ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜುಲೈ 3ರಂದು ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ತತ್ತ್ವರಸಾಯನ ಕಾರ್ಯಕ್ರಮ : ಜೂನ್ 18 ಹಾಗೂ 19ರಂದು ಕ.ಸಾ.ಪ.ದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ – ನಾಡೋಜ ಡಾ. ಮಹೇಶ ಜೋಶಿ
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜುಲೈ 3ರಂದು ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ತತ್ತ್ವರಸಾಯನ ಕಾರ್ಯಕ್ರಮ : ಜೂನ್ 18 ಹಾಗೂ 19ರಂದು ಕ.ಸಾ.ಪ.ದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ – ನಾಡೋಜ ಡಾ. ಮಹೇಶ ಜೋಶಿ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು 107 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಹಿನ್ನೆಲೆಯಲ್ಲಿ ತತ್ತ್ವರಸಾಯನ ಎನ್ನುವ ಶೀರ್ಷಿಕೆಯಲ್ಲಿ ಸಂತ ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ಸಂಗೀತ-ನೃತ್ಯ ಕಾರ್ಯಕ್ರಮವನ್ನು ಭಾನುವಾರ ಜುಲೈ 3 ರಂದು ಸಂಜೆ 4 ರಿಂದ 7ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯ ಅತಿಗಳ ಸಮ್ಮುಖದಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ, ಶ್ರೀ ಶಾರದ ವಿದ್ಯಾಪೀಠ – ಕೈಜೋಡಿಸಿವೆ.
ಜುಲೈ 3 ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ ಹಾಗೂ ಅವರು ದೇಹಬಿಟ್ಟ ದಿನವೂ ಹೌದು. ಈ ದಿನವನ್ನು ಭಾಕ್ಯತೆಯ ದಿನ ಎಂದು ಆಚರಿಸಲಾಗುತ್ತದೆ. ಅ ದಿನ ಸಂತ ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ಸಂಗೀತ, ನೃತ್ಯ ಮೂಲಕ ಅರ್ಥಪೂರ್ಣ ಕಾಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದ ಮೂಲ ಉದ್ದೇಶ ಭ್ರಾತೃತ್ವ ಭಾವನೆಯನ್ನು, ಸಮಾನತೆ ಮತ್ತು ಸೌಹಾರ್ದತೆಯನ್ನು ಬಿತ್ತರಿಸುವುದಾಗಿದೆ. ಕನ್ನಡ ನಾಡಿನಲ್ಲಿ ಶಾಂತಿ, ಸೌಹಾರ್ದತೆಗೆ ಪೂರಕವಾಗುವ ವಾತಾವರಣ ಸೃಷ್ಟಿಸಿ ಹಾಗೂ ಸಹೋದರತ್ವದ ಭಾವ ಬೆಳೆಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಉದ್ದೇಶವನ್ನಿರಿಸಿಂಡಿದೆ.
ಈ ಹಿನ್ನೆಲೆಯಲ್ಲಿ ಆಸಕ್ತ ಕಲಾವಿದರನ್ನು, ಜಾನಪದ ಕಲಾತಂಡದವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಶನಿವಾರ ಜೂನ್ 18 ರಂದು ಬೆಳಗ್ಗೆ 9 ಗಂಟೆಯಿಂದ ತತ್ತ್ವಪದಗಳ ಗಾಯಕರಿಗೆ ಆಯ್ಕೆ ಪ್ರಕ್ರಿಯೆಯನ್ನು ಮತ್ತು ಭಾನುವಾರ ಜೂನ್ 19 ರಂದು ಬೆಳಗ್ಗೆ 9 ಗಂಟೆಯಿಂದ ನೃತ್ಯ ತಂಡದವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆಪ್ರಕ್ರಿಯೆಯನ್ನು ನಡೆಸಲಿದೆ.
ಆಸಕ್ತ ಸಂಗೀತ ಕಲಾವಿದರು, ನೃತ್ಯ ತಂಡದವರು ನೇರವಾಗಿ ಜೂನ್ 18, 19ರಂದು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಗಾಯನ / ನೃತ್ಯದ ಅನುಭವದ ವಿವರಣೆಗಳುಳ್ಳ ಸ್ವ-ವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ, ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018 ಇಲ್ಲಿ ಹಾಜರಾಗಬೇಕೆಂದು ದೂರದರ್ಶನ ಚಂದನದ ಮಧುರ ಮಧುರವೀ ಮಂಜುಳ ಗಾನ ಖ್ಯಾತಿಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕೋರಿದ್ದಾರೆ.
ಪ್ರತಿಕ್ರಿಯೆ