ಕನ್ನಡಿಗರ ಹಾಗೂ ಜನಸಾಮಾನ್ಯರ ಹಿತಾಸಕ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳ ಬಾಡಿಗೆ ಇಳಿಕೆ

ಕನ್ನಡಿಗರ ಹಾಗೂ ಜನಸಾಮಾನ್ಯರ ಹಿತಾಸಕ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳ ಬಾಡಿಗೆ ಇಳಿಕೆ

IMG-20240330-WA0051

IMG-20240330-WA0050

ಬೆಂಗಳೂರು : ಸಮಸ್ತ ಕನ್ನಡಿಗರ ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳ ಬಾಡಿಗೆಯನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ.

ಪ್ರಧಾನವಾದ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದ ಬಾಡಿಗೆಯನ್ನು ಶನಿವಾರ ಮತ್ತು ಭಾನುವಾರಗಳನ್ನು ಹೊರತು ಪಡಿಸಿ ವಾರದ ಉಳಿದ ದಿನಗಳಿಗೆ ಪೂರ್ತಿ ದಿನಕ್ಕೆ ರೂ 20,000ದಿಂದ ರೂ 15,000ಕ್ಕೆ ಮತ್ತು ಅರ್ಧ ದಿನಕ್ಕೆ ರೂ 10,000ದಿಂದ ರೂ 7,000ಕ್ಕೆ ತಗ್ಗಿಸಲಾಗಿದೆ.

ಅಕ್ಕ ಮಹಾದೇವಿ ಸಭಾಂಗಣದ ಬಾಡಿಗೆಯನ್ನು ಪೂರ್ಣದಿನಕ್ಕೆ ರೂ 5,500ರಿಂದ ರೂ 4,000ಕ್ಕೆ ತಗ್ಗಿಸಲಾಗಿದೆ. ಅರ್ಧ ದಿನಕ್ಕೆ ರೂ 3,000ದಿಂದ ರೂ 2,000ಕ್ಕೆ ತಗ್ಗಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು ಈ ಮೂಲಕ ಜನಸಾಮಾನ್ಯರನ್ನೊಳಗೊಂಡ, ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಲು, ಎಲ್ಲಾ ಕನ್ನಡಿಗರೂ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗಲು ಕನ್ನಡ ಸಾಹಿತ್ಯ ಪರಿಷತ್ತು ಉದ್ದೇಶಿಸಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಸಭಾಂಗಣವು ಸಂಪೂರ್ಣ ನವೀಕರಣಗೊಂಡಿದ್ದು ಪರಂಪರೆಯ ಹಿರಿಮೆ ಮತ್ತು ಆಧುನಿಕತೆಯ ಅಗತ್ಯ ಎರಡನ್ನೂ ಒಳಗೊಂಡು ಹೊಸತನವನ್ನು ಪಡೆದು ಕೊಂಡಿದೆ .ಉತ್ತಮವಾದ ಧ್ವನಿವರ್ಧಕ, ಗಾಳಿ –ಬೆಳಕು ಮತ್ತು ಸುಸಜ್ಜಿತ ವೇದಿಕೆಯನ್ನು ಹೊಂದಿರುವ ಸಭಾಂಗಣದಲ್ಲಿ ಚಲಿಸ ಬಲ್ಲ ನೂರು ಆಸನಗಳಿವೆ. ಮೂರನೆಯ ಮಹಡಿಯಲ್ಲಿ ಈ ಸಭಾಂಗಣವಿದ್ದು ಇದಕ್ಕೆ ಹೋಗಿ ಬರಲು ಸಂಪೂರ್ಣ ಸುಸಜ್ಜಿತವಾದ ಕನ್ನಡಮಯ ಲಿಫ್ಟ್ನ ವ್ಯವಸ್ಥೆ ಇದೆ. ಸಂಪೂರ್ಣ ನವೀಕರಣಗೊಂಡಿರುವ ಈ ಸಭಾಂಗಣವನ್ನು ಸಾರ್ವಜನಿಕರ ಬಳಕೆಗೆ ನೀಡಲು ಈಗ ನಿರ್ಧರಿಸಲಾಗಿದೆ. ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಾಧ್ಯವಾದಷ್ಟು ಕಡಿಮೆ ಬೆಲೆಯನ್ನು ನಿಗದಿ ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೀಕೃತ ಕುವೆಂಪು ಸಭಾಂಗಣವನ್ನು ವಾರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯು ಇಲ್ಲಿಯೇ ಕಾರ್ಯ ನಿರ್ವಹಿಸುವುದರಿಂದ ಸಂಜೆ 5.50ರಿಂದ ರಾತ್ರಿ 9 ಗಂಟೆಯವರೆಗೂ ಬಾಡಿಗೆಗೆ ನೀಡಲಾಗುವುದು. ಈ ದಿನಗಳಲ್ಲಿ ಬಾಡಿಗೆಯು ರೂ 3,000 ಆಗಿದ್ದು ಇದರ ಜೊತೆಗೆ ರೂ 500ರ ಠೇವಣಿಯನ್ನಾಗಿ ಪಡೆದು ನಂತರ ಹಿಂದಿರುಗಿಸಲಾಗುವುದು. ರಜಾದಿನ ಮತ್ತು ಭಾನುವಾರಗಳಂದು ಅರ್ಧ ದಿನಕ್ಕೆ ರೂ 4, 000 (ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2.00 ಅಥವಾ ಮಧ್ಯಾಹ್ನ 3.00 ರಿಂದ ರಾತ್ರಿ 8.00) ಮತ್ತು ಪೂರ್ಣ ದಿನಕ್ಕೆ ರೂ 7,000 (ಬೆಳಿಗ್ಗೆ 9.00 ರಿಂದ ರಾತ್ರಿ. 8.00) ಇದರ ಜೊತೆಗೆ ಪಡೆಯುವ ರೂ 500ರ ಠೇವಣಿಯನ್ನು ನಂತರ ಹಿಂದಿರುಗಿಸಲಾಗುವುದು, ಈ ಸಭಾಂಗಣವು ಕಾರ್ಯ ನಿರ್ವಹಿಸುವುದೇ ಶನಿವಾರ ಮತ್ತು ಭಾನುವಾರವಾಗಿರುವುದರಿಂದ ಇದರ ಬಾಡಿಗೆಯ ದರದಲ್ಲಿ ವ್ಯತ್ಯಾಸವಿರುವುದಿಲ್ಲವೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಕುವೆಂಪು ಸಭಾಂಗಣದ ಆವರಣದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ವನ್ನು ಹೊರ ತಂದ ಹರ್ಮನ್ ಮೊಗ್ಲಿಂಗ್ ಹೆಸರಿನಲ್ಲಿ ಸುಸಜ್ಜಿತ ಸ್ಟುಡಿಯೋ ಸ್ಥಾಪಿಸಲಾಗಿದ್ದು,ಇಲ್ಲಿ ಆನ್ ಲೈನ್ ಕಾರ್ಯಕ್ರಮಗಳನ್ನು, ಚಿಕ್ಕ ಪ್ರಮಾಣದ ಪತ್ರಿಕಾ ಗೋಷ್ಟಿ ಮತ್ತು ಸಭೆಗಳನ್ನು ನಡೆಸಬಹುದಾಗಿದೆ. ಈ ಸಭಾಂಗಣಕ್ಕೆ ಅರ್ಧ ದಿನಕ್ಕೆ ರೂ 2,000ದ ಬಾಡಿಗೆ ದರ ನಿಗಧಿ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)