ಬೈಕೆರೆ ನಾಗೇಶ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಸಂತಾಪ
ಬೆಂಗಳೂರು: ಕರ್ನಾಟಕಕ್ಕೂ ಮತ್ತು ದೆಹಲಿಗೂ ಸಂಪರ್ಕ ಸೇತುವಾಗಿದ್ದ ಬೈಕೆರೆ ನಾಗೇಶ್ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ. ನಾಡು-ನುಡಿಗೆ ಸದಾ ತುಡಿಯುತ್ತಿದ್ದ ಜೀವದ ಹಠಾತ್ ಅಗಲುವಿಕೆಯಿಂದ ತುಂಬಲಾರದ ನಷ್ಟವಾಗಿದೆ. ತಮ್ಮ ಸೇವಾವಧಿಯಲ್ಲಿ ನಾಗೇಶ್ ಅವರ ನಿಕಟ ಒಡನಾಟ ತಮಗೆ ಲಭಿಸಿತ್ತು ಎಂದು ಹೇಳಿರುವ ನಾಡೋಜ ಡಾ.ಮಹೇಶ ಜೋಶಿಯವರು ಯಾರ ವೈರತ್ವವನ್ನೂ ಕಟ್ಟಿ ಕೊಳ್ಳದೆ ಮುಗುಳ್ನಗೆಯಲ್ಲಿಯೇ ಜಗತ್ತನ್ನು ಗೆಲ್ಲುತ್ತಿದ್ದ ಅವರು ಕರ್ನಾಟಕಕ್ಕೆ ಅನುಕೂಲವಾಗ ಬಲ್ಲ ಯೋಜನೆಗಳ ಪಟ್ಟಿಯನ್ನು ಸದಾ ಸಿದ್ದವಾಗಿಟ್ಟು ಕೊಳ್ಳುತ್ತಿದ್ದರು. ಕಾವೇರಿ ಜಲವಿವಾದ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೀಗೆ ಹಲವು ಯೋಜನೆಗಳಲ್ಲಿ .. ಅವರ ಪಾತ್ರ ಬಹಳ ಮುಖ್ಯವಾದದ್ದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ಜಾಫರ್ ಶರೀಫರ ವಿಶೇಷ ಅಧಿಕಾರಿಯಾಗಿ ದೆಹಲಿಗೆ ಹೋದ ನಾಗೇಶ್ ಅಲ್ಲಿಂದ ಮುಂದಕ್ಕೆ ಹಿಂದಿರುಗಿ ನೋಡಿದ್ದೇ ಇಲ್ಲ, ಎಂ.ಎಸ್.ಗುರುಪಾದ ಸ್ವಾಮಿ, ರಾಮಕೃಷ್ಣ ಹೆಗಡೆ, ಧನಂಜಯ ಕುಮಾರ್, ಎಂ.ವಿ. ರಾಜಶೇಖರನ್, ಅನಂತ ಕುಮಾರ್, ಸದಾನಂದ ಗೌಡ ಸೇರಿದಂತೆ ರಾಜ್ಯದಿಂದ ಸಚಿವರಾದ ಬಹುತೇಕರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ನಾಗೇಶ್ ದೇವೇಗೌಡರು ಪ್ರಧಾನ ಮಂತ್ರಿಗಳಾದಾಗ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೂಡ ಕೆಲಸ ಮಾಡಿದ್ದರು. ಸದಾ ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಬಗೆ ಬಗೆದು ರಾಜ್ಯದ ಕಡೆ ಬರುವಂತೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿ ಕೊಂಡು ಸಾಹಿತ್ಯದ ಕಡೆ ಅಪಾರ ಒಲವನ್ನು ಇಟ್ಟು ಕೊಂಡಿದ್ದ ನಾಗೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೂ ಉತ್ತಮ ಒಡನಾಟ ಇಟ್ಟು ಕೊಂಡಿದ್ದರು ಎಂದು ಹೇಳಿದ್ದಾರೆ.
ದೆಹಲಿಗೆ ಸಹಾಯ ಕೇಳಿ ಹೋದ ಕನ್ನಡಿಗರೆಲ್ಲರಿಗೂ ನಾಗೇಶ್ ನೆರವಾದವರು. ಇಂತಹ ನೂರಾರು ಕತೆಗಳಿವೆ. ಪತ್ರಕರ್ತರು, ರಾಜಕಾರಣಿಗಳು, ಬರಹಗಾರರು ಎಲ್ಲರೂ ಅವರಿಂದ ನೆರವನ್ನು ಪಡೆದಿದ್ದಾರೆ ಎಂದು ನೆನಪು ಮಾಡಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಹಲವಾರು ವರ್ಷ ರಾಜ್ಯದ ನವದೆಹಲಿ ಪ್ರತಿನಿಧಿಯಾಗಿಯೂ ನಾಗೇಶ್ ಆ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ. ಹುಟ್ಟೂರಿನ ವ್ಯಾಮೋಹದಿಂದ ಸಕಲೇಶ ಪುರ ಮತ್ತು ಬೈಕೆರೆಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಅವರು ರಾಜಕಾರಣಕ್ಕೆ ಬರಲು ಒತ್ತಡವಿದ್ದರೂ ಅದನ್ನು ಮೆಟ್ಟಿ ನಿಂತವರು. ನಿವೃತ್ತ ಜೀವನವನ್ನು ಕರ್ನಾಟಕದಲ್ಲಿ ಕಳೆಯಲು ಬಯಸಿದ್ದ ಅವರಿಗೆ ಇನ್ನಷ್ಟು ಆಯಸ್ಸು ಸಿಗ ಬೇಕಿತ್ತು. ಅವರು ಕನ್ನಡ ಮತ್ತು ಕನ್ನಡ ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೆಯಲ್ಲಿರುತ್ತವೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರತಿಕ್ರಿಯೆ