ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು. ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ನೆಯ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು. ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು.
ಬಿ.ಎ ವಿದ್ಯಾಭ್ಯಾಸ ಮುಗಿಸಿ ಎಲ್.ಟಿ ತರಬೇತಿ ಪಡೆದ ಪಂಜೆಯವರು ಪ್ರಾರಂಭದಲ್ಲಿ ಶಿಕ್ಷಕರಾಗಿ, ಮಂಗಳೂರಿನ ಶಾಲಾ ಸಬ್ ಇನ್ಸ್ಪೆಕ್ಟರ್ ಆಗಿ, ಇನ್ಸ್ಪೆಕ್ಟರ್ ಆಗಿ ಕಾಸರಗೋಡು, ಮಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿದರು. ಕೇವಲ ತಮ್ಮ ಕಾರ್ಯಕ್ಷೇತ್ರಕ್ಕೆ ಮೀಸಲಾಗಿರದೆ ಹೊರಗಿನ ಜೀವನದಲ್ಲೂ ಪಂಜೆಯವರು ಪ್ರವೇಶಿಸಿ, ಸಾಮಾಜಿಕ ಕಾರ್ಯಗಳಲ್ಲೂ, ಸಾಹಿತ್ಯಾಧ್ಯಯನ, ಸಾಹಿತ್ಯ ರಚನೆಗಳಲ್ಲೂ ಆಸಕ್ತಿ ತಳೆದು ಜನರ ಸ್ನೇಹವನ್ನು ಸಂಪಾದಿಸಿದರು. ತಮ್ಮ ಪ್ರವಾಸಾನುಭವಗಳಿಂದ ಪ್ರೇರಿತರಾಗಿ ತಿರುಳು ಹುರುಳುಗಳಿರುವ ಸಾಹಿತ್ಯ ಸೃಷ್ಟಿ ಮಾಡಿದರು. ಹರಟೆ, ಹಾಡು, ಕಿರುಗಥೆ ಹೀಗೆ ಅವರ ಸಾಹಿತ್ಯ ಸೃಷ್ಟಿ ನಾನಾ ಮುಖವಾದದ್ದು.
ಪಂಜೆಯವರು 1918ರಿಂದ 21ರವರೆಗಿನ ಅವಧಿಯಲ್ಲಿ ಶಿಕ್ಷಣರಂಗದಲ್ಲಿ ಫಲಕಾರಿಯಾದ ಅನೇಕ ನೂತನ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಹರಿಜನ ಬಾಲಕರಿಗೂ ಶಾಲಾ ಪ್ರವೇಶವನ್ನು ದೊರಕಿಸಿದ್ದು; ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿದ್ದು. ಮಡಿಕೇರಿಯಲ್ಲಿ ಅವರು ಶಾಲಾ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ಪ್ರಸಿದ್ಧವಾದ ‘ಹುತ್ತರಿ ಹಾಡ’ನ್ನು ಬರೆದರು.
1943ರಲ್ಲಿ ಸ್ವಯಂನಿವೃತ್ತಿ ಪಡೆದು ಮಂಗಳೂರಿಗೆ ಹಿಂದಿರುಗಿದ ಪಂಜೆಯವರು ತಮ್ಮ ವಿಶಿಷ್ಟ ಸಾಹಿತ್ಯ ಸೃಷ್ಟಿ, ರಸಿಕತೆ, ಸಂಘಟನಾ ಕುಶಲತೆಗಳಿಂದ ನಾಡಿನ ಅನೇಕ ವಿದ್ವಜ್ಜನರ, ಸಾಹಿತ್ಯ ಸಹೃದಯರ ಪ್ರೀತ್ಯಾದಾರಗಳಿಗೆ ಪಾತ್ರವಾಗಿದ್ದರು. ತತ್ಪಲವಾಗಿ 1934ರಲ್ಲಿ ರಾಯಚೂರಿನಲ್ಲಿ ಸಮಾವೇಶಗೊಂಡ ಇಪ್ಪತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅವರಿಗೆ ಲಭಿಸಿತು.
ಪಂಜೆಯವರು ಹೊಸಗನ್ನಡ ಸಾಹಿತ್ಯದ ಪ್ರವರ್ತಕರಲ್ಲಿ ಪ್ರಮುಖರು. ಕವಿ ಶಿಷ್ಯ, ರಾ.ಮ.ಪಂ, ಹರಟೆ ಮಲ್ಲ ಮುಂತಾದ ಗುಪ್ತನಾಮಗಳಿಂದ ಪಂಜೆಯವರು ರುಚಿಯಾದ ಶುಚಿಯಾದ ಸಾಹಿತ್ಯವನ್ನು ರಚಿಸಿದರು. ಅನುವಾದ ರೂಪಾಂತರಗಳೇ ಇರಲಿ, ದೇಶೀ ಜನಪದ ಸಾಹಿತ್ಯ ಪ್ರೇರಿತವೇ ಆಗಿರಲಿ ಎಲ್ಲವುಗಳಿಗೂ ‘ಪಂಜೆ’ತನದ ಮುದ್ರೆಯನ್ನೊತ್ತಿ ಸ್ವತಂತ್ರವೆಂದೇ ತೋರುವಷ್ಟು ಸಹಜವಾಗಿ, ಸುಂದರವಾಗಿ ಕನ್ನಡದಲ್ಲಿ ನಿರೂಪಿಸಿರುವುದು ಅವರ ಶ್ರೇಷ್ಟತೆ ಮತ್ತು ವಿಶಿಷ್ಟತೆ. ಅವರು ರಚಿಸಿದ ‘ತೆಂಕಣ ಗಾಳಿಯಾಟ’, ‘ಅಣ್ಣನ ವಿಳಾಸ’, ‘ನಕ್ಷತ್ರ’ದಂತಹ ಕವಿತೆಗಳು, ‘ಕೋಟಿಚೆನ್ನಯ್ಯ’ ಮುಂತಾದವನ್ನು ರೂಪಾಂತರ-ಭಾವಾಂತರ ಅಥವಾ ಭಾಷಾಂತರಗಳೆಂದು ಯಾರು ತಾನೇ ಹೇಳಬಲ್ಲರು? ಅವರು ರಚಿಸಿದ ವಿಪುಲ ಶಿಶುಸಾಹಿತ್ಯದಲ್ಲಿ ಎಷ್ಟೋ ಕತೆ-ಕವಿತೆಗಳು ಅನ್ಯ ಸಾಹಿತ್ಯದಿಂದ, ಮುಖ್ಯವಾಗಿ ಇಂಗ್ಲಿಷಿನಿಂದ ತಂದುಕೊಂಡಿದ್ದು.
‘ಬಾಲ್ಯ ಸಾಹಿತ್ಯ’ ಪಂಜೆಯವರ ಪ್ರಥಮ ಪ್ರೇಮ. ಬಾಲ ಸಾಹಿತ್ಯದ ಪ್ರಕಟಣೆ, ಪ್ರಚಾರಗಳಿಗಾಗಿಯೇ ಪಂಜೆಯವರು ಶ್ರೀ ಉಲ್ಲಾಳ ಮಂಗೇಶರಾಯರಂತಹ ಸುಹೃತ್ ಬಲದಿಂದ 1921ರಲ್ಲಿ, ಮಂಗಳೂರಿನ ಕೊಂಡಿಯಾಲ ಬೈಲಿನಲ್ಲಿ ‘ಬಾಲ ಮಂಡಲ’ವನ್ನು ಸ್ಥಾಪಿಸಿದರು. ತಮ್ಮ ಶಿಕ್ಷಣ ಜೀವನದಲ್ಲಿ ಮಕ್ಕಳೊಂದಿಗೆ ಬೆರೆತು, ನಡೆ ನುಡಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಪಂಜೆಯವರು, ಮಕ್ಕಳ ಶಬ್ದ ಸಂಗ್ರಹ ಸಣ್ಣದು, ಕಲ್ಪನಾಶಕ್ತಿ ದೊಡ್ಡದು ಎಂಬುದನ್ನು ಬಲ್ಲವಾರಾಗಿದ್ದರಿಂದ ಅದಕ್ಕೆ ತಕ್ಕಂತೆ ಸಾಹಿತ್ಯದ ಅಡುಗೆ ಮಾಡಿ ಬಡಿಸಿದರು. ಮಕ್ಕಳು ನಾ ಮುಂದು, ತಾ ಮುಂದು ಎಂದು ತಿಂದರು, ತೇಗಿದರು, ಕುಣಿದು ಕುಪ್ಪಳಿಸಿದರು. ಆ ಅಡುಗೆಯ ಕಂಪು, ಆ ತೇಗಿದ ದನಿ ಈಗಲೂ ಕನ್ನಡದ ಉದ್ದಗಲದಲ್ಲಿ ಮೂಗಿಗೆ ಬಡಿಯುತ್ತಿದೆ, ಕಿವಿಗೆ ಕೇಳುತ್ತಿದೆ!
ಪಂಜೆಯವರು ರಚಿಸಿದ ಬಾಲಸಾಹಿತ್ಯದಲ್ಲಿ ಕಥೆಗಳದು ಒಂದು ಗುಂಪಾದರೆ ಗೀತಗಳದು ಇನ್ನೊಂದು; ಕಥನಕವನಗಳದು ಮತ್ತೊಂದು. ‘ಗುಡುಗುಡು ಗುಮ್ಮಟದೇವರು’, ‘ಹೇನು ಸತ್ತು ಕಾಗೆ ಬಡವಾಯಿತು’, ‘ಆರ್ಗಣೆ ಮುದ್ದೆ’, ‘ಸಿಗಡೆ ಯಾಕೆ ಒಣಗಲಿಲ್ಲ’, ‘ಮೆಣಸಿನ ಕಾಳಪ್ಪ’, ‘ಮೂರು ಕರಡಿಗಳು’, ‘ಇಲಿಗಳ ಥಕ ಥೈ’ ಇವು ಕೆಲವು ಕಥೆಗಳು. ಇವುಗಳಲ್ಲದೆ ‘ಪ್ರುಥುವಾ ಶೈಲಿನಿ’, ‘ದುರ್ಗಾವತಿಯೇ’, ಮುಂತಾದ ಪ್ರೌಢ ನೀಳ್ಗತೆಗಳೂ, ಕಿರುಕಾದಂಬರಿಯೆನ್ನಬಹುದಾದ ‘ಕೋಟಿ ಚೆನ್ನಯ್ಯ’ವೂ ಇದೆ. ಮಕ್ಕಳ ಕಿರುಕಥೆಗಳು ರಸಪೂರ್ಣವಾಗಿದ್ದು ಸರಳ-ಸುಲಭ ಭಾಷೆಗಳಲ್ಲಿ ನಿರೂಪಿತವಾಗಿವೆ. ಮಕ್ಕಳ ಮನಸ್ಸನ್ನು ಆವರಿಸಿ ನಿಲ್ಲುವಂತದ್ದಾಗಿವೆ. ಒಂದೆರಡು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು:
“ಹೇನಿನ ಮನೆಯಲ್ಲಿ ಹಬ್ಬ ಬಂತು. ಹೇನು ಕಾಗೆಯನ್ನು ಊಟಕ್ಕೆ ಕರೆಯಿತು. ಹೇನು ಬೆಳಗ್ಗೆ ಎದ್ದು, ಸೆಗಣಿ ಬಳಿದು, ಮುಸುರೆ ತೊಳೆದು, ಸ್ನಾನಮಾಡಿತು; ಮತ್ತು ಬೆಂಕಿ ಹೊತ್ತಿಸಿ ನೀರು ಮೊಗೆದು ಅಡಿಗೆ ಮಾಡಿತು. ಪಾಯಸಕ್ಕೆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಪಾತ್ರೆಯಲ್ಲಿ ಬೆಲ್ಲ ಹಾಕಿತು. ಪಾಯಸವನ್ನು ಸಟ್ಟುಗದಿಂದ ಕೆದಕುವಾಗ ಆ ಹೇನು ಪಾಯಸದಲ್ಲಿ ಜಾರಿಬಿದ್ದು ಸತ್ತು ಹೋಯಿತು…” (ಹೇನು ಸತ್ತು ಕಾಗೆ ಬಡವಾಯಿತು)
“… ಅರಸು ಮಗನು ಗುಮ್ಮಟ ಬೆಟ್ಟಕ್ಕೆ ಹೋಗುವಾಗ ಕೊಂಬು ಇತ್ತು. ಕಹಳೆ ಇತ್ತು, ವಾದ್ಯ ಇತ್ತು, ವಾಲಗ ಛತ್ರ ಇತ್ತು, ಚಾಮರ ಇತ್ತು; ಬಾವುಟೆ ಇತ್ತು; ದೀವಟೆ ಇತ್ತು; ಕನ್ನಡಿ ಇತ್ತು, ಕಲಶ ಇತ್ತು; ದೊಡ್ಡ ದಂಡಿಗೆ ಇತ್ತು, ಅಡ್ಡ ಪಲ್ಲಕ್ಕಿ ಇತ್ತು; ಅಡ್ಡಪಲ್ಲಕ್ಕಿಯಲ್ಲಿ ಅರಸು ಮಗನು ಕೂತಿದ್ದನು…..”
‘ಕವಿತೆಯನ್ನು ಓದುವಾಗ ಒಂದು ಚಿತ್ರ ಕಣ್ಣಿಗೆ ಕಟ್ಟಿದಂತಿರಬೇಕು’ ಎಂಬುದು ಪಂಜೆಯವರ ಸೂಕ್ತಿ. ಅವರ ಶಿಶು ಗೀತೆಗಳೆಲ್ಲ ಈ ಉಕ್ತಿಯನ್ನು ಸಮರ್ಥಿಸುವಂತೆಯೇ ಇವೆ. ‘ತೂಗುವೆ ತೊಟ್ಟಿಲು’, ‘ಹಾವಿನ ಹಾಡು’, ಜೋಗುಳ’, ‘ಸಂಜೆಯ ಹಾಡು’ ಮುಂತಾದ ರಚನೆಗಳಲ್ಲಿ ಒಂದೊಂದೂ ಕಿವಿ ಮನಸ್ಸುಗಳೆರಡನ್ನೂ ಒಟ್ಟಿಗೆ ಹಿಡಿದು ನಿಲ್ಲಿಸಬಲ್ಲ ರಸಚಿತ್ರಗಳು. ‘ಡೊಂಬರ ಚೆನ್ನೆ’, ‘ಕೆಡೆಕಂಜಿ’, ‘ನಾಗಣ್ಣನ ಕನ್ನಡಕಗಳು’, ಸ್ವಲ್ಪ ದೀರ್ಘವಾಗಿರುವ ಕಥನಕವನಗಳು. ಇವುಗಳ ಚೆಲುವಾದರೂ ಹಾಗೆಯೇ – ಕಿರಿಯರಿಗೂ ಹಿರಿಯರಿಗೂ ಒಟ್ಟಾಗಿ ಒಪ್ಪಿಗೆಯಾಗುತ್ತವೆ.
ಶಿಶುಗೀತ, ಕಥನಕವನಗಳ ಜೊತೆಗೆ ಪಂಜೆಯವರು ಬರೆದ ಕೆಲವು ಪ್ರೌಢ ಕವಿತೆಗಳೂ ಇವೆ. ‘ಚಂದ್ರೋದಯ’, ‘ಭೀಷ್ಮ ನಿರ್ಯಾಣ’, ‘ತೂಕಡಿಕೆಯನು ಕಳೆಯದೇಕೆ ಕುಳಿತಿಹೆ’, ‘ಸತ್ಯಸೀಮೆಗೆ ತಾಯೆ ನಡೆಸೆನ್ನ’ ಇವೆಲ್ಲ ಹಿರಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ರಚನೆಗಳು. ಮುಂಗಾರು ಮಳೆಯ ಅಬ್ಬರವನ್ನು ಸಶಕ್ತವಾಗಿ ಚಿತ್ರಿಸುವ ‘ತೆಂಕಣಗಾಳಿಯಾಟ’, ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನೂ ವೀರಶ್ರೀಯನ್ನೂ ವರ್ಣಿಸುವ ‘ಹುತ್ತರಿಹಾಡು’ ಎಲ್ಲ ವರ್ಗದ ಜನವೂ ಮೆಚ್ಚಿ ತಲೆದೂಗುವ ಕವಿತೆಗಳು. ಇವುಗಳಲ್ಲಿ ವರ್ಣನಾತ್ಮಕವಾದವು, ದೇಶಭಕ್ತಿ ಪ್ರಚೋದಕವಾದವು, ನೀತಿಬೋಧಕವಾದವು ಎಲ್ಲವೂ ಇವೆ. ಹರಿಜನರ ದಯನೀಯ ಸ್ಥಿತಿಗಾಗಿ ಮರುಗಿ, ಕರಗಿ ಬರೆದ ‘ಹೊಲೆಯನ ಹಾಡು’ ಎಲ್ಲ ಕಾಲದಲ್ಲೂ ನೆನಪಿಡಬೇಕಾದ ಒಂದು ಕವಿತೆ – ಪಂಜೆಯವರ ಪ್ರಾಗತಿಕ ಮನೋಭಾವಕ್ಕೆ ಒಂದು ಪ್ರಬಲ ನಿದರ್ಶನ:
“ಉಳ್ಳಯ್ಯಾ; ದಯೆಗೊಳ್ಳಯ್ಯಾ!
ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟಲು –
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೇ ನಮ್ಮ ಮೈ ಅಂಟು?
ಎಂದು ಉಚ್ಚವರ್ಣೀಯರೊಂದಿಗೆ ತನ್ನ ಗೋಳನ್ನು ಹೇಳಿಕೊಳ್ಳುತ್ತಾನೆ ಒಬ್ಬ ದಲಿತ ಹರಿಜನಬಂಧು. ಬಹುಕಾಲದಿಂದ ನಡೆದುಬಂದಿರುವ ಒಂದು ಅಮಾನುಷ ಅನಿಷ್ಟ ಪ್ರವೃತ್ತಿಯನ್ನು ಪಂಜೆಯವರು ಶೋಷಿತ ಭ್ರಾತೃವಿನ ಬಾಯಿಯಿಂದಲೇ ಹೇಳಿಸಿ ಓದುಗರ ಎದೆಯನ್ನು ಹಿಂಡಿದ್ದಾರೆ.
ಪಂಜೆಯವರ ಬರಹಗಳು ಅಂದಿನ ‘ಸತ್ಯದೀಪಿಕೆ’, ‘ಸುವಾಸಿನಿ’, ‘ಸ್ವದೇಶಾಭಿಮಾನಿ’, ‘ಸಹಕಾರಿ’, ‘ಕಂಠೀರವ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ‘ಪದಾರ್ಥವೇನು’ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಅವರು ಭಾಷಾ ವಿಷಯವಾದ ಒಂದು ಲೇಖನಮಾಲೆಯನ್ನೇ ಸೃಷ್ಟಿಸಿದ್ದರು. ‘ಹಳೆಯ ಸಬ್ ಅಸಿಸ್ಟಂಟನ ಸುಳ್ಳು ಡೈರಿಯಿಂದ’ ಎಂಬ ಲೇಖನದಲ್ಲಿ ಪಂಜೆಯವರು ತಮ್ಮ ಅಧಿಕಾರೀ ಜೀವನದ ಹತ್ತಾರು ಹೃದಯಂಗಮ ಚಿತ್ರಗಳನ್ನು ನೀಡಿದ್ದಾರೆ. ಅದು ಅವರ ಹಾಸ್ಯರಸಿಕತೆಗೂ ಉದಾಹರಣೆಯಾಗಿವೆ. ‘ಸ್ಥಳನಾಮ’, ‘ಮೂಡುಬಿದರೆಯ ಹೊಸಬಸದಿಯ ಶಾಸನಗಳು’, ‘ಬಿಳಗಿಯ ಕೆಲವು ಶಾಸನಗಳು’, ‘ಕುಮಾರವ್ಯಾಸನ ಹೆಗ್ಗಳಿಕೆ’, ‘ಹೊಸದಾರಿ’, ‘ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು’, ‘ಸರ್ವಜ್ಞನ ಓನಾಮ ಪದ್ಧತಿ’ಯೇ ಮೊದಲಾದ ಲೇಖನಗಳಲ್ಲಿ ಪಂಜೆಯವರ ಬಹುಮುಖ್ಯ ವೈದುಷ್ಯ, ಪ್ರಸಕ್ತಿಗಳು ಪ್ರಕಟವಾಗುತ್ತವೆ.
ಅವರು ರಾಯಚೂರು ಸಮ್ಮೇಳನದ ಅಧ್ಯಕ್ಷಭಾಷಣದಲ್ಲಿ “….ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!’ ಎಂದು ಉದ್ಘರಿಸಿದಾಗ ಸಭೆ ಸ್ತಬ್ದವಾಯಿತೆಂದೂ ಚೇತರಿಸಿಕೊಳ್ಳಲು ಎರಡು ಗಳಿಗೆ ಬೇಕಾಯಿತೆಂದೂ ಆ ಸಂದರ್ಭವನ್ನು ಡಿ.ವಿ.ಜಿಯವರು ನೆನಪಿಸಿಕೊಂಡಿದ್ದಾರೆ. ಪಂಜೆಯವರನ್ನು ಸಮೀಪದಿಂದ, ಆದರದಿಂದ ಕಂಡಿದ್ದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ಹೀಗೆ ಹೇಳಿದ್ದಾರೆ: “ಪಂಜೆಯವರು ಕಥೆ ಕವನಗಳನ್ನು ಬರೆಯುವ ಕಸುಬು ಮಾಡಿದವರಲ್ಲ. ಬರೆಯಬೇಕೆಂಬ ಅಂತಃಪ್ರೇರಣೆ ಒತ್ತೊತ್ತಿ ಬಂದಾಗ ಮಾತ್ರ ಬರೆದವರು; ಆಗ ಕೂಡಾ ಸಂಯಮದಿಂದ ಬರೆದವರು…. ಪಂಜೆಯವರು ಇಂಗ್ಲೀಷಿನಲ್ಲಿ ವಿದ್ವಾಂಸರೇ ಆದರೂ, ಆ ಸಾಹಿತ್ಯವನ್ನು ಸವಿದು ಮೆಚ್ಚಿ ನಲಿದವರೇ ಆದರೂ, ಅವರು ಬರೆದುದೆಲ್ಲಾ ಇಂಗ್ಲಿಷ್ ಕಲಿಯದವರಿಗಾಗಿ; ಕೇವಲ ಕನ್ನಡವನ್ನು ಬಲ್ಲ, ಸಾಮಾನ್ಯರ ಸಂತೋಷಕ್ಕಾಗಿ, ಹೃದಯ ಸಂಸ್ಕಾರಕ್ಕಾಗಿ…”
ತಮ್ಮ ಮಗನೊಡನೆ ಇರಲು ಒಮ್ಮೆ ಜಮಷೆಡಪುರಕ್ಕೆ ಹೋಗಿದ್ದ ಅವರನ್ನು ಅಲ್ಲಿನ ಉಕ್ಕು ಕಾರ್ಖಾನೆ, ಕುಲುಮೆ ಇವುಗಳನ್ನೆಲ್ಲಾ ನೋಡಿದಿರಾ ಎಂದು ಶಿವರಾಮ ಕಾರಂತರು ಪ್ರಶ್ನಿಸಿದಾಗ ಅದನ್ನೆಲ್ಲಾ ನನಗೆ ನೋಡಲು ಆಗುವುದೇ ಇಲ್ಲ ಎಂದರಂತೆ. ಅದಕ್ಕೆ ಕಾರಂತರು ಹೇಳುತ್ತಾರೆ. “ಆ ಉಕ್ಕಿನ ಕಾರ್ಖಾನೆಯ ಕಬ್ಬಿಣದ ಗಾಣಗಳನ್ನೂ ಕುಲುಮೆಗಳನ್ನೂ ಕಂಡು ಸಹಿಸಲು ಅವರಿಂದ ಆಗದೇ ಆಗದು!”. ಅಷ್ಟೊಂದು ಮೃದು ಹೃದಯಿಗಳು ಅವರು. ಬಿ ಎಂ ಶ್ರೀಯವರ ‘ದುಃಖ ಸೇತು’ವನ್ನು ಆಗಾಗ ಓದಿ ಅಲ್ಲಿಯ ಕರುಣಾರಸಾನುಭವವನ್ನು ಮಾಡುವುದೂ ಸಭೆಗಳಲ್ಲಿ ಹಾಡಿ ಕೇಳುಗರ ಎದೆಯನ್ನು ಕರಗಿಸುತ್ತಾ ಇದ್ದುದು ಆಶ್ಚರ್ಯಕರವಲ್ಲ.
ತಮ್ಮ ಮಕ್ಕಳ ಜೊತೆ ಇರಲು ವಿವಿದೆಡೆಗಳಲ್ಲಿ ಸಂಚರಿಸುತ್ತಿದ್ದ ಪಂಜೆಯವರು 1937ರಲ್ಲಿ ತಮ್ಮ ಮಗನ ಊರಾದ ಹೈದರಾಬಾದಿನಲ್ಲಿ ನಿಧನರಾದರು. ಆ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು ಉದ್ಘರಿಸಿದ್ದು ಹೀಗೆ: “ತುಳುನಾಡಿನ ಕನ್ನಡ ಸಾಹಿತ್ಯದ ವಿಗಡ ದೀಪಸ್ತಂಭವಾರಿತು; ಬೆಳಕು ಬೆಳಕಿಗೆ ಸಾರಿತು”
ಪಂಜೆಯವರ ಬಗ್ಗೆ ವಿ.ಸೀತಾರಾಮಯ್ಯನವರ ಒಂದು ಮಾತು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಸೂಕ್ತವಾಗುತ್ತದೆ. “ಅವರನ್ನು ನೆನೆಸಿಕೊಂಡಾಗಲೆಲ್ಲಾ ಒಂದು ತುಂಬುಬಾಳಿನ ಚಿತ್ರ ಕಣ್ಣಮುಂದೆ ಬರುತ್ತದೆ. ಒಂದು ಕಾಲ, ಒಂದು ಜನತೆ ಇಂಥವರ ಹುಟ್ಟು ಬದುಕುಗಳಿಂದ ಒಂದು ವಿಶೇಷ ಬಗೆಯ ಕೃತಾರ್ಥತೆಯನ್ನು ಪಡೆಯುತ್ತದೆ”. ಇಂತಹ ಶ್ರೇಷ್ಠರ ನಾಡಿನಲ್ಲಿ ಹುಟ್ಟಿದ ನಮ್ಮ ಬದುಕು ಕೂಡಾ ದೊಡ್ಡದೆ.
(ಆಧಾರ: ಎಂ ರಾಮಚಂದ್ರ ಅವರು ಬರೆದ ಪಂಜೆ ಮಂಗೇಶರಾವ್ ಅವರ ಕುರಿತ ಲೇಖನವನ್ನು ಈ ಬರಹ ಆಧರಿಸಿದೆ)
ಫೋಟೋ ಕೃಪೆ: www.kamat.com
ಪ್ರತಿಕ್ರಿಯೆ