ಕನ್ನಡದ ಹಿರಿಯ ನಟಿ ಡಾ. ಲೀಲಾವತಿ ಅವರಿಗೆ “ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್” ದತ್ತಿ ಪ್ರಶಸ್ತಿಗೆ ಸಂದಿದೆ. ಸುಮಾರು ೫೫೦ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಲೀಲಾವತಿ ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಕನ್ನಡ ಸಾಹಿತ್ಯ ಪರಿಷತ್ತು, ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ನೀಡುತ್ತಿರುವ ಈ ಪ್ರಶಸ್ತಿಯನ್ನು ಅಕ್ಟೋಬರ್ ೩೦, ೨೦೧೬ರಂದು ಡಾ. ಲೀಲಾವತಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಗೌರವವನ್ನು ಸ್ವೀಕರಿಸಿ, ತಮ್ಮ ಚಿತ್ರರಂಗದ ಅನೇಕ ಸಿಹಿ ಕಹಿ ಘಟನೆಗಳನ್ನು ಸೂಕ್ಷ್ಮವಾಗಿ ಮೆಲುಕು ಹಾಕಿದ ಡಾ. ಲೀಲಾವತಿಯವರು, ಕೇವಲ ಎರಡನೆಯ ತರಗತಿಯವರೆಗೆ ಶಾಲೆಯಲ್ಲಿ ಓದಿದ ತಮ್ಮನ್ನು, ಚಿತ್ರರಂಗದಲ್ಲಿ ತಿದ್ಧಿ ಬೆಳೆಸಿದ ಹಿರಿಯರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಎಂದಿನ ವಿನೋದಪೂರ್ಣ ದಾಟಿಯಲ್ಲಿ “ಯಾರಿಗೂ ಅಪಾಯವಿಲ್ಲದ ದೀಪಾವಳಿಯನ್ನು ಕನ್ನಡ ಸಾಹಿತ್ಯ ಪರಿಷತ್ ಆಚರಿಸಿದೆ. ಲೀಲಾವತಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ದೊಡ್ಡ ಪಟಾಕಿಯನ್ನೇ ಸಿಡಿಸಿದೆ” ಎಂದು ಪರಿಷತ್ತನ್ನು ಶ್ಲಾಘಿಸಿ, “ಸಿನಿಮಾ ರಂಗಕ್ಕೆ ಅನೇಕರು ಬಂದು ಹೋಗುತ್ತಾರೆ. ನಟನೆ ಮೂಲಕ ಜನರ ಮನಸ್ಸಿನಲ್ಲಿ ನಿಲ್ಲುವವರ ಸಂಖ್ಯೆ ವಿರಳ. ವಿರಳರ ಸಾಲಿಗೆ ಲೀಲಾವತಿ ಅವರು ಸೇರುತ್ತಾರೆ” ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮನು ಬಳಿಗಾರ್ ಅವರು ಲೀಲಾವತಿಯವರ ಅಭಿನಯ, ಜೀವನ ಸಾಧನೆ ಕುರಿತು ಮಾತನಾಡಿ, ಅಭಿಜಾತ ಕಲಾವಿದೆಗೆ ಸಂದ ಈ ಗೌರವ ಸಂತಸ ತಂದಿದೆ. ಈ ಕಲಾಶಾರದೆಗೆ ಪದ್ಮಭೂಷಣ ಪ್ರಶಸ್ತಿ ದೊರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಲೀಲಾವತಿ ಅವರ ಪುತ್ರರೂ ಖ್ಯಾತ ನಟರೂ ಆದ ವಿನೋದ್ ರಾಜ್ ಕುಮಾರ್, ಡಾ. ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ವೀರಕಪುತ್ರ ಮತ್ತು ಹಲವಾರು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ದೀಪಾವಳಿ ಸಂಭ್ರಮದ ಕ್ಷಣದಲ್ಲಿ ನಡೆದ ಈ ಸನ್ಮಾನ ಸಡಗರಕ್ಕೆ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳೂ, ಡಾ. ಲೀಲಾವತಿ ಅವರ ಅಭಿಮಾನಿಗಳೂ, ಸಾಹಿತ್ಯಾಸಕ್ತರೂ, ಮಾಧ್ಯಮ ಪ್ರತಿನಿಧಿಗಳೂ, ಕನ್ನಡಾಭಿಮಾನಿಗಳೂ ಅಪಾರ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮಕ್ಕೆ ಬೆಡಗು ತಂದರು.
Tag: Dr. M. Leelavathi, Leelavati
ಪ್ರತಿಕ್ರಿಯೆ