ಕನ್ನಡ ಮರೆತ ಐಸಿಸಿಆರ್‌ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಖಂಡನೆ

ಕನ್ನಡ ಮರೆತ ಐಸಿಸಿಆರ್‌ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಖಂಡನೆ

KASAPA-ಕನ್ನಡ ಮರೆತ ಐಸಿಸಿಆರ್ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಖಂಡನೆ-27-07-2022

ಬಾವಚಿತ್ರ- ಕನ್ನಡ ಭಾಷೆಯನ್ನು ಬಿಟ್ಟು ಉಳಿದ ಬಾಷೆಯ ಪ್ರಾಧ್ಯಾಪಕರ ಹುದ್ದೆಯ ನೆಮಕಾತಿಗಾಗಿ ಐಸಿಸಿಆರ್‌ ನೀಡಿರುವ ಜಾಹಿರಾತು

ಬೆಂಗಳೂರು: ಕನ್ನಡ ಭಾಷೆಯನ್ನು ಕಡೆಗಣಿಸಿದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್‌ (ಐಸಿಸಿಆರ್) ಸಂಸ್ಥೆಯ ನಡೆ ಖಂಡನಿಯ. ಸಂಸ್ಥೆಯು ಇತ್ತೀಚೆಗೆ ನೀಡಿರುವ ಪತ್ರಿಕಾ ಜಾಹೀರಾತಿನಲ್ಲಿ ಹಿಂದಿ, ಉರ್ದು, ಸಂಸ್ಕೃತ ಮತ್ತು ತಮಿಳು ಮತ್ತು ಇತರ ವಿಷಯಗಳ ಪ್ರಾಧ್ಯಾಪಕರ ಹುದ್ದೆಗಳ ನೇಮಕ ಕುರಿತು ಪ್ರಕಟನೆ ನೀಡಿದ್ದು ಕನ್ನಡ ವಿಷಯದ ಪ್ರಾಧ್ಯಾಪಕರ ಹುದ್ದೆ ಕುರಿತು ಪ್ರಸ್ತಾವನೆ ನೀಡಿಲ್ಲ. ದೇಶದ ಎಲ್ಲಾ ಭಾಷೆ ಸಂಸ್ಕೃತಿಗಳನ್ನು ಗೌರವಿಸಬೇಕಿದ್ದ ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಸಂಸ್ಥೆಯು ತಮಗೆ ಬೇಕಾದ ಕೆಲವೇ ಭಾಷೆಗಳಿಗೆ ಮಣೆ ಹಾಕುತ್ತಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುವುದರ ಜೊತೆ ತಕ್ಷಣದಲ್ಲಿ ಕನ್ನಡ ಭಾಷೆಗೆ ಸೂಕ್ತ ಗೌರವ ನೀಡಬೇಕು ಎಂದು ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಭಾರತದ ಎಲ್ಲಾ ರಾಜ್ಯಗಳ ಸಂಸ್ಕೃತಿ, ಎಲ್ಲಾ ಭಾಷೆಗಳನ್ನು ಸಮಾನವಾಗಿ ಗೌರವಿಸಬೇಕಿದ್ದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್‌ ಸಂಸ್ಥೆಯು ಕನ್ನಡ ಭಾಷೆಯನ್ನು ಕಡೆಗಣಿಸಿದೆ. ಸಂಸ್ಥೆಯು ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುವವರಿಗಾಗಿ ಭಾರತೀಯ ಸಂಸ್ಕೃತಿಗಳ ಅಧ್ಯಯನ ಸಮಿತಿಯನ್ನು ರಚಿಸಿ ಆ ಮೂಲಕ ಭಾರತೀಯ ಪರಂಪರೆಯನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಷೆಗಳ ತಜ್ಞರನ್ನೊಳಗೊಂಡ ಪ್ರಾಧ್ಯಾಪಕರ ತಂಡಗಳ ಮೂಲಕ ಆಸಕ್ತ ವಿದ್ವಾಂಸರಿಗೆ ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಉದ್ದೇಶ ಹೊಂದಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಐಸಿಸಿಆರ್‌ ಸಂಸ್ಥೆ ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿದೆ. ಜತೆಗೆ ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಹೊಂದಿದ್ದು, ಕನ್ನಡ ಭಾಷೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಪೀಠವನ್ನು ಸ್ಥಾಪಿಸುವ ಹೊಣೆಯನ್ನೂ ಸಂಸ್ಥೆಯು ನಿರ್ವಹಿಸಬೇಕಿದೆ. ಐಸಿಸಿಆರ್‌ ಸಂಸ್ಥೆ ಈ ರೀತಿಯ ಮಹತ್ವಪೂರ್ಣ ಮತ್ತು ಘನತೆಯ ಜವಾಬ್ದಾರಿಯನ್ನು ಮರೆತಿದೆ.

ವಿಶ್ವದಾದ್ಯಂತ ೪೦ಕ್ಕೂ ಹೆಚ್ಚು ದೇಶಗಳಲ್ಲಿ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ. ಬಹುತೇಕ ಎಲ್ಲಾ ಶಾಖೆಗಳಲ್ಲಿ ಭಾರತೀಯ ಭಾಷಾ ಮತ್ತು ಸಂಸ್ಕೃತಿಯ ಪಂಡಿತರನ್ನೊಳಗೊಂಡ ತಂಡದಿಂದ ಭಾರತಿಯ ಪರಂಪರೆಯನ್ನು ಪರಿಚಯಿಸುವ ಕೆಲಸ ಮಾಡುತ್ತದೆ. ಅದಕ್ಕೆ ತಜ್ಞ ಪ್ರಾಧ್ಯಾಪಕರ ಆಯ್ಕೆಗಾಗಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಿದ್ದಾರೆ. ಅದರಲ್ಲಿ ಕನ್ನಡ ಪ್ರಾಧ್ಯಾಪಕರ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಜೊತೆಗೆ ಅವರ ಸಂಸ್ಥೆಯಲ್ಲಿ ಕನ್ನಡ ಭಾಷೆ ಸಂಸ್ಕೃತಿಯ ಅಧ್ಯಯನ ಕುರಿತು ಯಾವುದೇ ಮಾಹಿತಿಯನ್ನೂ ನೀಡಿರುವುದಿಲ್ಲ. ಇವರ ಧೋರಣೆ ಗಮನಿಸಿದಾಗ ಕನ್ನಡವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ತೋರುತ್ತದೆ.

೨೦೦೦ ಸಾವಿರ ವರ್ಷಗಳ ಘನ ವೈಭವ ಹೊಂದಿರುವ ಕನ್ನಡ ಭಾಷೆ ಹಾಗೂ ಪರಂಪರೆಯನ್ನು ಕಡೆಗಣಿಸಿದ ಐಸಿಸಿಆರ್‌ ಕ್ರಮ ಖಂಡನಿಯ. ಕನ್ನಡ ಸಾಹಿತ್ಯ ಪರಿಷತ್ತು ಏಳು ಕೋಟಿ ಕನ್ನಡಿಗರ ಅಸ್ಮಿತೆಯ ಈ ಸಂಸ್ಥೆ ಕನ್ನಡ-ಕನ್ನಡಿಗ-ಕರ್ನಾಟಕದ ಆಶಯವನ್ನು ಪ್ರತಿಬಿಂಬಿಸುತ್ತಿದೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್‌ ಸಂಸ್ಥೆಯು ಕನ್ನಡ ಭಾಷೆಯ ಗಟ್ಟಿತನ, ಪರಂಪರೆ, ವೈಭವವನ್ನು ಮರೆಯಬಾರದು. ಕನ್ನಡದ ಘನತೆಯನ್ನು ಕಾಪಾಡುವುದರೊಂದಿಗೆ, ಇತಿಹಾಸವನ್ನು ತಿಳಿಸುವುದರೊಂದಿಗೆ ಸಮೃದ್ಧತೆಯನ್ನು ಪ್ರಕಟಪಡಿಸಬೇಕು ಎಂದು ಪತ್ರ ಬರೆಯಲಾಗಿದೆ. ಜತೆಗೆ, ಕೇಂದ್ರ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಚಿವರಿಗೆ ಪತ್ರ ಬರೆದು ಐಸಿಸಿಆರ್‌ ಸಂಸ್ಥೆಗೆ ಕನ್ನಡ ಭಾಷೆಗೆ ಸೂಕ್ತ ಗೌರವಯುತ ಸ್ಥಾನಮಾನ ನೀಡಲು ಸೂಚಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್‌ ಕೋರುತ್ತದೆ.

ದೇಶದ ಕೆಲವೇ ಕೆಲವು ಆಯ್ದ ಭಾಷೆಗಳ ಪರಿಣತರನ್ನು ಆಯ್ಕೆ ಮಾಡುವ ಮೂಲಕ ಕನ್ನಡವನ್ನು ಕಡೆಗಣಿಸಿದ ಮಾಡಿದ ತಪ್ಪನ್ನು ತಕ್ಷಣದಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಶ್ರೀನಾಥ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
KASAPA-ಕನ್ನಡ ಮರೆತ ಐಸಿಸಿಆರ್ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಖಂಡನೆ-27-07-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)