ಕನ್ನಡ ಸಾಹಿತ್ಯ ಪರಿಷತ್ತು

ನೀವೇಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗ ಬೇಕು..

ಕನ್ನಡ ಪರಿಷತ್ತಿನ ಸದಸ್ಯರಾಗುವ ಮೂಲಕ ತಾವು ಪರಿಷತ್ತು `ಕನ್ನಡಿಗರ ಸಶಕ್ತ ಧ್ವನಿ’ಯಾಗಲು ಕಾರಣರಾಗುತ್ತೀರಿ. ಎರಡನೆಯದಾಗಿ ಪರಿಷತ್ತಿನ ಸದಸ್ಯರಾಗುವುದು ಲಾಭ-ನಷ್ಟಗಳನ್ನು ಮೀರಿದ ಭಾವನಾತ್ಮಕ ಸಂಗತಿ. ತಮಗಾಗಿ ಜೀವನವಿಡೀ ದುಡಿದ ತಾಯಿಯನ್ನು ಸೌಖ್ಯದಿಂದ ನೋಡಿಕೊಳ್ಳುವ ಕರ್ತವ್ಯದಷ್ಟೇ ಗೌರವ ತರುವ ಕಾಯಕವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು, “ಕನ್ನಡಿಗರೆಲ್ಲರ ಅಭಿಮಾನದ ಪ್ರಾತಿನಿಧಿಕ ಮತ್ತು ಸ್ವಾಯತ್ತ ಸಂಸ್ಥೆ’’ ಇದರ ಸದಸ್ಯರಾಗುವ ಮೂಲಕ ತಾವು ಕನ್ನಡ-ಕನ್ನಡಿಗ-ಕರ್ನಾಟಕದ ಹಿತವನ್ನು ಕಾಪಾಡುವ ವೀರ ಕನ್ನಡ ಪಡೆಯ ಸೈನಿಕರಾಗುತ್ತೀರಿ
ಕನ್ನಡ ಸಾಹಿತ್ಯ ಪರಿಷತ್ತು ಒಂದು ಕೋಟಿ ಸದಸ್ಯರನ್ನು ಹೊಂದುವ ಗುರಿಯೊಡನೆ ಸ್ವಾವಲಂಬಿಯಾಗಬೇಕು, ಶಕ್ತಿಯುತವಾಗಬೇಕು ಎನ್ನುವುದು ನಮ್ಮ ಕನಸು. ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಸಂಖ್ಯಾಬಲಕ್ಕೆ ಮಹತ್ವ. ಕರ್ನಾಟಕದ ಶೇಕಡ ಹದಿನೈದರಷ್ಟು ಕನ್ನಡಿಗರಾದರೂ ಪರಿಷತ್ತಿನ ಸದಸ್ಯರಾದರೆ `ಕನ್ನಡಿಗರ ಸಶಕ್ತ ಧ್ವನಿಯಾಗುವ ಶಕ್ತಿ ಪರಿಷತ್ತಿಗೆ ಲಭಿಸುತ್ತದೆ. ಈ ಮಹತ್ವಾಕಾಂಕ್ಷೆಗೆ `ತಾವೇ ರಾಯಭಾರಿಗಳು’. ತಾವು ಸದಸ್ಯರಾಗಿರುವುದರ ಜೊತೆಗೆ ತಮ್ಮ ಕುಟುಂಬದವರು, ತಮ್ಮ ಸ್ನೇಹಿತರು, ಪರಿಚಿತರು ಹೀಗೆ ಕನಿಷ್ಠ ಹತ್ತು ಜನರನ್ನು ಸದಸ್ಯರನ್ನಾಗಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವದ ಶುಲ್ಕಕ್ಕಾಗಿ ರೂ. 400/- (ರೂಪಾಯಿ ನಾಲ್ಕು ನೂರು)ಗಳನ್ನು ಪಾವತಿ ಮಾಡಿದ್ದೀರಿ. ಇದರಲ್ಲಿ ರೂ. 250/-(ಇನ್ನೂರ ಐವತ್ತು) ಆಜೀವ ಸದಸ್ಯತ್ವದ ಶುಲ್ಕ ಉಳಿದ ರೂ. 150/-(ನೂರೈವತ್ತು)ಗಳನ್ನು ಸ್ಮಾರ್ಟ್ಕಾರ್ಡ್ ಗುರುತಿನ ಚೀಟಿಗೆ ಬಳಸಿಕೊಳ್ಳಲಾಗುತ್ತದೆ.
ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಶುಲ್ಕ ರೂ. 1,000/- (ಒಂದು ಸಾವಿರ ರೂಪಾಯಿ) ಆಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಚುನಾವಣೆಗೆ ಮೊದಲು ಭರವಸೆ ನೀಡಿದಂತೆ ಅದನ್ನು ಗಮನಾರ್ಹವಾಗಿ 250/- ರೂಪಾಯಿಗೆ ಇಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು `ಜನಸಾಮಾನ್ಯರ ಪರಿಷತ್ತು’ ಆಗಬೇಕು ಎನ್ನುವುದು ಅವರ ತಂಡದ ಸಂಕಲ್ಪ.
ಈ ಸ್ಮಾರ್ಟ್ಕಾರ್ಡ್ ತಮ್ಮ ಪರಿಷತ್ತಿನ ಸದಸ್ಯತ್ವದ ಹೆಗ್ಗುರುತಾಗಲಿದೆ. ಈ ಗುರುತಿನ ಚೀಟಿಯನ್ನು ಹೊಂದಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಮೇಲೆ ಶೇ. 30 (ಮೂವತ್ತರಷ್ಟು) ರಿಯಾಯಿತಿ ನಿರಂತರವಾಗಿ ದೊರಕಲಿದೆ. ಇದರ ಜೊತೆಗೆ
ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನಗಳ, ತಾಲ್ಲೂಕು ಸಮ್ಮೇಳನಗಳ ಸಂದರ್ಭದಲ್ಲಿ ಈ ಗುರುತಿನ ಚೀಟಿಯನ್ನು ಹೆಮ್ಮೆಯಿಂದ ಧರಿಸುತ್ತೀರಿ
ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ತಾವು ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ಅವಕಾಶವನ್ನು ಕಲ್ಪಿಸುವ ಉದ್ದೇಶವಿದ್ದು, ಈ ಮಹತ್ವಾಕಾಂಕ್ಷೆಗೆ ತಮ್ಮ ಕೈಯಲ್ಲಿರುವ ಸ್ಮಾರ್ಟ್ ಕಾರ್ಡ್ ಪೂರಕವಾಗಿ ಕೆಲಸ ಮಾಡಲಿದೆ. ಈ ಮೂಲಕ ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಯುಗಕ್ಕೆ ಕಾಲಿಡುತ್ತಿದ್ದೀರಿ.
ಕನ್ನಡ ಸಾಹಿತ್ಯ ಪರಿಷತ್ತಿನ ಗುರುತಿನ ಚೀಟಿಯ ಉದ್ದೇಶ ಪರಿಷತ್ತಿನ ಸದಸ್ಯತ್ವದ ಹೆಮ್ಮೆಯ ಸಂಕೇತವಾಗಿರುವುದ ಜೊತೆಗೆ ತುರ್ತು ಸಂದರ್ಭದಲ್ಲಿ ಸದಸ್ಯರಿಗೆ ಸಾರ್ವಜನಿಕರಿಂದ ನೆರವು ದೊರೆಯಲಿ ಎಂಬುದಾಗಿದೆ. ಆ್ಯಪ್ ಮೂಲಕ ಗುರುತಿನ ಚೀಟಿಯ ಅರ್ಜಿಯನ್ನು ಭರ್ತಿ ಮಾಡುವಾಗ ಕರ್ನಾಟಕದಲ್ಲಿ ವಾಸಿಸುವವರು ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾಹಿತಿ ನೀಡಬೇಕೆಂದು ನಾವು ತಿಳಿಸಿದ್ದರೂ ಹಲವರು ಆಂಗ್ಲ ಭಾಷೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಇದಲ್ಲದೇ, ಹಲವರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆ, ರಕ್ತದ ಗುಂಪು, ಇ-ಮೇಲ್ ವಿಳಾಸವನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸಿದರೆ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಲು ಅನುಕೂಲವಾಗುತ್ತದೆ ಎಂದು ಹಲವರು ಮನವಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆ, ರಕ್ತದ ಗುಂಪು, ಇ-ಮೇಲ್ ಜೊತೆಗೆ ವಿಳಾಸವನ್ನು ಆಂಗ್ಲ ಭಾಷೆಯಲ್ಲಿಯೇ ನೀಡಿರುತ್ತೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಗುರುತಿನ ಚೀಟಿಯಾದ್ದರಿಂದ ಹೆಸರುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ನೀಡಿರುತ್ತೇವೆ. ಕನ್ನಡ ನುಡಿ ಮತ್ತು ಕನ್ನಡ ಅಂಕಿಗಳ ಬಳಕೆ ಹೆಚ್ಚಾಗಬೇಕೆಂದು ನಮ್ಮ ಆಶಯವಿದ್ದರೂ, ಸಾರ್ವಜನಿಕ ವಲಯದಲ್ಲಿ ಬದಲಾವಣೆ ತರಲು, ಕಾಲಾವಕಾಶ ಬೇಕಾಗಿರುವುದರಿಂದ, ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿ ಈ ಕ್ರಮ ಕೈಗೊಂಡಿದ್ದೇವೆ.

Scroll to Top