ಮೋಹನ್ ದೇವ್ ಆಳ್ವ – ಡಾ. ಎಂ. ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ ಮತ್ತು ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ

ಮೋಹನ್ ದೇವ್ ಆಳ್ವ, ಶೈಲಜಾ ಆಳ್ವ ಮತ್ತು ಟಿ. ಗಿರಿಜಾ ದತ್ತಿ ಪ್ರಶಸ್ತಿ ಸಮಾರಂಭ

mohan-alva-and-girija-datti
ಡಾ. ಶ್ಯಾಮಲಾ ಜಾಗೀರ್ ದಾರ್ ಮತ್ತು ಡಾ. ಬಾನು ಮುಷ್ತಾಕ್ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ
mohan-alva-and-girija-datti

ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ೧೬, ೨೦೧೬ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಶ್ಯಾಮಲಾ ಜಾಗಿರ್‍ದಾರ್ ಹಾಗೂ ಡಾ. ಬಾನು ಮುಷ್ತಾಕ್ ಅವರುಗಳನ್ನು ದತ್ತಿ ಪ್ರಶಸ್ತಿಗಳನ್ನಿತ್ತು  ಸನ್ಮಾನಿಸಿತು.  ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸನ್ಮಾನಿತರೊಂದಿಗೆ, ಈ ಪ್ರಶಸ್ತಿಗಳ ದತ್ತಿ ಸ್ಥಾಪಕರುಗಳೂ ಉಪಸ್ಥಿತರಿದ್ದರು.

ಶ್ರೀ ಕೆ. ಮೋಹನ್‍ದೇವ್ ಆಳ್ವ, ಡಾ. ಎಂ.ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ

ಶ್ರೀ ಮೋಹನ್‍ದೇವ್ ಆಳ್ವ ಅವರದು ನಾಡಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಚಿರಪರಿಚಿತ ಹೆಸರು. ಅವರು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ಪದಾಧಿಕಾರಿಗಳಾಗಿ ನಿಸ್ವಾರ್ಥಸೇವೆ ಸಲ್ಲಿಸಿ, ತಮ್ಮ ಬದುಕನ್ನು ಅರ್ಥಪೂರ್ಣಗೊಳಿಸಿಕೊಂಡಿದ್ದಾರೆ. ಅಂದಿನ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಇವರದು ಸಕ್ರಿಯ ಪಾತ್ರ. ಅದರ ಮುಖೇನ ಗ್ರಾಮೀಣ ಭಾಗದ ಶೈಕ್ಷಣಿಕ ಉನ್ನತಿಗೆ ಅನನ್ಯವೆನ್ನುವಂತೆ ಕಾರ್ಯಕೈಗೊಂಡರು. ಇವರು ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ಉಲ್ಲೇಖನಿಯ ವಿಷಯ.

ಶ್ರೀ ಮೋಹನ್‍ದೇವ್ ಆಳ್ವ ಅವರು ತಮ್ಮ ಧರ್ಮಪತ್ನಿಯಾದ ಡಾ. ಎಂ.ಕೆ. ಶೈಲಜಾ ಆಳ್ವ ಅವರೊಡಗೂಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೩ ಲಕ್ಷ ರೂ. ದತ್ತಿಯೊಂದನ್ನು ಸ್ಥಾಪಿಸಿದ್ದು, ಇದರಿಂದ ಬರುವ ಆದಾಯದಲ್ಲಿ ನಾಡಿನ ಶ್ರೇಷ್ಠ ಸಂಗೀತಗಾರರಿಗೆ ನಗದು ರೂ.೧೦,೦೦೦/- ಒಳಗೊಂಡಂತೆ ಪ್ರಶಸ್ತಿ ಪತ್ರ, ಫಲಕ ಹಾಗೂ ಫಲತಾಂಬೂಲಗಳನ್ನು ನೀಡಿ ಪ್ರತಿವರ್ಷ ಅವರನ್ನು ಗೌರವಿಸಿ, ಸನ್ಮಾನಿಸಲಾಗುತ್ತಿದೆ.  ಈ ದಂಪತಿಗಳು ಇತ್ತೀಚೆಗೆ ಇನ್ನೂ ೨ ಲಕ್ಷ ರೂಗಳನ್ನು ನೀಡುವುದರ ಮೂಲಕ  ಈ ದತ್ತಿ ಮೌಲ್ಯವನ್ನು ೫ ಲಕ್ಷಕ್ಕೇರಿಸಿದ್ದಾರೆ.     ಆಳ್ವ ದಂಪತಿಗಳ ಈ ಔದಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತದೆ.

ಡಾ. ಶ್ಯಾಮಲಾ ಜಾಗಿರ್‍ದಾರ್

ರಾಗರಜಿನಿ, ಮಿಸ್ ಮೆಲೋಡಿ ಆಫ್ ಕರ್ನಾಟಕ, ನೈಟಿಂಗೇಲ್ ಆಫ್ ಸೌತ್, ಸ್ವೀಟ್ ವಾಯ್ಸ್ ಆಫ್ ಮೈಸೂರು ಹೀಗೆ ಗಾಯನ ಕ್ಷೇತ್ರದ ಶ್ರೇಷ್ಠ ಬಿರುದಾವಳಿಗಳನ್ನು ಪಡೆದಿರುವ ಪ್ರಸಿದ್ಧ ಸಂಗೀತ ವಿದುಷಿ ಡಾ. ಶ್ಯಾಮಲಾ ಜಾಗಿರ್‍ದಾರ್ ಅವರು ಜನಿಸಿದ್ದು ೧೯೪೧ ಏಪ್ರಿಲ್ ೫ ರಂದು. ಗುರುಗಳಾದ ಶ್ರೀ ಅವಧೂತ ಬೂವ ಮತ್ತು ಶ್ರೀ ರಾಮಚಂದ್ರ ಜೋಷಿ ಇವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಲಿಕೆ ಪ್ರಾರಂಭಿಸಿದ ಇವರು ಸಂಗೀತದ ನಾನಾ ಮಜಲುಗಳನ್ನು ಮೈಗೂಡಿಸಿಕೊಂಡು ನಾಲ್ಕೂ ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ತಮ್ಮ ಗಾನಸುಧೆಯನ್ನು ಸಂಗೀತಪ್ರಿಯರಿಗೆ ಉಣಬಡಿಸಿದ್ದಾರೆ. ೧೯೫೭ರಲ್ಲಿ ರಶಿಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮೊದಲನೆಯ ಸಂಗೀತ ಪ್ರದರ್ಶನ ನೀಡಿದಾಗ ಅವರಿಗೆ ಹದಿನಾರರ ಹರೆಯ. ಲಾಲ್‍ಬಹದ್ದೂರ್ ಶಾಸ್ತ್ರಿ, ಡಾ. ರಾಧಾಕೃಷ್ಣನ್, ಇಂದಿರಾಗಾಂಧಿ, ಬಿ.ಡಿ. ಜತ್ತಿ ಮೊದಲಾದ ದಿಗ್ಗಜರ ಸಮ್ಮುಖದಲ್ಲಿ ಸಂಗೀತ ಕಚೇರಿ ನಡೆಸಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಐದು ದಶಕಗಳ ಕಾಲ ಲಘು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರಿಗೆ ಸಂಗೀತ ಅಕಾಡೆಮಿಯ ಫೆಲೋಶಿಪ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಷರೀಪ ಪ್ರಶಸ್ತಿಗಳು ಲಭಿಸಿವೆ. ಇವರು ತಮ್ಮ ಗಾಯನ ಪ್ರತಿಭೆಗೆ ಅನೇಕ  ಬಂಗಾರ ಹಾಗೂ ಬೆಳ್ಳಿ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು  ಈ ಮಹತ್ಸಾಧಕರಿಗೆ  ‘ಶ್ರೀ ಕೆ. ಮೋಹನ್‍ದೇವ್ ಆಳ್ವ, ಡಾ. ಎಂ.ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಿತು.

ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಶೈಲಜ ಟಿ.ಎಸ್. ಅವರು ‘ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ’ ದತ್ತಿ ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಮಗ್ರ, ಗಣನೀಯ, ಗುಣಾತ್ಮಕ ಸಾಧನೆ ಮಾಡಿದ ಅರ್ಹ ಮಹಿಳಾ ಸಾಹಿತಿಯೊಬ್ಬರಿಗೆ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೩ ಲಕ್ಷ ರೂ. ದತ್ತಿ ಇರಿಸಿದ್ದು, ಇದರಿಂದ ಬರುವ ಆದಾಯದಿಂದ ಪ್ರತಿ ವರ್ಷ ಪ್ರಶಸ್ತಿ ಪುರಸ್ಕೃತರಿಗೆ ರೂ.೨೦,೦೦೦ ಗಳ ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಫಲತಾಂಬೂಲಗಳನ್ನು ನೀಡಿ ಗೌರವಿಸಲಾಗುತ್ತಿದೆ.  ಇದೀಗ ಡಾ. ಬಾನು ಮುಷ್ತಾಕ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗಿದೆ.

ಡಾ. ಬಾನು ಮುಷ್ತಾಕ್

ಹಾಸನ ನಗರಸಭಾ ಸದಸ್ಯೆಯಾಗಿ, ಪ್ರಮುಖ ಮಂಡಳಿ, ಪ್ರಾಧಿಕಾರಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಸಾರ್ವಜನಿಕ-ಸಾಮಾಜಿಕ ಕ್ಷೇತ್ರಗಳ ಜೊತೆ ಜೊತೆಗೆ ಸಾರಸ್ವತಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಬಾನು ಮುಷ್ತಾಕ್ ವೃತ್ತಿಪರ ವಕೀಲರು. ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಹುಲುಸಾದ ಕೃಷಿ ನಡೆಸಿರುವ ಇವರು ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಒದ್ದೆ ಕಣ್ಣಿನ ಬಾಗಿನ, ಹಸೀನಾ ಮತ್ತು ಇತರ ಕಥೆಗಳು, ಸಫೀರಾ, ಇಬ್ಬನಿಯ ಕಾವು, ಬಡವರ ಮಗಳು ಹೆಣ್ಣಲ್ಲ – ಹೀಗೆ ಅನೇಕ ಕಥಾ, ಕವನ, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ಕರಿನಾಗರಗಳು ಎಂಬ ಸಣ್ಣಕತೆ ಆಧಾರಿತ ಹಸೀನಾ ಚಲನಚಿತ್ರಕ್ಕೆ ೩ ರಾಷ್ಟ್ರ ಪ್ರಶಸ್ತಿಗಳು ದೊರೆತಿವೆ. ಇವರ ಹಲವಾರು ಕಥೆಗಳು ಭಾರತದ ಇತರೆ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಡಾ. ಬಾನು ಮುಷ್ತಾಕ್ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ ಸೇರಿದಂತೆ ನಾಡಿನ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಬಾನು ಮುಷ್ತಾಕ್ ಅವರಿಗೆ    ‘ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ’ ನೀಡಿ ಆತ್ಮೀಯವಾಗಿ ಗೌರವಿಸಿದೆ.

Tag: K. Mohandev Alva, Dr. M.K. Shylaja Alva Datti Prashasti, Shyamala Jagirdar, T. Girija Sahitya Datti Prashasti,  Dr. Banu Mushthaq

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)