ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ವಿವಿಧಮುಖೀ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರ ಬಾಲ್ಯದ ವಸಾಹತು ಸಂದರ್ಭದ ಅನುಭವಗಳನ್ನು ‘ನನ್ನ ಬದುಕು-ಬರಹ’ ಎಂಬ ಲೇಖನದಲ್ಲಿ ಅವರೇ ಸೂಚಿಸಿದ್ದಾರೆ. ಅಂಥ ವಸಾಹತು ಸಂದರ್ಭದ ಸಂವೇದನೆಯುಳ್ಳ ಕಂಬಾರರು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅನಂತರ 1968ರಿಂದ 1969ರವರೆಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿಯೂ, 1971ರಿಂದ 1991ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ನಂತರ 1992ರಿಂದ 1998ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ, ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿಯೂ, ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಹೀಗೆ ಅವರು ವಿವಿಧ ರಂಗಗಳಲ್ಲಿ ಸಮಸ್ತರಾಗಿ ಎಲ್ಲೆಲ್ಲಿಯೂ ಸಂದಿದ್ದಾರೆ.
ಕನ್ನಡದ ಮಹತ್ವದ ಕವಿಗಳು, ನಾಟಕಕಾರರು, ಜಾನಪದ ತಜ್ಞರು ಹಾಗೂ ಉತ್ತಮ ಆಡಳಿತಗಾರರಾದ ಕಂಬಾರರು ಸುಮಾರು ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ. ವಿಶ್ವದಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮೂರು ಸಾವಿರ ಪುಟಗಳಿಗೂ ಅಧಿಕವಾದ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.
ಕಂಬಾರರ ಐದು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಂಬಾರರ ‘ಜೋಕುಮಾರಸ್ವಾಮಿ’ ಭಾರತದ ಅತ್ಯುತ್ತಮ ನಾಟಕವೆಂದು ‘ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದಿದೆ. ‘ಜೈ ಸಿದ್ಧ ನಾಯಕ’ ವರ್ಧಮಾನ್ ಪ್ರಶಸ್ತಿ ಪಡೆದಿದೆ. ‘ಸಾವಿರ ನೆರಳು’ ಕವನ ಸಂಕಲನ ಕೇರಳ ರಾಜ್ಯದ ‘ಆಶಾನ್’ ಪ್ರಶಸ್ತಿ ಪಡೆಯಿತು. ಕೆ.ವಿ. ಶಂಕರೇಗೌಡ ಪ್ರಶಸ್ತಿ, ಭಾರತ ನಾಟಕ ಆಕಡೆಮಿಯ ‘ಶ್ರೇಷ್ಠ ನಾಟಕಕಾರ’ ಪ್ರಶಸ್ತಿ, ಆಂಧ್ರ ಸರ್ಕಾರದ ‘ಅತ್ಯುತ್ತಮ ಕವಿ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಕ್ಷೇತ್ರ ಸಾಧನೆಗೆ ಹಲವು ಪ್ರಶಸ್ತಿ ಹೀಗೆ ಪ್ರಶಸ್ತಿಗಳ ಸುರಿಮಳೆ ಕಂಬಾರರಿಗೆ ದೊರೆತಿದೆ. ಇವೆಲ್ಲಕ್ಕೂ ಮಿಗಿಲಾಗಿ ಅವರಿಗೆ ಸಾಹಿತ್ಯದ ಮೇರುಪ್ರಶಸ್ತಿಯಾದ ‘ಜ್ಞಾನಪೀಠ’ ಸಂದಿದೆ.
ಸಾಹಿತ್ಯ, ಜಾನಪದ, ಸಂಗೀತ, ನಾಟಕ ಜೊತೆಗೆ ಸಿನಿಮಾದಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಕಂಬಾರರು. ಇವರು 5 ಚಲನಚಿತ್ರಗಳನ್ನೂ, 8 ಸಾಕ್ಷಗಳನ್ನೂ ತಯಾರಿಸಿದ್ದಾರೆ. ಅನೇಕ ಚಲನಚಿತ್ರಗಳಿಗೆ ಹಾಗೂ ಸಾಕ್ಷಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ‘ಕಾಡುಕುದುರೆ’ ಭಾರತೀಯ ಪನೋರಮವನ್ನು ಪ್ರವೇಶಿಸಿತು ಹಾಗೂ ಉತ್ತಮ ಹಿನ್ನಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. 1981ರಲ್ಲಿ ‘ಸಂಗೀತಾ’ ಚಿತ್ರ ರಾಜ್ಯಪ್ರಶಸ್ತಿ ಪಡೆಯಿತು. ಸಂಭಾಷಣೆ, ನಿರ್ದೇಶನ, ಸಂಗೀತ ನಿರ್ದೇಶನ, ಉತ್ತಮ ಚಿತ್ರಕತೆ ಈ ಎಲ್ಲ ಪ್ರಶಸ್ತಿಗಳನ್ನೂ ಕಂಬಾರರು ಪಡೆದಿದ್ದಾರೆ. ಇನ್ನೂ ತುಂಬಾ ತುಂಬಾ ಇದೆ. ಹೇಳುತ್ತಾ ಹೋದರೆ, ಅದರಲ್ಲೇ ಲೇಖನ ತುಂಬಿ ಹೋದೀತು!
ಸುಮಾರು 1963ರಲ್ಲಿ ಹುಟ್ಟಿಕೊಂಡ ಕಂಬಾರರ ಕವಿತೆ ‘ಹೇಳತೇನ ಕೇಳ’ ಒಂದು ರೀತಿಯಲ್ಲಿ ತಮ್ಮ ಸಮಗ್ರ ಕಾವ್ಯವನ್ನು ಬಣ್ಣಿಸಿದಂತಿದೆ. ಒಂದು ಪ್ರತಿಭಾವಂತ ಸಂವೇದನೆ ಏನೆಲ್ಲಾ ಬಗೆಯಬಹುದೋ ಅದೆಲ್ಲವನ್ನೂ’ಹೇಳತೇನ ಕೇಳ’ ಪ್ರತಿಮೆ ತನ್ನಲ್ಲಿರಿಸಿಕೊಂಡಿರುವುದರಿಂದಲೇ ಕಂಬಾರರು ಮತ್ತೆ ಮತ್ತೆ ಪುರಾಣಗಳನ್ನು ಹೆಕ್ಕಿ ಮರು ಸೃಷ್ಟಿಗೆ ತೊಡಗುತ್ತಾರೆ. ‘ಋಷ್ಯಶೃಂಗ’, ‘ಹುಲಿಯ ನೆರಳು’ ನಾಟಕಗಳಲ್ಲೂ ‘ಕರಿಮಾಯಿ’ ಕಾದಂಬರಿಯಲ್ಲೂ ಇದೇ ಪುರಾಣ ಮತ್ತೂ ಬೇರೆಯದೇ ಆದ ಆಯಾಮಗಳ ವಿಶ್ಲೇಷಣೆ ಇದೆ. ‘ಹೇಳತೇನ ಕೇಳ’ದಲ್ಲಿ ಅತ್ಯಂತ ಅಮೂರ್ತವಾದ ವಸಾಹತು ಸಂಸ್ಕೃತಿ ತಂದ ಸಂಕೀರ್ಣವಾದ ಬದುಕಿನ ನೋವುಗಳನ್ನು ವ್ಯಕ್ತಪಡಿಸಲು ಕಂಬಾರರು ಗಟ್ಟಿದನಿಯಲ್ಲಿ ಹಾಡುವ ಜಾನಪದ ಲಾವಣಿಯ ಮಾಧ್ಯಮವನ್ನು ಅಭಿವ್ಯಕ್ತಿಗೆ ಶೋಧಿಸಿಕೊಂಡಿರುವುದು ಕವಿತೆ ಹೊರಡಿಸುವ ಒಟ್ಟು ಧ್ವನಿ ಪರಂಪರೆಗೆ ಅನನ್ಯತೆಯನ್ನು ಒದಗಿಸಿಕೊಟ್ಟಿದೆ
ಆಧುನಿಕ ನಾಗರೀಕ ಪ್ರಪಂಚವು ಗ್ರಾಮದ ಸಹಜತೆಗಳನ್ನು ಇಲ್ಲವಾಗಿಸುವ ಹಾಗೂ ಹಳ್ಳಿಯ ಅನನ್ಯತೆಗಳ ಮೇಲೆ ಸವಾರಿ ಮಾಡುವ ಪ್ರಕ್ರಿಯೆಗಳನ್ನು ಕಂಬಾರರು ‘ಕರಿಮಾಯಿ’ ಕಾದಂಬರಿಯಲ್ಲಿ ಮುಖಾಮುಖಿಯಾಗಿಸಿದ್ದಾರೆ. ನಾಗರೀಕ ಪ್ರಪಂಚದ ಬಗೆಗಿನ ಆಕರ್ಷಣೆಗಳ ಮತ್ತು ಗ್ರಾಮದ ನೈಜತೆಗಳ ಮುಖಾಮುಖಿಯಿಂದ ಎದುರಾಗುವ ದ್ವಂದ್ವಗಳ ಪುರಾಣದಂತೆ ‘ಕರಿಮಾಯಿ’ ಕಾದಂಬರಿ ಕಾಣುತ್ತದೆ. ಈ ಬಗೆಯ ದ್ವಂದ್ವಗಳು ‘ಹುಲಿಯ ನೆರಳು’. ‘ನಾಯಿಕತೆ’, ‘ಋಷ್ಯಶೃಂಗ’ ನಾಟಕಗಳಲ್ಲಿ ಹಾಗೂ ಅವರ ಅನೇಕ ಕವಿತೆಗಳಲ್ಲಿ ಬೇರೆ ಬೇರೆ ಅಯಾಮಗಳಲ್ಲಿ ಮೈದಾಳುವ ಕ್ರಮವು ವಿಶಿಷ್ಟವಾಗಿದೆ.
ಕಂಬಾರರ ಕೃತಿಗಳ ಮತ್ತೊಂದು ಮುಖ್ಯ ನೆಲೆಯೆಂದರೆ ಜಮೀನ್ದಾರಿ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಒಡಕುಗಳನ್ನು ಕುರಿತ ಚಿಂತನೆ. ತನ್ನ ದರ್ಪ ಮತ್ತು ಅಹಂಕಾರಗಳಿಂದ ನಿರ್ಮಾಣಮಾಡುವ ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯ, ಅದರ ಪ್ರಭಾವ ಪರಿಣಾಮಗಳ ಸ್ವರೂಪವನ್ನು ‘ಜೋಕುಮಾರಸ್ವಾಮಿ’, ‘ನಾಯೀಕತೆ’, ‘ಜೈ ಸಿದ್ಧನಾಯಕ’ ಮೊದಲಾದ ಕೃತಿಗಳಲ್ಲಿ ವಿವೇಚಿಸುತ್ತಾರೆ.
‘ಸಾವಿರದ ನೆರಳು’ ಸಂಕಲನದ ಅನೇಕ ಕವನಗಳಲ್ಲಿ ‘ನೆರಳು’ ಮತ್ತು ‘ಕಾಮ’ ಮೂಲಪ್ರತಿಮೆಗಳಾಗಿ ಮೈ ಪಡೆಯುತ್ತವೆ. ಹೊಸ ಸಂಸ್ಕೃತಿಯೊಂದು ದೇಸೀ ಸಂಸ್ಕೃತಿಯ ಮೇಲೆ ನಡೆಸಿದ ಅನೈತಿಕ ದಾಳಿಯಿಂದ ದೇಸೀ ಪರಿಸರ ಬರಡಾಗುವ ಬಗೆಯನ್ನು ಕಂಬಾರರ ಕಾವ್ಯ ಚಿಂತನೆಗೆ ಗುರಿಪಡಿಸುತ್ತದೆ. ಉದಾಹರಣೆಗೆ ‘ಏಕಕಾಲಕ್ಕೆ ಇಬ್ಬರಿಗೆ ಮಗ ಆಗುವ’ ದುರಂತಗಳ ಪ್ರಶ್ನೆಯನ್ನು ನೋಡಬಹುದು. ಇಬ್ಬರಿಗೆ ಮಗನಾಗಿ ಬದುಕುವ ಕಷ್ಟಗಳ ಪರಂಪರೆಯು ಆಕ್ರಮಣಶೀಲ ಸಂಸ್ಕೃತಿಯ ಆಗಮನದಿಂದ ಎದುರಾಯಿತೆಂದು ಕಂಬಾರರ ಕೃತಿಗಳ ಹಿಂದಿರುವ ತಾತ್ವಿಕ ಚಿಂತನೆಯಾಗಿದೆ. ಇಂಥ ಆತಂಕಗಳಿಂದ, ಪಶ್ಚಿಮ ಸಂಸ್ಕೃತಿಯ ಸಹವಾಸದ ಫಲವಾಗಿ ಬದುಕಿನ ಎಲ್ಲ ಮಟ್ಟದ ಸಂದರ್ಭಗಳಲ್ಲಿ ಉಂಟಾದ ಅಧಃಪತನಗಳನ್ನು ಕಂಬಾರರ ಕಾವ್ಯ ವಿಶ್ಲೇಷಣೆಗೆ ಗುರಿಪಡಿಸುತ್ತದೆ. ಅಂಥ ವಿಶ್ಲೇಷಣೆ ‘ಸಾವಿರದ ನೆರಳು’, ‘ಬೆಳ್ಳಿಮೀನು’, ‘ಅಕ್ಕಕ್ಕು ಹಾಡುಗಳೆ’ ಕವನ ಸಂಕಲನಗಳಲ್ಲಿ ಬೆಳೆಯುತ್ತದೆ.
‘ಗುಡು ಗುಡು ಗುಮ್ಮ’ ಕವನದ ವಸ್ತು ಪಶ್ಚಿಮ ಸಂಸ್ಕೃತಿಯ ಸಂಬಂಧದಿಂದ ಎದುರಾದ ಅಧಃಪತನ. ಕಂಬಾರರೇ ಸೂಚಿಸುವಂತೆ, “ಪಶ್ಚಿಮ, ಅದರ ಸಹವಾಸದ ಫಲದ ವಾಣಿಜ್ಯ ಸಂಸ್ಕೃತಿ, ಅದಕ್ಕೆ ಮನೆ, ಮಠ ಕೆಡವಿ ಮಾಡಿದ ರಸ್ತೆ, ಅದರ ಪರಿಣಾಮ ರಾಜ್ಯ, ವೃತ್ತಿ, ಸಮಾಜ, ಸಂಸ್ಕೃತಿ, ಕುಟುಂಬಗಳ ಸಂಬಂಧದ ಅಧಃಪತನ ಇದರ ವಸ್ತು”.
ಕಿಟಕಿಯ ಗಾಜು ಒಡೆಯುತ್ತಿವೆ, ಮುರಿಯುತ್ತಿವೆ
ಬಾಗಿಲು, ಗೋಡೆ ಬಿರಿಯುತ್ತಿವೆ ಬರುತ್ತಿದೆ
ಮನೆಯಲ್ಲೇ ನಮ್ಮ ಸದರಿನಲ್ಲೇ ಗುಮ್ಮ
ನುಗ್ಗುತ್ತಿದೆ! ಮನೆಯಲ್ಲೇ ಹಾಯುತ್ತಿದೆ
ಮನೆಯನ್ನೆಲ್ಲ ರಸ್ತೆ ನಾಡುತ್ತದೆ, ಹೆಮ್ಮೆ ಪಡುತ್ತದೆ.
ನಾನು?
ಕಸದ ಗುಂಡಿಯಲ್ಲಿ ಕಳಕೊಂಡ ವಿಳಾಸದ
ಚೀಟಿ ಹುಡುಕುತ್ತ
ಹುಡುಕುತ್ತ
ಹುಡುಕುತ್ತಾ ಅಲೆದಾಡುತ್ತೇನೆ….
ಈ ಮೇಲಿನ ಉದ್ದರಣೆಯಲ್ಲಿ ‘ಗುಡು ಗುಡು ಗುಮ್ಮ’ನ ದಮನಕಾರೀ ಶಕ್ತಿಯ ಪರಿಣಾಮದ ಚಿತ್ರಗಳನ್ನು ಕಾಣುತ್ತೇವೆ. ‘ದಿಲ್ಲಿಯೆಂಬ ಕ್ಯಾಬರಿ’, ‘ಇಟ್ಟಿಗೆಯ ಪಟ್ಟಣ’, ‘ನಾಡು-ಕಾಡು’, ‘ಸೈನಿಕರ ಕೋವಿಯ ಹಾಡು’, ‘ಸೈನಿಕರ ಸಿಟಿ ಬಗೆಗಿನ ಹಾಡು’, ‘ಶಿವಾಪುರದ ಹಾಡು’, ‘ಭಾರತಿ’, ‘ಕೇಳೆನ್ನ ದೇಶವೆ’ ಮೊದಲಾದ ಕವಿತೆಗಳಲ್ಲಿ ನಗರ ಮತ್ತು ಗ್ರಾಮಸಂಸ್ಕೃತಿಗಳ ಸಂಘರ್ಷ ಮೈಪಡೆಯುತ್ತವೆ.
ಸ್ಥಳೀಯ ಪುರೋಹಿತ ವ್ಯವಸ್ಥೆ ಮತ್ತು ಕಮ್ಯುನಿಸ್ಟ್ ವಿರೋಧಿ ನಿಲುವುಗಳು ಕಂಬಾರರ ‘ತಕರಾರಿನವರು’ ಮತ್ತು ‘ಸಾವಿರದ ನೆರಳು’ ಕವನಗಳಲ್ಲಿ ಮುಖ್ಯ ಬಿಟ್ಟಿಯಾಗಿ ಮೈಪಡೆಯುತ್ತವೆ. ‘ಮಾವೊತ್ಸೆತುಂಗನಿಗೆ’ ಕವಿತೆಯಲ್ಲಿ ಭಾರತಾಂಬೆಯ ಚಿತ್ರವನ್ನೇ ಹೀಗೆ ನೋಡುತ್ತಾರೆ..
ನಮ್ಮ ಭಾರತಾಂಬೆ, ರೂಪಾಯಾಗಲ ಕುಂಕುಮದಾಕಿ
ಕೈತುಂಬ ಹಸಿರುಬಳೆ ಕುಪ್ಪಸದಾಕಿ,
ಒಬ್ಬರ ಕೈಬೆರಳಿಗೆ ಗುರಿಯಾಗದೆ ಮರ್ಯಾದೆಯೊಳಗೆ ಬಾಳಿದಾಕಿ
ಮುಖದಗಲ ಪುರಾಣಗತಿಯ ಸೆರಗು ತೂಗಿ ಕಣ್ಣು ಕಾಣಿಸದಾಕಿ
ಈ ಮೇಲಿನ ಸಾಲುಗಳಲ್ಲಿ ಭಾರತಾಂಬೆಯ ಭಾವುಕ ಚಿತ್ರವನ್ನು ಪ್ರಕಟಿಸುತ್ತಲೆ, ಅವಳ ನಂಬಿಕೆ, ಕಲ್ಪನೆಗಳನ್ನು ವಿಡಂಬನೆಗೆ ಗುರಿಪಡಿಸಲಾಗಿದೆ. ಹಾಗೆಯೇ ಭಾರತಾಂಬೆಯ ಮೇಲೆ ಕಣ್ಣು ಹಾಕಿದೆಯೋ ಕೀಚಕನ ಗತಿಯೇ ನಿನಗೆಂದು ಮಾವೊತ್ಸೆಂಗನಿಗೆ ಕಟ್ಟೆಚ್ಚರದ ಮಾತನ್ನೂ ಕವನ ಭಿತ್ತರಿಸುತ್ತದೆ.
‘ಗಂಗಾಮಾಯಿ’ ಊರ ಕೆರೆಯ ಹೆಸರು. ಕೆರೆ, ಈ ಪ್ರತಿಮೆಯೇ ಜಡಾವಸ್ಥೆಗಳನ್ನು ಧ್ವನಿಸುವಂಥದ್ದು. ಇದು ಹರಿಯಬೇಕಾದ ನೀರು ಕೆರೆಯಾಗಿ ಸ್ಥಗಿತಗೊಂಡ ಸ್ಥಿತಿಯನ್ನು ಸಂಕೇತಿಸುತ್ತದೆ. ಪಾಪಗಳನ್ನು ತೊಳೆಯುವ ಗಂಗೆ ಹರಿಯಲಾಗದೆ ಮಡುಗೂಡು ಪಾಪಗಳ ಆಗರವಾದ ಸ್ಥಿತಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ಗಂಗೆಯ ಒಡಲಿನಲ್ಲಿ ನಡೆಯುವ ದೈನಂದಿನ ಕ್ರಿಯೆಗಳು, ಅನ್ಯಾಯಗಳು, ಪಾಪಕರ ಘಟನೆಗಳಿಂದ ಕೃತ್ಯಗಳಿಂದ ಗಂಗೆಯೂ ಮಲಿನಗೊಂಡ ಸ್ಥಿತಿಯನ್ನು ಪ್ರಕಟಿಸುತ್ತ ಸ್ಥಳೀಯ ಸಂಸ್ಕೃತಿಯ ಮಲಿನಾವಸ್ಥೆಗಳನ್ನು ಎದುರಾಗಿಸುವುದು ‘ಗಂಗಾಮಾಯಿ’ ಕವಿತೆಯ ಅನನ್ಯತೆಯಾಗಿದೆ. ‘ಎಲ್ಲ ಬಗೆಯ ಕೊಳೆ, ಪಾಪಗಳನ್ನು ತೊಳೆದು ಶುಭ್ರಗೊಳಿಸಬೇಕಾದ ಗಂಗೆ ಅಶುಚಿಯಾಗಿ ಅಶುಭ್ರಳಾಗಿ ಕೊಳೆತು ಹೀನಾವಸ್ಥೆಗೆ ಒಳಗಾದುದರ ಬಗೆಗೆ ಇಲ್ಲಿ ಒಮ್ಮೆಗೆ ವಿಷಾದ ಮತ್ತು ವ್ಯಂಗ್ಯ ಪ್ರಕಟವಾಗುತ್ತದೆ. ಮಡುಗಟ್ಟಿದ ಪರಂಪರೆಯ ಮೌಲ್ಯಗಳನ್ನು ಹಿಡಿದಿಡಲು ಕಂಬಾರರ ಸಂವೇದನೆ ಸೃಷ್ಟಿಸುವ ರೂಪಕ ಪ್ರತಿಮೆಗಳು ಓದುಗನನ್ನು ಒಮ್ಮೆಗೆ ದಂಗುಬಡಿಸುತ್ತವೆ.
‘ಚಕೋರಿ’ಯನ್ನು ಓದುತ್ತ ಹೋದಂತೆ ಕೃತಿಯಲ್ಲಿ ಅಭಿವ್ಯಕ್ತಗೊಂಡಿರುವ ಜೀವನಾನುಭವ, ದೇಸೀ ಸಂಸ್ಕೃತಿ, ನಂಬಿಕೆ-ಆಚರಣೆ, ಮಾಟ-ಮಂತ್ರ, ಕನಸು-ಕಲ್ಪನೆ, ತಂತ್ರ-ಭಾಷಿಕ ನೆಲೆಗಳು ಓದುಗನನ್ನು ಬೆಚ್ಚಿ ಬೀಳಿಸುತ್ತವೆ. ಆದಿಕಾಲದ ಕೃಷಿ, ಕುಟುಂಬ, ವಿದ್ಯೆ, ಕಲೆ, ಸಾಂಸ್ಕೃತಿಕ ರಾಜಕೀಯ ಜಿಜ್ಞಾಸೆಗಳು ‘ಚಕೋರಿ’ಯಲ್ಲಿ ಮುಖ್ಯವಾಗಿವೆ. ಅಖಂಡತೆಯನ್ನು ಒಡೆದರೆ ಎದುರಾಗುವ ಅನಾಹುತಗಳನ್ನು ಚಕೋರಿ ಧ್ವನಿಸುತ್ತಾ, ಅಂಥ ಅನಾಹುತಗಳನ್ನು ದಾಟಿ ಪ್ರತಿಬಿಂಬಗಳೆಲ್ಲವೂ ಬಿಂಬಗಳಲ್ಲಿ ಐಕ್ಯವಾಗುವ, ಬಯಲು ನಿರ್ಬಯಲಾಗುವ ಕಡೆಗೆ ಚಕೊರಿಯ ಶೋಧ ನಡೆಯುತ್ತದೆ.
ಚಂದ್ರಾಮನಂಬೂವ ಕನ್ನಡಿ ಮಾಡಿ
ನನ್ನ ಕನ್ನಡಿ ಮಾಡಿ ಅದರ ಎದುರಿಟ್ಟಿ
ಪ್ರತಿಬಿಂಬ ನೆರೆದಾವು ಬಿಂಬದ ಜೋಡಿ||ಬಯಲು||
ಬಯಲಾಗ ಸೇರ್ಯಾವು ನಿರ್ವಯಲಾಗಿ
ಜೋ ಜೋ ಎನ್ನ ಜ್ಯೋತಿಯ ಕಂದಾ ಜೋ ಜೋ||
ಒಟ್ಟಂದದಲ್ಲಿ ನವೋದಯ ಕಾವ್ಯದ ಅನಂತರದ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಂಬಾರರದು ವಿಶಿಷ್ಟ ಅಭಿವ್ಯಕ್ತಿಯಾಗಿದೆ. ಸ್ಥಳೀಯತೆಯ ಸತ್ವಗಳನ್ನು ಕೇಂದ್ರಪ್ರಜ್ಞೆಯನ್ನಾಗಿಸಿಕೊಂಡ ಅವರ ಕೃತಿ ಸಮೂಹ ಸ್ವಾತಂತ್ರ್ಯಾ ನಂತರದ ನೆಲೆಯಲ್ಲಿ ನಿಂತು ವಸಾಹತುಶಾಹಿಯ ಪ್ರಭಾವ ಪರಿಣಾಮಗಳು ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಬೇರೂರಿದ ನೆಲೆಗಳನ್ನು ಮುಖ್ಯಭಿತ್ತಿಯನ್ನಾಗಿಸಿಕೊಂಡು ವಿವೇಚಿಸಿತು. ಅವರ ಸಾಹಿತ್ಯ ವಸಾಹತು ಹಾಗೂ ವಸಾಹತು ಆಳ್ವಿಕೆಯ ಅನಂತರದ ಸಂಕೀರ್ಣತೆಯ ಸಂದರ್ಭಗಳನ್ನು ಗಂಭೀರವಾಗಿ ಜಿಜ್ಞಾಸೆಗೆ ಒಳಪಡಿಸುವ ಅಭಿವ್ಯಕ್ತಿಯಾಗಿದೆ.
Tag: Chandrashekhara Kambar, Jnanapita, Kabir Samman
ಪ್ರತಿಕ್ರಿಯೆ