ರಂಗಕಲಾವಿದ ಬಸವರಾಜ ಬೆಂಗೇರಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ’
ಬೆಂಗಳೂರು: 2024ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ’ಗಾಗಿ ಹಿರಿಯ ನಾಟಕಕಾರ ಮತ್ತು ರಂಗಕಲಾವಿದ ಬಸವರಾಜ ಚೆನ್ನವೀರಪ್ಪ ಬೆಂಗೇರಿಯವರನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಜೋಗಿಯವರು ತಮ್ಮ ಹೆತ್ತವರಾದ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿಯವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದವರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಧಾರವಾಡ ಜಿಲ್ಲೆ ಕುಂದಗೋಳದ ಸಮೀಪದ ಶಿರೂರು ಗ್ರಾಮದವರಾದ ಬಸವರಾಜ ಬೆಂಗೇರಿಯವರು ‘ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ’ ನಾಟಕದ ಫಕೀರೇಶ್ವರನ ಪಾತ್ರಕ್ಕೆ ಹೆಸರಾದವರು. ಈ ನಾಟಕವು ಇದುವರೆಗೂ 1400ಕ್ಕೂ ಹೆಚ್ಚು ಪ್ರದರ್ಶನವನ್ನು ಕಂಡು ದಾಖಲೆಯನ್ನು ಸ್ಥಾಪಿಸಿದೆ. ಛತ್ರಪತಿ ಶಿವಾಜಿ, ಕದಳಿಯ ಕರ್ಪೂರ, ತಂದೆ ಇದ್ದರೂ ತಬ್ಬಲಿಯಾದೆ ಮೊದಲಾದವು ಅವರು ರಚಿಸಿದ ಪ್ರಮುಖ ನಾಟಕಗಳು. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ಅವರು ‘ಹೇಮರೆಡ್ಡಿ ಮಲ್ಲಮ್ಮ’ ನಾಟಕದಲ್ಲಿ ಮಲ್ಲಮ್ಮನ ಸ್ತ್ರೀಪಾತ್ರವನ್ನು ನಿರ್ವಹಿಸಿದ್ದರು. ವಿವಿಧ ನಾಟಕ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಅವರು 2004ರಲ್ಲಿ ‘ವಿಶ್ವಭಾರತಿ ರಮ್ಯನಾಟಕ ಸಂಘ (ರಿ)’ ಎಂಬ ಸ್ವಂತ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಅನೇಕ ಪ್ರಮುಖ ನಾಟಕೋತ್ಸವಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಈ ನಾಟಕ ಮಂಡಳಿಗೆ ಇದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಭಾಗವಹಿಸಿದ್ದರು.
ಪುರಸ್ಕೃತರಾದ ಬಸವರಾಜ ಬೆಂಗೇರಿಯವರನ್ನು ವಿಶೇಷವಾಗಿ ಅಭಿನಂದಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅವರ ರಂಗ ಸೇವೆ ಇನ್ನಷ್ಟು ಗುಣಾತ್ಮಕವಾಗಿ ಸಾಗಲಿ ಎಂದು ಆಶಿಸಿದ್ದಾರೆ.
ಪ್ರತಿಕ್ರಿಯೆ