ಕೆ.ಎನ್. ರಾಜಣ್ಣ ಅವರ ಅಬದ್ಧ ಹೇಳಿಕೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆಕ್ರೋಶ:ದೇವೇಗೌಡರಲ್ಲಿ ರಾಜಣ್ಣ ಕ್ಷಮೆ ಯಾಚಿಸಲು ಆಗ್ರಹ
ಬೆಂಗಳೂರು: ಕನ್ನಡ ನಾಡಿನ ಹೆಮ್ಮೆಯ ʻಮಣ್ಣಿನ ಮಗʼ, ಕನ್ನಡ ಪತಾಕೆಯನ್ನು ದೇಶದಾದ್ಯಂತ ಹರಡುವಂತೆ ಮಾಡಿ ಪ್ರಪಂಚಕ್ಕೆ ಕನ್ನಡನಾಡಿನ ಬಗ್ಗೆ ಅರಿವು ಮೂಡಿಸಿದ ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅಬದ್ಧ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, “ಮಾಜಿ ಪ್ರಧಾನಿ ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರವಾಗಿದೆ. ನಮ್ಮ ದೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸುವುದರ ಜೊತೆ ಪ್ರಧಾನಿ ಪಟ್ಟಕ್ಕೆ ಏರಿ ಕನ್ನಡ ನಾಡಿನ ಹೆಮ್ಮೆಗೆ ಗರಿ ತಂದವರು. ಪ್ರಪಂಚದ ಭೂಪಟದಲ್ಲಿ ಕನ್ನಡದ ನೆಲವನ್ನು ಗುರುತಿಸುವಂತೆ ಮಾಡಿದ ಮಹಾನ್ ವ್ಯಕ್ತಿತ್ವದವರ ಬಗ್ಗೆ ತೀರಾ ಹಗುರವಾಗಿ ಕೆ.ಎನ್. ರಾಜಣ್ಣ ಅವರು ಮಾತನಾಡಿದ್ದಾರೆ.
ರಾಜಣ್ಣನವರು ದೇವೇಗೌಡರ ಬಗ್ಗೆ ಅಗೌರವಯುತವಾಗಿ ಮಾತನಾಡಿದ್ದು ಇದು ಮೊದಲ ಬಾರಿಯೇನೂ ಅಲ್ಲ. ಈ ಹಿಂದೆ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ, “ದೇವೇಗೌಡ ಮೂಗರ್ಜಿ ಗಿರಾಕಿಯಾಗಿದ್ದಾರೆ, ಅವರು ಸಾಕಷ್ಟು ಜನರ ವಿರುದ್ಧ ಮೂಗರ್ಜಿ ಬರೆದವರು” ಎಂಬ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದ ನಾಡೋಜ ಡಾ. ಮಹೇಶ ಜೋಶಿ ಅವರು ರಾಜಣ್ಣರ ಹಳೆಯ ವಾಚಾಳಿತನವನ್ನು ನೆನಪಿಸಿದ್ದಾರೆ.
ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ ಏಕೈಕ ಕನ್ನಡಿಗರಾದ ಶ್ರೀ ದೇವೇಗೌಡರಲ್ಲಿ ಕೆ.ಎನ್. ರಾಜಣ್ಣ ಬೇಷರತ್ ಕ್ಷಮೆಯಾಚಿಸಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಹಿರಿಯರಿಗೆ ಗೌರವನೀಡಿ ಮಾತನಾಡುವ ಸಂಪ್ರದಾಯ ಕಲಿಸಬೆಕು. ಕೆ.ಎನ್. ರಾಜಣ್ಣ ವಿರುದ್ಧ ಅವರ ಪಕ್ಷದ ಹೈಕಮಾಂಡ್ ಮಧ್ಯ ಪ್ರವೇಶಿಸಿ ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀ. ಎಚ್.ಡಿ. ದೇವೇಗೌಡರು ನೂರು ವರ್ಷಗಳ ಕಾಲ ಬಾಳಿ ಕನ್ನಡ ನಾಡು ನುಡಿ, ನೆಲ ಜಲದ ಅಭ್ಯುದಯದ ನಿಟ್ಟಿನಲ್ಲಿ ಇನ್ನಷ್ಟು ಸೇವೆ ಸಲ್ಲಿಸಿ ನಾಡಿಗೆ ಅವರಿಂದ ಒಳಿತಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ. ಅವರು ನೂರನೇ ಹುಟ್ಟುಹಬ್ಬದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಒಂದು ಸಮಿತಿಯನ್ನು ರಚಿಸಬೇಕು. ಆ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ ಅಧ್ಯಕ್ಷರಾಗಬೇಕು ಎಂಬ ಆಶಯವನ್ನು ನಾಡೋಜ ಡಾ. ಮಹೇಶ ಜೋಶಿ ವ್ಯಕ್ತ ಪಡಿಸಿದ್ದಾರೆ.
ಪ್ರತಿಕ್ರಿಯೆ