ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ’ ಪ್ರಶಸ್ತಿ./h5>
ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ’ ಪ್ರಶಸ್ತಿಗೆ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಶ್ರೀ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ದತ್ತಿ ಪ್ರಶಸ್ತಿಯು ಕೈಗಾರಿಕೆ,ಶಿಕ್ಷಣ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗದ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ವೈದ್ಯಕೀಯ ಮೊದಲಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಣನೀಯ ಕೊಡುಗೆಗಳನ್ನು ನೀಡಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಥವಾ ಸಂಸ್ಥೆಗೆ ನೀಡ ಬೇಕೆನ್ನುವುದು ದತ್ತಿಯ ಆಶಯವಾಗಿದೆ. ಇದೇ ಮೊಟ್ಟ ಮೊದಲ ಸಲ ಸಂಸ್ಥೆಗೆ ಈ ಪುರಸ್ಕಾರವನ್ನು ನೀಡಲಾಗುತ್ತಿದೆ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರಿಂದ 1916ರ ಮೇ 8ರಂದು ಸ್ಥಾಪಿತವಾಯಿತು. ಕೈಗಾರಿಕೆಯ ವಿಷಯದಲ್ಲಿ ಮಾರ್ಗದರ್ಶಕ ಎನ್ನಿಸಿ ಕೊಂಡಿರುವ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ವಿವಿಧ ಕೈಗಾರಿಕಾ ಸಂಸ್ಥೆಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಮೂರೂ ಕ್ಷೇತ್ರಗಳಲ್ಲಿಯೂ ಸದಸ್ಯರನ್ನು ಹೊಂದಿರುವ ಮಹಾ ಮಂಡಲಿಯು ಸುಮಾರು 5,000 ನೇರ ಸದಸ್ಯರನ್ನು ಹೊಂದಿದ್ದು ಐದು ಲಕ್ಷ ಸಹ ಸದಸ್ಯರು ಮತ್ತು ಹನ್ನೆರಡು ಲಕ್ಷ ಜನ ಪರೋಕ್ಷ ಸದಸ್ಯರೂ ಇದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿಯೂ ಸದಸ್ಯರನ್ನು ಹೊಂದಿರುವ ಸಂಸ್ಥೆ ನಿಜವಾದ ಅರ್ಥದಲ್ಲಿ ಪ್ರಾತಿನಿಧಿಕವಾಗಿದ್ದು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ನಿರಂತರವಾಗಿ ಶ್ರಮಿಸುತ್ತಾ ಬರುತ್ತಿದೆ.
ಪ್ರಶಸ್ತಿಯ ಆಯ್ಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ವಿಷಯ ತಜ್ಞರಾಗಿ ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡ ಅವರು ಭಾಗವಹಿಸಿದ್ದರು.
ದತ್ತಿ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸಿ ಇನ್ನಷ್ಟು ಸಾಮಾಜಿಕ ಕಾಳಜಿಯ ಕೆಲಸಗಳು ಸಂಸ್ಥೆಯಿಂದಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರತಿಕ್ರಿಯೆ