ಕನ್ನಡ ನಾಡಿಗೆ ಮಾಸ್ತಿ ಮತ್ತು ಎಸ್.ಆರ್. ಬೊಮ್ಮಾಯಿಯವರ ಕೊಡುಗೆ ಸ್ಮರಣೀಯ-ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಆರ್. ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಎಲ್ಲ ಅಧ್ಯಕ್ಷರಿಗೆ ವಿಶೇಷ ಗೌರವ ತೋರಿಸುವುದರೊಂದಿಗೆ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹಕರಾಗಿದ್ದರು. ಕೇಂದ್ರದ ಮಾನವ ಸಂಪನ್ನಮೂಲ ಖಾತೆ ಸಚಿವರಾಗಿದ್ದಾಗ ಇಲಾಖೆಯಲ್ಲಿ ಅನೇಕ ಕನ್ನಡಿಗರಿಗೆ ಹುಡುಕಿ ಹುಡುಕಿ ಅವಕಾಶ ಕೊಡುವುದರ ಮೂಲಕ ಭಾಷಾಭಿಮಾನವನ್ನು ಹೊಂದಿದ್ದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ನೆನಪಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಂಭಾಂಗಣದಲ್ಲಿ ಇಂದು ಹಮ್ಮಿಕೊಂಡ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಕನ್ನಡದ ಆಸ್ತಿ ಎಂದೆ ಗುರುತಿಸಿಕೊಂಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಹುಟ್ಟುಹಬ್ಬದ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಮುಂದುವರೆದು ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ ಅವರು ಆರ್.ಎಲ್,ಜಾಲಪ್ಪ ಅವರು ಕೇಂದ್ರ ಜವಳಿ ಖಾತೆಯ ಮಂತ್ರಿಗಳಾಗಿದ್ದಾಗ ನಾನು ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾಗ ನನ್ನಂದಿಗೆ ಎಸ್.ಆರ್. ಬೊಮ್ಮಾಯಿ ಅವರು ಕನ್ನಡದಲ್ಲೇ ಮಾತನಾಡುತ್ತಿದ್ದರು ಹೊರತು, ಎಂದೂ ಬೇರೆ ಭಾಷೆಯಲ್ಲಿ ಮಾತನಾಡುತ್ತಿರಲ್ಲಿಲ್ಲ. ಅವರು ಎಂದೂ ಕನ್ನಡ ಭಾಷೆಯ ಮೇಲೆ ಇರುವ ಅಭಿಮಾನ ಮರೆತವರಲ್ಲ. ತಾವು ಮುಖ್ಯಮಂತ್ರಿಯಾಗಿದ್ದಾಗ ಒಂದೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ ಎನ್ನುವ ಬೇಸರ ಅವರಲ್ಲಿತ್ತು. ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಿ ಅಧಿಕಾರ ವಿಕೇಂದ್ರೀಕರಣದ ಸ್ವರೂಪದಲ್ಲಿ ಜನರ ಅಧಿಕಾರವನ್ನು ಜನರಿಗೇ ಒಪ್ಪಿಸಿದವರು. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬೊಮ್ಮಾಯಿ ಅವರು ತಮ್ಮ ಬಳಿ ಹಣಕಾಸು ಖಾತೆ ಇದ್ದಾಗ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಎರಡು ರೂಪಾಯಿಗೆ 1 ಕೆ.ಜಿ ಅಕ್ಕಿ, ಗೋಧಿ, ರಿಯಾಯಿತಿ ದರದಲ್ಲಿ ನೀಡುವ ಯೋಜನೆಯನ್ನು ಜಾರಿ ತಂದ ಧೀಮಂತ ನಾಯಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ಕನ್ನಡದ ಆಸ್ತಿ ಎಂದೇ ಕರೆಸಿಕೊಂಡ ಮಾಸ್ತಿಯವರು* ಕನ್ನಡಿಗರಿಗೆ ಒಂದು ಆದರ್ಶ. ಕನ್ನಡ ಸಾರಸ್ವತ ಲೋಕದ ಅಪ್ರತಿಮರು. ‘ಶ್ರೀನಿವಾಸ ಎಂಬ ಕಾವ್ಯನಾಮದೊಂದಿಗೆ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಣ್ಣ ಕಥೆಗಳ ಜನಕ ಎಂದು ಗುರುತಿಸಿಕೊಂಡವರು. ಸಾಹಿತ್ಯದ ಪ್ರಕಾರಗಳಾದ ಕಾದಂಬರಿ, ನಾಟಕ, ವಿಮರ್ಶೆ, ಪ್ರಬಂಧ, ಧಾರ್ಮಿಕ ಕೃತಿ , ಅನುವಾದಗಳು ಸೇರಿದಂತೆ ಇವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. “ಜೀವನ” ಎಂಬ ಪತ್ರಿಕೆಯನ್ನು ನಡೆಸಿ ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗಾಗಿ ಗಮನಾರ್ಹ ಕೆಲಸವನ್ನು ಕೈಗೊಂಡವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೧೯೫೩ರಿಂದ ೧೯೫೪ರವರೆಗೆ ಸೇವೆ ಸಲ್ಲಿಸಿ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸಿದರು. ೯೫ ವರ್ಷಗಳ ತುಂಬು ಜೀವನ ನಡೆಸಿದ ಮಾಸ್ತಿಯವರು ಜನ್ಮದಿನವಾದ ಜೂನ್ ೬ ರಂದೇ ದೇಹ್ಯತ್ಯಾಗಮಾಡಿದ್ದು ವಿಶೇಷ ಎಂದು ತಿಳಿಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ ಮಾಸ್ತಿಯವರ ಕನ್ನಡ ಪ್ರೇಮ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ನೆನೆದು ಮಾಸ್ತಿ ಕನ್ನಡದ ಆಸ್ತಿ ಎನ್ನುವ ಮಾತು ಸಾರ್ಥಕವಾದದ್ದು. ಅದೇ ರೀತಿ ಸಮಾಜವಾಧಿ ಹಿನ್ನೆಲೆಯಿಂದ ಬಂದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಕೈಗಾರಿಕೆ ಮತ್ತು ಕಂದಾಯ ಸಚಿವರಾಗಿ ಆಯಾ ವಿಭಾಗಗಳಿಗೆ ವ್ಯವಸ್ಥಿತ ಸ್ವರೂಪ ನೀಡಿ ಆಡಳಿತ ಯಂತ್ರಕ್ಕೆ ಹೋಸ ಮೆರುಗನ್ನು ನೀಡಿದವರು ಎಂದು ಹೇಳಿದರು.
ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಅವರು ಸ್ವಾಗತಿಸಿದರು, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್‌ಪಾಂಡು ಅವರು ವಂದಿಸಿದರು
ಭಾವಚಿತ್ರ: ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಭಾವಚಿತ್ರಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೆಶ ಜೋಶಿ ಹಾಗೂ ಪದಾಧಿಕಾರಿಗಳಿಂದ ಪುಷ್ಪನಮನ.
KSP Press Note 6-6-2022
ಪ್ರತಿಕ್ರಿಯೆ