ರಾಯಚೂರಿನಲ್ಲಿ ನಡೆಯುತ್ತಿರುವ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ ಭಾಷಣದ ಪೂರ್ಣಪಾಠ.
ಎಂಭತ್ತೆರಡನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ
ಹೆಸರಾಂತ ಸಾಹಿತಿಗಳೂ ಹಾಗೂ ಪ್ರಗತಿಪರ ಚಿಂತಕರೂ ಆದ ಡಾ ಬರಗೂರು ರಾಮಚಂದ್ರಪ್ಪ ಅವರೆ,
ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳೆ,
ಸಂಸದ-ಶಾಸಕ ಮಿತ್ರರೆ,
ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದ ಎಲ್ಲಾ ಪ್ರತಿಭಾವಂತರೆ,
ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳೆ,
ಮಾಧ್ಯಮದ ಗೆಳೆಯರೆ,
ಕನ್ನಡದ ನನ್ನ ಸೋದರ-ಸೋದರಿಯರೆ,
ಕರ್ನಾಟಕ ರಾಜ್ಯೋತ್ಸವ ವಜ್ರ ಮಹೋತ್ಸವ ವರ್ಷ ಆಚರಿಸಿದ ಬೆನ್ನಲ್ಲೇ ಒಂದು ನೂರು ವರ್ಷಗಳನ್ನು ಪೂರ್ಣಗೊಳಿಸಿರುವ ಕನ್ನಡ ಸಾಹಿತ್ಯ ಪರಿಷತ್‍ನ ಸಾರಥ್ಯದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಕನ್ನಡಿಗರೆಲ್ಲರೂ ಅಭಿಮಾನ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ.
ಮೊದಲು 1934 ರಲ್ಲಿ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಮತ್ತು ನಂತರ 1956 ರಲ್ಲಿ ಶ್ರೀರಂಗರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ರಾಯಚೂರಿನಲ್ಲಿ ನಡೆದಿವೆ. ಈಗ ಬಂಡಾಯ ಸಾಹಿತಿ ಎಂದು ಕನ್ನಡ ನಾಡಿನ ಜನತೆ ಗುರುತಿಸಿರುವ ಬಹುಮುಖ ಪ್ರತಿಭಾಶಾಲಿ ಡಾ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದೆ. ಡಾ.ಬರಗೂರು ರಾಮಚಂದ್ರಪ್ಪ ಅವರ ವಿಚಾರಪ್ರಚೋದಕ ಭಾಷಣ ಕೇಳಲು ತಮ್ಮಂತೆ ನಾನೂ ಕೂಡಾ ಉತ್ಸುಕನಾಗಿದ್ದೇನೆ.
ಹೈದರಾಬಾದ್ ಕರ್ನಾಟಕವನ್ನು ‘ಕನ್ನಡದ ಕಾಶಿ’ ಎಂದೂ ಕರೆಯುತ್ತಾರೆ. ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ವಚನ ಪರಂಪರೆ, ಅನುಭಾವದ ದರ್ಶನ ಮಾಡಿಸಿದ ದಾಸ ಪರಂಪರೆ ಹಾಗೂ ಜಾನಪದ ವಿವೇಕದ ತತ್ವ ಪದಗಳು ಹುಟ್ಟಿದ್ದು ಈ ಭಾಗದಲ್ಲಿಯೇ. ಮಧ್ಯಕಾಲೀನ ಸಾಹಿತ್ಯ ಹಾಗೂ ಜೈನ ಸಾಹಿತ್ಯದ ಮೇರು ಕೃತಿಗಳು ಬೆಳಕು ಕಂಡದ್ದು ಇದೇ ನೆಲದಲ್ಲೇ. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಹೃದಯ ಭಾಗದಂತಿರುವ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನ ರಾಯಚೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ವಚನ ಪರಂಪರೆಗೆ ಈ ಭಾಗದ ಶರಣರಾದ ದಾಸೀಮಯ್ಯ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಮೊಸರ ಕಲ್ಲಿನ ಮುಕ್ತಾಯಕ್ಕ ಮೊದಲಾದವರು ಅಪೂರ್ವ ಕೊಡುಗೆ ನೀಡಿದ್ದಾರೆ.
ಅದೇ ರೀತಿ ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರೂ ಸೇರಿದಂತೆ ನೂರಕ್ಕೂ ಹೆಚ್ಚು ದಾಸರು ಕೀರ್ತನಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಡಕೋಳಮಡಿವಾಳಪ್ಪ, ತಿಂಥಣಿ ಮೋನಪಯ್ಯ, ಕೂಡಲೂರು ಬಸವಲಿಂಗಪ್ಪ, ಗಬ್ಬೂರು ಹಂಪಣ್ಣ, ಚಂದೂರು ಜಲಾಲ ಸಾಹೇಬ ಮೊದಲಾದವರು ತತ್ವ ಪದಗಳ ಮೂಲಕ ನಾಡಿನ ವಿವೇಕವನ್ನು ಬೆಳೆಸಿದ್ದಾರೆ. ಶಾಂತರಸರು, ರಾಜಶೇಖರ ನೀರಮಾನ್ವಿ, ಗೀತಾ ನಾಗಭೂಷಣ, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಅಲ್ಲಮಪ್ರಭು ಬೆಟದೂರು, ಚನ್ನಣ್ಣ ವಾಲೀಕಾರ, ಅಮರೇಶ ನುಗಡೋಣಿ ಮೊದಲಾದವರು ಆಧುನಿಕ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಕೂಡಾ ಅನನ್ಯವಾದುದು. ಇವರ ಜೊತೆಯಲ್ಲಿ ಸಂಗೀತಗಾರರಾದ ಸಿದ್ದರಾಮ ಜಂಬಲದಿನ್ನಿ, ಹನುಮಣ್ಣ ನಾಯಕ ದೊರೆ, ನರಸಿಂಹಲು ವಡವಾಟಿ, ಚಿತ್ರ ಕಲಾವಿದರಾದ ಎಂ. ಎಸ್. ಪಂಡಿತ್, ಎಂ. ಆರ್. ಹಡಪದ ಮೊದಲಾದವರು ತಮ್ಮ ಪ್ರತಿಭೆಯ ಪ್ರಭೆಯಿಂದ ಈ ನಾಡಿನ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಾಡು, ನುಡಿಗೆ ಚಿರ ಕಾಲ ಬಾಳುವಂತಹ ಕೊಡುಗೆಯನ್ನು ನೀಡಿರುವ ಮತ್ತು ನೀಡುತ್ತಿರುವ ಈ ನೆಲದ ಎಲ್ಲಾ ಪ್ರತಿಭಾ ಸಂಪನ್ನರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕನ್ನಡ ಸಾಹಿತ್ಯಕ್ಕೆ 1200 ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ಇದು ಅಕ್ಷರ ಪರಂಪರೆಯ ಚರಿತ್ರೆ. ಆದರೆ, ಕವಿರಾಜಮಾರ್ಗದ ರಚನಾಕಾರ ಹೇಳುವಂತೆ
“ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್ ನಾಡವರ್ಗಳ್”
– ಇದು ಜನಪದ ಪಾಮರರ ಸಾಹಿತ್ಯವನ್ನು ಕುರಿತು ಹೇಳಿದ ಮಾತಾಗಿದೆ. ಅಕ್ಷರ ಪರಂಪರೆಯ ಸಾಹಿತ್ಯಕ್ಕೆ ಚರಿತ್ರೆ ಇದೆ. ಆದರೆ, ಅನಕ್ಷರಸ್ತರು ರಚಿಸುವ ಸಾಹಿತ್ಯಕ್ಕೆ ಇತಿಹಾಸಕ್ಕಿಂತಲೂ ಬಹು ದೊಡ್ಡ ಪರಂಪರೆ ಇದೆ. ಏಕೆಂದರೆ ತಲೆಮಾರಿನಿಂದ ತಲೆಮಾರಿಗೆ ಬಾಯಿ ಮಾತಿನ ಮೂಲಕ ಹರಿದು ಬರುವ ಈ ಸಾಹಿತ್ಯದ ಚರಿತ್ರೆಯನ್ನು ಲೆಕ್ಕವಿಟ್ಟವರ್ಯಾರು? ಅಕ್ಷರ ಹುಟ್ಟುವುದಕ್ಕಿಂತಲೂ ಮುನ್ನಭಾಷೆ ಆಡು ನುಡಿಯಾಗಿದ್ದದ್ದು ! ಆದ್ದರಿಂದಲೇ, ಆಡು ನುಡಿ ಸಾಹಿತ್ಯಕ್ಕೆ ಚರಿತ್ರೆ ಇದ್ದರೂ, ಅದು ಹೇಳಿ ಗುರುತಿಸಲಾಗದ ಚರಿತ್ರೆ. ಹೀಗಾಗಿ ಅದು ಪರಂಪರೆ. ಈ ಪರಂಪರೆ ಎನ್ನುವುದು ಚರಿತ್ರೆಗಿಂತಲೂ ಭಿನ್ನವಾದದ್ದು. ಭೂತ-ವರ್ತಮಾನಗಳನ್ನು ಒಂದಾಗಿಸಿಕೊಂಡು ನಿತ್ಯವಾಗುವುದು ಎಷ್ಟು ಪುರಾತನವೋ ಅಷ್ಟೇ ನೂತನವಾದುದು. ಇಂತಹ ಪಾಮರ ಪರಂಪರೆಯ ತಾಯಿಯೊಬ್ಬಳು ಹೇಳುತ್ತಾಳೆ:
ಆಚಾರಕ್ಕರಸನಾಗು ನೀತಿಗೆ ಪ್ರಭುವಾಗು
ಮಾತಿನಲ್ಲಿ ಚೂಡಾಮಣಿಯಾಗು. ಎಲೆಕಂದ
ಜಗಕೆ ಜ್ಯೋತಿಯೇ ನೀನಾಗು……………..
ಇದು ಕನ್ನಡತನ. ಇದು ಕನ್ನಡಿಗರ ವ್ಯಕ್ತಿತ್ವ. ನಮ್ಮ ಜನಪದ ಸಾಹಿತ್ಯದಲ್ಲಿಯೇ ಇಂತಹ ಲೋಕದರ್ಶನವಿದೆ.
ಆದಿಕವಿ ಎನಿಸಿಕೊಂಡ ಮಹಾ ಕವಿ ಪಂಪ “ಮನುಷ್ಯ ಜಾತಿ ತಾನೊಂದೇ ವಲಂ” ಎಂದು ಜಗತ್ತಿನ ಮನುಷ್ಯರನ್ನೆಲ್ಲಾ ವಿಶ್ವಮಾನವ ಮಟ್ಟದಲ್ಲಿ ನೋಡಿದ. ವಿಶ್ವಮಾನವ ಸಂದೇಶವನ್ನು ಸಾರಿದ. ನಮ್ಮ ಕಾಲದ ಕವಿ ಕುವೆಂಪು ಅವರು “ಮನುಜ ಮತ ವಿಶ್ವ ಪಥ ” ಎಂದು ಹೇಳಿದರು.
ಪಂಪನಿಂದ ಕುವೆಂಪುವರೆಗೆ ಬೆಳೆದು ಬಂದಿರುವ ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ಅದು ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕಿಂತಲೂ ಕಡಿಮೆಯಾದುದ್ದಲ್ಲ. ಪಂಪನ ಲೋಕದರ್ಶನ ಉದಾತ್ತವಾದುದು. ಹಾಗೆಯೇ, ಕುವೆಂಪು ಅವರ ಲೋಕದರ್ಶನವೂ ಉದಾರವಾದುದು.
ಓ ನನ್ನ ಚೇತನ.
ಆಗು ನೀ ಅನಿಕೇತನ…..
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ……
ಎಂದು ಸಾರಿದವರು ಕುವೆಂಪು. ಇದು ಬೇರೆಯವರಿಗೆ ಹೇಳಿದ್ದಲ್ಲ. ಕವಿ ತನಗೆ ತನ್ನ ಚೇತನಕ್ಕೆ ಹೇಳಿಕೊಂಡಿದ್ದು!
ಯಾವ ಕವಿಯೂ ತಾನು ದೊಡ್ಡವನಾಗದೆ, ದೊಡ್ಡದ್ದೇನನ್ನೂ ಹೇಳಲಾರ. ತಾನೇ ಕೂಪಮಂಡೂಕವಾಗಿದ್ದರೆ ಜಗತ್ತಿನ ವಿಶಾಲತೆಯ ಬಗ್ಗೆ ಅವನೇನು ಹೇಳಬಲ್ಲ? ಆದ್ದರಿಂದಲೇ ನಮ್ಮ ಕನ್ನಡದ ಕವಿಗಳು ತಾವು ವಿಶ್ವಮಾನವರಾಗಿ ಬಾಳಿದವರು. ತಮ್ಮ ಕಾವ್ಯಗಳಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದವರು.
ನಮ್ಮ ಕವಿಗಳಿಗೆ ಕನ್ನಡ ಭಾಷೆ ಕೇವಲ ಒಂದು ಭಾಷೆಯಾಗಿ ಕಂಡಿಲ್ಲ. ಅದು ಸುಂದರವಾದ ವ್ಯಕ್ತಿತ್ವಗಳನ್ನು ರೂಪಿಸುವ ಶಕ್ತಿಯಾಗಿ ಕಂಡಿದೆ. ಅದಕ್ಕೆ ಶರಣರು “ಮಾತೆಂಬುದು ಜ್ಯೋತಿರ್ಲಿಂಗ” ಎಂಬ ಮಾತನ್ನು ದೇವರನ್ನಾಗಿ ಭಾವಿಸಿದರು. ದೇವರ ಕಲ್ಪನೆಯನ್ನು ಕಲ್ಲು ಮಣ್ಣುಗಳಲ್ಲಿ ಕಾಣಲಿಲ್ಲ. ಅದನ್ನು ಮನುಷ್ಯನ ಮನೋ ವ್ಯಾಪಾರದಲ್ಲಿ ಕಂಡರು. ಅರಿವೇ ಗುರು ಎಂದರು. ಕಾಯಕವೇ ಕೈಲಾಸ ಎಂದು ಬಣ್ಣಿಸಿದರು. ನಮ್ಮ ಕನ್ನಡದ ಕವಿಗಳು ದೊಡ್ಡದ್ದನ್ನು ಆಲೋಚಿಸಿದ್ದಾರೆ. ದೊಡ್ಡದ್ದನ್ನು ಚಿಂತಿಸಿದ್ದಾರೆ. ದೊಡ್ಡದಾಗಿ ಬಾಳಿದ್ದಾರೆ. ದೊಡ್ಡ ಬದುಕಿನ ಒಳನೋಟಗಳನ್ನು ತಮ್ಮಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
ಕನ್ನಡಿಗರನ್ನು ಕುರಿತು ಒಬ್ಬ ಶಾಸನದ ಕವಿ ಹೇಳುತ್ತಾನೆ:
ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಇದು ನಮ್ಮ ಕನ್ನಡತನ. ತಮಗೆ ನೋವಾದರೂ ಬೇರೆಯವರ ಕಣ್ಣುಗಳಲ್ಲಿ ದುಃಖದ ಕಣ್ಣೀರನ್ನು ನೋಡಲು ಇಚ್ಚಿಸದವರು ನಮ್ಮ ಕನ್ನಡಿಗರು. ಔದಾರ್ಯಕ್ಕೆ ಮತ್ತೊಂದು ಹೆಸರು ನಮ್ಮ ಕನ್ನಡಿಗರು. ಪರೋಪಕಾರ ಮತ್ತು ಪ್ರತ್ಯುಪಕಾರಕ್ಕೂ ಕನ್ನಡಿಗರು ಹೆಸರುವಾಸಿ. ಇಂತಹ ಕನ್ನಡಿಗರ ಬದುಕಿನ ಕನ್ನಡಿಯ ಮೂಲಕ ಜಗತ್ತಿನ ಜೀವನ ದರ್ಶನವನ್ನು ಕಂಡಿದ್ದಾರೆ ನಮ್ಮ ಕನ್ನಡದ ಸಾಹಿತಿಗಳು. ಸಾಹಿತ್ಯಕ್ಕೂ ರಾಜಕಾರಣಕ್ಕೂ ಇರುವ ನಂಟು ಬೇರ್ಪಡಿಸಲಾಗದ ಗಂಟು!
ತನ್ನ ಕಾಲದ ರಾಜಕಾರಣದ ಬಗ್ಗೆ ಅರಿವಿಲ್ಲದ ಸಾಹಿತಿ ಗಟ್ಟಿಯಾದ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾರ. ರಾಜಕಾರಣ ಎಂದರೆ ಪುಢಾರಿಗಿರಿಯ ರಾಜಕಾರಣವಲ್ಲ. ಅದಕ್ಕೊಂದು ತಾತ್ವಿಕತೆಯ ತಳಹದಿ ಇರುತ್ತದೆ. ಇದನ್ನೇ ಮುತ್ಸದ್ಧಿ ರಾಜಕಾರಣ ಎಂದು ಕರೆಯುತ್ತಾರೆ.
ಪ್ರಭುಗಳ ಕಾಲದ ರಾಜಕಾರಣದಲ್ಲಿ ಒಂದು ಬಗೆಯ ತಾತ್ವಿಕತೆ ಇದ್ದರೆ, ಪ್ರಜಾಪ್ರಭುತ್ವದ ಕಾಲದ ರಾಜಕಾರಣಕ್ಕೆ ಹಲವು ಬಗೆಯ ತಾತ್ವಿಕ ಸಂಘರ್ಷಗಳಿರುತ್ತವೆ. ಎಡ-ಬಲ ಚಿಂತನೆಗಳು ಇದ್ದಹಾಗೆ ಸಮನ್ವಯ ಚಿಂತನೆಯೂ ಇರುತ್ತದೆ. ಇವೆಲ್ಲವನ್ನೂ ಬಲ್ಲವನಾಗಿದ್ದ ಸಾಹಿತಿ ಜನಪರವಾದದ್ದು ಯಾವುದು, ಜನವಿರೋಧಿಯಾದದ್ದು ಯಾವುದು ಎಂಬುದನ್ನು ಯೋಚಿಸಿ “ಸರ್ವಜನಾಂಗದ ಶಾಂತಿಯ ತೋಟವಾಗಿಸಿ” ಸಾಹಿತ್ಯವನ್ನು ಸೃಷ್ಠಿಸುತ್ತಾನೆ.
ಇಂತಹ ಸಾಹಿತ್ಯ ಲೋಕಮಾನ್ಯ ಸಾಹಿತ್ಯವಾಗಿ ಗೌರವಿಸಲ್ಪಡುತ್ತದೆ. ಏಕೆಂದರೆ ಸಾಹಿತಿಗೆ ಕಲಾತ್ಮಕ ಸಿದ್ಧಾಂತಕ್ಕಿಂತಲೂ ಬದುಕಿನ ಬದ್ಧತೆ ಬಹು ದೊಡ್ಡದು. ಬದುಕು ಹಸನಾಗಬೇಕೆಂಬುದೇ ಬರಹದ ಬಹುದೊಡ್ಡ ಆಶಯವಾಗಿರುತ್ತದೆ. ಸಾಹಿತ್ಯಿಕ ವ್ಯಕ್ತಿತ್ವ ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವ ಮಾತಿಗೆ ನನ್ನ ಸಹಮತ ಇದೆ. ಸಾಹಿತ್ಯದ ಓದಿನ ಮೂಲಕ ಗಳಿಸಿಕೊಂಡ ಅನುಭವದ್ರವ್ಯ ವೈಯಕ್ತಿಕವಾಗಿ ನನ್ನ ಜೀವನ ದೃಷ್ಟಿಯನ್ನು ರೂಪಿಸಿಕೊಳ್ಳಲು ನೆರವಾಗಿದೆ ಎಂಬುದನ್ನೂ ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.
ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಲ್ಲಿ ಸಾಹಿತ್ಯ ನಿರ್ಣಾಯಕ ಪಾತ್ರ ವಹಿಸುತ್ತಾ
ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಶರಣ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಗಳು ಇದಕ್ಕೆ ಉತ್ತಮ ಉದಾಹರಣೆಗಳು. ಜಗತ್ತಿನ ಎಲ್ಲಾ ಕ್ರಾಂತಿಗಳ ಹಿಂದೆ ಆಯಾ ಕ್ರಾಂತಿಗೆ ಕಾರಣವಾದ ಕ್ರಾಂತಿಕಾರಕ ಸಾಹಿತ್ಯವನ್ನು ಕಾಣಬಹುದು. ರಷ್ಯಾದ ಕ್ರಾಂತಿ, ಪ್ರಾನ್ಸಿನ ಕ್ರಾಂತಿ, ವಚನ ಕ್ರಾಂತಿ ಇದಕ್ಕೆ ಬಹು ದೊಡ್ಡ ಉದಾಹರಣೆಗಳು.
ನಮ್ಮ ಕಾಲದಲ್ಲಿಯೇ ಕನ್ನಡದ ಎಂಟು ಘನತೆವೆತ್ತ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಕನ್ನಡ ಸಾಹಿತ್ಯದ ಬದುಕಿನ
ಗೌರವವನ್ನು ರಾಷ್ಟ್ರೀಯ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದಾರೆ. ಇದು ಕನ್ನಡ ಸಾಹಿತ್ಯದ ಹಿರಿಮೆ. ಆದರೆ, ಎಲ್ಲೋ ಒಂದು ಕಡೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಅಪಾಯವನ್ನು ಎದುರಿಸುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮ ದೊಡ್ಡ ಸವಾಲಾಗಿ ನಮ್ಮೆದುರು ಬೆಳೆದು ನಿಂತಿದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಸಂಕಲ್ಪ. ಸರ್ಕಾರದ ಈ ನಿರ್ಧಾರಕ್ಕೆ ಭಾರತ ಸರ್ವೋಚ್ಛ ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದಾಗಿ ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಪರಿಹಾರಾತ್ಮಕ ಅರ್ಜಿ ಎರಡನ್ನೂ ಸರ್ವೋಚ್ಛ ನ್ಯಾಯಾಲಯವು ತಿರಸ್ಕರಿಸಿದೆ. ‘ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಹೆತ್ತವರ ಆಯ್ಕೆ’ ಎಂದು ಸರ್ವೋಚ್ಛ ನ್ಯಾಯಾಲಯವು ಹೇಳಿದೆ. ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಜಾರಿಯಾದರೆ ಕನ್ನಡವೊಂದೇ ಅಲ್ಲ, ನಮ್ಮ ಎಲ್ಲಾ ಪ್ರಾದೇಶಿಕ ಭಾಷೆಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಲಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾಗಿದೆ. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ನಾನು ದೆಹಲಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ ಈ ಬಗ್ಗೆ ಅವರ ಗಮನ ಸೆಳೆದಿದ್ದೇನೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ
ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.
ನ್ಯಾಯಾಲಯದ ತೀರ್ಪಿನ ಹಿನ್ನಡೆಯಿಂದ ರಾಜ್ಯದ ಜನತೆ ಧೃತಿಗೆಡಬೇಕಾದ ಅಗತ್ಯ ಇಲ್ಲ. ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ. ಈ ಬಗ್ಗೆ ನಮ್ಮ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದೇವೆ. ನ್ಯಾಯಾಲಯದಲ್ಲಿ ನಮ್ಮ ವಾದವನ್ನು ಬಲಗೊಳಿಸಲು ವಿಶ್ವಾಸಾರ್ಹವಾದ ದಾಖಲೆಗಳನ್ನು ನೀಡಬೇಕು. ಇದಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಲು
ತನಿಖಾ ಆಯೋಗ ಕಾಯಿದೆಯಡಿ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿ ದೇಶ-ವಿದೇಶಗಳಲ್ಲಿನ ಮಾತೃಭಾಷಾ ಮಾಧ್ಯಮದ ಶಿಕ್ಷಣದ ಸ್ಥಿತಿಗತಿಗಳನ್ನು, ಕನ್ನಡ ಮಾಧ್ಯಮದಲ್ಲಿಯೇ ಕಲಿತು ಉನ್ನತ ಸ್ಥಾನಕ್ಕೇರಿದವರ ಮಾಹಿತಿಗಳನ್ನು ಕಲೆಹಾಕಿ ವರದಿಯನ್ನು ಸಿದ್ದಪಡಿಸಬೇಕು. ಇದನ್ನು ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮುಂದಿಡಬೇಕು ಎನ್ನುವ ಸಲಹೆ ಕೂಡಾ ನಮ್ಮ ಸರ್ಕಾರದ ಗಭೀರ ಪರಿಶೀಲನೆಯಲ್ಲಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕನ್ನಡ ಭಾಷೆಯು ಬೆಳೆಯ ಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯಲ್ಲಿ ಬರೆಯುವ ಇಚ್ಛಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪರಿಭಾಷೆಯನ್ನು ಕಂಡುಕೊಳ್ಳಬೇಕು. ಕನ್ನಡದ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು. ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲಿಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳು. ಕನ್ನಡ ಭಾಷೆಯು ಅಪಾರ ಚೈತನ್ಯವುಳ್ಳ ಭಾಷೆ. ಕನ್ನಡದ ಮೂಲಕ ಕಲಿತೂ ಶ್ರೇಷ್ಠ ವಿಜ್ಞಾನಿಯಾಗಬಹುದು ಎನ್ನುವುದಕ್ಕೆ ನಮ್ಮವರೇ ಉದಾಹರಣೆಗಳಾಗಿ ಇದ್ದಾರೆ. ನಾನೂ ಕೂಡಾ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದವನು. ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಬೇರೆ ಭಾಷೆಗಳ ಸಾಹಿತ್ಯವೂ ಸೇರಿದಂತೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕನ್ನಡಕ್ಕೆ ಪರಿಚಯಿಸುವ ಕೆಲಸಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಈ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಸರ್ಕಾರದಿಂದ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕೊಡಬಲ್ಲ ದೊಡ್ಡ ಕೊಡುಗೆಯೊಂದು ಸಿದ್ಧಗೊಳ್ಳುತ್ತಿದೆ. ಹೈದರಾಬಾದ್-ಕರ್ನಾಟಕದ ಗ್ರಾಮ ಜಗತ್ತಿನ ಜೀವ ಸಮಾನತಾ ದೃಷ್ಠಿಕೋನವನ್ನು ಬಿಂಬಿಸಿದ ತತ್ವಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಯ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಇಡೀ ಕರ್ನಾಟಕದಾದ್ಯಾಂತ ಇರುವ ತತ್ವ ಪದಗಳನ್ನು ಸಂಗ್ರಹಿಸಿ, ಒಂದೊಂದು 500 ಪುಟಗಳವರೆಗೆ ಇರುವಂತಹ 50 ಸಂಪುಟಗಳನ್ನು ಮುದ್ರಿಸುವ ಕಾರ್ಯ ಪ್ರಗತಿಯಲ್ಲಿದೆ.
ರಾಜ್ಯವು ಸತತವಾಗಿ ಮೂರನೇ ಬಾರಿಗೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 26 ಜಿಲ್ಲೆಗಳ 139 ತಾಲ್ಲೂಕುಗಳು ಈ ಬಾರಿ ಬರ-ಪೀಡಿತ ಎಂದು ಘೋಷಿತವಾಗಿವೆ. ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 17,193.00 ಕೋಟಿ ರೂ ನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯ ಮಾರ್ಗಸೂಚಿಗಳಂತೆ 4702.54 ಕೋಟಿ ರೂ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದ ತಂಡ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಂತೆಯೇ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದೆ.
ಬರ ಪರಿಸ್ಥಿಯ ಸಂದರ್ಭದಲ್ಲಿ ತಿನ್ನಲು ಅನ್ನವಿಲ್ಲದೆ ಸಾವು ನೋವುಗಳು ಸಂಭವಿಸುವುದು ಸಾಮಾನ್ಯ. ಬರದ ಬವಣೆಯಿಂದ ಬಳಲುತ್ತಿರುವ ನೆರೆ ರಾಜ್ಯಗಳಲ್ಲಿ ಸಾವು-ನೋವುಗಳು ಸಂಭವಿಸಿವೆ. ಆದರೆ, ನಮ್ಮ ರಾಜ್ಯದಲ್ಲಿ ಇಂತಹ ಒಂದು ಕಹಿ ಘಟನೆಯೂ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಇದು ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಯ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ. ಅಂತೆಯೇ, ಬರಪರಿಸ್ಥಿತಿ ಎದುರಾದಾಗ ಜನರು ಉದ್ಯೋಗ ಅರಸಿ ಗುಳೆ ಹೋಗುವುದೂ ಸಹಜ. ಬರಪೀಡಿತ ದೇಶಗಳಲ್ಲಿ ಪ್ರತಿ ಮನೆ-ಮನೆಗಳಿಗೆ ತೆರಳಿ ಕಾರ್ಮಿಕರಿಗೆ ಜಾಬ್ ಕಾರ್ಡ್‍ಗಳನ್ನು ವಿತರಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಈವರೆಗೆ 18,835 ರೋಜ್‍ಗಾರ್ ಮೇಳಗಳನ್ನು ನಡೆಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಸೃಜನೆಯಾದ ಮಾನವ ದಿನಗಳು ಕಾರ್ಮಿಕ ಬಜೆಟ್‍ಗಿಂತಲೂ ದುಪ್ಪಟ್ಟಾಗಿದೆ. ಅಲ್ಲದೆ, ಇಡೀ ದೇಶದಲ್ಲಿಯೇ ಪ್ರಪ್ರಥಮವಾಗಿದೆ. ಇವೆಲ್ಲದರ ಫಲಿತಾಂಶ ಬರದ ಪರಿಸ್ಥಿತಿ ಎದುರಾದರೂ ಜನರು ದೊಡ್ಡ ಸಂಖ್ಯೆಯಲ್ಲಿ ಗುಳೆ ಹೋಗಿಲ್ಲ. ರಾಜ್ಯದಲ್ಲಿ ಒಂದೆಡೆ ಬರ. ಮತ್ತೊಂದೆಡೆ ನೆರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಉಂಟಾದ ಅತೀವೃಷ್ಠಿಗೆ 2485.06 ಕೋಟಿ ರೂ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ 386.44 ಕೋಟಿ ರೂ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ತಡವಾದರೂ, ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗಬಾರದು ಎಂಬ ಸದುದ್ದೇಶದ ಹಿನ್ನೆಲೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿ ಆಧ್ಯತೆಯ ಮೇರೆಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಿದ್ದೇವೆ.
ರಾಜಕೀಯ ಸ್ವಾರ್ಥಕ್ಕಾಗಿ ನೆಲ, ಜಲ, ಭಾಷೆಗಳನ್ನು ದುರ್ಬಳಕೆ ಮಾಡುವುದು ಜನ ವಿರೋಧಿಯಾದುದು. ನಮ್ಮಲ್ಲಿಯೂ ಆಗಾಗ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರುತ್ತವೆ. ಇದು ಪ್ರಚಾರದ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ಮಾಡುತ್ತಿರುವ ಹತಾಶ ಪ್ರಯತ್ನ ಅಷ್ಟೆ. ನಾಡು-ನುಡಿಯನ್ನು ಪ್ರೀತಿಸುವ ಯಾರೂ ಇಂತಹ ಹೊಣೆಗೇಡಿ ಕೆಲಸ ಮಾಡುವುದಿಲ್ಲ. ಉತ್ತರ, ದಕ್ಷಿಣ, ಹೈದರಾಬಾದ್, ಮುಂಬೈ ಕರ್ನಾಟಕಗಳೆನ್ನುವುದು ನಮ್ಮ ಅನುಕೂಲಕ್ಕಾಗಿ ಕರೆಯುವಹೆಸರುಗಳಷ್ಟೇ. ನಮ್ಮಲ್ಲಿರುವುದು ಒಂದೇ ಕರ್ನಾಟಕ. ಅದು ಅಖಂಡ ಕರ್ನಾಟಕ.
ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ದೂರ ಮಾಡಿ ಹೈದರಾಬಾದ್ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಸದುದ್ದೇಶದಿಂದಲೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಪರಿಚ್ಚೇಧ 371 (ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವ ಶ್ಲಾಘನೀಯ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಇದರ ಭಾಗವಾಗಿಯೇ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕೂಡಾ ರಚನೆಯಾಗಿದೆ.
ಪ್ರಾದೇಶಿಕ ಮೀಸಲಾತಿ ಅನ್ವಯ ಈಗಾಗಲೇ 12 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳನ್ನು ತುಂಬಲಾಗಿದೆ. ಸುಮಾರು 14 ಸಾವಿರ ಹುದ್ದೆಗಳು ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿದೆ. ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ಎಂಟರಷ್ಟು ಸ್ಥಾನಗಳನ್ನು ಈ ಭಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯದ ಬೇರೆಡೆಗಳಲ್ಲಿಯೂ ಮೀಸಲಿರಿಸಲಾಗಿದೆ. ರಾಜ್ಯ ಮಟ್ಟದ ಹುದ್ದೆಗಳ ನೇಮಕಾತಿಯಲ್ಲಿ ಶೇಕಡಾ ಎಂಟರಷ್ಟು ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕದ ಪ್ರದೇಶದವರಿಗೆ ಮೀಸಲಿರಿಸಲಾಗಿದೆ. ಇಲ್ಲಿನ ಹೋರಾಟಗಾರರು ಅಪೇಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ನಮ್ಮ ಸರ್ಕಾರ ಕೊಡಮಾಡಿದೆ ಎಂಬುದನ್ನು ಅತ್ಯಂತ ಅಭಿಮಾನದಿಂದ, ಹೆಮ್ಮೆಯಿಂದ ಹಾಗೂ ತೃಪ್ತಿಯಿಂದ ಹೇಳ ಬಯಸುತ್ತೇನೆ. ವಿಶೇಷ ಸ್ಥಾನಮಾನದ ಅವಕಾಶವನ್ನು ಬಳಸಿಕೊಂಡು ರಾಜ್ಯ ಮಟ್ಟದ ಹುದ್ದೆಗಳಲ್ಲಿಯೂ ಈ ಭಾಗದ ಜನತೆಗೆ ಶೇಕಡಾ ಎಂಟರಷ್ಟು ಮೀಸಲಿಡುವ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದೇವೆ. ಇದು ಹೈದರಾಬಾದ್ ಕರ್ನಾಟಕದ ಜನತೆಯ ಬಗೆಗಿನ ನಮ್ಮ ಕಾಳಜಿಗೆ ಧ್ಯೋತಕವಾಗಿದೆ. ವಿಶೇಷ ಸ್ಥಾನಮಾನದಿಂದಾಗಿ ಹೈದರಾಬಾದ್ ಕರ್ನಾಟಕ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಇತರ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 70 ರಷ್ಟು ಸ್ಥಾನಗಳನ್ನು ಸ್ಥಳೀಯರಿಗೇ ಮೀಸಲಿರಿಸಲಾಗಿದೆ.
ರಾಜ್ಯದಲ್ಲಿರುವ ಕೇಂದ್ರ ಸ್ವಾಮ್ಯದ ಹಾಗೂ ಖಾಸಗಿ ಕ್ಷೇತ್ರದಲ್ಲಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಡಾ ಸರೋಜಿನಿ ಮಹಿಷಿ ವರದಿಯಲ್ಲಿ ಮಾಡಿರುವ 58 ಶಿಫಾರಸ್ಸುಗಳಲ್ಲಿ 45 ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಚನೆ ಹಾಗೂ ನೈರುತ್ಯ ರೈಲ್ವೇ ವಲಯ ಸ್ಥಾಪನೆ ಡಾ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿನ ಫಲವಾಗಿದೆ. ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡಲು ರಾಷ್ಟ್ರೀಯ ನೀತಿ ರೂಪಿಸಿ, ಕನ್ನಡ ಭಾಷಾ ಜ್ಞಾನ ಅಪೇಕ್ಷಣೀಯ ಎಂಬುದನ್ನು ಕಡ್ಡಾಯಗೊಳಿಸಬೇಕು ಎಂಬುದು ಕೇಂದ್ರ ಸರ್ಕಾರಕ್ಕೆ ನಮ್ಮ ಒತ್ತಾಯವಾಗಿದೆ.
ಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಕೇವಲ ಸರ್ಕಾರದ್ದಲ್ಲ ಎನ್ನುವುದನ್ನು ಕೂಡಾ ವಿನಮ್ರವಾಗಿ ಹೇಳಬಯಸುತ್ತೇನೆ. ಭಾಷೆ ಬಳಸಿದಾಗಲೇ ಬೆಳೆಯುವುದು. ಕನ್ನಡ ಅಧಿಕೃತ ಭಾಷೆಯಾಗಿ ಬಳಕೆಯಾಗಬೇಕು ಎನ್ನುವುದು ನಿಜ. ಅದೇ ರೀತಿ ಅದು ನಮ್ಮ ನಿತ್ಯಜೀವನದಲ್ಲಿ ವ್ಯವಹಾರದ ಭಾಷೆಯೂ ಆಗಬೇಕು. ಆಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ. ನಮ್ಮ ಓದು, ಬರಹ, ವ್ಯವಹಾರ ಎಲ್ಲವೂ ಕನ್ನಡದಲ್ಲಿಯೇ ಇರಲಿ. ಇಂತಹ ಸಮ್ಮೇಳನಗಳು ನಮ್ಮ ಎದೆಯೊಳಗಿನ ಕನ್ನಡದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಹಿಂದ್ ! ಜೈ ಕರ್ನಾಟಕ !
Tag: Mukhyamantrigala Bhashana
ಪ್ರತಿಕ್ರಿಯೆ