ಕೆ.ಎಸ್. ನರಸಿಂಹಸ್ವಾಮಿ

K S Narasimhaswamy

ಕೆ. ಎಸ್. ನರಸಿಂಹಸ್ವಾಮಿ

‘ಮೈಸೂರು ಮಲ್ಲಿಗೆ’ ಅಂದರೆ ಕೆ. ಎಸ್. ನರಸಿಂಹಸ್ವಾಮಿಗಳು.  ಮೈಸೂರು ಮತ್ತು ಮಲ್ಲಿಗೆಯನ್ನೂ ಮೀರಿ ನೆನಪಿಗೆ ಬರುವಷ್ಟು ಅವರು ಕನ್ನಡ ಜನಮಾನಸದಲ್ಲಿ ವಿರಾಜಿತರು.  ಕನ್ನಡದ ಕವಿಯೊಬ್ಬರು ಯಾವುದೇ ಪಾಂಡಿತ್ಯವಿಲ್ಲದವನನ್ನೂ ತಮ್ಮ ಕೃತಿಗಳ ಮೂಲಕ ಆತ್ಮೀಯವಾಗಿ ಸೆಳೆದ ಒಂದು ಅಪೂರ್ವತೆ ಇದ್ದರೆ ಅದು ಕೆ. ಎಸ್. ನರಸಿಂಹ ಸ್ವಾಮಿಗಳಿಗೆ ಸೇರುತ್ತದೆ ಎಂಬುದು ನಿರ್ವಿವಾದ.   1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ ಸಂಗ್ರಹ ‘ಮೈಸೂರು ಮಲ್ಲಿಗೆ’ ಪ್ರಕಟವಾಯಿತು.  ಈಗಲೂ ಅದು ಮರುಮುದ್ರಣಗಳನ್ನು ಕಾಣುತ್ತಲೇ ಇದೆ.  ಮುಂದೆಯೂ ಕಾಣುತ್ತಲೇ ಹೋಗುತ್ತದೆ.  ಇಷ್ಟೊಂದು ಜನಪ್ರಿಯತೆಯನ್ನು ಮೀರಿಸುವ ಇನ್ನೊಂದು ಕಾವ್ಯ ಕೃತಿ ಪ್ರಾಯಶಃ ಕನ್ನಡದಲ್ಲಿ ಇಲ್ಲ.

ಕನ್ನಡದಲ್ಲಿ ಕಾಲಕಾಲಕ್ಕೆ ಆದ ಕಾವ್ಯಕ್ರಾಂತಿಗಳಲ್ಲಿ ಫೀನಿಕ್ಸ್ ನಂತೆ ತಮ್ಮನ್ನು ನವೀಕರಿಸಿಕೊಂಡು ಹೊಸಹುಟ್ಟು ಪಡೆಯುತ್ತಾ ಘನವಾದ ಕಾವ್ಯ ರಚಿಸುತ್ತಾ ಹೋದದ್ದು ಕೆ.ಎಸ್. ನರಸಿಂಹಸ್ವಾಮಿಗಳ ಹೆಗ್ಗಳಿಕೆ.  ಮಧುರವಾದ, ಆದರೆ ಅನನ್ಯವಾದ, ತಮ್ಮ ಪ್ರೇಮ-ದಾಂಪತ್ಯದ ಕಾವ್ಯದ ನೆಲೆಯಿಂದ, ಬದುಕಿನ ನಿಷ್ಠುರ ವಿನ್ಯಾಸಗಳನ್ನು ಗುರುತಿಸುವ ‘ತೆರೆದ ಬಾಗಿಲು’ ನಂತಹ ಕವನಗಳವರೆಗೆ ಕೆ.ಎಸ್.ನ ಅವರು ನಡೆದ ಕಾವ್ಯದ ಒಡೆದು ತೋರುವ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು.

ಕೆ. ಎಸ್. ನರಸಿಂಹಸ್ವಾಮಿಗಳು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 26-1-1915ರಂದು ಜನಿಸಿದರು. ಇಂದು ಅವರ ನೂರನೆಯ ಹುಟ್ಟುಹಬ್ಬ.  ತಂದೆ ಕಿಕ್ಕೇರಿ ಸುಬ್ಬರಾಯರು.  ತಾಯಿ ಹೊಸ ಹೊಳಲು ನಾಗಮ್ಮನವರು.   ಮೈಸೂರು, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೂನಿಯರ ಬಿ.ಎ ಮುಗಿಸುವಲ್ಲಿ ಅವರ ಓದು ಅಪೂರ್ಣವಾಗಿ ಮುಕ್ತಾಯವಾಯಿತು.  1936ರಲ್ಲಿ ವೆಂಕಮ್ಮನವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು.   1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಆರ್ಥಿಕ ಕ್ಲೇಶ, ಸಾಂಸಾರಿಕ ತಾಪತ್ರಯಗಳಲ್ಲಿ ಬದುಕನ್ನು ತೇಯುತ್ತಾ ಬಂದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಎತ್ತಿಕೊಡುತ್ತಾ ಹೋದದ್ದು ಈ ಕವಿಯ ವೈಶಿಷ್ಟ್ಯ.

ಸಾಂಸ್ಕೃತಿಕವಾಗಿ ಕೆ. ಎಸ್. ನರಸಿಂಹಸ್ವಾಮಿ ಅವರಿಗೆ ಕನ್ನಡ ಜನತೆ ತೋರುತ್ತಾ ಬಂದಿರುವ ಪ್ರೀತಿ ಗೌರವ ಅಪಾರ.  ಮೈಸೂರು ಮಲ್ಲಿಗೆಗೆ ದೇವರಾಜಬಹದ್ದೂರ್ ಬಹುಮಾನ, ಶಿಲಾಲತೆಗೆ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ, 1970ರಲ್ಲಿ ‘ಚಂದನ’ ಸಂಭಾವನ ಗ್ರಂಥ, ತೆರೆದ ಬಾಗಿಲು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ‘ದುಂಡು ಮಲ್ಲಿಗೆ’ ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಇವು ಇವರಿಗೆ ಸಂದ ಅನೇಕ ಪ್ರಶಸ್ತಿಗಳಲ್ಲಿ ಕೆಲವು ಮಾತ್ರ.

ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು ‘ಶಿಲಾಲತೆ’ಯಲ್ಲಿ.  ಆದ್ದರಿಂದ ಆ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.  ಕೆ. ಎಸ್. ನ ಅವರು ಪ್ರಧಾನವಾಗಿ ಕವಿಯಾದರೂ ಅವರ ಅನುವಾದಿತ ಕೃತಿಗಳ ಮೌಲಿಕತೆಯನ್ನು ಕಡೆಗಣಿಸುವಂತಿಲ್ಲ.  ಮಾರಿಯ ಕಲ್ಲು (ಕಿರುಗತೆಗಳು), ಉಪವನ (ಪಬಂಧ-ವಿಮರ್ಶೆ), ದಮಯಂತಿ(ಗದ್ಯರೂಪದಲ್ಲಿ ಕತೆ) ಅವರ ಸ್ವತಂತ್ರ ಕೃತಿಗಳು.  ಯುರಿಪಿಡಿಸ್ ನ ಮೀಡಿಯಾ, ಮಾರ್ಕ್ ಟ್ವೈನ್ ನ ಹಕಲ್ಬರಿಫಿನ್ನನ ಸಾಹಸಗಳು ಅವರ ಮುಖ್ಯವಾದ ಅನುವಾದ ಕೃತಿಗಳು.  ಅವರ ಅನೇಕ ಕನ್ನಡ ಕವಿತೆಗಳು ಇಂಗ್ಲಿಷ್, ಹಿಂದಿ, ಉರ್ದು ಭಾಷೆಗಳಿಗೆ ಅನುವಾದಗೊಂಡಿರುವುದನ್ನೂ ಇಲ್ಲಿ ನೆನೆಯಬಹುದು.  ತಮ್ಮ ಗಂಭೀರ ಕಾವ್ಯದ ಜೊತೆ ಜೊತೆಗೆ ಚೆಲುವಾದ ಗೀತೆಗಳನ್ನೂ ಬರೆದುಕೊಂಡು ಬಂದಿರುವುದು ಕೆ.ಎಸ್.ನ ಅವರ ಕಾವ್ಯದ ಇನ್ನೊಂದು ವಿಶೇಷ.  ನಂತರದ ದಿನಗಳಲ್ಲಿ ಬಂದ ‘ನವಪಲ್ಲವ’, ‘ದುಂಡು ಮಲ್ಲಿಗೆ’ಗಳಲ್ಲೂ ಸೊಗಸಾದ ಗೀತೆಗಳಿವೆ.  ಕೆ.ಎಸ್.ನ ಅವರ ಗೀತೆಗಳನ್ನೂ, ಮೈಸೂರು ಮಲ್ಲಿಗೆಯ ಭಾವಗೀತೆಗಳನ್ನೂ ಅನೇಕ ಗಾಯಕರು ಹಲವು ದಶಕಗಳಿಂದ ಹಾಡುತ್ತಾ ಬಂದಿದ್ದು, ಅವು ಕಾವ್ಯವನ್ನು ‘ಓದದ’ ಜನತೆಗೂ ತಲುಪುವುದು ಸಾಧ್ಯವಾಗಿದೆ.

1943ರಲ್ಲಿ ಪ್ರಕಟವಾದ ಮೈಸೂರು ಮಲ್ಲಿಗೆ ಕನ್ನಡ ಪ್ರೇಮ-ಕಾವ್ಯದಲ್ಲಿ ಅನನ್ಯವಾದುದು ಎಂಬುದು ನಿಜವಾದರೂ, ಇದರ ಮೊದಲ ಎಳೆಗಳು ಕಾಣಿಸಿಕೊಳ್ಳುವುದು ಆಚಾರ್ಯ ಬಿ.ಎಂ.ಶ್ರೀ ಅವರ ಇಂಗ್ಲಿಷ್ ಗೀತೆಗಳಲ್ಲಿ.  ಈ ಐತಿಹಾಸಿಕ ಮಹತ್ವದ ಕೃತಿಯಲ್ಲಿ ಬರ್ನ್ಸ್ ಕವಿಯ Dunca Gray (ಮಾದ-ಮಾದಿ), O my Love’s like a red, red rose (ನನ್ನ ಪ್ರೇಮದ ಹುಡುಗಿ),  Ae Fond Kiss( ಒಂದು ಮುತ್ತು), Bonnie Doon (ಬಿಟ್ಟ ಹೆಣ್ಣು), Landor ಕವಿಯ (ಪದುಮ) ಮೊದಲಾದ ಅನುವಾದಿತ ಕೃತಿಗಳನ್ನು ನೋಡಿದರೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು.  ಇಂಗ್ಲಿಷ್ ಗೀತೆಗಳಲ್ಲಿ ಕಾಣಿಸಿಕೊಂಡ ಪ್ರೇಮಕವಿತೆಗಳ ಪ್ರಭಾವ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆಗೂ ಮೊದಲು ಕಾಣಿಸಿಕೊಳ್ಳುವುದು ತೀ.ನಂ.ಶ್ರೀ ಅವರ ‘ಒಲುಮೆ’ ಸಂಗ್ರಹದಲ್ಲಿ.  ಈ ಸಂಗ್ರಹ ಕೂಡ ಕೆ.ಎಸ್.ನ ಅವರನ್ನು ಪ್ರಭಾವಿಸಿದ ಹಾಗಿದೆ.

ಹೆಚ್ಚಾಗಿ ವಿವಾಹಪೂರ್ವ ಮತ್ತು ಹೊಸ ದಾಂಪತ್ಯ ಹರಯದ ಹೆಣ್ಣುಗಂಡುಗಳ ಒಲವು, ವಿರಹಗಳ ಸುಕುಮಾರ ಜಗತ್ತನ್ನು ಕನ್ನಡಕ್ಕೆ ತಂದು ಮನ್ನಣೆ ಗಳಿಸಿದವರು ಕೆ.ಎಸ್.ನ ಮಾತ್ರ ಎನ್ನಬೇಕು.  ತಮ್ಮವು ಪ್ರೇಮಕವಿತೆಗಳಲ್ಲ, ದಾಂಪತ್ಯಕವಿತೆಗಳೆಂದು ಕೆ.ಎಸ್.ನ ಹೇಳುತ್ತಿದ್ದರು.  ಮೈಸೂರು ಮಲ್ಲಿಗೆಯ ಬಹಳಷ್ಟು ಕವಿತೆಗಳು ದಾಂಪತ್ಯಗೀತೆಗಳೇ ಆಗಿವೆ.  ದಶಕಗಳ ಹಿಂದಣ ಸಾವಧಾನದ ಬದುಕಿನ ಚಿತ್ರಣ ಇಲ್ಲಿದೆ.  ಮಧ್ಯಮವರ್ಗ, ಕೆಳವರ್ಗದ ಸಮಾಜವೇ ಇಲ್ಲಿ ಕಾಣಿಸುವಂತದ್ದು.  ಹೆಚ್ಚಾಗಿ ಕವಿತೆಗಳ ಉದ್ದಕ್ಕೂ ಒಂದು ಗ್ರಾಮೀಣ ಪರಿಸರದ ಚಿತ್ರಣವಿದೆ.  ನವಿಲೂರು ಹೊನ್ನೂರು ಮೊದಲಾದವು ಈ ಗ್ರಾಮೀಣ ಜಗತ್ತಿನ ಪ್ರಾತಿನಿಧಿಕ ನೆಲೆಗಳು.  ಮೈಸೂರು ಮಲ್ಲಿಗೆಯ ಕವಿತೆಗಳು ಎಷ್ಟರಮಟ್ಟಿಗೆ ಈ ನೆಲದವಾಗಿವೆಯೆಂದರೆ, ಅವುಗಳ ಹಿಂದೆ ಬರ್ನ್ಸ್ ಕವಿಯ ಪ್ರಭಾವವಿದೆ ಎಂದು ಹೇಳಲಿಕ್ಕೆ ಆಗುವುದಿಲ್ಲ.  ಡಿ.ವಿ.ಜಿ. ಅವರು ಮೈಸೂರು ಮಲ್ಲಿಗೆಯ ಮುನ್ನುಡಿಯಲ್ಲಿ ಗುರುತಿಸಿರುವಂತೆ ಸ್ವಾಭಾವಿಕತೆ, ಸರಳತೆ, ಋಜುತೆಗಳೇ ಈ ಕಾವ್ಯದ ಮುಖ್ಯಲಕ್ಷಣಗಳಾಗಿವೆ.  ಒಟ್ಟಾರೆ ನಮ್ಮಲ್ಲೇ ಇದ್ದ ಜಾನಪದ ಕಾವ್ಯ ಮತ್ತು ಪಾಶ್ಚಾತ್ಯ ಪ್ರೇಮ ಕಾವ್ಯದ ಪ್ರಭಾವದಿಂದ ವಿಶಿಷ್ಟವಾದ, ಈ ಮಣ್ಣಿನ ಮಲ್ಲಿಗೆಯ ವಾಸನೆಯನ್ನು ಕೊಡುವ ಚೆಲುವಾದ ಕವಿತೆಯನ್ನು ಕೆ.ಎಸ್.ನ ನಿರ್ಮಿಸಿದವರು ಎನ್ನಬಹುದು.

ಮೈಸೂರು ಮಲ್ಲಿಗೆಯ ನಂತರ ಸುಮಾರು ಒಂದು ದಶಕದ ಕಾಲ ಕೆ.ಎಸ್.ನ ಇದೇ ಬಗೆಯ ಕಾವ್ಯವನ್ನು ರಚಿಸುತ್ತಾ ಹೋದರು.  ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗಗಳಲ್ಲಿ ಮೈಸೂರು ಮಲ್ಲಿಗೆಗಿಂತ ತೀರ ವಿಭಿನ್ನವಾದ ಕವಿತೆಗಳನ್ನೇನೂ ನಾವು ನೋಡುವುದಿಲ್ಲ.  ಆದರೆ ಈ ಕವಿಯಲ್ಲಿ ಮುಂದೆ ಕಾಣುವ ಕೆಲವು ವಿಶಿಷ್ಟ ಕಾಳಜಿಗಳಿಗೆ ಸೂಚನೆ ಈ ಸಂಗ್ರಹಗಳಲ್ಲಿ ಇದೇ ಎಂಬುದು ಮುಖ್ಯ ಸಂಗತಿ.  ‘ಹೀಗಾಯಿತು’ ಕವಿತೆಯಲ್ಲಿ ಇವರನ್ನು ವಿಚಾರಿಸಿಕೊಂಡು ಹೋದ ವ್ಯಕ್ತಿಯೊಬ್ಬನ ಬಗೆಗಿನ ಚಿಂತನೆ ಇದೆ.  ನಮ್ಮ ಕ್ಷೇಮವನ್ನು ಚಿಂತಿಸುವ ಈ ಶುಭದ ಕಲ್ಪನೆ ತೆರೆದ ಬಾಗಿಲು ಸಂಗ್ರಹದ ಕವಿತೆಗಳಲ್ಲಿ ಇರುವುದು ನೋಡಬಹುದು.  ದೀಪದ ಮಲ್ಲಿ ಸಂಗ್ರಹದಲ್ಲಿರುವ ‘ಕಾವೇರಿ ಸ್ನಾನ’ ಎಂಬ ಕವಿತೆಯಲ್ಲಿ ಮಾಸ್ತಿಯವರ ಕಥನದ ಧಾಟಿ, ನವುರು ಹಾಸ್ಯ, ಸರಳರಗಳೆಯ ನಡೆ, ಆಡುಮಾತಿನ ಸೊಗಸಾದ ಬಳಕೆ ಕಾಣುತ್ತದೆ.

ದೇವರು-ಸೃಷ್ಟಿಜೀವಿಯ ಸಂಬಂಧ, ಕಾಲದ ವಸ್ತು, ರಾಜಕೀಯ ಸಾಮಾಜಿಕ ವಸ್ತು ಶಿಲಾಲತೆ ಸಂಗ್ರಹದಲ್ಲಿ ಕಾಣಿಸಿಕೊಳ್ಳುತ್ತವೆ.  ಸಾರ್ವಕಾಲಿಕ ಎನ್ನಬಹುದಾದ ಸಂಗತಿಗಳ ಜೊತೆ ಸಮಕಾಲೀನ ಎನ್ನಬಹುದಾದ ಸಂಗತಿಗಳ ಬಗ್ಗೆಯೂ ಕವಿ ಇಲ್ಲಿ ಆಸಕ್ತಿಯನ್ನು ತೋರತೊಡಗುತ್ತಾರೆ.  ಪ್ರೀತಿಯ ಬಗ್ಗೆ ಇಲ್ಲಿ ಕವಿತೆಗಳು ಇವೆಯಾದರೂ ರಮ್ಯತೆ, ಕನಸುಗಾರಿಕೆ ಕಡಿಮೆಯಾಗಿ, ಪ್ರೀತಿಯ ದುರಂತದ ಮುಖವನ್ನೂ ಈ ಸಂಗ್ರಹದಲ್ಲಿ ಕಾಣಿಸಲಾಗಿದೆ.  ಅಫೋದ್ರಿತೆ, ರಾತ್ರಿಯಲಿ ದೂರದ ಎಲ್ಲೋ ಓಲಗ, ನಲವತ್ತರ ಚೆಲುವೆ, ನೀನಿಲ್ಲದ ಮನಸ್ಸು, ಕೇಳಬೇಡ ಎಲ್ಲಿಗೆ ಈ ಮಾದರಿಯ ಕವಿತೆಗಳು.  ದೇಶ ಮತ್ತು ಸ್ವಾತಂತ್ರ್ಯದ ಬಗೆಗಿನ ಈ ಸಂಗ್ರಹದ ಕವಿತೆಗಳು ಮುಖ್ಯವಾಗಿ ವಿಡಂಬನೆಯ ಧಾಟಿಯನ್ನು ಪಡೆಯುತ್ತವೆ.  ಬರಿಗೊಡಗಳಿಗೆ ಸಮಾಧಾನ ಈ ದೃಷ್ಟಿಯಿಂದ ಬಹುಮುಖ್ಯ ಕವಿತೆ.  ಅಮೂರ್ತವಾದ ಕಾಲದ ಬಗ್ಗೆ ಚಿಂತಿಸುವ ಗಡಿಯಾರದಂಗಡಿಯ ಮುಂದೆ, ಸೃಷ್ಟಿ-ಜೀವಿ-ದೈವದ ಬಗ್ಗೆ ಚಿಂತಿಸುವ ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ, ಬೆಳಗಿನ ಮಂಜು-ಚಿರಂತನವೆನ್ನಬಹುದಾದ ವಸ್ತುವನ್ನು ಶೋಧಿಸುವ ಈ ಕವಿತೆಗಳಲ್ಲಿ ಪ್ರತಿಮಾ ಮಾರ್ಗ ಮುಖ್ಯವಾಗುತ್ತದೆ.  ಶಿಲಾಲತೆಗೆ ಒಂದು ಬಗೆಯ ಮಿಶ್ರ ಪ್ರತಿಕ್ರಿಯೆ ಬಂದುದು ನಿಜವಾದರೂ ಅದು ಕೆ.ಎಸ್.ನ ಅವರ ಕಾವ್ಯ ಇತಿಹಾಸದಲ್ಲಿ ಒಂದು ಪ್ರಮುಖವಾದ ಘಟ್ಟವಾಗಿದ್ದು ಶಿಲ್ಪ, ಪ್ರತಿಮೆ ಭಾಷೆ, ವಸ್ತು ಹಾಗೂ ಜೀವನ ದರ್ಶನಗಳ ದೃಷ್ಟಿಯಿಂದ ಹೊಸತನ ಕಾಣಿಸಿಕೊಂಡಿರುವುದನ್ನು ಮನಗಾಣಬಹುದು.

ಅಡಿಗರ ಕಾವ್ಯ ಸಂದರ್ಭಕ್ಕೆ ಕೆ.ಎಸ್.ನ ತಮ್ಮದೇ ರೀತಿಯ ಉತ್ತರ ನೀಡುವ ಮೂಲಕ ತಮ್ಮ ಕಾವ್ಯದ ಅನನ್ಯತೆ ಸಾಧಿಸುತ್ತಿದ್ದುದು ಮಾತ್ರವಲ್ಲ, ಅಡಿಗರ ಊರ್ಧ್ವಮುಖತೆಗೆ ಕೆ.ಎಸ್.ನ ಅವರ ದೈನಿಕದ ಬನಿ ಪಡೆದ ಕಾವ್ಯ ಎದುರಾಗುತ್ತಾ ಆಲ್ಟರ್ನೇಟೀವ್ ಆದ ಸಮತೋಲನವನ್ನು ತರುತ್ತಿತ್ತು ಎಂಬುದು ಮುಖ್ಯ.  ವೈವಿಧ್ಯಮಯ ದನಿಗಳು ಸಾಂಸ್ಕೃತಿಕ ಅರಕೆಯನ್ನು ತುಂಬುವ ಮಹತ್ಕಾರ್ಯ ನಿರ್ವಹಿಸುತ್ತವೆ ಎಂಬ ಕಾರಣದಿಂದ ಕನ್ನಡ ನವ್ಯ ಸಂದರ್ಭದಲ್ಲಿ ಕೆ.ಎಸ್.ನ ಕಾವ್ಯ ಬಹುಮುಖ್ಯ ಸ್ಥಾನ ಪಡೆಯುತ್ತದೆ.

ಭಾಷೆ ಲಯ, ಧಾಟಿಯಲ್ಲಿ ಮಾತ್ರವಲ್ಲ ಧೋರಣೆಯಲ್ಲೂ ಅಡಿಗರಿಗಿಂತ ಸ್ಪಷ್ಟವಾಗಿ ಭಿನ್ನವಾಗುವ ಮೂಲಕ ನರಸಿಂಹಸ್ವಾಮಿ ಬದುಕಿನ ಇನ್ನೊಂದು ಸಾಧ್ಯತೆಯನ್ನೂ ತೋರಿಸುತ್ತಾರೆ.  ಅವರದ್ದು ಈ ಬದುಕಿಗೆ ಬದ್ಧವಾದ ಜೀವನ ದೃಷ್ಟಿ.  ಅವರೇ ಸಂದರ್ಶನವೊಂದರಲ್ಲಿ ಹೇಳಿದಂತೆ – “ನಾವು ಸೋಲುಗಳಿಂದ ಮುಂದೆ ಬರ್ತಾ ಇದೀವಿ.  ಬದುಕನ್ನ ಒಪ್ಕೊಬೇಕು.  ಬದುಕಬೇಕು ಚೆನ್ನಾಗಿ.  ಭೂಮಿ ಚೆನ್ನಾಗಿದೆ.  ಸುಂದರವಾಗಿದೆ.  ದೇವ್ರು ಇದ್ರೆ ನೋಡ್ಕೊಳ್ಳಿ, ಭೂಮಿ ಸತ್ಯ”.  ಮೈಸೂರು ಮಲ್ಲಿಗೆಯಿಂದ ತೆರೆದ ಬಾಗಿಲುವರೆಗೆ ಇದೇ ಅವರ ಜೀವನ ತತ್ವ ಎನ್ನಬಹುದು.  ಶಿಲಾಲತೆಯಲ್ಲಿ ಬರುವ ‘ಇಡದಿರು ನಿನ್ನ ಸಿಂಹಾಸನದ ಮೇಲೆ’ ಎಂಬ ಕವಿತೆ ಒಂದು ರೀತಿಯಲ್ಲಿ ಅವರ ಮ್ಯಾನಿಫೆಸ್ಟೋ ಕವಿತೆಯಾಗಿದೆ.

ಕೆ.ಎಸ್.ನ ಅವರ ಕಾವ್ಯದ ಬೆಳವಣಿಗೆಯ ದೃಷ್ಟಿಯಿಂದ ‘ತೆರೆದ ಬಾಗಿಲು’ಇನ್ನೊಂದು ಮಹತ್ವದ ತಿರುವು.  ನಿರಲಂಕಾರತೆ, ಸರಳತೆ, ಸಹಜತೆ, ನಾಟಕೀಯತೆ, ತೆರೆದ ಬಾಗಿಲು ಕವಿತೆಗಳ ಮುಖ್ಯ ಲಕ್ಷಣವಾಗಿದೆ.  ಪ್ರೀತಿಯ ವಸ್ತು ಕೂಡ ಇಲ್ಲಿ ಚಿಂತನೆಯ ನೆಲದಲ್ಲಿ ಮಂಡಿತವಾಗುತ್ತದೆ;  ಭಾವನೆಯ ನೆಲೆಯಲ್ಲಿ ಅಲ್ಲ.  ಮುಪ್ಪು, ಒಂಟಿತನ, ಸಾವು ಈ ಸಂಗ್ರಹದ ಮುಖ್ಯ ವಸ್ತುಗಳೆನ್ನಬಹುದು.  “ತೆರೆದ ಬಾಗಿಲಿನಲ್ಲಿ ಮನುಷ್ಯನ ಅಸ್ತಿತ್ವದ ಅಂಚಿನಲ್ಲಿ ನಿಂತು ಬದುಕಿನ ಬಾಗಿಲನ್ನೇ ಅಷ್ಟು ಓರೆಮಾಡಿ ಅದರಾಚಿನ ರಹಸ್ಯದ ಅನುಭವವಾಗುವಂತೆ ಮಾಡಿದ್ದಾರೆ” ಎಂಬುದು ಒಪ್ಪತಕ್ಕ ಮಾತು.

“ಇರುಳ ಬಾಗಿಲ ಮುಂದೆ ಹಣೆಯೊಡೆದ ಹಗಲಂತೆ

ಕೆಂಪಾಗಿ ಮುಗಿದಿತ್ತು ಒಂದು ಸಂಜೆ”

“ಅನಿಲ ಸೀಮೆಯಲಿ ಉರುಳಿ ಹೋಗುತಿದೆ

ಮಣ್ಣಿನೊಂದು ಮುತ್ತು”

“ಹುಚ್ಚಿನ ಬೇವಿನ ತಲೆಗೆ ಹಕ್ಕಿ ಹಾಡಿನ ಹೆಡಿಗೆ”

ಮುಂತಾದ ಕೆ.ಎಸ್.ನ ಅವರ ಚಿತ್ರಮಯವಾದ ಉಜ್ವಲ ಸಾಲುಗಳನ್ನು ಹಿಂದೆ ನೋಡಿದವರಿಗೆ, ‘ತೆರೆದ ಬಾಗಿಲು’ ಕವಿತೆಯ ಅಬ್ಬರವಿಲ್ಲದ ಕಣ್ಣುಕುಕ್ಕದ, ನಿರಾಡಂಬರ ಭಾಷೆ ಆಶ್ಚರ್ಯ ಹುಟ್ಟಿಸೀತು.  ಕವಿಯ ಶೈಲಿ ಮತ್ತು ಚಿತ್ತಾರಕ್ಕಿಂತ ವಸ್ತುವಿನ ಮೇಲೆ ನಮ್ಮ ಗಮನ ನೆಡುವಂತಾಗುವುದು ಇದರಿಂದಾಗಿಯೇ.  ತೆರೆದ ಬಾಗಿಲು ಕವಿತೆಯಲ್ಲಿ ದಿನನಿತ್ಯದ ರೂಢಿಮಾತಿನಲ್ಲಿ ಸಾವಿನಂತಹ ಸೂಕ್ಷ್ಮವನ್ನು ಚಿಂತಿಸುವ ಪ್ರಯತ್ನ ಅದ್ಭುತವಾಗಿದೆ. ಸಾವಿನ ಸ್ಪರ್ಶ ಯಜಮಾನ ತನ್ನ ಅನುಭಾವವನ್ನು ನೆಂಟನಿಗೆ ವಿವರಿಸುವಾಗ ಅದರ ಗಾಢತೆಯನ್ನು ಆದಷ್ಟು ತೆಳ್ಳಗಾಗಿಸಲು ಹಾಸ್ಯ, ಜಾಣತನ, ವ್ಯಂಗ್ಯಗಳನ್ನು ತನ್ನ ಅರಿವಿಲ್ಲದೆಯೇ ಬಳಸುತ್ತಾ ಹೋಗುತ್ತಾನೆ.  ಕವನ ಮನುಷ್ಯನ ದೌರ್ಬಲ್ಯದ ಮೂಲವನ್ನು ಹುಡುಕುತ್ತದೆ.  ಭೀತಿಯನ್ನು ಪ್ರಕಟಿಸುವ ನೆಪದಲ್ಲೇ ಹುದುಗಿಸುವ ಅವನ ವಿಚಿತ್ರ ಮನಸ್ಸನ್ನು ಕ್ರಮಕ್ರಮವಾಗಿ ತೆರೆಯುತ್ತಾ ಹೋಗುತ್ತದೆ.

ರೈಲ್ವೆ ನಿಲ್ದಾಣದ ಗಜಿಬಿಜಿಯಲ್ಲಿ ತಾಯಿ-ಮಗಳು-ಮಗುವಿನ ನಡುವಿನ ವಾತ್ಸಲ್ಯ ಅಭಿವ್ಯಕ್ತವಾಗುವ ರೀತಿ ರೈಲ್ವೆ ನಿಲ್ದಾಣದಲ್ಲಿ ಎಂಬ ಇನ್ನೊಂದು ಕವಿತೆಯಲ್ಲಿ ಪರಿಣಾಮಕಾರಿಯಾಗಿ ಬಂದಿದೆ.  ‘ಇವನ ಹುಟ್ಟಿದ ಹಬ್ಬ’ದಲ್ಲಿ ಮುಪ್ಪು ಒಂಟಿತನ ಮತ್ತು ಬಡತನದ ಸಂಗತಿ ಒಳಹೆಣಿಗೆ ಪಡೆದು ಅಬ್ಬರವಿಲ್ಲದೆಯೇ ವಿಷಾದದ ದನಿ ಹೊಮ್ಮುತ್ತದೆ.  ಆ ವಿಷಾದದ ನಡುವೆಯೂ ಶುಚಿಯಾದ ಬದುಕು ಮಾತ್ರ ನೀಡುವ ವಿಚಿತ್ರ ಸಮಾಧಾನವೂ ಇದೇ.

ಉಡುಗೊರೆಗಳಿಲ್ಲ; ಕೊಡುವವರಿಲ್ಲ ಉಟ್ಟಿದ್ದು

ಬೆಳ್ಳಗಿರುವುದೆ ಇವನಿಗೊಂದು ಹರುಷ.

ಅಡುಗೆಯೂ ಸುಲಭ, ಪಥ್ಯದ್ದು, ಎರಡರ ಜತೆಗೆ

ಇಂದಿನ ವಿಶೇಷ ಬೆಲ್ಲದ ಪಾಯಸ

ಒಟ್ಟಾರೆ ತೆರೆದ ಬಾಗಿಲು ಸಂಗ್ರಹ ಅದ್ಭುತವಾದ ಸ್ವಭಾವೋಕ್ತಿಯ ಕಾವ್ಯ.

‘ನಿರಾಶೆ’ ಬದುಕಿನ ಅರ್ಥವಲ್ಲ’ ಎನ್ನುವ ಕವಿ ಕೆ.ಎಸ್. ನರಸಿಂಹಸ್ವಾಮಿ, ಬದುಕಿನಲ್ಲಿ ಪ್ರೀತಿ ಇಟ್ಟವರು; ಬದುಕಿನಲ್ಲಿ ಪ್ರೀತಿ ಹುಟ್ಟಿಸುವ ಕಾವ್ಯ ಬರೆದವರು.  ವಿಕ್ಷಿಪ್ತಗೊಳ್ಳುತ್ತಿರುವ ಆಧುನಿಕ ಮನಸ್ಸಿಗೆ ಇಂಥ ಕಾವ್ಯದ ಅಗತ್ಯವನ್ನು ಒತ್ತಿ ಹೇಳಬೇಕಾದ್ದಿಲ್ಲ.

ಈ ಮಹಾನ್ ಕವಿ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ.

(ಆಧಾರ:  ಇಲ್ಲಿನ ಬಹಳಷ್ಟು ವಿಷಯಗಳಿಗೆ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಕೆ. ಎಸ್. ನರಸಿಂಹಸ್ವಾಮಿಗಳ ಕುರಿತ ಬರಹವನ್ನು ಆಧರಿಸಿದ್ದೇನೆ.)

ಫೋಟೋ ಕೃಪೆ: ಕೆ. ಎಸ್. ನರಸಿಂಹಸ್ವಾಮಿ ‘ಸಮಗ್ರ ವಾಙ್ಮಯ’ ಕೃತಿಯ ಮುಖಪುಟ

Tag: K.S. Narasimhaswamy

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)