ಡಾ. ಮನು ಬಳಿಗಾರ್ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಆರಂಭಿಸಿದ ವಿನೂತನ ಕಾರ್ಯಕ್ರಮ ‘ಸಾಧಕರೊಡನೆ ಸಂವಾದ’. ದಿನಾಂಕ ಜೂನ್ ೨೫, ೨೦೧೬ರಂದು ನಡೆದ ಈ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಹೆಸರಾಂತ ಲೇಖಕಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸುಧಾ ಮೂರ್ತಿಯವರು. ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಧಕರೊಡನೆ ಸಂವಾದದ ಈ ಪ್ರಥಮ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧಕರು ಮಾಜಿ ಸಚಿವರಾಗಿ ಹಾಗೂ ಸಂಸ್ಕೃತಿ ಚಿಂತಕರಾಗಿ ಪ್ರಸಿದ್ಧರಾಗಿರುವ ಡಾ. ಲೀಲಾದೇವಿ ಆರ್. ಪ್ರಸಾದ್ ಅವರು. ಈ ನೂತನ ಕಾರ್ಯಕ್ರಮವನ್ನು ಆಯೋಜಿಸಿವಲ್ಲಿ ಕ್ರಿಯಾಶೀಲ ಪಾತ್ರ ನಿರ್ವಹಿಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರು ಉಪಸ್ಥಿತರಿದ್ದರು.
ಡಾ. ಲೀಲಾದೇವಿ ಆರ್. ಪ್ರಸಾದ್
ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಸಾಮಾಜಿಕ ರಾಜಕೀಯ ಜೀವನವನ್ನು ೧೯೫೭ರಲ್ಲಿ ಪ್ರಾರಂಭಿಸಿದ ಡಾ. ಲೀಲಾದೇವಿ ಆರ್. ಪ್ರಸಾದ್ ಅವರು, ಅಥಣಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ, ಎಸ್. ಆರ್. ಬೊಮ್ಮಾಯಿ, ಎಚ್. ಡಿ. ದೇವೇಗೌಡ ಹಾಗೂ ಜೆ. ಎಚ್. ಪಟೇಲ್ ಅವರ ಸಂಪುಟದಲ್ಲಿ ಶಿಕ್ಷಣ, ಮಹಿಳಾ ಮತ್ತು ಕಲ್ಯಾಣ, ಯುವಜನ ಸೇವೆ, ವಾರ್ತಾ, ಕನ್ನಡ ಸಂಸ್ಕೃತಿ, ಸಣ್ಣ ನೀರಾವರಿ ಸಚಿವರಾಗಿ ಸಮರ್ಥವಾಗಿ ಸೇವೆ ಸಲ್ಲಿಸಿದರು. ಹೀಗೆ ಕೇಂದ್ರ ಹಾಗೂ ರಾಜ್ಯಮಟ್ಟದ ಹಲವು ಸಂಸ್ಥೆಗಳಲ್ಲಿ ಇಂದಿಗೂ ಸೇವೆ ಸಲ್ಲಿಸುತ್ತಿರುವ ಡಾ. ಲೀಲಾದೇವಿ ಪ್ರಸಾದ್ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಉಪಾಧ್ಯಕ್ಷರಾಗಿದ್ದವರು.
ಸಾಹಿತ್ಯ ಕ್ಷೇತ್ರದಲ್ಲಿಯೂ ಗಣನೀಯ ಕೃಷಿ ಮಾಡಿರುವ ಲೀಲಾದೇವಿ ಪ್ರಸಾದ್ ಅವರ ಲೇಖನಿಯಿಂದ ನುಡಿ ಚಿಂತನ, ಸಹಕಾರ-ಮಹಿಳೆ, ಮಹಿಳೆ-ಉಳಿತಾಯ, ೨೦ನೇ ಶತಮಾನದಲ್ಲಿ ಕರ್ನಾಟಕದ ರಾಜಕೀಯ ಮಹಿಳೆ, ಸಿಡಿದೆದ್ದ ಸ್ತ್ರೀ, ಸಾಹೇಬರ ಮಗಳು, ಹೆಣ್ಣು ಮೇಲಿನ ಹೆಣ್ಣು, ನಾ ಒಲಿದಂತೆ ಹಾಡಿದೆ, ಸಂಜೀವಿನಿ, ಗಂಗಾಂಬಿಕೆ, ನೀಲಾಂಬಿಕೆ, ಬೊಂತಾದೇವಿ, ಮಹದೇವಿಯಕ್ಕ, ಮನಮಿಡಿದ ಮಾತು, ವ್ಯಕ್ತಿಶಕ್ತಿ, ವಚನತರಂಗ ಮುಂತಾದ ಪ್ರಬಂಧಗಳು, ಕಾದಂಬರಿಗಳು, ಕವನಸಂಗ್ರಹಗಳು ಆತ್ಮಚರಿತ್ರೆ, ನಾಟಕ, ಕಿರುಗ್ರಂಥಗಳು ಸೇರಿದಂತೆ ಹಲವು ಪ್ರಕಾರಗಳಲ್ಲಿ ಕೃತಿಗಳು ಪ್ರಕಟವಾಗಿವೆ. ಇವರ ಅಕ್ಕಮಹಾದೇವಿ ಹಾಗೂ ಅಷ್ಟಾವರಣ ಗ್ರಂಥಗಳು ಐದು ಭಾಷೆಗಳಲ್ಲಿ ಅನುವಾದಿತವಾಗಿ ಪ್ರಕಟವಾಗಿವೆ.
ಲೀಲಾದೇವಿ ಪ್ರಸಾದ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಅನುಪಮ ಸೇವೆಗಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ‘ಸಹಕಾರ ರತ್ನ’ ಬಿರುದನ್ನೂ, ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಚಿತ್ರದುರ್ಗದ ಶ್ರೀ ಮುರುಘಾ ಶರಣರು ‘ಶೂನ್ಯಪೀಠ ಪ್ರಶಸ್ತಿ’ಯನ್ನು, ಡಾ. ಶಿವಕುಮಾರ ಸ್ವಾಮಿಗಳು ‘ಸಿದ್ಧಗಂಗಾ ಶ್ರೀ’ಯನ್ನು, ಬಸವ ವೇದಿಕೆಯವರು ‘ವಚನಶ್ರೀ’, ಅಕ್ಕಮಹಾದೇವಿ ಸಮಿತಿಯವರು ‘ಅಕ್ಕ’ ಪ್ರಶಸ್ತಿಯನ್ನು ಹಾಗೂ ಕದಳಿ ವೇದಿಕೆಯವರು ‘ಕದಳಿ ಶ್ರೀ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
Tag: Leeladevi R Prasad
ಪ್ರತಿಕ್ರಿಯೆ