ಕನ್ನಡ ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ರಾಯಭಾರಿಗಳಾಗಬೇಕು-ನಾಡೋಜ ಡಾ. ಮಹೇಶ ಜೋಶಿ
ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಉದ್ಘಾಟನೆ.
*ಛಾಯಾಚಿತ್ರ*: ದೆಹಲಿ ಕರ್ನಾಟಕ ಸಂಘದ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಪದಾಧಿಕಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡದ ಧ್ವಜ ಹಸ್ತಾಂತರ ಮಾಡಿದರು.
ದೆಹಲಿ: ಕರ್ನಾಟಕದಲ್ಲಿ ಶೇ.೬೪ ರಷ್ಟು ಜನ ಮಾತ್ರ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಕನ್ನಡ ಶಾಲೆಗಳು ತೀರ ದುಸ್ಥಿತಿಯಲ್ಲಿವೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ರಾಯಭಾರಿಗಳಾಗಿ ಕನ್ನಡವನ್ನು ಉಳಿಸಿ ಬೆಳೆಸಬೇಕು. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಯಾವುದು ಉಳಿಯುವುದಿಲ್ಲ .ಇಂತಹ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಕಾನೂನು ಆಯೋಗ ಸಮಗ್ರ ಕನ್ನಡ ಅಭಿವೃದ್ಧಿಗಾಗಿ ಕಾನೂನನ್ನು ಜಾರಿಗೆ ತರುವ ಚಿಂತನೆ ನಡೆಸುತ್ತಿದೆ. ಇದನ್ನು ಮುಂಬರುವ ಅಧಿವೇಶನದಲ್ಲಿ ಕಾನೂನನ್ನಾಗಿ ರೂಪುಗೊಳಿಸುವಂತೆ ಕ್ರಮ ಕೈಗೊಳ್ಳವಂತೆ ಮಾಡಲು ಭಗೀರಥ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಡಲಾಗುತ್ತಿದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ* ಹೇಳಿದರು.
ಅವರು ದೆಹಲಿ ಕರ್ನಾಟಕ ಸಂಘದ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಾತನಾಡಿದರು. “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ” ಎಂಬ ರಾಮಾಯಣ ಮಹಾಕಾವ್ಯದಲ್ಲಿನ ವಾಕ್ಯವನ್ನು ಉಲ್ಲೇಖಿಸಿ ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲು ಮಿಗಿಲು ಎಂದು ತಿಳಿಸುತ್ತಾ, ನಾವು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ಕಾಳಜಿ ವಹಿಸುವ ಮೂಲಕ ಕನ್ನಡಿಗರ ನೋವು ನಲಿವುಗಳಿಗೆ ಸಾಹಿತ್ಯ ಪರಿಷತ್ತು ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತಿಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡದೆ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಕಾಳಜಿ ಇರುವ ಎಲ್ಲ ಕನ್ನಡಿಗರ ಮನೆ ಬಾಗಿಲಿಗೆ ಕೊಂಡೊಯ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋಟಿ ಸದಸ್ಯರನ್ನು ನೋಂದಣಿ ಮಾಡಿಸಬೇಕೆಂಬ ಮಹತ್ವದ ಗುರಿ ನಮ್ಮದಾಗಿದೆ. ಪ್ರತಿಯೊಬ್ಬ ಕನ್ನಡಿಗರು ಸೇರಿ ತಾಯಿ ಕನ್ನಡಾಂಬೆಯ ತೇರನ್ನು ಎಳೆಯುತ್ತ . ಕನ್ನಡ ನಾಡು ನುಡಿ, ಭಾಷೆ ಸಂಸ್ಕೃತಿಯ ಬಗ್ಗೆ ದೇಶದ ಮೂಲೆ ಮೂಲೆಗೂ ಪರಿಚಯಿಸುವ ಕೆಲಸದಲ್ಲಿ ಸಾಹಿತ್ಯ ಪರಿಷತ್ತಿನ ಜೊತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಇದಕ್ಕಾಗಿ ನಮ್ಮ ಜೊತೆ ಹೆಜ್ಜೆ ಹಾಕುವ ಎಲ್ಲ ಕನ್ನಡಿಗರಿಗೂ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು. ಕನ್ನಡದ ಉಚ್ಚಾರಣೆ ಮತ್ತು ಬರಹ ಎರಡಲ್ಲೂ ಸಾಮ್ಯತೆ ಇರುವ ಜಗತ್ತಿನ ಮೂರು ಭಾಷೆಗಳಲ್ಲಿ ಕನ್ನಡವೂ ಒಂದು. ಉಳಿದೆರಡು ಸಂಸ್ಕೃತ ಮತ್ತು ಗ್ರೀಕ್ ಭಾಷೆಗಳು. ಹಾಗಾಗಿ ಕನ್ನಡ ಜಗತ್ತಿನಲ್ಲಿಯೇ ಕರಾರುವಕ್ಕಾದ ಭಾಷೆಯಾಗಿದೆ ಎನ್ನುವುದು ಹೆಮ್ಮೆಯ ವಿಷಯ ಎಂದು *ನಾಡೋಜ ಡಾ. ಮಹೇಶ ಜೋಶಿ* ಹೇಳಿದರು.
ದೆಹಲಿ ಘಟಕದ ಉದ್ಘಾಟನೆಯ ಸಂದರ್ಭದಲ್ಲಿ ಬಹಳ ಮಕ್ಕಳು, ಮಹಿಳೆಯರು ಕನ್ನಡ ಪದ್ಯಗಳನ್ನು ಹಾಡುವ, ವಾಚಿಸುವ ಮೂಲಕ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ಅಲ್ಲದೆ ಮಕ್ಕಳಿಗೆ ಮನೆಯಲ್ಲಿ ತಾಯಂದಿರೇ ಹೆಚ್ಚು ಸಮಯ ನೀಡಿ ಕಲಿಸುತ್ತಾರೆ. ಮಹಿಳೆಯರು ಮುಂದೆ ಬಂದು ಇಲ್ಲಿ ಕಾರ್ಯಕ್ರಮಗಳನ್ನು ನೀಡಿರುವುದರಿಂದ ಕನ್ನಡ ಭಾಷೆ ಉಳಿದು ಬೆಳೆಯುವುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ. ಇದು ನಮ್ಮ ನೂತನ ಘಟಕದ ಆರಂಭದ ಶುಭ ಸಂಕೇತ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ನೂತನ *ಘಟಕದ ಅಧ್ಯಕ್ಷರಾದ ಸಿ.ಎಂ. ನಾಗರಾಜ, ಗೌರವ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಎನ್.ಪಿ. ಹಾಗೂ ಗೌರವ ಕೋಶಾಧ್ಯಕ್ಷ ಶ್ರೀ ಸಂತೋಷ್ ಜೆ.* ಅವರಿಗೆ ಆದೇಶ ಪತ್ರ ನೀಡಿದರು. ನಂತರ ಅಧ್ಯಕ್ಷರಾದ ಸಿ.ಎಂ. ನಾಗರಾಜ ಅವರಿಗೆ ಕನ್ನಡ ಬಾವುಟ ನೀಡಿ ದೆಹಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧಿಕೃತ ಘೋಷಣೆ ಮಾಡಿ ದೆಹಲಿ ಘಟಕದ ಪದಾಧಿಕಾರಿಗಳಿಗೆ ಕನ್ನಡದ ಕೆಲಸವನ್ನು ಮಾಡಲು ದೊಡ್ಡ ಜವಾಬ್ದಾರಿ ನೀಡಲಾಗಿದ್ದು ಕನ್ನಡ ಕಟ್ಟುವ ಕೆಲಸವನ್ನು ಶ್ರದ್ಧೆ ಆಸಕ್ತಿ ವಹಿಸಿ ಮಾಡಬೇಕೆಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೌರವ ಕಾರ್ಯದರ್ಶಿ ಚಂದ್ರಶೇಖರ್ ಅವರು ನಿಮ್ಮ ನಿರೀಕ್ಷೆ ಹುಸಿಯಾಗದ ರೀತಿಯಲ್ಲಿ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳನ್ನು ಕನ್ನಡ ಸೇವೆ ಎಂದು ತಿಳಿದು ಶ್ರದ್ದೆ ನಿಷ್ಠೆ ಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ *ಹಿರಿಯ ಐಎಎಸ್ ಅಧಿಕಾರಿ ಹೆಚ್. ರಾಜೇಶ್ ಪ್ರಸಾದ್* ಅವರು ಮಾತನಾಡಿ ೧೯೧೫ ರಲ್ಲಿ ಮೈಸೂರಿನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ೧೦೭ ವರ್ಷಗಳ ನಂತರ ದೆಹಲಿಯಲ್ಲಿ ತನ್ನ ಘಟಕ ತೆರೆಯುತ್ತಿದೆ. ಇಷ್ಟು ತಡವಾದರೂ ಸಹ ಇಂದು ರಾಷ್ಟ್ರ ರಾಜಧಾನಿಯಲ್ಲಿ *ನಾಡೋಜ ಡಾ. ಮಹೇಶ ಜೋಶಿ* ಅವರ ಪ್ರಯತ್ನದೊಂದಿಗೆ ನೆರವೇರಿದೆ. ಈ ಶುಭ ಸಂಧರ್ಭದಲ್ಲಿ ಭಾಗಿಯಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ನುಡಿದರು. ಶತಮಾನಗಳ ಹಿಂದೆ ಸಾಹಿತ್ಯ ಪರಿಷತ್ತು ಆರಂಭವಾದ ಕ್ಷಣವನ್ನೇ ಇಂದು ದೆಹಲಿಯಲ್ಲೂ ನಾವು ನೀವೆಲ್ಲ ಅನುಭವಿಸುತ್ತದ್ದೇವೆ, ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕಕ್ಕೆ ಚಾಲನೆ ಸಿಕ್ಕಿರುವ ಈ ಶುಭ ಸಂಜೆ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ಐತಿಹಾಸಿಕ ಕ್ಷಣ. ದೆಹಲಿಯಲ್ಲಿರುವ ನಾವು ಇತರೆ ದಕ್ಷಿಣ ಭಾರತೀಯರಂತೆ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಹಾಗೂ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿ ಕನ್ನಡ ಸಂಸ್ಕೃತಿ, ಕಲೆಗಳನ್ನು ಇನ್ನಷ್ಟು ಚೆನ್ನಾಗಿ ಪ್ರಚಾರ, ಪ್ರಸಾರಗೊಳಿಸಲು ಮುಂದಾಗಲು ಐಎಎಸ್ ಅಧಿಕಾರಿ *ಹೆಚ್. ರಾಜೇಶ್ ಪ್ರಸಾದ್* ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದೇಶಾಂಗ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ *ಐಎಫ್ ಎಸ್ ಅಧಿಕಾರಿ ಮಂಜುನಾಥ್* ಅವರು ಕಾರ್ಯಕ್ರಮದಲ್ಲಿ ಪುಟ್ಟ ಬಾಲಕಿ ನೂತನ್ ಕೈಕಾಡೆ ವಾಚನ ಮಾಡಿದ ಕವಿ ಸಿದ್ಧಯ್ಯ ಪುರಾಣಿಕರ ʻಏನಾದರೂ ಆಗು ಮೊದಲು ಮಾನವನಾಗುʼ ಎಂಬ ಕವಿತೆಯನ್ನು ತಮ್ಮ ತಾಯಿಯವರು ಬಾಲ್ಯದಲ್ಲಿ ಕಲಿತಿದ್ದುದು, ಜೊತೆಗೆ ಅವರು ಕಲಿಸಿದ್ದ ʻಪುಣ್ಯಕೋಟಿʼ ಹಾಡನ್ನು ಸ್ಮರಿಸಿಕೊಂಡು ತಾಯ್ನುಡಿಯ ಹೃದಯಂಗಮ ಬೆಸುಗೆಯನ್ನು ಮೆಲುಕು ಹಾಕಿದರು.
ಮತ್ತೊಬ್ಬ ಅತಿಥಿ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿರುವ *ಡಾ. ನಿಖಿಲ್* ಅವರು ಮಾತನಾಡಿ ಇಂತಹ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಹೊರನಾಡಿನಲ್ಲಿ ಪ್ರತಿಬಿಂಬಿಸುವ ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕ ಹೊರಹೊಮ್ಮಲಿ ಎಂದು ಶುಭ ಕೋರಿದರು.
ಅಧಿಕಾರಿಗಳ ವಿಶೇಷ ಕರ್ತವ್ಯಾಧಿಕಾರಿ ( ಕರೋನಾ ಲಸಿಕೆ ) *ಶ್ರೀ ವೈಶಾಖ್ ನಾಗ್* ಅವರು ಮಾತನಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಸಿಕೊಂಡು ಇವತ್ತಿನ ಯುವ ಪೀಳಿಗೆಗೆ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಗುರುತರ ಕಾರ್ಯವನ್ನು ಮಾಡುವಲ್ಲಿ ಈಗ ತಾನೇ ಮೊಳಕೆ ಹೊಡೆದಿರುವ ಕನ್ನಡ ಸಾಹಿತ್ಯ ಪರಿಷತ್ ನ ದೆಹಲಿ ಘಟಕ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರು ಹಾಗೂ ಸಭಿಕರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿಯ ನೂತನ ಘಟಕದ ಅಧ್ಯಕ್ಷರಾದ ಶ್ರೀ ಸಿ.ಎಂ. ನಾಗರಾಜ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ದೆಹಲಿಯಲ್ಲಿ ಕರ್ನಾಟಕ ಸಂಘದ ಮೂಲಕ ಈಗಾಗಲೇ ಮಾಡಿಕೊಂಡು ಬರುತ್ತಿರುವ ಕನ್ನಡದ ಕೆಲಸಗಳಿಗೆ ಇನ್ನಷ್ಟು ಬಲ ಬಂದಂತಾಗಿದ್ದು ಇದಕ್ಕೆ ಕಾರಣಕರ್ತರಾದ *ನಾಡೋಜ ಡಾ. ಮಹೇಶ ಜೋಷಿ* ಅವರು ನಿಜಕ್ಕೂ ಒಬ್ಬ ದೂರದೃಷ್ಟಿಯುಳ್ಳ ನಾಯಕ ಎಂದು ಅವರು ತೆಗೆದುಕೊಂಡ ಈ ಐತಿಹಾಸಿಕ ನಿರ್ಧಾರವನ್ನು ಶ್ಲಾಘಿಸಿದರು.
ದೆಹಲಿಯ ಕನ್ನಡತಿಯರಾದ, *ಶ್ರೀಮತಿ ಪೂಜರಾವ್, ಶ್ರೀಮತಿ ಮಾಲಿನಿ ಪ್ರಹ್ಲಾದ್, ಶ್ರೀಮತಿ ಶೋಭಾ ನಾಗರಾಜ್, ಶ್ರೀಮತಿ ಹೇಮಶ್ರೀ ಚಂದ್ರಶೇಖರ್, ಶ್ರೀಮತಿ ರೂಪಶ್ರೀ ನರಸಿಂಹ ಮೂರ್ತಿ, ಶ್ರೀಮತಿ ನೇತ್ರಕುಮಾರ್ ಮತ್ತು ಶ್ರೀಮತಿ ಲೀಲಾ ದೇವರಾಜ್* ರವರುಗಳು ಕರ್ನಾಟಕದ ನಾಡಗೀತೆನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗೌರವ ಕೋಶಧ್ಯಕ್ಷರಾದ *ಶ್ರೀ ಸಂತೋಷ್ ಜೆ* ಅವರು ವಂದನಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಉದ್ಘಾಟನೆಯಂತಹ ಅಮೃತ ಘಳಿಗೆಗೆ ದೆಹಲಿಯ ಕನ್ನಡದ ಹಿರಿಯರು. ಅಧಿಕಾರಿಗಳು ಹಾಗೂ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಸಾಕ್ಷಿಯಾದರು.
ಪ್ರತಿಕ್ರಿಯೆ