ಜೈನರು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದರು: ನಾಡೋಜ ಡಾ.ಮಹೇಶ ಜೋಶಿ

ಜೈನರು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದರು: ನಾಡೋಜ ಡಾ.ಮಹೇಶ ಜೋಶಿ

WhatsApp Image 2024-06-29 at 10.45.39 AM

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಜೈನರು ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಅದರ ಅಡಿಪಾಯದ ಮೇಲೆ ನಮ್ಮ ಭವ್ಯ ಸಾಹಿತ್ಯ ಸೌಧ ನಿರ್ಮಾಣಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಳಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು . ಇವತ್ತು ಜೈನರ ಒಟ್ಟು ಜನಸಂಖ್ಯೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಮೆ ಇರಬಹುದು.ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅವರ ಕೊಡುಗೆ ಸಂಖ್ಯೆಯಲ್ಲಿ ಮಾತ್ರ ಅಲ್ಲ ,ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ.ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನ ಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ.ಪುರಾಣ,ಮಹಾಕಾವ್ಯ,ಜನಪದ ಕಥೆ,ಕಾವ್ಯಶಾಸ್ತ್ರ,ಛಂದಸ್ಸು,ವ್ಯಾಕರಣ,ಸೂಪಶಾಸ್ತ್ರ,ಗಣಿತಶಾಸ್ತ್ರ ,ಚಂಪೂ,ಗದ್ಯ,ಸಾಂಗತ್ಯ,ಮುಕ್ತಕ -ಹೀಗೆ ಹಲವು ಪ್ರಕಾರಗಳಲ್ಲಿ ಹಲವು ಪ್ರಬೇಧಗಳಲ್ಲಿ ಕನ್ನಡ ಜೈನಸಾಹಿತ್ಯದ ಹರಹು ಚಾಚಿಕೊಂಡಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಜೈನರ ಕೊಡುಗೆಗಳನ್ನು ಶ್ಲಾ ಘಿಸಿದರು.

ಕನ್ನಡದ ಮೊದಲ ಕವಿ ,ಎಲ್ಲ ಕಾಲದ ಮಹತ್ವದ ಮಹಾಕವಿ ಪಂಪನು ಕನ್ನಡ ಜೈನಕಾವ್ಯಗಳ ರಚನೆಯ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಪ್ರಸ್ತಾವಿಸಿದ ಮತ್ತು ಪ್ರಾರಂಭಿಸಿದ.ಅದು ‘ಲೌಕಿಕ ‘ ಮತ್ತು ‘ಆಗಮಿಕ’ ಎಂಬ ಪರಿಕಲ್ಪನೆಗಳ ಮೂಲಕ ಕಾವ್ಯಗಳನ್ನು ನಿರ್ಮಿಸುವುದು ಮತ್ತು ಆ ಮೂಲಕ ಅಂತಹ ಬದುಕಿನ ಪ್ರಭೇದಗಳನ್ನು ಪರಿಕಲ್ಪಿಸಿಕೊಳ್ಳುವುದು ಪಂಪನ ಬಹು ದೊಡ್ಡ ಕೊಡುಗೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸಲಾಗವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿ ಅದಕ್ಕಾಗಿ ಎಲ್ಲಾ ಸಿದ್ದತೆಗಳೂ ನಡೆದಿವೆ ಎನ್ನುವ ವಿವರಗಳನ್ನು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆಯಲ್ಲಿಯೇ ಇರುವುದು ವಿಶೇಷವೆಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಈ ರಸ್ತೆಯನ್ನು ಸಂಪೂರ್ಣ ಕನ್ನಡಮಯವಾಗಿಸುವ ತಮ್ಮ ಪ್ರಯತ್ನದ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವೋರ ಎಜುಕೇಷನ್ ಸೊಸೈಟಿ(ರಿ), ಉಜಿರೆಯ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಮಾತನಾಡಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಐವತ್ತು ವರ್ಷಗಳಲ್ಲಿ ಐದುನೂರು ವರ್ಷಗಳಿಗಾಗುವಷ್ಟು ಕೆಲಸವನ್ನು ಮಾಡಿದ್ದು ಅದನ್ನು ಮುಂದುವರೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿಗೂ ಮತ್ತು ಧರ್ಮಸ್ಥಳಕ್ಕೂ ಇರುವ ನಂಟನ್ನು ಸ್ಮರಿಸಿ ಕೊಂಡ ಅವರು ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮಹತ್ವದ ಕಾರ್ಯಗಳ ಮೆಚ್ಚುಗೆ ವ್ಯಕ್ತ ಪಡಿಸಿದರು. ಇನ್ನೊಬ್ಬ ಮುಖ್ಯ ಅತಿಥಿ ನ್ಯೂಜರ್ಸಿಯ ಬೃಂದಾವನ ಕನ್ನಡ ಕೂಟದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಅವರು ಪುರಸ್ಕೃತರಾದ ತಮ್ಮ ಬಾಲ್ಯದ ಸಹಪಾಠಿ ಡಾ.ಪ್ರೀತಿ ಶುಭಚಂದ್ರ ಅವರ ಸಾಧನೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಬರಹಗಾರ ನಾಡೋಜ ಡಾ.ಹಂಪ ನಾಗರಾಜಯ್ಯನವರು ಮಾತನಾಡಿ ಜೈನರಿಗೆ ಅಂತರಿಕ ಶೋಧದಷ್ಟೇ ಸಾಮಾಜಿಕ ಮುಖಗಳೂ ಮುಖ್ಯ. ಈ ಪುರಸ್ಕಾರ ಅದರ ಭಾಗವೆಂದು ಹೇಳಿದರು. ಪುರಸ್ಕೃತರಾದ ಡಾ.ಪ್ರೀತಿ ಶುಭಚಂದ್ರ ಅವರು ತಮ್ಮ ವಿದ್ಯಾರ್ಥಿನಿ ಎಂದು ಹೇಳಿದ ಅವರು ಸೌಮ್ಯಸ್ವಭಾವದ ಆದರೆ ಅಧ್ಯಯನಶೀಲೆಯಾದ ಅವರಿಗೆ ಪುರಸ್ಕಾರ ದೊರಕಿರುವುದು ತಮಗೆ ಇನ್ನೊಮ್ಮೆ ಪುರಸ್ಕಾರ ದೊರಕಿದ ಭಾವವನ್ನು ತಂದಿದೆ ಎಂದರು. ಪುರಸ್ಕೃತರಾದ ಡಾ.ಪ್ರೀತಿ ಶುಭಚಂದ್ರ ಅವರು ಮಾತನಾಡಿ ಪಂಪ, ರತ್ನಕಾರವರ್ಣಿ ಕಾವ್ಯದಲ್ಲಿ ಚಿತ್ರಿಸಿದ ಬಾಹುಬಲಿಯನ್ನು ಚಾವುಂಡ ರಾಯರು ಮೂರ್ತಿರೂಪಕ್ಕೆ ತಂದವರು. ಅವರ ಹೆಸರಿನಲ್ಲಿನ ಪ್ರಶಸ್ತಿ ಧನ್ಯತೆಯನ್ನು ತಂದಿದೆ ಎಂದು ಹೇಳಿ ಪುರಸ್ಕಾರವನ್ನು ಇತ್ತೀಚಿಗೆ ನಮ್ಮನ್ನು ಅಗಲಿದ ಡಾ.ಕಮಲಾ ಹಂಪನಾ ಅವರ ನೆನಪಿಗೆ ಅರ್ಪಿಸುವುದಾಗಿ ತಿಳಿಸಿದರು.
ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದ ಕನಕಗಿರಿ ಕ್ಷೇತ್ರದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳು ಕನ್ನಡವನ್ನು ಜೈನರು ತಮ್ಮ ಭಾಷೆಯನ್ನಾಗಿಸಿ ಕೊಂಡು ಸ್ವಾಧ್ಯಯನದಿಂದ ಬೆಳೆಸಿದ್ದಾರೆ. ಶ್ರದ್ದೆ-ಶಾಸ್ತ್ರಗಳಿಂದ ಅವರು ನೀಡಿದ ಕೊಡುಗೆ ಮಹತ್ವದ್ದು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜ್ ಅವರು ಸ್ವಾಗತಿಸಿದರೆ, ಇನ್ನೊಬ್ಬ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿಯವರು ವಂದನೆಗಳನ್ನು ಅರ್ಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)