ಮಂಡ್ಯದಲ್ಲಿ ಆಯೋಜಿತವಾಗಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಆಡಳಿತಾತ್ಮಕ ಬೆಂಬಲ: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭರವಸೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮಂಡ್ಯದಲ್ಲಿ ಆಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರನ್ನು ಇಂದು ಅವರ ಕಛೇರಿಯಲ್ಲಿ ಭೇಟಿ ಮಾಡಿದ್ದರು. ಬೇರೆ ರಾಜ್ಯದಿಂದ ಬಂದಿದ್ದರೂ ಸ್ಪಷ್ಟವಾದ ಕನ್ನಡವನ್ನು ಕಲಿತು ಕನ್ನಡದ ದಿನಪತ್ರಿಕೆಗಳಲ್ಲಿ ಲೇಖನ ಬರೆಯುವ ಮಟ್ಟಿಗೆ ಪರಿಣಿತಿಯನ್ನು ಪಡೆದಿರುವ ಮುಖ್ಯ ಕಾರ್ಯದರ್ಶಿಗಳ ಸಾಧನೆಯನ್ನು ಪ್ರಶಂಸಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಆಡಳಿತದಲ್ಲಿ ಕನ್ನಡವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅವರು ಮಾಡಿದ ಪ್ರಯತ್ನಗಳನ್ನೂ ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಶ್ಲಾಘನೆಗೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಿಗೂ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದು ಎಂದು ತಿಳಿಸಿ ಮಂಡ್ಯದಲ್ಲಿ ಆಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯಿಂದಲೂ ಆಡಳಿತಾತ್ಮಕ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಹಾಜರಿದ್ದರು.
ಪ್ರತಿಕ್ರಿಯೆ