ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗ ಮುಕ್ತಾಯವಾಗಿದೆ: ನಾಡೋಜ ಡಾ.ಮಹೇಶ ಜೋಶಿ

ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗ ಮುಕ್ತಾಯವಾಗಿದೆ: ನಾಡೋಜ ಡಾ.ಮಹೇಶ ಜೋಶಿ

WhatsApp Image 2024-07-13 at 2.30.41 PM

ಬೆಂಗಳೂರು ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗದ ಮುಕ್ತಾಯವಾಗಿದೆ ಎಂದರೆ ತಪ್ಪಾಗದು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಷ್ಟು ದೊಡ್ಡದು. ಅವರ ಅಗಲುವಿಕೆಯಿಂದ ಮನೆಯ ಹಿರಿಯರನ್ನು ಕಳೆದು ಕೊಂಡ ತಬ್ಬಲಿ ಭಾವವನ್ನು ಅನುಭವಿಸುತ್ತಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯತಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ‘ಕಮಲಾ ಹಂಪಾನಾ ನುಡಿ ಗೌರವ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪತಿ ಡಾ.ಹಂಪನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಮೊದಲಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದ ಡಾ.ಕಮಲಾ ಹಂಪಾನ 2003ರ ಡಿಸಂಬರ್ 18,19, 20 ಮತ್ತು 21ರಂದು ಮೂಡಬಿದರೆಯಲ್ಲಿ ನಡೆದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಮ್ಮೇಳನ, ಅತ್ತಿಮಬ್ಬೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹೀಗೆ ಹಲವು ಪ್ರಮುಖ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿದೆ. ಇದರ ಜೊತೆಗೆ ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೇ ಮೊದಲಿಗರು. 2012ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ತನ್ನ ಪ್ರತಿಷ್ಟಿತ ‘ಚಾವುಂಡ ರಾಯ ಪ್ರಶಸ್ತಿಯನ್ನು’ ನೀಡಿ ಗೌರವಿಸಿತ್ತು ತೀರಾ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ತಾಯಿ ಭುವನೇಶ್ವೇರಿಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಬಹಳ ಮುಖ್ಯವಾಗಿ ಸದಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಿರಿಯಕ್ಕನಂತೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯಕ್ಕೂ ಕತ್ತಲು ಕವಿದಂತಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಕಂಬನಿ ಮಿಡಿದರು.

ಕಮಲಾ ಹಂಪನಾ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರು ಶೈಕ್ಷಣಿಕ ವಲಯದಲ್ಲಿ ಚಿರಪರಿಚಿತರು. ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿದ ಹೆಸರು. ಕಮಲಾ ಎಂದರೆ ತಾವರೆ, ಅದು ಕೆಸರಿನಲ್ಲಿ ಹುಟ್ಟಿದರೂ ಆಕಾಶದೆಡೆ ಮುಖ ಚಾಚಿದ್ದು ಕಮಲಾ ಹಂಪನಾ ಕೂಡ ಸಿರಿತನದಲ್ಲಿ ಹುಟ್ಟಿದ್ದರೂ ತಂದೆಯ ಸಾವಿನಿಂದ ಬಡತನದ ಬೆಂಕಿಗೆ ಬಿದ್ದು ನರಳಿದವರು. ಹೋರಾಟದಿಂದಲೇ ಸಿದ್ದಿಯನ್ನು ಪಡೆದವರು. ಕಥೆ, ಕಾವ್ಯ, ನಾಟಕ, ಸಂಶೋಧನೆ, ಸಂಪಾದನೆ, ವಿಮರ್ಶೆ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಬರಹಗಾರ, ಸಂಶೋಧಕ ನಾಡೋಜ ಡಾ.ಹಂಪನಾಗರಾಜಯ್ಯನವರು ತಮ್ಮ 71 ವರ್ಷಗಳ ಸ್ನೇಹದ ಕುರಿತು ಹೇಳಿ, ಕಮಲಾ ಹಂಪಾನ ಅವರ ಧೀಶಕ್ತಿ ಬಹಳ ದೊಡ್ಡದು, ಹೋರಾಟದ ಹಾದಿಯಲ್ಲಿ ಅವರು ಸದಾ ಮುಂದಿದ್ದರು ಎಂದು ಅನೇಕ ನೆನಪುಗಳ ಮೂಲಕ ವಿವರಿಸಿದರು. ಹುಂಬಚದಲ್ಲಿ ಅವರಿಗೆ ಸನ್ಮಾನ ನಡೆದಾಗ ಸಮಾಜಕ್ಕೆ ಮರಳಿ ಕೊಡ ಬೇಕು ಎಂಬ ನಿಶ್ಚಯದಲ್ಲಿ ಜೈನ ಸಾಹಿತ್ಯದ ಅಧ್ಯಾಯನದಲ್ಲಿ ತಮ್ಮನ್ನು ತೊಡಗಿಕೊಂಡರು. ಮಹತ್ವದ ಹೊಣೆಗಾರಿಕೆ ಬಂದಾಗ ಜವಬ್ದಾರಿಯಿಂದ ನಿರ್ವಹಿಸಿದರು. ಸೃಜನಶೀಲತೆ ಮತ್ತು ಸಂಶೋಧನೆ ಎರಡಕ್ಕೂ ಸಮಾನ ಮಹತ್ವ ನೀಡಿದ್ದ ಕಮಲಾ ಹೊರದೇಶಗಳಿಗೆ ಹೋದಾಗ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಆಸಕ್ತರಾಗಿದ್ದರು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ ‘ಏನಾದರೂ ಆಗು ಮುಗುವಿನ ಮುಗ್ಧತೆಯನ್ನು ಕಳೆದು ಕೊಳ್ಳ ಬೇಡ’ ಎಂಬ ಗ್ಯಾಬ್ರಿಯಲ್ ರ್ಮಾಕ್ವಜ್ನ ಮಾತಿಗೆ ಕಮಲಾ ಹಂಪನಾ ನಿದರ್ಶನದಂತಿದ್ದರು ಪರಂಪರೆಯನ್ನು ಮುಂದುವರೆಸ ಬೇಕು ಎನ್ನುವುದು ಅವರ ಆಶಯವಾಗಿತ್ತು ಸಂಶೋಧನೆಯ ನಿರಂತರತೆ, ಪರಿಶ್ರಮ,ವ್ಯಾಪಕತೆ, ಮೌಲಿಕತೆ ಮತ್ತು ಹೊಸತನವನ್ನು ನೀಡುವುದು ಮುಖ್ಯ ಎನ್ನುವುದು ಕಮಲಾ ಹಂಪನಾ ಅವರ ಚಿಂತನೆಯಾಗಿತ್ತು, ಸಂಶೋಧನೆಗೆ ಎಂದಿಗೂ ಪೂರ್ಣ ವಿರಾಮ ನೀಡ ಬಾರದು ಎಂದು ಅವರು ಪ್ರತಿಪಾದಿಸಿದ್ದರು ಗ್ರಂಥ ಸಂಪಾದನೆ ಮತ್ತು ಉಪೇಕ್ಷಿತ ಬರಹಗಾರರ ಅಧ್ಯಯನದ ಕುರಿತೂ ಕಮಲಾ ವಿಶೇಷ ಮಹತ್ವ ನೀಡಿದ್ದರು ಈ ಹಾದಿಯಲ್ಲಿ ಮುಂದೆ ಹೋಗುವುದೇ ನಾವು ಅವರಿಗೆ ಸಲ್ಲಿಸ ಬಹುದಾದ ಗೌರವ ಎಂದು ಹೇಳಿದರು.

ಹಿರಿಯ ಬರಹಗಾರ್ತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಮಾತನಾಡಿ ಡಾ.ಕಮಲಾ ಹಂಪನಾ ಅವರ ಆತ್ಮಕತೆ ‘ಬೇರು-ಬೆಂಕಿ-ಬಿಳಲು’ ಓದಿದರೆ ಅವರ ಪರಿಶ್ರಮದ ಹಾದಿ ಅರ್ಥವಾಗುತ್ತದೆ. ನಿರಂತರ ಅಧ್ಯಯನ ಮತ್ತು ಸ್ನೇಹಶೀಲತೆ ಅವರ ಹಿರಿಮೆ ಎಂದು ಬಣ್ಣಿಸಿದರು. ಸಪ್ನ ಬುಕ್ ಹೌಸ್ನ ಆರ್.ದೊಡ್ಡೇಗೌಡರು ತಮ್ಮ ಸಂಸ್ಥೆಯ ಜೊತೆಗೆ ಹಂಪನಾ ದಂಪತಿಗಳಿಗಿದ್ದ 35 ವರ್ಷಗಳ ಸಂಬಂಧವನ್ನು ವರ್ಣಿಸಿ ಅವರನ್ನು ಜಕ್ಕವಕ್ಕಿಗಳು ಎಂದು ಕರೆದು ಈ ಜೋಡಿಯನ್ನು ನೋಡುವುದೇ ಸಂಭ್ರಮವಾಗಿತ್ತು ಎಂದು ಹೇಳಿ ಡಾ.ಕಮಲಾ ಹಂಪನಾ ಅವರ ಹದಿನಾಲ್ಕು ಸಂಪುಟಗಳ ಕೃತಿ ಶ್ರೇಣಿಯನ್ನು ಪ್ರಕಟಿಸುವಲ್ಲಿ ತಮಗಾದ ಅನುಭವಗಳನ್ನು ಹಂಚಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕಕ್ಷರಾದ ಬಿ.ಎಂ.ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರ್ವಹಿಸಿದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)