ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ: ನಾಡೋಜ ಡಾ.ಮಹೇಶ ಜೋಶಿ ಆತಂಕ
ಬೆಂಗಳೂರು: ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳಿಗೆ ಮರಾಠಿ ಅಧ್ಯಾಾಪಕರನ್ನು ನೇಮಕ ಮಾಡಿಕೊಂಡಿರುವ ವರದಿಯ ಕುರಿತು ಆತಂಕ ವ್ಯಕ್ತ ಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಇದು ಗಡಿ ಭಾಗದಲ್ಲಿ ಕನ್ನಡವನ್ನು ಕ್ರಮೇಣ ಅಳಿಸುವ ಹುನ್ನಾರವೆಂದಿದ್ದಾರೆ. ಇಂತಹದೇ ಪರಿಸ್ಥಿತಿ ಕೇರಳದ ಕಾಸರಗೋಡಿನಲ್ಲಿ ನಿರ್ಮಾಣವಾಗಿತ್ತು. ಈಗ ಮಹಾರಾಷ್ಟ್ರಕ್ಕೂ ಈ ಸಮಸ್ಯೆ ವ್ಯಾಪಿಸಿರುವುದು ಕನ್ನಡಿಗರು ಎಚ್ಚೆತ್ತು ಕೊಳ್ಳ ಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ ಎಂದು ಅವರ ಹೇಳಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆ ಕನ್ನಡ ಕಲಿಯದೆ ಆ ಭಾಗದಲ್ಲಿ ಕನ್ನಡ ಸಂಪೂರ್ಣ ಅಳಿಸಿ ಹೋಗುವಂತೆ ಮಾಡುವ ಸಂಚು ಇದರಲ್ಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರವು ಜತ್ ತಾಲ್ಲೋಕಿಗೆ 11 ಮತ್ತು ಸೊಲ್ಲಾಪುರ ಜಿಲ್ಲೆ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ 13 ಹೀಗೆ ಒಟ್ಟು 24 ಶಿಕ್ಷಕರನ್ನು ನೇಮಕ ಮಾಡಿದೆ. ಇವರಲ್ಲಿ ಕೇವಲ ಏಳು ಜನ ಮಾತ್ರ ಕನ್ನಡ ಕಲಿತವರು ಎನ್ನುವುದು ತೀವ್ರ ಆತಂಕದ ಸಂಗತಿ. ಸಾಂಗ್ಲಿ ಜಿಲ್ಲಾ ಪಂಚಾಯತಿ ಕೂಡ ಕನ್ನಡ ಶಾಲೆಗಳಿಗೆ ನೇಮಕ ಮಾಡಿದ 24 ಶಿಕ್ಷಕರಲ್ಲಿ ನಾಲ್ವರು ಮಾತ್ರ ಕನ್ನಡಿಗರಾಗಿದ್ದಾರೆ. ಈ ಭಾಗದಲ್ಲಿ ಕನ್ನಡ ಡಿ.ಎಡ್ ಮಾಡಿದ ನೂರಾರು ಶಿಕ್ಷಕರಿದ್ದರೂ ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕನ್ನಡ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವುದು ಇದರಿಂದ ಗೊತ್ತಾಗುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದ್ದಾರೆ.
ಈ ಕುರಿತು ಅಲ್ಲಿನ ಕನ್ನಡ ಹೋರಾಟಗಾರರು ಮತ್ತು ಕನ್ನಡ ಸಂಘಗಳು ರೂಪಿಸಿರುವ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ನೀಡಲಿದ್ದು, ಈ ಕುರಿತು ಸಮಗ್ರ ಅಧ್ಯಯನ ನಡೆದು ಗಡಿ ಭಾಗದಲ್ಲಿನ ಶಿಕ್ಷಕರ ನೇಮಕದ ಕುರಿತು ಸ್ಪಷ್ಟ ಶಾಸನಾತ್ಮಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಳ್ಳ ಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ