ಬಿ. ಎಂ.ಶ್ರೀ
ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು ಜನಿಸಿದ ದಿನ ಜನವರಿ 3, 1884. ಬಿ.ಎಂ. ಶ್ರೀ ಅವರು ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು.
ಅಂದಿನ ದಿನದಲ್ಲಿ ಕನ್ನಡದಲ್ಲಿ ಪ್ರತಿಭಾರಾಹಿತ್ಯದಿಂದ, ಸಂಸ್ಕೃತ ಕಾವ್ಯದ ಬಡ ಅನುಕರಣೆಯಿಂದ ಕನ್ನಡ ಸಾಹಿತ್ಯ ದುರ್ಗತಿ ಹಿಡಿದು ಕುಳಿತಿತ್ತು. ಇಂತಹ ಕಾಲದಲ್ಲಿ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿಯರ್ ಸಾಹೇಬರು ವಿದ್ಯಾರ್ಥಿಗಳಿಗೆ ಆಧುನಿಕ ವಿಮರ್ಶನ ವಿಧಾನದಲ್ಲಿ ಬೋಧನೆ ಮಾಡಲು ಕೇವಲ ಕನ್ನಡ ಸಂಸ್ಕೃತ ಮಾತ್ರ ಗೊತ್ತಿದ್ದ ಅಂದಿನ ಪಂಡಿತರಿಂದ ಸಾಧ್ಯವಿಲ್ಲ ಎಂಬುದನ್ನು ಗಮನಿಸಿ ಬಿ. ಎಂ. ಶ್ರೀಕಂಠಯ್ಯನವರನ್ನು ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕ ಎಂದು 1909ರಲ್ಲಿ ನೇಮಿಸಿದರು. ನೇಮಕವಾದ ಎರಡು ವರ್ಷಗಳಲ್ಲಿ ಇವರ ಕನ್ನಡದ ಒಲವು, ಒಲ್ಮೆ ಇವುಗಳ ಕೀರ್ತಿ ಧಾರವಾಡದವರೆಗೂ ಹಬ್ಬಿತು. 1911ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ಬಿ.ಎಂ.ಶ್ರೀ ತಮ್ಮ ಮೊತ್ತಮೊದಲನೆಯ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಯುಗಪ್ರವರ್ತಕ ಭಾಷಣವನ್ನು ಮಾಡಿದರು. ಆಗ ಮೈಸೂರು ವಿಶ್ವವಿದ್ಯಾನಿಲಯವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಸ್ಥಾಪಿತವಾಗಿರಲಿಲ್ಲ.
19ನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಕಾವ್ಯರಚನೆ ಜಡಗಟ್ಟಿ ಅರ್ಥಹೀನವಾದ ಲಕ್ಷಣಗಳಿಗೆ ಕಟ್ಟುಬಿದ್ದು ಶುಷ್ಕವಾಗಿತ್ತು. ಇಂಗ್ಲಿಷ್ ವಿದ್ಯೆಯ ಪರಿಣಾಮವಾಗಿ ಹೊಮ್ಮಿ ಹರಡುತ್ತಿದ್ದ ಅಧುನಿಕ ವಿಚಾರಗಳುಳ್ಳ ಗದ್ಯಗ್ರಂಥಗಳ ರಚನೆಯ ಅಗತ್ಯ ಇದೆ ಎಂಬ ಅರಿವು ಕರ್ನಾಟಕದ ಎಲ್ಲ ಕಡೆಯ ವಿದ್ಯಾವಂತರಲ್ಲಿ ಮೂಡುತ್ತಿದ್ದು ಹಲವರು ಇಂತಹ ಪ್ರಯತ್ನಗಳಲ್ಲಿ ಪ್ರಾರಂಭಿಕವಾಗಿ ತೊಡಗಿದ್ದರು. ಈ ಕಾಲದಲ್ಲಿ ಹೊಸ ಬೆಳ್ಳಂಬೆಳಕನ್ನು ಹರಡುವ ಸೂರ್ಯನ ಹುಟ್ಟಿನಂತೆ ಬಂದದ್ದು ಶ್ರೀ ಅವರ ‘ಇಂಗ್ಲೀಷ್ ಗೀತಗಳು’. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮೊತ್ತ ಮೊದಲಿಗೆ ‘ಶ್ರೀ’ ಕಾವ್ಯನಾಮವನ್ನು ಧರಿಸಿದ ಬಿ.ಎಂ.ಶ್ರೀ ಅವರ ‘ಇಂಗ್ಲೀಷ್ ಗೀತಗಳು’ ಸಂಕಲನವನ್ನು ಪ್ರಕಟಿಸಿದಾಗ (1926) ‘ಮೂಡಿದನು ರವಿ ಮೂಡಿದನು’ ಹೊಸಗನ್ನಡ ಕವಿರವಿ ಮೂಡಿದನು. ಕನ್ನಡ ಕಾವ್ಯಪ್ರಪಂಚದಲ್ಲಿ ನವೋದಯ ಯುಗ ಪ್ರಾರಂಭವಾಯಿತು. ‘ಶ್ರೀ’ ಅದರ ಹರಿಕಾರ, ಪ್ರವರ್ತಕ ಎಂದು ಮುಂದೆ ಪ್ರಸಿದ್ಧರಾದರು. ‘ಇಂಗ್ಲೀಷ್ ಗೀತ’ಗಳನ್ನು ಪ್ರಕಟಿಸಿದಾಗ ಸಂಘದ ಅಧ್ಯಕ್ಷರಾಗಿದ್ದವರು ‘ಶ್ರೀ’ ಅವರ ಗುರುಗಳಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರು; ಉಪಾಧ್ಯಕ್ಷರಾಗಿದ್ದವರು ಶಿಷ್ಯ ಟಿ. ಎಸ್. ವೆಂಕಣ್ಣಯ್ಯ, ಎಂಥ ಸುಯೋಗ!
ಬಿ.ಎಂ.ಶ್ರೀ ಅವರು ತಮ್ಮ ನೆಚ್ಚಿನ ಮಡದಿ ‘ಇಬ್ಬರು ಹೆಣ್ಣುಮಕ್ಕಳನ್ನು’ ಒಬ್ಬ ಕಣ್ ಕುರುಡು ಮಗನನ್ನೂ ತಮ್ಮ ಕೈಗೊಪ್ಪಿಸಿ ಹಿಂದಿರುಗಿ ಬಾರದ ಮನೆಗೆ ತೆರಳಿದ ಮೇಲೆ, ಧನುಷ್ಕೋಟಿಯ ಬಳಿ ಕಡಲ ತೀರದಲ್ಲಿ ನಿಂತು, ಮುಳುಗುವ ಸೂರ್ಯಸಾಕ್ಷಿಯಾಗಿ ಒಂದು ಕವಿತೆಯಲ್ಲಿ ತಮ್ಮ ಎದೆಯಳಲನ್ನು ತೋಡಿಕೊಂಡು ಒಂದು ಪ್ರತಿಜ್ಞಾವಚನವನ್ನು ಕೈಗೊಂಡರು. ಇದು 15 ಪದ್ಯಗಳ ಎದೆಯ ಹೊಯ್ದಾಟವನ್ನು ಬಿಂಬಿಸುವ ಇಂಗ್ಲೀಷ್ ಭಾವಗೀತೆ. ಪದ್ಯದ ಹೆಸರೇ Dhanushkoti 1915. 1915 ಪದ್ಯಬರೆದ ವರ್ಷವನ್ನು ತೋರುತ್ತದೆ. ಈ ಪದ್ಯದ ಕೊನೆಯ ಚರಣ ಹೀಗಿದೆ:
I dare not hope to be sinless quite
Or never be shamed by wrong:
But will you not dwell in my heart, O light
Of my life and my love and my song.
ಈ ಪದ್ಯಗಳಲ್ಲಿ ಬಿ.ಎಂ. ಶ್ರೀ ತಮ್ಮ ಪತ್ನಿಯಲ್ಲಿ ಇಟ್ಟಿದ್ದ ಆಳವಾದ ಪರಿಶುದ್ಧವಾದ ದಾಂಪತ್ಯ ಪ್ರೇಮದ ಒಂದು ಉತ್ಕೃಷ್ಟವಾದ ಮಾದರಿ ನಮ್ಮ ಕಣ್ಣಿಗೆ ಕಟ್ಟುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಮನೆ ಜಗತ್ತೂ ಎಲ್ಲವೂ ಶೂನ್ಯ. ತನ್ನ ಮಗನೂ, ತಾವೂ ಸಾಯಬಾರದು ಏಕೆ? ಎನ್ನಿಸುತ್ತದೆ. ‘ಶ್ರೀ’ಯವರ ಎರಡನೆಯ ಮನಸ್ಸಿನಲ್ಲಿದ್ದ, ಬದುಕಿನ ಹೋರಾಟದಲ್ಲಿ ಹೋರಾಡಿ ಗೆಲ್ಲಬೇಕು ಎಂಬ ಮನಸ್ಸಿಗೆ ಗೆಲುವು. ಹೀಗೆ ಗೆದ್ದ ‘ಶ್ರೀ’ ಅವರು ಕನ್ನಡನಾಡು ನುಡಿಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಬದುಕಿನ ಕಡಲನ್ನು ವಿಧಿ ಕಡೆದು ನೀಡಿದ ನಂಜನ್ನು ನುಂಗಿ ನಂಜುಂಡರಾದರು. ಬದುಕಿನ ನಂಜು ಕನ್ನಡದ ಸಿರಿ ಆಯಿತು. ಅನ್ವರ್ಥಕವಾಗಿಯೂ ‘ಶ್ರೀಕಂಠ’ರಾದರು. ‘ಹೇಳದಿರು ಹೋರಾಡಿ ಫಲವಿಲ್ಲವೆಂದು’ ಎಂದು ನಂಬಿ ಗೆದ್ದ ‘ಶ್ರೀ’ಯವರು ಕನ್ನಡ ಪರವಾದ ಹೋರಾಟಕ್ಕೆ ಅಣಿಯಾಗಿ ನಿಂತರು. ‘ಇಂಗ್ಲೀಷ್ ಗೀತಗಳು’ ಪುಸ್ತಕವನ್ನು ಪ್ರಕಟಿಸಿದ ಮೇಲೆ ‘ಇಂಗ್ಲೀಷ್ ಗೀತಗಳು’ ಕನ್ನಡಕ್ಕೆ, ಕನ್ನಡನಾಡಿಗೆ ‘ಶ್ರೀ’ಯನ್ನು ಕೊಟ್ಟಿತು.
ಬಿ.ಎಂ.ಶ್ರೀಕಂಠಯ್ಯನವರು ತಮ್ಮ ಬದುಕಿನುದ್ದಕ್ಕೂ ಹೋರಾಡಿದರು. ತಮಗಾಗಿ ಅಲ್ಲ; ತಾವು ನಂಬಿದ್ದ ಗುರಿಯ ಸಾಧನೆಗೆ, ತತ್ವಕ್ಕೆ. ಪೂರ್ವ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯದ ತಿರುಳನ್ನು ಮೈಗೂಡಿಸಿಕೊಂಡಿದ್ದ ಬಿ.ಎಂ.ಶ್ರೀ ಅವರು ‘ಸರ್ವಭಾಷಾಮಯೀ ಸರಸ್ವತಿ’ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಅವರ ದೃಷ್ಟಿಯಲ್ಲಿ ಎಲ್ಲ ಭಾಷೆಗಳೂ ಸಮಾನ ಗೌರವಕ್ಕೆ ಅರ್ಹವಾದವು. ‘ವಿಶ್ವಭಾರತಿ ಶರಣು, ಕಿರುತೀರ್ಥವಲ್ತು’ ಎಂದು ‘ಶುಕ್ರಗೀತೆ’(1941)ಯಲ್ಲಿ ತಮ್ಮ ವಿಶ್ವ ವಿಶಾಲಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ವೈದಿಕ, ಜೈನ, ಬೌದ್ಧ, ಜೋರಾಷ್ಟ್ರಿಯನ್, ಕ್ರೈಸ್ತ – ಹೀಗೆ ಎಲ್ಲ ಧರ್ಮಗಳನ್ನೂ ವ್ಯಾಸಂಗಮಾಡಿ ತಮ್ಮದಾಗಿಸಿಕೊಂಡರು. ಅದೇ ರೀತಿ, ಭಾಷೆಗಳ ವಿಷಯದಲ್ಲಿಯೂ ಅವರ ನಿಲುವು ವಿಶಾಲವಾದದ್ದು. ಕನ್ನಡವಂತೂ ಸರಿಯೇ ಸರಿ; ತಾಯ್ನುಡಿ. ಮೆಟ್ರಿಕ್ಯುಲೇಷನ್, ಎಫ್. ಎ., ಬಿ.ಎ ವಿದ್ಯಾರ್ಥಿಯಾಗಿ ಇತರ ವಿಜ್ಞಾನ ಮತ್ತು ಗಣಿತ ಶಾಸ್ತ್ರ ವಿಷಯಗಳೊಂದಿಗೆ ಅವರು ವ್ಯಾಸಂಗ ಮಾಡಿದ್ದು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು. ನ್ಯಾಯಶಾಸ್ತ್ರದ ಪದವಿ ಪಡೆಯಲು ಮದರಾಸಿಗೆ ತೆರಳಿದರು. ವ್ಯಾಸಂಗ ಕಾಲದಲ್ಲಿ ಹಾಸ್ಟಲಿನಲ್ಲಿದ್ದಾಗ ಕೆಲವು ಕಾಲ ಟಿ.ಪಿ. ಕೈಲಾಸಂ, ಬಿ.ಎಂ.ಶ್ರೀ ಅವರ ಹಾಸ್ಟೆಲ್ ಗೆಳೆಯರಾಗಿದ್ದರು. ಬಹುಶಃ ಅವರ ಪ್ರಭಾವದಿಂದಲೋ ಏನೋ, ಬಿ.ಎಂ.ಶ್ರೀ ತಮಿಳನ್ನು ಕಲಿತರು. ಹಳಗನ್ನಡಕ್ಕೂ ತಮಿಳಿಗೂ ಇರುವ ಹತ್ತಿರದ ನಂಟನ್ನು ಮನಗಂಡರು. ಅನಂತರ ಹಲವು ವರ್ಷ ತಮಿಳು ಸಾಹಿತ್ಯವನ್ನು ಆಳವಾಗಿ ವ್ಯಾಸಂಗ ಮಾಡಿ ತಮಿಳಿನಲ್ಲಿ ಸ್ವತಂತ್ರವಾಗಿ ಪದ್ಯ ರಚನೆ ಮಾಡುವ ಮಟ್ಟಿಗೆ ಆ ಭಾಷೆಯಲ್ಲಿ ಪ್ರಭುತ್ವ ಪಡೆದರು. ಕನ್ನಡ ಸಂಸ್ಕೃತ ಜನ್ಯವಲ್ಲ. ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದು ಎಂಬ ಸತ್ಯಸಂಗತಿ ಅವರಿಗೆ ಸ್ಪಷ್ಟವಾಯಿತು. ಮಾತ್ರವಲ್ಲ; ಕಾಲ ಕ್ರಮದಲ್ಲಿ ತಮ್ಮ ಹೆಚ್ಚಿನ ತೌಲನಿಕ ವ್ಯಾಸಂಗದ ಫಲವಾಗಿ ಕನ್ನಡ ತಮಿಳಿಗಿಂತ ಪ್ರಾಚೀನ ಎನ್ನಬಹುದಾದ ಶಬ್ದ ರೂಪಗಳನ್ನು ಉಳಿಸಿಕೊಂಡಿದೆ ಎಂಬುದನ್ನು ಕಂಡುಕೊಂಡರು. ಕನ್ನಡದ ಬಗ್ಗೆ ಅವರಲ್ಲಿ ಅತಿಶಯವಾದ ಸಕಾರಣವಾದ ಅಭಿಮಾನ, ಹೆಮ್ಮೆ ಬೆಳೆಯಲು ಈ ಅರಿವು ಪ್ರೇರಕವಾಯಿತು.
ಕನ್ನಡ ಏಳಿಗೆಯನ್ನು ಕುರಿತು ಬಿ.ಎಂ.ಶ್ರೀ ಚಿಂತಿಸತೊಡಗಿದ್ದು ಮದರಾಸಿನಲ್ಲೆ. ಕಲಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಅಧ್ಯಕ್ಷ ಭಾಷಣದಲ್ಲಿ ಪ್ರಾರಂಭದಲ್ಲಿಯೇ ಈ ಸಂಗತಿಯನ್ನು ಸ್ಮರಿಸಿಕೊಂಡಿದ್ದಾರೆ:
“ದೆಶಾಭಿಮಾನಿಗಳೂ, ಭಾಷಾಭಿಮಾನಿಗಳೂ ತುಂಬಿರುವ ಈ ಮಹಾ ಸಭೆಯಲ್ಲಿ ಅಗ್ರಾಸನಕ್ಕೆ ಅರ್ಹನಲ್ಲದ ನನಗೆ ತಾವು ಕೊಟ್ಟಿರತಕ್ಕ ಮರ್ಯಾದೆಗೆ ನಾನು ತಲೆಯನ್ನು ತಗ್ಗಿಸಬೇಕಾಗಿದೆ. ತಮ್ಮಲ್ಲಿ ಹಲವರು ದೇಶದ ಏಳಿಗೆಗಾಗಿಯೂ, ಭಾಷೆಯ ಅಭಿವೃದ್ಧಿಗಾಗಿಯೂ ಬಹಳವಾಗಿ ಕೆಲಸಮಾಡಿರುತ್ತೀರಿ; ನಾನು ಮಾಡಿರುವುದು ಅತ್ಯಲ್ಪವಾಗಿರುತ್ತದೆ. ಈಗಲೂ ನನಗೆ ಜ್ಞಾಪಕವಿದೆ – ಮದರಾಸಿನಲ್ಲಿ ನನ್ನ ಸ್ನೇಹಿತರೂ ನಾನೂ ಸಾಯಂಕಾಲ ಸಮುದ್ರ ತೀರದಲ್ಲಿ ಮರಳಿನ ಮೇಲೆ ಕುಳಿತು, ಸಮಾಜದ ಮತ್ತು ಸಾಹಿತ್ಯದ ವಿಷಯಗಳನ್ನು ಚರ್ಚಿಸುತ್ತ, ಹೀಗೆ ಮಾಡಬೇಕು, ಹಾಗೆ ಮಾಡಬೇಕು ಕನ್ನಡ ನಾಡಿಗೆ, ಕನ್ನಡ ನುಡಿಗೆ, ನಮ್ಮ ಬಾಳಿಕೆಯನ್ನೇ ಕಾಣಿಕೆಯಾಗಿ ಒಪ್ಪಿಸಿಬಿಡಬೇಕು ಎಂದು ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದುದು. ಕನ್ನಡ ಕಾವ್ಯಗಳನ್ನೆಲ್ಲಾ ಓದಬೇಕು. ಜನರಲ್ಲಿ ಬಳಕೆಗೆ ತರಬೇಕು, ಉಪಾಧ್ಯಾಯನಾಗಿ ವಿದ್ಯಾರ್ಥಿಗಳಲ್ಲಿ ಕನ್ನಡದ ಪ್ರೇಮವನ್ನು ಬಿತ್ತಬೇಕು, ಜನ ಸಾಮಾನ್ಯಕ್ಕೆ ತಿಳಿವಳಿಕೆಯೂ, ಹೊಸ ನಡವಳಿಕೆಯೂ ಹುಟ್ಟುವಂತೆ ಕಾಲಕ್ಕೆ ತಕ್ಕ ಪುಸ್ತಕಗಳನ್ನೂ ಬರೆಯಬೇಕು. ಷೇಕ್ಸ್ಪಿಯರಿನ ನಾಟಕಗಳನ್ನೂ, ಗ್ರೀಕರ ರುದ್ರ ನಾಟಕಗಳನ್ನೂ, ಪ್ಲೇಟೋವಿನ ಸಂವಾದಗಳನ್ನೂ, ಕಾರ್ಲೈಲಿನ ಧೀರೋಪದೇಶಗಳನ್ನೂ ಕನ್ನಡಕ್ಕೆ ತರಬೇಕು ಎಂಬಿವೇ ಮೊದಲಾದ ಸವಿಗನಸುಗಳನ್ನು ಕಂಡ ಆ ಯುವಕನ ಆಸೆ ಎಷ್ಟು! ಉದ್ಯೋಗದ ನಿರ್ಬಂಧಗಳಿಗೂ, ಸಂಸಾರದ ಮನಃಕ್ಲೇಶಗಳಿಗೂ, ಪ್ರಕೃತಿಧರ್ಮವಾದ ಅಸಡ್ಡೆ ಸೋಮಾರಿತನಗಳಿಗೂ ತುತ್ತಾಗಿ, ಇದ್ದಬದ್ದ ಅಲ್ಪಶಕ್ತಿಯೂ ಕುಂದಿಹೋಗಿ, ಎಣಿಸುವುದಕ್ಕೇ ಹೋದರೆ ಕಾರ್ಯದಲ್ಲಿ ನಡೆಸಿರುವುದೆಷ್ಟು!”
ನಾಡು ನುಡಿಗಳ ಸೇವೆಯನ್ನು ಹೇಗೆ ಮಾಡಬೇಕೆಂಬ ಬಗೆಗೆ ಅವರ ಕಲ್ಪನೆ ಸ್ಪಷ್ಟವಾಗಿತ್ತು. ಪ್ರಥಮತಃ ಅವರು ಕಾವ್ಯಪ್ರೇಮಿ; ಹಾಗೂ ಹುಟ್ಟು ಕವಿ, ಸಹೃದಯ ವಿಮರ್ಶಕರು. ಅದ್ದರಿಂದ, ಸಂಸ್ಕೃತ ಕಾವ್ಯದಲ್ಲಿ ಕಾಳು ಯಾವುದು, ಜಳ್ಳು ಯಾವುದು ಎನ್ನುವುದನ್ನು ಗುರುತಿಬಲ್ಲ ಸಹೃದಯತೆಯಿಂದ ಮನಕರಗಬಲ್ಲ, ರಸಿಕ ವಿಮರ್ಶಕರಾಗಿದ್ದರು. ಇಂಗ್ಲೀಷ್, ಸಂಸ್ಕೃತ, ಗ್ರೀಕ್ ಮತ್ತು ತಮಿಳು ಕಾವ್ಯಗಳ ಪಾಂಡಿತ್ಯಪೂರ್ಣ ಪರಿಚಯ ಇದ್ದದ್ದರಿಂದ ಹಳಗನ್ನಡ ನಡುಗನ್ನಡ ಕಾವ್ಯಗಳನ್ನು ತೌಲನಿಕ ದೃಷ್ಟಿಯಿಂದ ಓದಿ, ವಿಮರ್ಶೆಮಾಡಿ, ಬೆಲೆಕಟ್ಟಬಲ್ಲವರಾಗಿದ್ದರು. ಈ ಸಾಮರ್ಥ್ಯ ಇದ್ದದ್ದರಿಂದಲೇ ಹಳಗನ್ನಡ ನಡುಗನ್ನಡ ಕಾವ್ಯದ ರಸವತ್ತಾದ, ಸಾರವತ್ತಾದ ಭಾಗವನ್ನು ಕನ್ನಡ ಜನಕ್ಕೆ ಪರಿಚಯ ಮಾಡಿಕೊಡಬೇಕೆಂಬ ಸಂಕಲ್ಪ ಅವರದಾಗಿತ್ತು. ಅಲ್ಲದೆ, ಚಾರಿತ್ರಿಕ ದೃಷ್ಟಿಯಿಂದಲೂ ಕನ್ನಡ ಕಾವ್ಯರಾಶಿಯನ್ನು ಸಮಗ್ರವಾಗಿ ವ್ಯಾಸಂಗ ಮಾಡಿದ್ದ ಅವರಿಗೆ ಕನ್ನಡ ಕಾವ್ಯ ಸಂಸ್ಕೃತ ವಾಙ್ಮಯದ ಸತ್ವವನ್ನು ಹೀರಿಕೊಂಡು ಬೆಳೆಯಬೇಕಾದ ರೀತಿಯಲ್ಲಿ ಬೆಳೆದು 19ನೆ ಶತಮಾನದ ವೇಳೆಗೆ, ಕನ್ನಡ ಕಾವ್ಯವಾಹಿನಿ ಬಲುಮಟ್ಟಿಗೆ ನಿಂತನೀರಾಗಿತ್ತು ಎಂಬ ಅರಿವಿತ್ತು. ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರವೀಣರಾಗಿದ್ದ ಬಿ.ಎಂ.ಶ್ರೀ ಇಂಗ್ಲೀಷ್ ಕಾವ್ಯವೇ ಕನ್ನಡ ಕಾವ್ಯವನ್ನು ಮೇಲಕ್ಕೆತ್ತಬೇಕೆಂದು ನಂಬಿ, ಈ ಕಾರ್ಯ ಹೇಗೆ ಆಗಬೇಕು ಎನ್ನುವುದನ್ನು ಕುರಿತು ಚಿಂತಿಸಿ ಇಂಗ್ಲೀಷ್ ಗೀತಗಳನ್ನು ರಚಿಸಿ, ಹೊಸ ಕಾವ್ಯಸೃಷ್ಟಿಗೆ ಮಾರ್ಗದರ್ಶಕರಾದರು.
‘ಇಂಗ್ಲಿಷ್ ಗೀತಗಳು’ ಒಂದು ಯುಗಪ್ರವರ್ತಕ ಕೃತಿ. ಭಾಷೆ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು – ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಕಾವ್ಯಪರಂಪರೆಯಲ್ಲಿ ಅದರ ಹೊಸತನದ ಛಾಪು ಎದ್ದುಕಾಣುವಂಥದು. ಕವಿ ಸಮಯ, ಅರ್ಥಾಲಂಕಾರ, ಸಂಸ್ಕೃತ ಭೂಯಿಷ್ಟವಾದ ಶೈಲಿ, ಆ ಶೈಲಿಗೆ ಒಗ್ಗಿ ಬಂದ ವರ್ಣವೃತ್ತ ಕಂದಗಳ ಬಳಕೆ – ಈ ಎಲ್ಲ ಸಾಪ್ರದಾಯಿಕ ಸಂಕೋಲೆಗಳನ್ನು ಕಡಿದುಹಾಕಿ, ಅಚ್ಚ ಕನ್ನಡ ನುಡಿಯಲ್ಲಿ, ಕನ್ನಡ ಛಂದಸ್ಸಿನ ಹೊಸ ಹೊಸ ಮಟ್ಟುಗಳಲ್ಲಿ, ಸ್ವಾನುಭವ ನಿಷ್ಠ ಭಾವಗೀತೆಗಳನ್ನು ಸಮೃದ್ಧವಾಗಿ ರಚಿಸಬಲ್ಲ ಕನ್ನಡ ಕವಿಗಳ ಹೊಸ ಪೀಳಿಗೆಯೊಂದು ಹುಟ್ಟಲು ಕಾರಣಪುರುಷರಾದರು ‘ಶ್ರೀ’ಯವರು.
ಕನ್ನಡ ಸಾಹಿತ್ಯಕ್ಕೆ ಶ್ರೀಯವರು ಕೊಟ್ಟ ಇನ್ನೊಂದು ಅಭೂತಪೂರ್ವ ಕೊಡುಗೆ ಎಂದರೆ, ಸಂಸ್ಕೃತ ಕಾವ್ಯಪ್ರಪಂಚದಲ್ಲಿ ಇಲ್ಲದ, ದುರಂತ ನಾಟಕ. ಶ್ರೀಯವರು ಷೇಕ್ಸ್ಪಿಯರ್ ನಾಟಕಗಳನ್ನೂ, ಗ್ರೀಕ್ ರುದ್ರನಾಟಕಗಳನ್ನೂ ಆಳವಾಗಿ ಅಧ್ಯಯನ ಮಾಡಿದ್ದರು; ಕೆಲವು ಹಳಗನ್ನಡ ಕೃತಿಗಳಲ್ಲಿ ಷೇಕ್ಸ್ಪಿಯರ್ ಕವಿ ಸೃಷ್ಟಿಸಿರುವ ದುರಂತ ನಾಯಕ ಪಾತ್ರದ ಕಲ್ಪನೆಗೆ ಹತ್ತಿರ ಬರುವ ಪಾತ್ರಗಳನ್ನು ಗುರುತಿಸಿದರು. ಅಂಥ ಪಾತ್ರಗಳಲ್ಲಿ, ನಾಗಚಂದ್ರ ಕವಿಯ ‘ಪಂಪ ರಾಮಾಯಣದ’ ರಾವಣ ಮತ್ತು ರನ್ನನ ‘ಸಾಹಸಭೀಮ ವಿಜಯದ’ ದುರ್ಯೋಧನ ಪಾತ್ರಗಳು ಅವರ ಗಮನ ಸೆಳೆದವು. ನಾಗಚಂದ್ರನ ರಾವಣನನ್ನು ಕುರಿತು A Tragic Ravana ಎಂಬ ಲೇಖನವನ್ನು ಬರೆದು ಪ್ರಕಟಿಸಿದರು. ರನ್ನನ ಕಾವ್ಯವನ್ನು ‘ಗದಾಯುದ್ಧ ನಾಟಕ’ವನ್ನಾಗಿ ರೂಪಾಂತರಿಸಿದರು.
‘ಅಶ್ವತ್ಥಾಮನ್’ ನಾಟಕ ಇಂಗ್ಲೀಷ್ ಗೀತಗಳಂತೆಯೇ ಕನ್ನಡ ಸಾಹಿತ್ಯದ ಪ್ರಕಾರ ಶಾಖೆ ಬೆಳೆಯಲು ಹೊಸ ದಾರಿ ಹಾಕಿಕೊಟ್ಟ ಮಾರ್ಗ ಪ್ರವರ್ತಕ ಕೃತಿ. ಗ್ರೀಕ್ ರುದ್ರ ನಾಟಕದ ಮಾದರಿಯ ರುದ್ರ ನಾಟಕ. ಸಾಫೋಕ್ಲೇಸನ ‘ಎಜಾಕ್ಸ್’ ನಾಟಕದ ಅನುವಾದವಾದರೂ ಸ್ವತಂತ್ರ ಕೃತಿ ಎನ್ನುವ ಮಟ್ಟಿಗೆ ‘ಶ್ರೀ’ಯವರ ಸೃಜನಶೀಲ ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ಪ್ರತಿಬಿಂಬಿಸಿರುವ ಕೃತಿ. ಅವರ ರಚನೆಗಳಲ್ಲಿ ಮುಕುಟಪ್ರಾಯವಾದದ್ದು. ಒಂದು ಹೊಸ ಭಾಷಾ ಶೈಲಿಯನ್ನೇ ಈ ನಾಟಕದಲ್ಲಿ ನಿರ್ಮಾಣ ಮಾಡಿದರು.
ಸಾಂದರ್ಭಿಕ ಕವನಗಳೇ ಆದರೂ ಶುಕ್ರಗೀತೆ, ಕನ್ನಡ ತಾಯ್ ನೋಟ ಶ್ರೀಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ, ಬಾನ್ ಕೊಂಡ ಕೃಷ್ಣನ್ – ಇವು ಸಾಂದರ್ಭಿಕತೆಯನ್ನು ದಾಟಿ ಒಳ್ಳೆಯ ಕಾವ್ಯತ್ವದ ಸಿದ್ಧಿಯನ್ನು ಪಡೆದ ರಚನೆಗಳಾಗಿವೆ. 1914ರಷ್ಟು ಹಿಂದೆ ಪ್ರಕಟವಾದ ಇವುಗಳಲ್ಲಿ ಪ್ರಧಾನವಾಗಿ ಮಿಡಿಯುವುವು ಕನ್ನಡ ನಾಡು ನುಡಿಗಳ ಪ್ರೇಮ, ರಾಜಭಕ್ತಿ, ಪ್ರಕೃತಿ ಸೌಂದರ್ಯ ಪ್ರಜ್ಞೆ, ‘ಭಾರತಮಾತೆಯ ನುಡಿಯಲ್ಲಿ’ ಪ್ರಾಂತ್ಯಾಭಿಮಾನದ ಜೊತೆ ಜೊತೆಗೇ ರಾಷ್ಟ್ರಪ್ರೇಮವೂ ವ್ಯಕ್ತವಾಗಿರುವುದು ಗಮನಾರ್ಹ.
‘ಕನ್ನಡ ಛಂದಸ್ಸಿನ ಚರಿತ್ರೆ’ ಬರಹ ಕವಿರಾಜಮಾರ್ಗದ ಕಾಲದಿಂದ ಮೊದಲ್ಗೊಂಡು ಕನ್ನಡ ಕಾವ್ಯದಲ್ಲಿ ಪ್ರಯೋಗವಾಗಿರುವ ಹಾಗೂ ಜನಪದ ಗೀತೆಗಳಲ್ಲಿ ಪ್ರಯೋಗವಾಗಿರುವ ವಿವಿಧ ಛಂದೋರೂಪಗಳಲ್ಲಿ ಕಂಡುಬರುವ ಲಯವಿನ್ಯಾಸಗಳನ್ನೂ ಛಂದೋಗತಿಗಳನ್ನೂ ವೈದಿಕ ಛಂದಸ್ಸಿನ ಹಿನ್ನೆಲೆಯಲ್ಲಿ, ತಮಿಳು ಮತ್ತು ತೆಲುಗು ಛಂದೋರೂಪಗಳೊಂದಿಗೆ ಹೋಲಿಸಿ ಶ್ರೀಯವರು ತೌಲನಿಕವಾಗಿ ನಡೆಸಿರುವ ಕನ್ನಡ ಛಂದಸ್ಸಿನ ಚಾರಿತ್ರಿಕ ವಿಶ್ಲೇಷಣಾತ್ಮಕ ನಿರೂಪಣೆ ಈ ನಿಟ್ಟಿನಲ್ಲಿ ಮೊತ್ತಮೊದಲಿನದು; ಮಾತ್ರವಲ್ಲ, ಆಗಿನ ಕಾಲದ ಸಂಶೋಧನ ಸಂದರ್ಭದಲ್ಲಿ ಸಮಗ್ರವಾದುದು ಅಲ್ಲದೆ, ಮುಂದಿನ ಸಂಶೋಧನೆಗಳ ಪ್ರಯತ್ನಗಳಿಗೆ ಮಾರ್ಗದರ್ಶಕವಾಯಿತು.
‘ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥದ ಮೂಲಕ ಸಾಹಿತ್ಯ ಚರಿತ್ರೆಯ ವಿವರಗಳನ್ನು ದಾಖಲೆ ಎನಿಸದಂತೆ ಮಾಡಿ, ಸಹೃದಯ ವಿಮರ್ಶಕನ ರಸವತ್ತಾದ ನಿರೂಪಣೆ ಎನಿಸುವಂತೆ ಸಾಹಿತ್ಯ ಚರಿತ್ರೆಯನ್ನು ಶ್ರೀ ಅವರು ರಚಿಸಿದರು.
ಕನ್ನಡಕ್ಕೆ ಒಂದು ಕಟ್ಟು, ಪೂರ್ವದ ಹಳಗನ್ನಡ ಮತ್ತು ತಮಿಳು, ಕನ್ನಡ ಮೊದಲೋ ತಮಿಳು ಮೊದಲೋ ಎಂಬ ಲೇಖನಗಳಲ್ಲಿಯೂ ಕಾನನದ ಕೈಪಿಡಿಯಲ್ಲಿ ಟಿ.ಎಸ್. ವೆಂಕಣ್ಣಯ್ಯನವರೊಂದಿಗೆ ಬರೆದಿರುವ ‘ಕನ್ನಡ ಭಾಷೆಯ ಚರಿತ್ರೆ’ ಎಂಬ ಅಧ್ಯಾಯದಲ್ಲಿಯೂ ಶ್ರೀ ಅವರು ಹಳಗನ್ನಡ ವ್ಯಾಕರಣ ಹಾಗೂ ಕನ್ನಡ ಭಾಷಾ ಚರಿತ್ರೆಗಳಲ್ಲಿ ಎಷ್ಟು ಆಳವಾದ ಪಾಂಡಿತ್ಯವನ್ನು ಪಡೆದಿದ್ದರು ಎಂಬುದು ವ್ಯಕ್ತವಾಗುತ್ತದೆ. ಕೇಶಿರಾಜನ ‘ಶಬ್ದಮಣಿದರ್ಪಣ’ವನ್ನು ಅವರು ಕರತಲಾಮಲಕ ಮಾಡಿಕೊಂಡಿದ್ದರು. ತಮಿಳಿನ ‘ನನ್ನೂಲ್’ ವ್ಯಾಕರಣದ ಮಾದರಿಯಲ್ಲಿ ಶಾಸ್ತ್ರಶುದ್ಧವಾದ ಸಂಕ್ಷಿಪ್ತ ವ್ಯಾಕರಣ ಸೂತ್ರಗಳನ್ನು ರಚಿಸಬೇಕೆಂದು ಅವರ ಉದ್ದೇಶವಾಗಿತ್ತು. ಆ ದಿಸೆಯಲ್ಲಿ ಕೆಲವು ಮಾದರಿ ಸೂತ್ರಗಳನ್ನು ರಚಿಸಿದ್ದರು. ಟಿ.ಎಸ್. ವೆಂಕಣ್ಣಯ್ಯನವರೊಡನೆ ಬಿ.ಎಂ.ಶ್ರೀ ಯವರು ಸಂಪಾದನೆ ಮಾಡಿದ ಕುಮಾರವ್ಯಾಸ ಭಾರತ ಸಂಗ್ರಹ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಲೇ ಇಲ್ಲ!
ಉತ್ತರ ಕರ್ನಾಟಕದಲ್ಲಿ ಆಲೂರು ವೆಂಕಟರಾಯರೂ, ಮೈಸೂರು ಸೀಮೆಯಲ್ಲಿ ಬಿ.ಎಂ.ಶ್ರೀಯವರೂ ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರಾದರು. 1936ರಲ್ಲಿ ಹಂಪೆಯಲ್ಲಿ ವಿಜಯನಗರ ಸಾಮ್ರಾಜ್ಯದ 600ನೆ ವರ್ಷದ ಉತ್ಸವ ಜರುಗಿದ ಸಂದರ್ಭದಲ್ಲಿ ಶ್ರೀ ಅವರು ಸಾಹಿತ್ಯಗೊಷ್ಟಿಯ ಅಧ್ಯಕ್ಷರಾಗಿದ್ದರು. ಅಲ್ಲಿಗೆ ಹೋಗುವ ಮುನ್ನ ಕನ್ನಡ ನಾಡನ್ನು ಬಲವಂದು, ನಾಡಿನ ನೋಟದ ಚೆಲುವು ಸವಿದು, ಆ ಚೆಲುವಿನಲ್ಲಿ ತಾಯನ್ನು ಸಾಕ್ಷಾತ್ಕರಿಸಿಕೊಂಡು, ‘ಕನ್ನಡ ತಾಯ ನೋಟ’ವನ್ನು ಶ್ರೋತೃಗಳಿಗೂ ಕಾಣಗೊಟ್ಟರು – ತಮ್ಮ ಪದ್ಯರೂಪದ ಭಾಷಣದಲ್ಲಿ, ಶ್ರೀಯವರು ತಾವು ಕಂಡು ಇತರರಿಗೂ ಕಾಣಿಸಿದ ‘ಕನ್ನಡ ತಾಯ ನೋಟ’ ಅವರು ಕಂಡ ಕರ್ನಾಟಕ ಏಕೀಕರಣದ ಕನಸು; ಮೂರ್ತರೂಪ. ಎರಡು ವರ್ಷದ ತರುವಾಯ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದಾಗ ಅವರು ಮೊತ್ತಮೊದಲು ಮಾಡಿದ ಕೆಲಸ ಎಂದರೆ ಕನ್ನಡದ ಬಾವುಟವನ್ನು ಹಾರಿಸಿದ್ದು; ತಾವು ರೂಪಿಸಿದ ಕನ್ನಡದ ಬಾವುಟದ ಕಲ್ಪನೆಗೆ ಕವನರೂಪವನ್ನು ಕೊಟ್ಟರು; ಪ್ರಾಚೀನ-ಅರ್ವಾಚೀನ ಕನ್ನಡ ಕವಿಗಳು ಕಂಡ ಕರ್ನಾಟಕವನ್ನು ವರ್ಣಿಸುವ ಕವನಗಳ ಸಂಕಲನವೊಂದನ್ನು ‘ಕನ್ನಡ ಬಾವುಟ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು; ಕನ್ನಡ ಬಾವುಟವನ್ನು ಹಿಡಿದು ಕನ್ನಡ ನಾಡನ್ನೆಲ್ಲ ಸುತ್ತಿ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕನ್ನಡ ಜನಮನವನ್ನು ಸಿದ್ಧಗೊಳಿಸಿದರು.
ಕನ್ನಡ ಭಾಷೆ, ಸಾಹಿತ್ಯಗಳ ಸರ್ವತೋಮುಖ ಪ್ರಗತಿ, ಕನ್ನಡ ನಾಡಿನ ಮತ್ತು ಕನ್ನಡಿಗರ ಐಕ್ಯ ಇವುಗಳ ಬಗೆಗೆ ಶ್ರೀಯವರು ತಮ್ಮ ವಿದ್ಯಾರ್ಥಿ ದೆಶೆಯಿಂದ ಹಿಡಿದು ಧಾರವಾಡದ ಕಾಲೇಜೊಂದರ ಪ್ರಿನ್ಸಿಪಾಲರಾಗಿ ಒಂದೆರಡು ವರ್ಷ ಕೆಲಸ ಮಾಡಿ 1946ರಲ್ಲಿ ಹೃದಯಾಘಾತದಿಂದ ನಿಧನರಾಗುವವರೆಗೆ ಚಿಂತಿಸುತ್ತ, ಚಿಂತನೆಗಳನ್ನು ಕಾರ್ಯರೂಪಕ್ಕೆ ತರುತ್ತ ಇದ್ದರು. ಇದನ್ನೆಲ್ಲಾ ನಾವು ಗಮನಿಸಿದಾಗ ‘ಶ್ರೀ’ಯವರ ಬಗ್ಗೆ ಬಲ್ಲವರು ಹೇಳಿದ ‘ಕನ್ನಡದ ಕಣ್ವ’, ‘ಆಚಾರ್ಯ ಪುರುಷ’ (ನುಡಿದಂತೆ ನಡೆದು ದಾರಿತೋರಿದ ಮಹನೀಯ), ‘ನಾಡೋಜ’ ಎಂಬ ಮಾತುಗಳು ಗೌರವದ ಪ್ರಶಸ್ತಿವಾಚಕಗಳಾಗಿರದೆ ಅನ್ವರ್ಥಕವಾಗಿದ್ದವು ಎಂದು ಮನವರಿಕೆಯಾಗುತ್ತದೆ. ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನಗಳು.
(ಆಧಾರ: ಕನ್ನಡದ ಮಹಾ ಪಂಡಿತರಾದ ಎಂ.ವಿ. ಸೀತಾರಾಮಯ್ಯನವರು ಬರೆದ ಆಚಾರ್ಯ ಬಿ.ಎಂ.ಶ್ರೀ. ಅವರ ಕುರಿತ ಬರಹ) ಫೋಟೋ ಕೃಪೆ: www.kamat.com
ಪ್ರತಿಕ್ರಿಯೆ