ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ ಕಳಕಳಿಯನ್ನು ನೀಡಿದ ದಿನಕರ ದೇಸಾಯಿ ನಾಡೋಜ ಡಾ ಮಹೇಶ ಜೋಶಿ
ಬೆಂಗಳೂರು: ‘ಚುಟಕ ಬ್ರಹ್ಮ’ ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಅವರು ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗಾಗಿ ದುಡಿದ ಮಹಾನ್ ಧೀಮಂತ ನಾಯಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮಾತನಾಡುತ್ತಿದ್ದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
‘ಟಿಕ್ ಟಿಕ್ ಗೆಳೆಯ ಟಿಕ್’ ಕವಿತೆಯನ್ನು ತಾವು ಶಾಲಾದಿನಗಳಲ್ಲಿ ಓದಿದ್ದನ್ನು ನೆನಪು ಮಾಡಿ ಕೊಂಡ ಅವರು ಸರಳವಾಗಿ ಕಂಡರೂ ಗಹನವಾದ ಜೀವನ ದರ್ಶನವನ್ನು ನೀಡುವುದು ಅವರ ಚುಟುಕಗಳ ವಿಶೇಷ.ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ದೇಸಾಯಿ ಮುಂದೆ ಬಡವರ ಪಾಲಿಗೆ ಬಂಧುವಾದರು. ಮನೆ, ಮಠ ಇಲ್ಲದೆ ತುತ್ತು ಕೂಳಿಗೂ ಕಷ್ಟಪಡುತ್ತಿದ್ದ ಜನರಿಗೆ ಆಸರೆಯಾದರು. ಪ್ರಸಿದ್ಧ ಬರಹಗಾರರಾದರು. ಕಾರ್ಮಿಕ ಸಂಘಟನೆಗಳಲ್ಲಿ ಅಪಾರವಾಗಿ ದುಡಿದು ಕಾರ್ಮಿಕರ ಹಿತರಕ್ಷಣೆ ಮಾಡಲು ಮತ್ತು ಬಡಜನರ ಉದ್ಧಾರಕ್ಕಾಗಿ ಅಹರ್ನಿಶಿ ದುಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಾಕ್ಷರತಾ ಸಾಧನೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾದುದು. ಲೋಕಸಭಾ ಸದಸ್ಯರಾಗಿ ಕೂಡಾ ಅವರು ನೀಡಿದ ಕೊಡುಗೆ ಪ್ರಶಂಸನೀಯವಾದುದು.
ದಿನಕರರು 1936ರಲ್ಲಿ ಮುಂಬೈನ ಹಡಗು ಕಾರ್ಮಿಕರ ಸಂಘಟನೆಯ ನೇತ್ರತ್ವ ವಹಿಸಿದರು. 1953ರಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿದರು. ಅವರು ಅಂಕೋಲದಲ್ಲಿ ‘ಜನಸೇವಕ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ಪ್ರಸಿದ್ಧ ಬರಹಗಾರರಾದ ಗೌರೀಶ್ ಕಾಯ್ಕಿಣಿ ಅವರು ಬಹಳವರ್ಷ ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇಂದು ಅವರು ಹುಟ್ಟು ಹಾಕಿದ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ದಿನಕರ ದೇಸಾಯಿಯವರು ಜನಪ್ರತಿನಿಧಿಯಾಗಿ ಆಯ್ಕೆಯಾದ ಮೊದಲ ಬರಹಗಾರರು. ಬರಹದ ಸಾಮಾಜಿಕ ಮುಖವನ್ನು ಎತ್ತಿ ಹಿಡಿದ ಅವರು ಬರಹದಲ್ಲಿ ತೋರಿದ ಪ್ರಾಮಾಣಿಕತೆಯನ್ನೇ ಸಂಸತ್ ಸದಸ್ಯರಾಗಿಯೂ ತೋರಿ ಆ ಸ್ಥಾನದ ಘನತೆ ಗೌರವಗಳನ್ನು ಎತ್ತಿ ಹಿಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು, ಕ.ಸಾ.ಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ಶ್ರೀಮತಿ ನಿವೇದಿತಾ ಉನ್ನತಿಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದರು ಭಾಗವಹಿಸಿದ್ದರು.
ಪ್ರತಿಕ್ರಿಯೆ