಗಳಿಗೆ ನೀಡಿದ ನಂತರವಷ್ಟೇ ಅಧಿಕೃತವಾಗಲಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನಧಿಕೃತ ಆಮಂತ್ರಣ ಪತ್ರಿಕೆಯನ್ನು ಯಾರೂ ನಂಬಬಾರದು, ಈಗಾಗಲೆ ಆಹ್ವಾನ ಪತ್ರಿಕೆಗಳ ಪ್ರತಿಗಳನ್ನು ಉದ್ದೆಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಕೆಲ ಕಿಡಿಗೇಡಿಗಳು ಮಾಡಿರುವ ಕುತಂತ್ರ ಎನ್ನುವದು ಕನ್ನಡ ಸಾಹಿತ್ಯ ಪರಿಷತ್ತಿನ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಸೂಕ್ತ ಕ್ರಮಕ್ಕೆ ಪರಿಷತ್ತು ಮುಂದಾಗಲಿದೆ. ಈ ಆಮಂತ್ರಣ ಪತ್ರಿಕೆಗೆ ಯಾರೂ ಯಾವುದೇ ಮಹತ್ವವನ್ನು ನೀಡದೇ, ನಿರ್ಲಕ್ಷಿಸಬೇಕೆಂದು ಎಲ್ಲ ಸಾಹಿತ್ಯಾಭಿಮಾನಿಗಳಲ್ಲಿ, ಕನ್ನಡಾಭಿಮಾನಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ವಿನಂತಿಸಿಕೊಂಡಿದ್ದಾರೆ.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
Kasapa-ಕಸಾಪ ಸ್ಪಷ್ಟನೆ -09-12-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)