ಕಾರ್ಗಾಲದ ವೈಭವ

ಕಡೆಂಗೋಡ್ಲು ಶಂಕರಭಟ್ಟ

ಪಡುವಣ ತೀರದ
ಕನ್ನಡ ನಾಡಿನ
ಕಾರ್ಗಾಲದ ವೈಭವವೇನು?
ಚೆಲ್ಲಿದರನಿತೂ
ತೀರದ ನೀರಿನ
ಜಡದೇಹದ ಕಾರ್ಮುಗಿಲೇನು?

ಕೆರೆಗಳನುಕ್ಕಿಸಿ
ತೊರೆಗಳ ಸೊಕ್ಕಿಸಿ
ಗುಡ್ಡವ ಬೆಟ್ಟವ ಕೊರೆ ಕೊರೆದು
ಕಡಲಿನ ತೆರೆಗಳ
ರಿಂಗಣಗುಣಿಯಿಸಿ
ಮೊರೆಮೊರೆವುದದೋ ಸರಿಸುರಿದು

ಕುದುರೆಮೊಗದ ಕಡಿ
ವಾಣದ ತೆರದಲಿ
ಮಿಂಚುಗಳವು ಥಳಥಳಿಸುವುವು
ಗೊರಸಿನ ಘಟ್ಟನೆ
ಯಂತಿರೆ ಥಟ್ಟನೆ
ಗುಡುಗುಗಳವು ಗುಡುಗಾಡಿಪುವು

ಆವೇಶದ ವೇ
ಷದ ಬಿರುಸುಟ್ಟುರೆ
ಊರೂರಲಿ ಹಾರೋಡುವುದು
ಮರಗಳ ಕೀಳುತ
ಬಂಡೆಯ ಹೋಳುತ
ಜಗಜಟ್ಟೆಯ ತೆರನಾಡುವುದು

ಹಗಲಿರುಳೆನ್ನದೆ
ಹೊಡೆಯುವ ಜಡಿಮಳೆ
ಬಡಿಕೋಲ್ಮಿಂಚಿನ ಲಾಗುಗಳು.
ಮನೆಗಳ ಮನಗಳ
ಒಳಗೂ ಹೊರಗೂ
ಜಿನುಗುತಿರುವ ಹನಿಸೋನೆಗಳು
ಮುಗಿಲಿನ ಹುಬ್ಬಿನ
ಗಂಟಿಕ್ಕುತ ಬಿರು
ದನಿಯಲಿ ಬೆದರಿಸುತಿಹನಲ್ಲ.
ನಲ್ಲನೆನುತೆ ಆ
ಗಸವೆಣ್ಕೂಗುತೆ
ಸುರಿಸಿದ ಕಣ್ಣೀರ್ವೊನಲೆಲ್ಲ

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)