ಕನ್ನಡದಲ್ಲಿಯೇ ಪಠ್ಯ ಕೇಂದ್ರ ಸರ್ಕಾರದ ಆದೇಶಕ್ಕೆ ನಾಡೋಜ ಡಾ.ಮಹೇಶ ಜೋಶಿ ಸ್ವಾಗತ
ಬೆಂಗಳೂರು: ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ಎಲ್ಲಾ ತರಗತಿಗಳ ಪಠ್ಯವನ್ನು ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಒದಗಿಸ ಬೇಕು ಎನ್ನುವ ಕೇಂದ್ರ ಸರ್ಕಾರದ ಆದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸ್ವಾಗತಿಸಿದ್ದಾರೆ. ಈ ಮೂಲಕ ಮಾತೃಭಾಷೆಯಲ್ಲಿ ಮಕ್ಕಳು ಕಲಿಯುವುದು ಅಗತ್ಯ ಎಂಬ ಶಿಕ್ಷಣ ತಜ್ಞರ ನಿಲುವಿಗೆ ಬೆಂಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಅವರು ‘ಕನ್ನಡ ಶಾಲೆಗಳನ್ನು ಉಳಿಸ ಬೇಕು’ ಎನ್ನುವ ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವು ಈ ಮೂಲಕ ಇನ್ನಷ್ಟು ಗಟ್ಟಿಯಾಗಿದೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ನಡೆಸಿದ ವಿಚಾರ ಮಂಥನ ಮತ್ತು ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡ ಸಾಹಿತ್ಯ ಪರಿಷತ್ತು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು ಹೂಡಲು ಮುಂದಾಗಿರುವುದು ಮತ್ತು ಅದಕ್ಕೆ ನ್ಯಾಯಾಧೀಶರೂ ಸೇರಿದಂತೆ ಸಮಾಜದ ಎಲ್ಲಾ ರಂಗದವರ ಬೆಂಬಲ ದೊರಕಿರುವುದನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವನ್ನು ಅರ್ಥ ಮಾಡಿಕೊಂಡು ಕನ್ನಡ ಶಾಲೆಗಳನ್ನು ಉಳಿಸಲು ಮುಂದಾಗಲಿ ಮತ್ತು ಶಿಕ್ಷಣದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯುವಂತೆ ಮಾಡಲಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆದೇಶವು ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿಗೆ ಅನುಗುಣವಾಗಿದ್ದು ಈ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು,ಪದವಿ, ಸ್ನಾತಕೊತ್ತರ ಪಠ್ಯ ಪುಸ್ತಕಗಳು ಕನ್ನಡದಲ್ಲಿ ದೊರಕುವುದಕ್ಕೆ ಅನುವು ಮಾಡಿ ಕೊಡುವುದನ್ನು ಸ್ವಾಗತಿಸಿರುವ ನಾಡೋಜ ಡಾ.ಮಹೇಶ ಜೋಶಿ ಆದರೆ ಇವುಗಳ ಅನುವಾದವನ್ನು ‘ಅನುವಾದಿನಿ’ ತಂತ್ರಾಂಶದ ಮೂಲಕ ಮಾಡಲು ನಿರ್ಧರಿಸಿರುವುದನ್ನು ಪ್ರಸ್ತಾಪಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ ಈ ಕಾರಣದಿಂದ ಅನುವಾದವನ್ನು ಅಯಾ ಕ್ಷೇತ್ರದ ಪರಿಣಿತ ಅನುವಾದಕರ ಕೈಯಲ್ಲಿಯೇ ಮಾಡಿಸ ಬೇಕು ಇದರಿಂದ ಕನ್ನಡದಲ್ಲಿಯೇ ಶಿಕ್ಷಣ ನೀಡುವ ಅದರಲ್ಲಿಯೂ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಉದ್ದೇಶ ಈಡೇರಲಿದೆ ಎಷ್ಟೇ ಸಮರ್ಥವಾದರೂ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಮಾನವ ಮಿದುಳಿಗೆ ಸಮನಾಗದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ಆದೇಶದಲ್ಲಿ ಜೆ.ಇ.ಇ, ನೀಟ್ ಹಾಗೂ ಕೇಂದ್ರೀಯ ವಿಶ್ವಕವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಹದಿಮೂರು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸಲು ಸೂಚಿಸಿರುವುದನ್ನು ಸ್ವಾಗತಿಸಿರುವ ನಾಡೋಜ ಡಾ.ಮಹೇಶ ಜೋಶಿ ಇದು ಅನುಷ್ಟಾನಕ್ಕೆ ಬರಲು ರಾಜ್ಯ ಸರ್ಕಾರ, ಎಲ್ಲಾ ಸಂಸತ್ ಸದಸ್ಯರು, ಬರಹಗಾರರು, ಕನ್ನಡ ಹೋರಾಟಗಾರರು ಮುಂದಾಗ ಬೇಕು ಎಂದು ಸೂಚಿಸಿರುವ ನಾಡೋಜ ಡಾ.ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಈ ನಿಟ್ಟಿನಲ್ಲಿ ಎಲ್ಲರೊಡನೆ ಸೇರಿ ಶ್ರಮಿಸಲಿದೆ ಎಂದು ಹೇಳಿದ್ದಾರೆ.
ಪ್ರತಿಕ್ರಿಯೆ