ಗಳಗನಾಥ ಎಂದೊಡನೆ ನಮಗೆ ನೆನಪಾಗುವುದು ಹಾವೇರಿ ಸಮೀಪದ ಒಂದು ಗ್ರಾಮ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ಅಧಿದೇವತೆಯ ಹೆಸರೇ ಆ ಗ್ರಾಮಕ್ಕೆ ಬಂದು ಗಳಗನಾಥವೆಂದಾಯಿತು. ಈ ಪ್ರದೇಶದಲ್ಲಿ ತುಂಗಭದ್ರಾ ಮತ್ತು ವರದಾ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’. ಈ ಪ್ರಸಿದ್ಧವಾದ ಸ್ಥಳದಲ್ಲಿ 1869ನೇ ಇಸವಿ ಜನವರಿ 5 ರಂದು ಜನಿಸಿ ಕನ್ನಡ ನಾಡಿಗೆ ಅಪಾರವಾದ ಸೇವೆಯನ್ನಿತ್ತವರು ’ಗಳಗನಾಥ’ರು. ಇವರ ಮೂಲ ಹೆಸರು ವೆಂಕಟೇಶ ತಿರಕೋಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತಂದೆ ತ್ರಿವಿಕ್ರಮಭಟ್ಟರು ತಿರಕೋ ಭಟ್ಟರೆಂದೇ ಪ್ರಸಿದ್ಧರಾಗಿದ್ದವರು. ’ವೆಂ’ಕಟೇಶ’ರು ತಮ್ಮ ಸಾಹಿತ್ಯ ರಚನೆಯಲ್ಲಿ ತಮ್ಮ ಊರಿನ ಹೆಸರನ್ನೇ ಅನ್ಯರ್ಥನಾಮವಾಗಿ ಬಳಸಿಕೊಂಡು ’ಗಳಗನಾಥ’ರೆಂದೇ ಪ್ರಸಿದ್ಧರಾದರು.
ತಮ್ಮ ಶಿಕ್ಷಣವನ್ನು ಮುಗಿಸಿದ ಗಳಗನಾಥರು ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ತಮ್ಮ ಶಿಸ್ತು ಮತ್ತು ಪ್ರಾಮಾಣಿಕತೆಗಳಿಂದ ಅವರು ಎಲ್ಲೆಡೆ ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿನಿಂದ 1907ರಲ್ಲಿ ಸ್ವಯಂ ನಿವೃತ್ತಿ ಪಡೆದು ಹಾವೇರಿಯ ಸಮೀಪದ ಅಗಡಿಗೆಯಲ್ಲಿ ಭಿ.ಪ. ಕಾಳೆಯವರ ಸಹಕಾರದಿಂದ ಒಂದು ಮುದ್ರಣಾಲಯವನ್ನು ತೆರೆದು ಕೆಲವೇ ದಿನಗಳಲ್ಲಿ ’ಸದ್ಭೋಧ ಪತ್ರಿಕೆ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಸಮೂಹ ಸಂವಹನ ಮಾಧ್ಯಮಗಳ ವೈಜ್ಞಾನಿಕ ಕಲ್ಪನೆ ಇಲ್ಲದಿದ್ದ ಅಂದಿನ ದಿನಮಾನಗಳಲ್ಲಿ ‘ಸದ್ಬೋಧ ಚಂದ್ರಿಕೆ’ಯಂಥ ಒಂದು ಪತ್ರಿಕೆಯನ್ನು ಹೊರಡಿಸಿ ತನ್ಮೂಲಕ ಸದಭಿರುಚಿಯ ಕಥಾನಕಗಳನ್ನು ಪ್ರಕಟಿಸಿ ಕನ್ನಡ ಜನರಲ್ಲಿ ವಾಚನಾಭಿರುಚಿ ಬೆಳೆಸಿದ ಶ್ರೇಯಸ್ಸು ಗಳಗನಾಥರಿಗೆ ಸಲ್ಲುತ್ತದೆ. ಸದ್ಭೋಧ ಚಂದ್ರಿಕೆಯ ವಿಷಯಪಟ್ಟಿ ಸಂವಹನದ ವಸ್ತುವಿನ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಯೋಗಾಭ್ಯಾಸ, ನೀತಿ ಪ್ರಧಾನ ಕಥಾನಕ, ಕುಟುಂಬ ಜೀವನ, ದಾಂಪತ್ಯ ಇತ್ಯಾದಿ. ಇವೆಲ್ಲಕ್ಕೂ ಮಿಗಿಲಾಗಿ ‘ಸದ್ಭೋಧ ಚಂದ್ರಿಕೆ’ ಒಂದು ಸತ್ವಪೂರ್ಣವಾದ ಮತ್ತು ಚಾರಿತ್ರ್ಯ ನಿರ್ಮಾಣದ ಕಾರ್ಯ ಮಾಡಬೇಕು ಎನ್ನುವುದು ಗಳಗನಾಥರ ಮನೀಷೆಯಾಗಿತ್ತು. ಜನಕಲ್ಯಾಣ, ಕನ್ನಡಿಗರ ಅಭಿವೃದ್ಧಿ, ಸಚ್ಚಾರಿತ್ರ್ಯವುಳ್ಳ ಉಜ್ವಲ ಭವಿಷ್ಯದ ಜನಾಂಗರೂಪಣ ಇಂಥ ಪತ್ರಿಕೆಗಳ ಮೂಲಕ ಸಾಧ್ಯವಾದೀತು ಎನ್ನುವ ಲವಲವಿಕೆ ಗಳಗನಾಥರಿಗಿತ್ತು. ಅಂದಿನ ದಿನಗಳಲ್ಲಿ 27 ಜಿಲ್ಲೆಗಳ 1200 ಊರುಗಳಲ್ಲಿನ ನಾಲ್ಕು ಸಹಸ್ರಕ್ಕೂ ಹೆಚ್ಚು ಚಂದಾದಾರರನ್ನು ಈ ಪತ್ರಿಕೆ ತಲುಪುತ್ತಿತ್ತು ಎಂದು ತಿಳಿದು ಬರುತ್ತದೆ. ಗಳಗನಾಥರು ತಮಗೆ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿಂದ ಒಂದು ಪಾಠಶಾಲೆಯನ್ನೂ ತೆರೆದರು.
ಗಳಗನಾಥರು 1898ರ ವರ್ಷದಲ್ಲೇ ತಮ್ಮ ಮೊದಲ ಕಾದಂಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸಿದ್ದರು. ತಮ್ಮ ಮಾಸಪತ್ರಿಕೆಯ ಮುಖಾಂತರ ತಾವು ಬರೆದ ಕಾದಂಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತಂತ್ರ ಕಾದಂಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದಂಬರಿಗಳನ್ನೂ ಕನ್ನಡಕ್ಕೆ ರೂಪಾಂತರಿಸಿದ್ದರು. ಹಿಂದೂ ಸಂಸ್ಕೃತಿ ಮತ್ತು ವೈದಿಕ ಸಾಹಿತ್ಯಗಳಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು.
ಕನ್ನಡ ಸಾಹಿತ್ಯ ಅವನತಿಯ ಅಂಚಿನಲ್ಲಿದ್ದ ಸಂದರ್ಭದಲ್ಲಿ ತಮ್ಮ ಕಾದಂಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ. ಅವರ ಬರಹ ಹೊಸಗನ್ನಡದ ಲೇಖಕರಿಗೆ ಮಾದರಿಯಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಗಳಗನಾಥರ ಬರಹದ ವೈಖರಿ ಪಂಡಿತ ಮತ್ತು ಪಾಮರರಿಬ್ಬರನ್ನೂ ರಂಜಿಸುತ್ತಿತ್ತು. ಅವರ ಕಾದಂಬರಿಗಳ ರಮ್ಯ ಕಥಾವಸ್ತು ಎಲ್ಲರ ಮನಸೆಳೆಯುತ್ತಿತ್ತು. ಇವರ ಕಾದಂಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಗಳು ವ್ಯಕ್ತವಾಗಿದೆ. ಅವರು ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು. ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯಪೂರ್ಣದದ್ದು. ಸುಮಾರು ಐವತ್ತು ಕೃತಿಗಳನ್ನು ರಚಿಸಿದ ಇವರ ಬರಹಗಳನ್ನು ಕಾದಂಬರಿಗಳು, ಪೌರಾಣಿಕ ಕಥೆಗಳು, ಚರಿತ್ರೆ ಮತ್ತು ಪ್ರಬಂಧಗಳಾಗಿ ವಿಂಗಡಿಸಬಹುದಾಗಿದೆ. 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು 8 ಪ್ರಬಂಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ 13 ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.
ಪದ್ಮನಯನೆ, ಕುಮುದಿನಿ ಅಥವಾ ’ಬಾಲಕ್ಕೆಬಡಿದಾಟ’, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮುಂತಾದವುಗಳು ಇವರ ಸ್ವತಂತ್ರ ಕಾದಂಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದಂಬರ ಚರಿತ್ರ, ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮುಂತಾದವುಗಳು ಇವರ ಪೌರಾಣಿಕ ಕಥೆಗಳು. ದಾಂಪತ್ಯ, ಕುಟುಂಬ, ಸುಂದರಲೇಖ, ಸಮುಚ್ಚಯ, ನಿಬಂಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಇವು ಪ್ರಬಂಧಗಳು.
ತಮ್ಮ ಜೀವನವನ್ನೆಲ್ಲಾ ಕಾದಂಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆದಾಡಿದರು. ಗಳಗನಾಥರು ತಮ್ಮ ಪತ್ರಿಕೆಯ ಮುಖಾಂತರ ಅನೇಕ ಗಣ್ಯರ ಸಂಪರ್ಕ ಸಂವಹನ ಸ್ಥಾಪಿಸಿಕೊಂಡಿದ್ದರು. ಟಿ ಎಸ್ ವೆಂಕಣ್ಣಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಹೊಸಕೆರೆ ಚಿದಂಬರಯ್ಯ, ಡಿ ವಿ ಗುಂಡಪ್ಪ, ಎ. ಆರ್. ಕೃಷ್ಣಶಾಸ್ತ್ರಿ, ದೇವುಡು, ಬಿ.ಎಂ.ಶ್ರೀ, ಡಿ. ಕೆ ಭಾರದ್ವಾಜ ಹೀಗೆ ಅನೇಕರು ಅವರ ಸಾಲದ ಹೊರೆ ಇಳಿಸಲು ನೆರವಾದರು. ಇವರಲ್ಲಿ ಅನೇಕರು ಗಳಗನಾಥರನ್ನು ತಮ್ಮ ಗುರುಗಳೆನ್ನುವಷ್ಟು ಪೂಜ್ಯತೆಯಿಂದ ಕಾಣುತ್ತಿದ್ದರೆಂದು ತಿಳಿದುಬರುತ್ತದೆ.
ಗಳಗನಾಥರ ವ್ಯಕ್ತಿತ್ವ ಧರ್ಮಪ್ರವೃತ್ತಿಯಿಂದ ಓತಪ್ರೋತ. ಆದರೆ ಅವರ ಪ್ರತಿಭೆ ಹೊಸಸೃಷ್ಟಿಯ ಸಂಕೇತ. ಅವರನ್ನು ಕಾದಂಬರಿಕಾರ ಎಂದು ಕನ್ನಡಿಗರು ಗುರುತಿಸಿದ್ದು ಅವರಿಗೆ ಸಂತೋಷಕೊಟ್ಟ ವಿಷಯವಾಗಿತ್ತು. ಅವರೇ ವಿವರಿಸುವಂತೆ “ಕರ್ನಾಟಕವು ಪ್ರಾಮುಖ್ಯವಾಗಿ ನನ್ನನ್ನು ಕಾದಂಬರಿಕಾರನೆಂದು ಗುರುತಿಸುತ್ತಿರುವುದು ನನಗೆ ಅಭಿಮಾನದ ಸಂಗತಿಯು.”
ಕನ್ನಡ ನಾಡಿಗಾಗಿ ಅಪರಿಮಿತವಾಗಿ ದುಡಿದ ಗಳಗನಾಥರು 22 ಏಪ್ರಿಲ್ 1942ರ ವರ್ಷದಲ್ಲಿ ಈ ಲೋಕವನ್ನಗಲಿದರು. ಗಳಗನಾಥರು ತಾವು ಮಾಡಿದ ಕಾರ್ಯದಿಂದ ಕನ್ನಡನಾಡಿನಲ್ಲಿ ನಿತ್ಯಸ್ಮರಣೀಯರೆನಿಸಿದ್ದಾರೆ.
Tag: Galaganatha
ಪ್ರತಿಕ್ರಿಯೆ