ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ

A.R. Krishnashastry

ಪ್ರೊ. ಕೃಷ್ಣಶಾಸ್ತ್ರಿಗಳ ಬಹುಮುಖ ವ್ಯಕ್ತಿತ್ವದ, ಬಹುಮುಖ ಪ್ರತಿಭೆಯ ಜೀವನವೇ ಒಂದು ಪವಾಡ ಸದೃಶವಾದದ್ದು.  ಅವರು ಬಾಳಿದ ಜೀವನಮೌಲ್ಯಗಳು ಇಂದಿನ ಸಮಾಜದಲ್ಲಿ ಕಾಣಸಿಗುವಂಥವುಗಳಲ್ಲ.  ಹತ್ತೊಂಬತ್ತನೆಯ ಶತಮಾನದಲ್ಲಿ ಅವತರಿಸಿದ ಶ್ರೇಷ್ಠ ಮಹನೀಯರಂತೆ ಕೃಷ್ಣಶಾಸ್ತ್ರಿಗಳು ತಮ್ಮ ಬದುಕಿನ ಬೆಲೆಯನ್ನು ಅರಿತು ಅದಕ್ಕೆ ತಕ್ಕಂತೆ ಬಾಳಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡದ್ದೇ ಅಲ್ಲದೆ ಸಮಾಜದ ಮೌಲ್ಯಗಳಿಗೂ ನಿದರ್ಶನಗಳಾಗಿ ನಿಂತರು.  ಅವರ ಕನ್ನಡ ರೂಪಾಂತರ ಕೃತಿಗಳಾದ ‘ವಚನ ಭಾರತ’ ಮತ್ತು ‘ಕಥಾಮೃತ’ ಕೃತಿಗಳು ಕನ್ನಡಿಗರ ಮನೆ ಮನೆಗಳಲ್ಲಿ, ಮನಗಳಲ್ಲಿ, ಜನಪದದಲ್ಲಿ ನಿರಂತರವಾಗಿ ಬೆಳಗಿ ಹಲವಾರು ಮರುಮುದ್ರಣಗಳನ್ನು ಕಂಡು ನಿತ್ಯ ಪ್ರಕಾಶಿಸುತ್ತಿವೆ.

ಎ. ಆರ್. ಕೃ ಅವರು ಫೆಬ್ರವರಿ 12, 1890ರಂದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ ರಾಮಕೃಷ್ಣ ಶಾಸ್ತ್ರಿಗಳು ಮತ್ತು ಶಂಕರಮ್ಮನವರ ಮೊದಲನೆಯ ಮಗನಾಗಿ ಜನಿಸಿದರು.  ಇವರಿಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಕೊಟ್ಟ ತಾಯಿ ಅಸುನೀಗಿದ ಮೇಲೆ 10 ವರ್ಷದ ಬಾಲಕ ಕೃಷ್ಣಶಾಸ್ತ್ರಿಯವರ ಮೇಲೆ ಸಂಸಾರದ ಭಾರ ಬಿತ್ತು.  ತಂದೆಯವರು ಮೈಸೂರಿನಲ್ಲಿ ಮೂವತ್ತು ರೂಪಾಯಿಗಳ ಮಾಸಾಶನದಿಂದ ಸಂಸಾರ ನಡೆಸುತ್ತಿದುದರಿಂದ ಬಡತನದಲ್ಲಿಯೇ ಬೆಳೆದರು.  ಅದು ಸಾಲದೆಂಬಂತೆ ಬಾಲ್ಯದಲ್ಲೇ ಮೂವರು ತಂಗಿಯರನ್ನು ಕಳೆದುಕೊಂಡ ದುಃಖವೂ ಸೇರಿತ್ತು.  ಆದರೆ ವಿದ್ಯೆಗೆ ಬಡತನವಿರಲಿಲ್ಲ.  ಮೈಸೂರಿನಲ್ಲಿ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರೂ, ಘನ ವ್ಯಾಕರಣ ಪಂಡಿತರೂ ಆಗಿದ್ದ ತಂದೆಯವರೇ ಕೃಷ್ಣಶಾಸ್ತ್ರಿಗಳಿಗೆ ಪ್ರಥಮ ವಿದ್ಯಾಗುರುಗಳು.  ಪ್ರತಿದಿನ ಮಗನಿಗೆ ಮರಳ ಮೇಲೆ ಅಕ್ಷರ ಬರೆದು ಪಾಠಶಾಲೆಗೆ ಹೋದರೆ ಬರುವ ವೇಳೆಗೆ ಅದನ್ನು ತಿದ್ದಿ ಕಲಿತು ತಂದೆಯಿಂದಲೇ ಕಾಸಿನ ಬಹುಮಾನ ಗಿಟ್ಟಿಸುತ್ತಿದ್ದರು.  ಈ ಬಹುಮಾನದ ಪರಂಪರೆ ಬದುಕಿನಾದ್ಯಂತ ಮುಂದುವರೆಯಿತು.  ವೆಸ್ಲಿ ಮಿಷನ್ ಹೈಸ್ಕೂಲಿನಲ್ಲಿ ಸರ್ವಪ್ರಥಮರಾಗಿ ಸ್ಕಾಲರ್ಷಿಪ್ ಗಿಟ್ಟಿಸಿದ್ದರು.

ತಂದೆಯವರಿಂದ ಬಂದ ಒಂದೇ ಒಂದು ಆಸ್ತಿಯೆಂದರೆ ಈ ವಿದ್ಯೆ. ಕೃಷ್ಣಶಾಸ್ತ್ರಿಗಳು ಲೋಯರ್ ಸೆಕೆಂಡರಿಯಲ್ಲಿ ಓದುತ್ತಿರುವಾಗಲೇ ಹತ್ತು ವರ್ಷದ ವೆಂಕಟಲಕ್ಷ್ಮಿಯನ್ನು ವಿವಾಹವಾಗಬೇಕಾಯಿತು.  ಇದರಿಂದ ಆದ ಉಪಯೋಗವೆಂದರೆ ಅಡುಗೆ ಕೆಲಸ ತಪ್ಪಿ ಓದಲು ಬಿಡುವಾದಂತಾಯಿತು.  ಈ ವೇಳೆಗಾಗಲೇ ವಿಜ್ಞಾನ ಕ್ಷೇತ್ರದ ಬಗೆಗೆ ಆಸಕ್ತಿ ಬೆಳೆಯುತ್ತಿದ್ದು ಸಹಜವಾಗಿ ಅತ್ತ ಒಲಿದಿದ್ದರು.  ಆದರೆ ತಂದೆಯವರ ಆರ್ಥಿಕ ಪರಿಸ್ಥಿತಿಯ ಕಾರಣ ಬೆಂಗಳೂರಿಗೆ ಹೋಗಿ ವಿಜ್ಞಾನವನ್ನು ಕಲಿಯುವುದು ದುಸ್ಸಾಧ್ಯವಾಯಿತು.  ಈ ಅಸಹಾಯಕ ಸ್ಥಿತಿಯಲ್ಲಿ ಅನಿವಾರ್ಯವಾಗಿ ಹೆಚ್ಚು ಖರ್ಚಿಲ್ಲದ ಕನ್ನಡ ಮತ್ತು ಸಂಸ್ಕೃತಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು.  1914ರಲ್ಲಿ ಬಿ.ಎ. ಪದವಿ ಪಡೆದರು.

ನಂತರ ಎ.ಆರ್.ಕೃ ಅವರು ಖಾಸಗಿಯಾಗಿ ಮದ್ರಾಸಿನಿಂದ ಕನ್ನಡ ಎಂ.ಎ ಮಾಡಿ ಕೆಲವು ಕಾಲ ಅಠಾರ ಕಚೇರಿಯಲ್ಲಿ ಕೆಲಸಮಾಡಿದರು.  1916ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಟ್ಯೂಟರ್ ಆಗಿ ನೇಮಕವಾಗುವುದರ ಮೂಲಕ ಅಧ್ಯಾಪಕ ವೃತ್ತಿಗೆ ಪದಾರ್ಪಣೆ ಮಾಡಿದರು.  ಕೆಲವು ಕಾಲ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸಮಾಡಿ ಮತ್ತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲೂ, 1939ರಿಂದ ನಿವೃತ್ತಿಯವರಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲೂ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು.  ಬಾಲ್ಯದಿಂದಲೂ ಬಡತನಕ್ಕೆ ಹೆಚ್ಚಾಗಿ ದುಃಖ ದುಮ್ಮಾನಗಳ ನಡುವೆಯೇ ಬೆಳೆದ ಕೃಷ್ಣಶಾಸ್ತ್ರಿಗಳಿಗೆ ತಮ್ಮ ಸಂಸಾರದಲ್ಲಿಯೂ ಅದು ಕಟ್ಟಿಟ್ಟ ಬುತ್ತಿಯಾಗಿತ್ತು.  ಶಾಸ್ತ್ರಿಗಳು ನಾಲ್ಕು ಜನ ಹೆಣ್ಣುಮಕ್ಕಳು ಮತ್ತು ಒಂದು ಮಗುವಿನ ತಂದೆಯಾಗಿದ್ದರೂ ಗಂಡುಮಗು ವರ್ಷಾವಧಿಯಲ್ಲಿಯೇ ಇಲ್ಲವಾಯಿತು. ಮೂರನೆಯ ಮಗಳು 18ನೆ ವರ್ಷದಲ್ಲಿ ಅಸುನೀಗಿದಳು.  ಈ ನೋವು ಶಾಸ್ತ್ರಿಗಳನ್ನು ಕಾಡಿತು.  ಮಾನಸಿಕವಾಗಿ ತುಂಬಾ ಬಳಲಿದರು.  ಶ್ರೀಪತಿಯ ಕಥೆಗಳಲ್ಲಿ ಈ ತೊಳಲಾಟವನ್ನು ಗುರುತಿಸಬಹುದಾಗಿದೆ.  ಇದೇ ಬೇಸರದಲ್ಲಿ ಇನ್ನೂ ಕೆಲವು ವರ್ಷಗಳ ಸೇವಾ ಅವಧಿ ಇದ್ದರೂ ಸ್ವ ಇಚ್ಛೆಯಿಂದ ನಿವೃತ್ತರಾದರು.

ಕೃಷ್ಣಶಾಸ್ತ್ರಿಗಳು ಸರ್ಕಾರಿ ಸೇವೆಯಿಂದ ನಿವೃತ್ತಿಯೇ ವಿನಾ ಸಾರ್ವಜನಿಕ ಸೇವೆಯಿಂದಲ್ಲ.  ಸೇವೆಯಲ್ಲಿರುವಾಗ ಎಷ್ಟು ಚಟುವಟಿಕೆಯಿಂದಿದ್ದರೋ ಅದಕ್ಕಿಂತ ಹೆಚ್ಚು ಚಟುವಟಿಕೆಗಳನ್ನು ನಿವೃತ್ತಿ ವಯಸ್ಸಿನಲ್ಲಿ ಇಟ್ಟುಕೊಂಡರು.  ಸೇವೆಯಲ್ಲಿರುವಾಗಲೇ ಧರ್ಮಾಮೃತ, ಭಾಸಕವಿ, ಸಂಸ್ಕೃತ ನಾಟಕಗಳನ್ನು ಪ್ರಬುದ್ಧ ಕರ್ನಾಟಕದ ಸಂಪಾದನೆಯ ನಡುವೆಯೂ ಸಮರ್ಥವಾಗಿ ಮಾಡಿದ್ದರು.  ಸೇವಾನಂತರ ಈ ಕಾರ್ಯಗಳಿಗಾಗಿಯೇ ಇಡೀ ಕಾಲವನ್ನು ಮೀಸಲಿಟ್ಟರು.  ವಚನಭಾರತ, ಕಥಾಮೃತ, ಬಂಕಿಮಚಂದ್ರ ಮುಂತಾದ ಬೃಹತ್ ಕೃತಿಗಳನ್ನು ಈ ವಿಶ್ರಾಂತ ಜೀವನದಲ್ಲೇ ಬರೆದರು.  ನಿಬಂಧಮಾಲಾ ಬರೆಯುತ್ತಿದ್ದಾಗ ಕೃಷ್ಣಶಾಸ್ತ್ರಿಗಳಿಗೆ ಎಪ್ಪತ್ತೈದು ವರ್ಷವಾಗಿತ್ತು.  ಇವುಗಳ ರಚನೆಗೆ ಬೇಕಾಗಿದ್ದ ಪೂರಕ ಅಧ್ಯಯನ, ಸಾಮಗ್ರಿ ಸಂಗ್ರಹಣೆ ಮುಂತಾದ ನಿರಂತರ ಶ್ರಮದಿಂದ ವಾಸ್ತವವಾಗಿಯೂ ಶಾಂತಿ ಬಯಸುತ್ತಿದ್ದ ಶರೀರ ಮತ್ತು ಮನಸ್ಸುಗಳೆರಡೂ ಜರ್ಜರಿತವಾದವು.  ಶಾಸ್ತ್ರಿಗಳು ಸಹಜವಾಗಿ ಕುಗ್ಗಿದರು, ಕೊರಗಿದರು, ತುಂಬಾ ಬಳಲಿದರು.  ಇದೇ ಸ್ಥಿತಿಯಲ್ಲಿ ಒಂದು ಅಪಘಾತವೂ ಆಗಿ ಹಾಸಿಗೆಯಿಂದ ಮೇಲೇಳಲಾಗದೆ ಸಹಿಸಲಾಗದ ನೋವನ್ನುಂಡರು.  ಕೊನೆಗೆ ಒಂದನೇ ಫೆಬ್ರವರಿ 1968ರಲ್ಲಿ ಇಹಲೋಕವನ್ನು ತ್ಯಜಿಸಿದರು.

ಹೊಸಗನ್ನಡ ಉದ್ಯಾನವನದಲ್ಲಿ ಮೊದಲಬಾರಿಗೆ ನಕ್ಕು ನಲಿಯುತ್ತಿದ ಕೆಲವೇ ಹೂಗಳಲ್ಲಿ ಒಂದು ಬಾಡಿತು.  ಹತ್ತಾರು ಹೂ ಗಿಡಗಳಿಗೆ ಆಸರೆಯಾಗಿ, ನೂರಾರು ಹೂಗಳನ್ನು ಕನ್ನಡಕ್ಕೆ ನೀಡುತ್ತ ಕಂಗೊಳಿಸುತ್ತಿದ್ದ ಈ ಹೂವು ಬಾಡಿತಾದರೂ ಇವರು ಪೋಷಿಸಿ ಬೆಳೆಸಿದ ಗಿಡಗಳು ಮಹಳಷ್ಟು ಬೆಳೆದವು.  ಈ ದಿವ್ಯ ಪರಂಪರೆ ತನ್ನ ಸಸಿಗಳನ್ನು ಇಂದೂ ಬೆಳೆಸುತ್ತ ಸಾಗಿದೆ.

ಕೃಷ್ಣಶಾಸ್ತ್ರಿಗಳಿಗೆ ಅದಮ್ಯ ಜೀವನೋತ್ಸಾಹವಿತ್ತು.  ಸಹಜ ಆಸಕ್ತಿಯ ಜೊತೆಗೆ ಪರಿಸರವೂ ಅನುಕೂಲಕರವಾಗಿ ಸಂಗೀತ, ಚಿತ್ರಕಲೆ, ನಾಟಕಗಳಲ್ಲೂ ಅಭಿರುಚಿ ಮೂಡಿತ್ತು.  ವೀಣೆ ಶೇಷಣ್ಣ, ಕಲಾವಿದ ಕೆ. ವೆಂಕಟಪ್ಪ, ರತ್ನಾವಳಿ, ಶಾಕುಂತಲ ನಾಟಕಗಳು ಇವರಿಗೆ ಅತ್ಯಂತ ಪ್ರಿಯವಾಗಿದ್ದವು.

ಕೃಷ್ಣಶಾಸ್ತ್ರಿಗಳು ಶಿಷ್ಯವಾತ್ಸಲ್ಯಕ್ಕೆ ಪ್ರಿಯರಾದವರು.  ಶಿಷ್ಯರನ್ನು ಕೂಡಿಸುತ್ತಿದುದು ಕನ್ನಡದ ಕೆಲಸಕ್ಕೆ ಕಟ್ಟಾಳುಗಳನ್ನು ತರಬೇತುಗೊಳಿಸುತ್ತಿದ್ದಂತೆ.  ಕುವೆಂಪು ಫಿಲಾಸಫಿ ಎಂ.ಎ ತೆಗೆದುಕೊಂಡುದನ್ನು ತಿಳಿದು “….. ನಮಗೀಗ ನಿಮ್ಮಂಥ ವಿದ್ಯಾರ್ಥಿಗಳೇ ಬೇಕಾಗಿದ್ದಾರೆ.  ಫಿಲಾಸಫಿಗಿಂತ ಕನ್ನಡಕ್ಕೆ ನಿಮ್ಮ ಅವಶ್ಯಕತೆ ಹೆಚ್ಚು” ಎಂದು ಕನ್ನಡಕ್ಕೆ ಅವರನ್ನು ಒಲಿಸಿದ್ದುದಾಗಲಿ, ಕನ್ನಡ ತರಗತಿಗೆ ಇರುತ್ತಿದ್ದ ಕೆಲವೇ ವಿದ್ಯಾರ್ಥಿಗಳಲ್ಲಿ ಒಬ್ಬಿಬ್ಬರು ತಪ್ಪಿಸಿಕೊಳ್ಳುತ್ತಿದ್ದರೆ ಅವರನ್ನು ಕರೆಸಿ ಯೋಗಕ್ಷೇಮ ವಿಚಾರಿಸಿ ಆರ್ಥಿಕ ತೊಂದರೆಯಿದ್ದಾಗ ತಾವೇ ಫೀಸು ಕೊಟ್ಟು ಕಟ್ಟಿಸಿ ‘ಇರುವ ಇಬ್ಬರಲ್ಲಿ ಒಬ್ಬ ಹೀಗೆ ತಲೆತಪ್ಪಿಸಿಕೊಂಡು ತಿರುಗಾಡಿದರೆ ಹೇಗೆ?’ ಎಂದು ಜವಾಬ್ಧಾರಿಯುತರನ್ನಾಗಿ ಮಾಡಿ ಮುಂದೆ ಅವರು ಮಾಡಬೇಕಾದ ಕೆಲಸ ಬೇಕಾದಷ್ಟಿದೆಯೆಂದು ಮನವರಿಕೆ ಮಾಡಿಕೊಡುತ್ತ ಉಳಿಸಿಕೊಳ್ಳುತ್ತಿದ್ದುದಾಗಲಿ ಇವೆಲ್ಲ ಶಾಸ್ತ್ರಿಗಳ ಶಿಷ್ಯವಾತ್ಸಲ್ಯದ ಜೊತೆಜೊತೆಗೆ ಅವರನ್ನು ತರಬೇತುಮಾಡುತ್ತಿದ್ದ ಕನ್ನಡದ ಕೆಲಸಕ್ಕೆ ಸಜ್ಜುಮಾಡುತ್ತಿದ್ದ ರೀತಿಯೂ ಮನವರಿಕೆಯಾಗದಿರದು.

ಶಾಸ್ತ್ರಿಗಳ ಉಡುಗೆ ಸರಳವೂ, ನಿರಾಡಂಬರವೂ ಆದ ‘ಲಲಿತ ಸುಂದರ’ವೆನ್ನುವಂತದ್ದಾಗಿತ್ತು.  ಅಂಚಿರುವ ರೇಷ್ಮೆ ಪಂಚೆ, ಟ್ವೀಡ್ ಕೋಟು ಮತ್ತು ದೊಡ್ಡ ಅಂಚಿನ ಜರತಾರಿ ಮೈಸೂರು ರುಮಾಲು ಇವು ಅವರ ಉಡುಪು.  ಎ.ಆರ್. ಕೃ ಎಂದರೆ ತಕ್ಷಣ ನಮ್ಮ ಮುಂದೆ ನಿಲ್ಲುವ ಚಿತ್ರ ಇದು.  ಕೃಷ್ಣಶಾಸ್ತ್ರಿಗಳ ನೀಟಾದ ಆದರೆ ಸರಳವಾದ ಸ್ನೇಹಪರ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾದುದನ್ನು ಅನೇಕರು ಸ್ಮರಿಸಿದ್ದಾರೆ.  ಶಾಸ್ತ್ರಿಗಳ ನಡೆ ನುಡಿಗಳನ್ನು ಅವರ ಉಡುಗೆಯಲ್ಲಿಯೇ ಗುರುತಿಸಬಹುದಾದಷ್ಟರ ಮಟ್ಟಿಗೆ ಅನ್ವರ್ಥವಾಗಿದ್ದರು.

ಎ. ಅರ್. ಕೃ ಅವರ ಇನ್ನೊಂದು ಮುಖ್ಯಗುಣ ಅವರ ಜಾಗೃತ ಪ್ರಜ್ಞೆ.  ಯಾವಾಗಲೂ ಕೃಷ್ಣಶಾಸ್ತ್ರಿಗಳು ಎಚ್ಚರದ ಮನಃಸ್ಥಿತಿಯನ್ನು ಉಳ್ಳವರಾಗಿರುತ್ತಿದ್ದರು.  ಮಾಡುವ ಕೆಲಸವಾಗಲಿ, ಆಡುವ ಮಾತಾಗಲಿ ಎಂದೂ ಎಚ್ಚರ ತಪ್ಪುತ್ತಿರಲಿಲ್ಲ.  ಅವರ ಯಾವುದೇ ಬರಹದಲ್ಲಿ ಈ ಗುಣವನ್ನು ಕಾಣಬಹುದಾಗಿದೆ.  ಒಂದು ಪಾತ್ರವನ್ನು ವರ್ಣಿಸುವಾಗಾಗಲಿ, ಒಂದು ಘಟನೆಯನ್ನು ಹೇಳುವಾಗಾಗಲಿ ಅವರು ಹೇಳುತ್ತಿದ್ದ ಮಾತುಗಳು ಅಲಂಕಾರಕ್ಕಾಗಿ, ಭವ್ಯತೆಗಾಗಿ, ಉತ್ಪ್ರೇಕ್ಷೆಯಿಂದ ಕೂಡಿದವಾಗಿ ಇರುತ್ತಿರಲಿಲ್ಲ.  ಆ ಪದ ಬಿಟ್ಟು ಬೇರೆ ಪದ ಬಳಸಿದ್ದರೆ ಆ ಪರಿಣಾಮ ಬರುತ್ತಿರಲಿಲ್ಲವೆನ್ನುವಷ್ಟರ ಮಟ್ಟಿಗೆ ಸರಿಯಾಗಿ ಸಹಜವಾಗಿ ಇರುತ್ತಿದ್ದವು.

ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾಗ ‘ಪ್ರಬುದ್ಧ ಕರ್ನಾಟಕ’ವನ್ನು ಪ್ರಾರಂಭಿಸಿದರು.  ಇದೊಂದು ಹೊಸಗನ್ನಡ ಸಾಹಿತ್ಯದ ಬೆಳ್ಳಿಯ ಕಿರಣ.  ಹೊಸಗನ್ನಡ ಸಾಹಿತ್ಯ ರೂಪುಗೊಳ್ಳುತ್ತಿದ್ದ ಆ ಕಾಲದಲ್ಲಿ ಹೊಸ ಬರಹಗಾರರಿಗೆ ವೇದಿಕೆಯೊಂದರ ಅಗತ್ಯ ತೀವ್ರವಾಗಿತ್ತು.  ಅದನ್ನು ಮನಗಂಡ ಕೃಷ್ಣಶಾಸ್ತ್ರಿಗಳು ತಮ್ಮ ವಿದಾರ್ಥಿಗಳಲ್ಲೇ ಇರುವ ಅಂಥ ಸುಪ್ತಪ್ರತಿಭೆಯನ್ನು ಪಚೋದಿಸುವ ಸಲುವಾಗಿ ಈ ಮೊದಲೇ ಪ್ರಾರಂಭಿಸಿದ್ದ ಕರ್ನಾಟಕ ಸಂಘದಿಂದ ಈ ಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು.  ಇದು ಅತ್ಯಲ್ಪ ಕಾಲದಲ್ಲೇ ಜನಪ್ರಿಯವಾಗಿ ಕೇವಲ ವಿದಾರ್ಥಿಗಳನ್ನಷ್ಟೇ ಅಲ್ಲದೆ ಅನೇಕ ವಿದ್ವಜ್ಜನರನ್ನೂ ಆಕರ್ಷಿಸಿತು.  ಕವಿ, ಸಾಹಿತಿ, ಬರಹಗಾರರ ಒಂದು ಸಮರ್ಥ ವೇದಿಕೆಯಾಗಿ ರೂಪುಗೊಂಡಿತು.  ಈ ಪತ್ರಿಕೆಯಲ್ಲಿ “ಎಲ್ಲಿಯೂ ಸ್ವಜನವೆಂಬ ಪಕ್ಷಪಾತವಿಲ್ಲ, ದಾಕ್ಷಿಣ್ಯವಿಲ್ಲ, ಪರಜನವೆಂಬ ದ್ವೇಷವಿಲ್ಲ, ಪ್ರಾಚೀನವೆಂಬ ಪುರಸ್ಕಾರವಿಲ್ಲ, ಅರ್ವಾಚೀನವೆಂಬ ಅವಹೇಳನವಿಲ್ಲ, ಯೋಗ್ಯತೆಯೊಂದೇ ಅಳತೆಗೋಲು. ಕಿರಿಯರ ಪ್ರಬಂಧಕ್ಕೆ ಕತ್ತರಿ ಪ್ರಯೋಗ ಮಾಡುವಂತೆಯೇ ಹಿರಿಯರ ಲೇಖನಕ್ಕೂ ಉಳಿಯಪೆಟ್ಟನ್ನು ಕೊಟ್ಟಿದ್ದಾರೆ” ಎಂಬ ಕೃಷ್ಣಶಾಸ್ತ್ರಿಗಳ ಬಗೆಗೆ ಕೃತಜ್ಞರಾಗಿರುವುದನ್ನೂ ದಾಖಲಿಸುವ ಅನಂತ ರಂಗಾಚಾರ್ ಅವರ ಈ ಅಭಿಪ್ರಾಯ ಶಾಸ್ತ್ರಿಗಳ ಸಂಪಾದನ ಕಾರ್ಯದ ಮಹತ್ವವನ್ನು ಹೇಳುತ್ತದೆ.

ಕೃಷ್ಣಶಾಸ್ತ್ರಿಗಳು ಸುಮಾರು ಹದಿಮೂರು ವರ್ಷಗಳ ಕಾಲ ಸ್ವಯಂ ಪ್ರಯತ್ನದಿಂದ, ಸಾಹಸದಿಂದ ಈ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರೂ ಎಲ್ಲಿಯೂ ತಮ್ಮ ಹೆಸರನ್ನು ಪ್ರಕಟಿಸಿಲ್ಲ.  ಕೇವಲ ಕರ್ನಾಟಕ ಸಂಘದ ಹೆಸರಿನಲ್ಲಿ ಮಾತ್ರ ಪ್ರಕಟಣೆ ಇದೆ.  ನಂತರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಈ ಪತ್ರಿಕೆಯನ್ನು ಬಿಟ್ಟುಕ್ಕೊಟ್ಟ ಮೇಲೆ ವೆಂಕಣ್ಣಯ್ಯನವರ ಸಂಪಾದಕತ್ವದಲ್ಲಿ ಇದೇ ಗುಣಮಟ್ಟದ ಪತ್ರಿಕೆ ಮುಂದುವರೆಯಿತು.  ನಂತರ ತಾವೇ ಮೈಸೂರಿಗೆ ವರ್ಗವಾದ ಮೇಲೆ ಅಂದರೆ ವೆಂಕಣ್ಣಯ್ಯನವರ ನಿಧನದಿಂದ 1939ರಲ್ಲಿ ಅವರ ಸ್ಥಾನಕ್ಕೆ ಪ್ರಾಧ್ಯಾಪಕರಾಗಿ ಎ.ಆರ್.ಕೃ ನೇಮಕವಾದ ಮೇಲೆ ತಾವೇ ಪತ್ರಿಕೆಯ ಸಂಪಾದನಾ ಕಾರ್ಯನಿರ್ವಹಿಸಿಕೊಂಡು ತಮ್ಮ ನಿವೃತ್ತಿಯವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದರು.

ಎ. ಆರ್. ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನಲ್ಲಿದ್ದಾಗ 1918ರಲ್ಲಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ‘ಕರ್ನಾಟಕ ಸಂಘ’ವನ್ನು ಪ್ರಾರಂಭಿಸಿದರು.  ಈ ಕರ್ನಾಟಕ ಸಂಘ ಕರ್ನಾಟಕದ ಎಲ್ಲ ಕನ್ನಡ ಸಂಘಗಳಿಗೆ ನಾಂದಿಯಾಯಿತು.  ಈ ಸಂಘ ಸ್ಥಾಪನೆಯ ಮತ್ತೊಂದು ಉದ್ದೇಶ ಜನರಲ್ಲಿ ಕನ್ನಡಾಭಿಮಾನ ಮೂಡಿ ಸಂಘಟಿತರಾಗಬೇಕೆಂಬುದು.  ಈ ಎರಡೂ ದೃಷ್ಟಿಗಳಿಂದಲೂ ಕೃಷ್ಣಶಾಸ್ತ್ರಿಗಳು ಸ್ಥಾಪಿಸಿದ ಕರ್ನಾಟಕ ಸಂಘ ಮಹತ್ತರ ಸಾಧನೆ ಮಾಡಿದೆ.

ಕನ್ನಡಕ್ಕೆ ಕಿಟಲ್ ನಿಘಂಟನ್ನು ಬಿಟ್ಟರೆ ವಿದ್ವತ್ತಿಗೆ, ಪಾಂಡಿತ್ಯಕ್ಕೆ ನೆರವಾಗುವಂತಹ ಸಮಗ್ರ ನಿಘಂಟು ಇಲ್ಲದಿರುವುದನ್ನು ಗಮನಿಸಿದ ಕೃಷ್ಣಶಾಸ್ತ್ರಿಗಳು ಸಾಹಿತ್ಯ ಪರಿಷತ್ತಿನಲ್ಲಿದ್ದಾಗ ಆ ಬಗೆಗೆ ಕಾರ್ಯಪ್ರವೃತ್ತರಾದರು.  ಪರಿಷತ್ತು ರೂಪಿಸಿದ ನಿಘಂಟು ರಚನಾ ಸಮಿತಿಗೆ ಅಧ್ಯಕ್ಷರಾಗಿ ಸಂಪಾದಕರಾಗಿ ಪ್ರಾರಂಭದಲ್ಲಿ ಕೆಲಸಮಾಡಿದರು.  ಆ ಸಂದರ್ಭದಲ್ಲಿ ಅವರ ರೂಪಿಸಿದ ಕರಡು ಪ್ರತಿ ಕನ್ನಡ ನಿಘಂಟು ಹೇಗಿರಬೇಕೆಂಬ ಅವರ ದೃಷ್ಟಿಯನ್ನು ಹೇಳುತ್ತದೆ.  ಬಹು ಉಪಯೋಗಿಯಾದ ಈ ನಿಘಂಟಿನಲ್ಲಿ ಒಂದು ಪದದ ಅರ್ಥಗಳನ್ನು ಬೇರೆ ಬೇರೆ ರೂಪಗಳನ್ನೂ ಅದು ಬಳಕೆಯಾಗಿರುವ ಆಕರದೊಂದಿಗೆ ಕೊಡುವುದಷ್ಟೇ ಅಲ್ಲದೆ, ಕನ್ನಡ ಸೋದರ ಭಾಷೆಗಳಲ್ಲಿ ದೊರೆಯುವ ಅದರ ಪರ್ಯಾಯಗಳನ್ನೂ ದಾಖಲಿಸುತ್ತದೆ.  ಒಂದೊಂದು ಪದಗಳನ್ನು ನಿಷ್ಕರ್ಷೆ ಮಾಡುವಾಗಲೂ ಅವರು ತೋರುತ್ತಿದ್ದ ಪಾಂಡಿತ್ಯ ಪ್ರತಿಭೆ ಅಸಾಧಾರಣವಾದದ್ದೆಂಬುದನ್ನು ಅವರೊಂದಿಗೆ ಕೆಲಸ ಮಾಡಿರುವ ಪ್ರೊ. ಎಂ.ವಿ. ಸೀತಾರಾಮಯ್ಯ, ಎಲ್. ಬಸವರಾಜು ಮುಂತಾದವರು ಸ್ಮರಿಸಿದ್ದಾರೆ.

ಕೃಷ್ಣಶಾಸ್ತ್ರಿಗಳ ಮತ್ತೊಂದು ಬಹುದೊಡ್ಡ ಸಾಧನೆಯೆಂದರೆ ಕೆಲವು ಮೌಲಿಕ ಗ್ರಂಥಗಳ ರಚನೆ.  ವಿಮರ್ಶೆ, ಅನುವಾದ, ಶಾಸ್ತ್ರ ಸಾಹಿತ್ಯ, ಲಲಿತ ಸಾಹಿತ್ಯ ಮುಂತಾದ ಕ್ಷೇತ್ರಗಲ್ಲಿ ಸುಮಾರು ಹದಿನೈದು ಗ್ರಂಥಗಳನ್ನು ಬರೆದಿದ್ದಾರೆ.  ಹಾಗೆ ನೋಡಿದರೆ ಎ.ಆರ್. ಕೃ ಅವರು ತಾವು ಬರೆದಿರುವುದಕ್ಕಿಂತ ಇತರರಿಂದ ಬರೆಸಿರುವುದೇ ಹೆಚ್ಚು.  ಬರೆಯಬಲ್ಲವರನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರಚೋದಿಸುತ್ತಿದ್ದರು.  ಕುವೆಂಪು ಅವರನ್ನು ತಾವೇ ‘ವರಕವಿ’ ಎಂದು ಕರೆದು ಅವರ ಬರಹಗಳನ್ನು ಓದಿಸಿ, ಚರ್ಚಿಸಿ ತಿದ್ದುಪಡಿಗಳನ್ನು ಸೂಚಿಸಿ, ಅವರನ್ನು ಬೆಳೆಸಿದ ರೀತಿಯನ್ನು ಸ್ವತಃ ಕುವೆಂಪು ಅವರೇ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.  ಎಂ.ವಿ. ಸೀತಾರಾಮಯ್ಯನವರು ಪರಿಷತ್ತಿನಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಎನ್. ಎಸ್, ವೀರಪ್ಪ ಎಂಬ ವಿದಾರ್ಥಿಯೊಬ್ಬರ ಕಾವ್ಯವಾಚನ ಕಾರ್ಯಕ್ರಮಕ್ಕೆ ಶಾಸ್ತ್ರಿಗಳು ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದುದನ್ನು ಸ್ಮರಿಸಿದ್ದಾರೆ.  ಗೊರೂರು ಅವರ ಹಾಸ್ಯ ಪ್ರಜ್ಞೆಯನ್ನು ಗುರುತಿಸಿ ಅವರಿಗೆ ಭಾಷಣ ಮಾಡಲು ಪದೇ ಪದೇ ವೇದಿಕೆಯನ್ನು ಕಲ್ಪಿಸಿಕೊಟ್ಟುದನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸ್ವಾರಸ್ಯಕರವಾಗಿ ಸ್ಮರಿಸಿದ್ದಾರೆ.  ‘ಅಭಿನಂದನೆ’ ಮತ್ತು ‘ಎ. ಆರ್. ಕೃ ಜೀವನ ಸಾಧನೆ’ ಕೃತಿಗಳ ಎಲ್ಲ ಬರಹಗಾರರೂ ಒಂದಿಲ್ಲೊಂದು ರೀತಿಯಲ್ಲಿ ಕೃಷ್ಣಶಾಸ್ತ್ರಿಗಳ ಪ್ರಭಾವಕ್ಕೆ ಒಳಗಾದವರು.  ಅವರ ಪ್ರೋತ್ಸಾಹದಿಂದ ಬೆಳೆದವರು ಎಂಬುದನ್ನು ಗಮನಿಸಿದರೆ ಶಾಸ್ತ್ರಿಗಳ ಸಾಧನೆ ಎಷ್ಟು ಮಹತ್ತರದ್ದೆಂಬ ಅರಿವಾಗುತ್ತದೆ.

ಶಾಸ್ತ್ರಿಗಳ ಗದ್ಯದಲ್ಲಿ ಎದ್ದುಕಾಣುವ ಒಂದು ವಿಶಿಷ್ಟ ಲಕ್ಷಣವೆಂದರೆ ಅವರ ಗದ್ಯ ಶೈಲಿ.  ಇದು ಕನ್ನಡ ಸಾಹಿತ್ಯಕ್ಕೆ ಎ.ಆರ್.ಕೃ ಅವರು ಕೊಟ್ಟಿರುವ ಅತ್ಯಂತ ವಿಶಿಷ್ಟ ಕೊಡುಗೆ.  ಅವರ ಯಾವುದೇ ಕೃತಿಯಲ್ಲೂ ಈ ಶೈಲಿಯನ್ನು ಗುರುತಿಸಬಹುದು.  ಕನ್ನಡ ಸಾಹಿತ್ಯ ಚರಿತ್ರೆ ಅವರ ಈ ಕೊಡುಗೆಯನ್ನು ‘ಗದ್ಯ ಶಿಲ್ಪಿ’, ‘ಹೊಸ ಪರಂಪರೆಯ ನಿರ್ಮಾಪಕ’, ‘ಕೃಷ್ಣಶಾಸ್ತ್ರಿಗಳ ಮಾರ್ಗ’ ಎಂದೆಲ್ಲ ಗುರುತಿಸಿದೆ.  “ಮನೆಯಲ್ಲಿ ಇರುವ ಒಂದೆರಡು ಸಾಮಗ್ರಿಗಳಿಂದಲೇ, ಮೂರು ನಾಲ್ಕು ಪಾತ್ರೆಗಳಲ್ಲಿಯೇ ಹತ್ತಾರು ರುಚಿ ರುಚಿಯಾದ ಅಡುಗೆ ಮಾಡಬಲ್ಲ ನಿಪುಣೆಯಾದ ಗೃಹಿಣಿಯಂತೆ ಕವಿಯು ಮುಂದಿರುವ ಒಂದೆರಡು ಪಾತ್ರೆಗಳಲ್ಲಿಯೇ, ಹಳೆಯ ಕಥಾ ಸಾಮಗ್ರಿಯಿಂದಲೇ ಸುಂದರವಾಗಿ ಕಂಗೊಳಿಸುವ ಮನೋಹರವಾದ ರಸ ಪದಾರ್ಥಗಳನ್ನು ಸೃಷ್ಟಿಸಿದ್ದಾನೆ”  ಇದು ಕೃಷ್ಣಶಾಸ್ತ್ರಿಗಳು ಭಾಸಕವಿಯನ್ನು ಕುರಿತು ಆಡಿರುವ ಮಾತುಗಳಾದರೂ ಸ್ವತಃ ಎ.ಆರ್. ಕೃ ಅವರ ಗದ್ಯವನ್ನು ಕುರಿತು ಹೇಳಬಹುದಾದ ಮಾತುಗಳೂ ಆಗುತ್ತವೆ.

ಸಂಸ್ಕೃತ ನಾಟಕ, ಸರ್ವಜ್ಞ ಕವಿ, ಭಾಸ ಕವಿ, ಗದಾಯುದ್ಧ ನಾಟಕ ಮತ್ತು ಅದರ ನಾಯಕ, ಬಂಕಿಮಚಂದ್ರ ಇವು ಕೃಷ್ಣಶಾಸ್ತ್ರಿಗಳ ವಿಮರ್ಶಾ ಕೃತಿಗಳು.  ವಚನ ಭಾರತ, ಕಥಾಮೃತ, ಸ್ವಾಮಿಶಿಷ್ಯ ಸಂವಾದ, ನಾಗಮಹಾಶಯ, ನಿಬಂಧಮಾಲಾ, ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ ಇವು ಅವರ ಅನುವಾದ ಕೃತಿಗಳು.  ‘ಶ್ರೀಪತಿಯ ಕಥೆಗಳು’ ಒಂದೇ ಲಲಿತಸಾಹಿತ್ಯ.  ನಿರ್ಮಲಭಾರತಿ ಮಕ್ಕಳಿಗಾಗಿ ಬರೆದ ಮಹಾಭಾರತ.  ಇದನ್ನೂ ಲಲಿತ ಸಾಹಿತ್ಯವೆಂದೇ ಹೇಳಬಹುದಾದಷ್ಟು ಸರಳವಾಗಿ ಸುಲಲಿತವಾಗಿ ಸುಂದರ ಚಿತ್ರಗಳಿಂದ ಕೂಡಿದೆ.

“ಶ್ರೀಪತಿಯ ಕಥೆಗಳಲ್ಲಾಗಲಿ, ಅನುವಾದಗಳಲ್ಲಾಗಲಿ, ವಿಮರ್ಶೆಗಳಲ್ಲಾಗಲಿ ಶಾಸ್ತ್ರಿಗಳ ವರ್ಣನಾ ಚಾತುರ್ಯ ಮೆಚ್ಚುವಂತಹುದು….  ನಮ್ಮಲ್ಲಿ ಇಂಥ ಚಿತ್ತಾಕರ್ಷಕ ವಿಮರ್ಶೆ ಇಷ್ಟು ವಿಶ್ಲೇಷಣಾತ್ಮಕವಾಗಿ ಇನ್ನೊಂದು ಕಡೆ ಸುಲಭವಾಗಿ ಸಿಕ್ಕುವುದಿಲ್ಲ….. ಎಷ್ಟೇ ಕಷ್ಟವಾದ ಸಂಕೀರ್ಣವಾದ ವಿಷಯವನ್ನಾದರೂ ಕೃಷ್ಣಶಾಸ್ತ್ರಿಗಳು ಸರಳವಾಗಿ, ಸುಲಭವಾಗಿ, ಹಿಡಿಮಾತಿನಲ್ಲಿ ವಿವರಿಸಬಲ್ಲರು…. ಕೃಷ್ಣಶಾಸ್ತ್ರಿಗಳ ಗದ್ಯ ಕಲೆಯೂ ಹೌದು ಕೌಶಲವೂ ಹೌದು.  ಸ್ಪಷ್ಟತೆ, ಖಚಿತತೆ ಅವರ ಪ್ರಧಾನ ಗುಣಗಳು.  ಅದರಲ್ಲಿ ಬೆಡಗಿಲ್ಲ, ಬಿನ್ನಾಣವಿಲ್ಲ; ಹಾಗೆಂದು ಕುರೂಪ ಅವಲಕ್ಷಣಗಳೂ ತಲೆ ಹಾಕಿಲ್ಲ.”

“ಎ.ಆರ್.ಕೃ ಅವರ ವಿಮರ್ಶಾ ವಿಧಾನ ರಸಮಯವಾದುದು. ನಾಟಕವಾಗಲಿ, ಕಾದಂಬರಿಯಾಗಲಿ ಅವುಗಳ ತಂತ್ರ ಸಂವಿಧಾನಗಳಲ್ಲಿಯೂ, ರಸ ನಿರೂಪಣೆಯಲ್ಲಿಯೂ ಸಮಾನವಾದ ಗಮನವಿಟ್ಟು ಅವುಗಳ ಒಟ್ಟು ಆನಂದವನ್ನು ಅವರು ಹೃದ್ಯವಾಗಿ ನಿರೂಪಿಸುತ್ತಾರೆ.  ಶಾಸ್ತ್ರೀಯವಾದ ವಿಮರ್ಶನ ದೃಷ್ಟಿ ಮತ್ತು ಕಲ್ಲುಸಕ್ಕರೆಯಂತೆ ತಟ್ಟನೆ ಕರಗುವ ಸಹೃದಯತೆ ಎರಡನ್ನೂ ಕಾಣಬಹುದು.”

ಶಾಸ್ತ್ರಿಗಳು ನೀಡಿರುವ ವಿಮರ್ಶೆಗಳಲ್ಲಿ ಒಂದೊಂದೂ ಮಹತ್ವಪೂರ್ಣಕೊಡುಗೆಗಳು.  “ಭಾಸ ಕವಿಯನ್ನು ಕುರಿತ ಕೃಷ್ಣಶಾಸ್ತ್ರಿಗಳ ವಿಮರ್ಶೆಗೆ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡದಲ್ಲಿ ಒಂದು ಗಣ್ಯಸ್ಥಾನವಿದೆ.  ಕೇವಲ 120ಪುಟಗಳ ಹರಹಿನಲ್ಲಿ ಭಾಸ ಪ್ರಪಂಚವನ್ನೇ ಸೆರೆಹಿಡಿದಿರುವುದು ಆಶ್ಚರ್ಯಕರ.  ಇಷ್ಟು ಸಂಗ್ರಹವಾಗಿ, ನಿಷ್ಕರ್ಶವಾಗಿ ಭಾಸನನ್ನು ವಿಮರ್ಶಿಸುವ ಪುಸ್ತಕ ಇಂಗ್ಲಿಷಿನಲ್ಲಾಗಲಿ, ಬೇರೆ ಬಾಷೆಯಲ್ಲಾಗಲಿ ಹೊರಬಂದಿರುವುದು ಅಸಂಭವ” ಎಂದು ಪ್ರಸಿದ್ಧ ವಿದ್ವಾಂಸರಾದ ಡಾ. ಸಿ.ಪಿ.ಕೆ ಅಭಿಪ್ರಾಯಪಟ್ಟಿದ್ದಾರೆ.

ಶಾಸ್ತ್ರಿಗಳ ಪಾಂಡಿತ್ಯವನ್ನು ನೋಡಬಹುದಾದ ಇನ್ನೊಂದು ಕ್ಷೇತ್ರವೆಂದರೆ ಗ್ರಂಥ ಸಂಪಾದನೆ, ಅಲಂಕಾರ ಇತ್ಯಾದಿ ಶಾಸ್ತ್ರ ಸಾಹಿತ್ಯದಲ್ಲಿ.   ಕೃಷ್ಣಶಾಸ್ತ್ರಿಗಳು ಅನುವಾದ ವಿಮರ್ಶೆಗಳಲ್ಲಿ ಹೇಗೆ ಗುರುಸ್ಥಾನೀಯರಾಗಿದ್ದಾರೋ ಗ್ರಂಥ ಸಂಪಾದನಾ ಕ್ಷೇತ್ರಗಳಲ್ಲಿಯೂ ಹಾಗೆಯೇ ಗುರುಸ್ಥಾನೀಯರಾಗಿದ್ದಾರೆ.  ಕವಿಜಿಹ್ವಾಬಂಧನ, ಹರಿಶ್ಚಂದ್ರ ಕಾವ್ಯ ಸಂಗ್ರಹ, ಕೆಳದಿ ನೃಪವಿಜಯ, ಧರ್ಮಾಮೃತ ಇವು ಅವರ ಪಾಂಡಿತ್ಯ ಕೃತಿಗಳು.  ಇವುಗಳಲ್ಲದೆ ಕನ್ನಡ ಕೈಪಿಡಿಯ ಅಲಂಕಾರ ಭಾಗ ಮತ್ತು ಪಾಂಡಿತ್ಯ ಪೂರ್ಣ ಲೇಖನಗಳನ್ನೂ ಬರೆದಿದ್ದಾರೆ.  ಈ ಎಲ್ಲ ಕೃತಿಗಳಲ್ಲೂ ಅವರು ತೋರಿರುವ ಶಾಸ್ತ್ರನಿಷ್ಠೆ, ಪಾಂಡಿತ್ಯ, ಅಧ್ಯಯನಶೀಲತೆಗಳು ಅನುಕರಣೀಯವಾದುದು.  ಎಲ್ಲಕ್ಕಿಂತ ಹೆಚ್ಚಾಗಿ ಈ ಗ್ರಂಥಗಳಿಗೆ ಆವರು ಬರೆದಿರುವ ಮುನ್ನುಡಿಗಳು, ಪೀಠಿಕೆಗಳು, ಪ್ರಸ್ತಾವನೆಗಳು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಇಂದಿಗೂ ಮಹತ್ವವನ್ನು ಪಡೆದಿವೆ.

ಪ್ರೊ. ಕೃಷ್ಣಶಾಸ್ತ್ರಿಗಳ ಕನ್ನಡ ಸೇವೆಯನ್ನು ಇಷ್ಟೇ ಎಂದು ಹೇಳಲಾಗುವುದಿಲ್ಲ.  ಆ ಕಾಲದಲ್ಲಿ ಕನ್ನಡ ಕಟ್ಟಲು ಅಗತ್ಯವಾಗಿದ್ದ ಕಾರ್ಯವನ್ನು ಸೇವೆಯೆಂದು. ಕರ್ತವ್ಯವೆಂದು ಮಾಡಿದ್ದಾರೆ.  ಅವರ ಆ ಶ್ರದ್ಧಾಪೂರ್ವಕ ಸೇವೆಯ ಪ್ರತಿಫಲನವನ್ನು ಇಂದೂ ಕನ್ನಡ ನಾಡು ಅನುಭವಿಸುತ್ತಿದೆ.  ಅವರ ಬಹುಮಟ್ಟಿನ ಎಲ್ಲ ಕೃತಿಗಳಿಗೂ ಒಂದಿಲ್ಲೊಂದು ಪುರಸ್ಕಾರ ಪ್ರಶಸ್ತಿಗಳು ಬಂದಿವೆ.  1960ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡುವುದರ ಮೂಲಕ, 1941ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 26ನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡುವುದರ ಮೂಲಕ, 1956ರಲ್ಲಿ ಅಭಿಮಾನಿ ಶಿಷ್ಯವೃಂದ ‘ಅಭಿನಂದನೆ’ ಅಭಿನಂದನಾ ಗ್ರಂಥ ಸಮರ್ಪಿಸುವುದರ ಮೂಲಕ, 1961ರಲ್ಲಿ ‘ಬಂಕಿಮಚಂದ್ರ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವುದರ ಮೂಲಕ ಪ್ರೊ. ಎ.ಆರ್. ಕೃ ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಜನತೆ ಅವರಿಗೆ ನೀಡಿರುವ ಪ್ರಶಸ್ತಿ ಬಹಳ ದೊಡ್ಡದು.  ಅವರು ಕೈ ಇಟ್ಟ ಎಲ್ಲ ಕ್ಷೇತ್ರಗಳಲ್ಲಿಯೂ ಅವರೇ ಮೊದಲಿಗರಾಗಿ ಮುಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ.  ಅವರ ಈ ಆದರ್ಶದಲ್ಲಿ ಕನ್ನಡನಾಡು ತನ್ನನ್ನು ಗುರುತಿಸಿಕೊಳ್ಳುತ್ತಿದೆ.  ‘ವಚನ ಭಾರತ’, ‘ಕಥಾಮೃತ’ಗಳು ಇಂದಿಗೂ ಜನಪ್ರಿಯ ಕೃತಿಗಳಾಗಿ ಜನಸಾಮಾನ್ಯರ ನೆನಪಿನಲ್ಲಿ ಸದಾ ಹಸಿರಾಗಿದೆ.  ಸಾಹಿತ್ಯ ಮತ್ತು ಪಾಂಡಿತ್ಯದ ಕ್ಷೇತ್ರದಲ್ಲಂತೂ ಅವರನ್ನು ಬಿಟ್ಟು ಮುಂದೆ ಹೋಗುವಂತೆಯೇ ಇಲ್ಲ.  ಈ ಕ್ಷೇತ್ರದಲ್ಲಿ ಇಂದಿಗೂ ಕಾರ್ಯ ನಡೆಯುತ್ತಿದೆಯೆಂದರೆ ಅದು ಒಂದಿಲ್ಲೊಂದು ಮೂಲದಿಂದ ಎ.ಆರ್.ಕೃ ಅವರ ಪರಂಪರೆಯೇ ಆಗಿರುತ್ತದೆ.

ಈ ಮಹಾನ್ ಕನ್ನಡ ಗುರು, ಆದರ್ಶಪ್ರಾಯರಾದ ಪ್ರೊ.ಎ. ಆರ್. ಕೃಷ್ಣಶಾಸ್ತ್ರಿಗಳ ಕುರಿತಾದ ಸ್ಮರಣೆ ಮಾಡುವ ಪುಣ್ಯ ನಮ್ಮದಾಗಿದೆ.  ಅವರ ನೆನಪಿನಲ್ಲಿ ಅವರ ಪಾದಾರವಿಂದಗಳನ್ನು ಭಕ್ತಿಯಿಂದ ನೆನೆದು, ನಮ್ಮ ನಾಡಿಗೆ ಹಾಗೂ ನಮ್ಮೆಲ್ಲರ ಶುಭೋದಯಕ್ಕಾಗಿ ಆಶೀರ್ವಾದ ಬೇಡೋಣ.

(ಆಧಾರ: ನಾ. ಗೀತಾಚಾರ್ಯರು ಬರೆದಿರುವ ಎ.ಆರ್. ಕೃಷ್ಣಶಾಸ್ತ್ರಿಗಳ ಬರಹವನ್ನು ಈ ಲೇಖನ ಆಧರಿಸಿದೆ).

Tag: A.R. Krishnashastry

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)