ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿನಂದನೆ

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿನಂದನೆ

ಬೆಂಗಳೂರು: ಜಿ.ಎಚ್.ಪಟೇಲರು 1967ರಲ್ಲಿ ಮೊಟ್ಟ ಮೊದಲ ಸಲ ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಸುದ್ದಿಯನ್ನು ಕೇಳಿದ ರಾಷ್ಟ್ರಕವಿ ಕುವೆಂಪು ಅವರು ‘ಹಂಡೆ ಹಾಲು ಕುಡಿದಷ್ಟು ಸಂತೋಷವಾಯಿತು’ ಎಂದು ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದ್ದರು. ಅಂತಹದೇ ಇನ್ನೊಂದು ಸನ್ನಿವೇಶ ನಿನ್ನೆಯ ದಿನ ಲೋಕಸಭೆಯಲ್ಲಿ ಸೃಷ್ಟಿಯಾಯಿತು . ಕರ್ನಾಟಕದ 28 ಸಂಸದರಲ್ಲಿ 27 ಜನ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸುದ್ದಿ ಕೇಳಿ ನಿಜಕ್ಕೂ ಹಂಡೆ ಹಾಲಿಗೆ ಜೇನು ತುಪ್ಪ ಸೇರಿಸಿ ಕುಡಿದಷ್ಟೇ ಸಂತೋಷವಾಗಿದೆ. ಸಂಸತ್ತಿನಲ್ಲಿ ಕನ್ನಡದ ಕಹಳೆ ಮೊಳಗಲು ಕಾರಣಕರ್ತರಾದ ಎಲ್ಲಾ ಸಂಸದರನ್ನೂ ಕನ್ನಡ ಸಾಹಿತ್ಯ ಪರಿಷತ್ತು ಹೃದಯ ತುಂಬಿ ಅಭಿನಂದಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದ ಸಂಸತ್ ಸದಸ್ಯರ ಪೈಕಿ ವಿಶ್ವೇಶ್ವರ ಹೆಗಡೆ ಕಾಗೇರಿಯವರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸ್ಕೃತದ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಕನ್ನಡ ತಾಯಿಭಾಷೆ ಅದರ ಸ್ಥಾನವನ್ನು ಯಾರೂ ಪಡೆಯಲಾರರು. ಕಾಗೇರಿಯವರನ್ನು ಆಯ್ಕೆ ಮಾಡಿದವರು ಕನ್ನಡಿಗರು, ಅವರ ಕ್ಷೇತ್ರದ ಬಹುತೇಕ ಮತದಾರರು ಕನ್ನಡಿಗರು ಅಷ್ಟೇ ಅಲ್ಲ ಅವರು ಮನೆಯಲ್ಲಿ ಮಾತನಾಡುವ ಭಾಷೆ ಕನ್ನಡ. ಅವರೊಬ್ಬರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೆ ಕರ್ನಾಟಕದ ಆಯ್ಕೆಯಾದ ಎಲ್ಲಾ ಸದಸ್ಯರೂ ಕನ್ನಡದಲ್ಲಿಯೇ ಪ್ರಮಾಣ ಸ್ವೀಕರಿಸಿದ ದಾಖಲೆ ನಿರ್ಮಾಣವಾಗುತ್ತಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಅಂಶವನ್ನು ಗಮನಿಸಿ ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಲಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಸಂಸದರು ಸಂವಿಧಾನದ ವಿಧಿ 120ರ ಅನ್ವಯ ಸಂಸತ್ತಿನಲ್ಲಿ ಎಂಟನೆಯ ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಯನ್ನು ಬಳಸುವ ಹಕ್ಕನ್ನು ಹೊಂದಿದ್ದಾರೆ. ಅದರಂತೆ ಕನ್ನಡವನ್ನು ಸಂಸತ್ತಿನಲ್ಲಿ ಬಳಸುವ ಎಲ್ಲಾ ಹಕ್ಕನ್ನು ಹೊಂದಿದ್ದಾರೆ. ಹೀಗಾಗಿ ಅವರ ಕನ್ನಡ ಪ್ರೇಮ, ಪ್ರಮಾಣ ವಚನ ಸ್ವೀಕಾರಕ್ಕೆ ಮಾತ್ರ ಸೀಮಿತವಾಗದೆ ಸಂಸದೀಯ ವ್ಯವಹಾರಕ್ಕೂ ಅನ್ವಯವಾಗಲಿ, ಪ್ರಶ್ನೆಗಳನ್ನು, ಮಂಡನೆಗಳನ್ನು, ಸಂಸದೀಯ ಚರ್ಚೆಗಳನ್ನು ಅವರು ಕನ್ನಡದಲ್ಲಿಯೇ ಮಾಡುವ ಮೂಲಕ ಕನ್ನಡ ದ ಬಾವುಟ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಆಶಿಸಿದ್ದಾರೆ. ಇದೇ ವರ್ಷದ ಡಿಸಂಬರ್ 20, 21,22ರಂದು ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಇದರ ನಂತರ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವದೆಹಲಿಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಗಿದೆ. ಈ ವೇಳೆಗೆ ಸಂಸದರು ನವ ದೆಹಲಿಯಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣವನ್ನು ಸೃಷ್ಟಿ ಮಾಡಿರುತ್ತಾರೆ ಸಮ್ಮೇಳನಕ್ಕೆ ಸಂಸದರ ಸಂಪೂರ್ಣ ಸಹಕಾರ ಸಿಗಲಿದೆ ಎನ್ನುವ ವಿಶ್ವಾಸವನ್ನು ನಾಡೋಜ ಡಾ.ಮಹೇಶ ಜೋಶಿಯವರು ವ್ಯಕ್ತ ಪಡಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)